ಕೈ ಶಾಸಕರ ‌ಸಭೆಗೆ ಹಿರಿಯರ ಗೈರು

7
ಸಂಪುಟ ವಿಸ್ತರಣೆ ಅಸ್ತ್ರ ಮುಂದಿಟ್ಟು ಪಾರಾದ ನಾಯಕರು

ಕೈ ಶಾಸಕರ ‌ಸಭೆಗೆ ಹಿರಿಯರ ಗೈರು

Published:
Updated:

ಬೆಳಗಾವಿ: ಉತ್ತರ ಕರ್ನಾಟಕಕ್ಕೆ ಅನ್ಯಾಯ, ಮೈತ್ರಿ ಸರ್ಕಾರದಲ್ಲಿ ಸಿಗದ ಗೌರವ ಮುಂದಿಟ್ಟುಕೊಂಡು ನಾಯಕರನ್ನು ತರಾಟೆಗೆ ತೆಗೆದುಕೊಳ್ಳಲು ತಯಾರಿ ನಡೆಸಿದ್ದ ಶಾಸಕರ ಎದುರು ಸಂಪುಟ ವಿಸ್ತರಣೆಯ ಅಸ್ತ್ರ ಬಳಸಿದ ಕಾಂಗ್ರೆಸ್‌ ಪ್ರಮುಖರು ಸಿಟ್ಟನ್ನು ಶಮನಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆದರೆ, ಸಭೆಗೆ ಗೈರಾದ ಅನೇಕ ಹಿರಿಯ ಶಾಸಕರು ತಮ್ಮ ಕೋಪ ತಣ್ಣಗಾಗಿಲ್ಲ; ಹೋರಾಟದ ಮತ್ತೊಂದು ಹೆಜ್ಜೆಗೆ ಅಣಿಯಾಗುತ್ತಿದ್ದೇವೆ ಎಂಬ ಸಂದೇಶವನ್ನೂ ರವಾನಿಸಿದ್ದಾರೆ. 

ಸುವರ್ಣಸೌಧದಲ್ಲಿ ಮಂಗಳವಾರ ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೋಲಾಹಲ ಸೃಷ್ಟಿಸಿ, ನ್ಯಾಯ ಕೇಳುವುದಾಗಿ ಶಾಸಕರು ಹೇಳಿಕೊಂಡಿದ್ದರು. 

ಇದರ ಅರಿವಿದ್ದ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್‌, ಅವರು ‘ಸಂಪುಟ ವಿಸ್ತರಣೆ, ನಿಗಮ–ಮಂಡಳಿಗಳಿಗೆ  ಹಾಗೂ ಸಂಸದೀಯ ಕಾರ್ಯದರ್ಶಿಗಳ ನೇಮಕವನ್ನು ಇದೇ 22ರಂದು ನಡೆಸಲಾಗುವುದು’ ಎಂಬ ಬಾಣ ಬಿಟ್ಟಿದ್ದಾರೆ. ಸಿಡಿದೆದ್ದರೆ ಸಿಗುವ ಅವಕಾಶವೂ ಕೈತಪ್ಪೀತು ಎಂಬ ಕಾರಣಕ್ಕೆ ಆಕ್ರೋಶವನ್ನು ಶಾಸಕರು ಅದುಮಿಟ್ಟುಕೊಂಡರು ಎಂದು ಪಕ್ಷದ ಮೂಲಗಳು ಹೇಳಿವೆ.

‘ಸಂಪುಟ ವಿಸ್ತರಣೆ ಮಾಡುವ ವೇಳೆ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿದ್ದು, ಈ ಸರ್ಕಾರದಲ್ಲೂ ಇರುವ 10 ಸಚಿವರನ್ನು ಕೈಬಿಡಿ. ಆಗ ಹೊಸಬರಿಗೆ ಅವಕಾಶ ಸಿಕ್ಕಿ, ಅತೃಪ್ತಿ ಶಮನವಾಗಲಿದೆ’ ಎಂದು ಹಿರಿಯ ಶಾಸಕರೊಬ್ಬರು ಸಲಹೆ ನೀಡಿದರು. ‘ರಾಹುಲ್‌ ಗಾಂಧಿ ಅವರ ಜತೆ ಚರ್ಚಿಸುತ್ತೇವೆ‘ ಎಂದು ಸಿದ್ದರಾಮಯ್ಯ ಹೇಳಿದಾಗ ಎಲ್ಲರೂ ಮೌನಕ್ಕೆ ಶರಣಾದರು. 

ಶಾಸಕರಿಗೆ ಅನುದಾನ ಬಿಡುಗಡೆಯಾಗುತ್ತಿಲ್ಲ. ಹೀಗಾಗಿ ಕ್ಷೇತ್ರಗಳಲ್ಲಿ ಯಾವ ಕೆಲಸಗಳೂ ಆಗುತ್ತಿಲ್ಲ. ಈ ಬಗ್ಗೆ ಗಂಭೀರವಾಗಿ ಗಮನ
ಹರಿಸಬೇಕು ಎಂದು ಆಗ್ರಹಿಸಿದರು.

ಉತ್ತರ ಕರ್ನಾಟಕದಿಂದ ಪಕ್ಷದ 40 ಶಾಸಕರು ಆಯ್ಕೆಯಾಗಿದ್ದರೂ ಐವರಿಗೆ ಸಚಿವ ಸ್ಥಾನ ನೀಡಿದ್ದೀರಿ, ದಕ್ಷಿಣ ಕರ್ನಾಟಕದಲ್ಲಿ ಅಷ್ಟೇ ಸಂಖ್ಯೆ ಶಾಸಕರಿದ್ದರೂ 11 ಮಂದಿಗೆ ಸ್ಥಾನ ನೀಡಲಾಗಿದೆ. ಆರು ಶಾಸಕರಿರುವ ಬಳ್ಳಾರಿಯಿಂದ ಒಬ್ಬರನ್ನೂ ಸಚಿವರನ್ನಾಗಿ ಮಾಡಿಲ್ಲ. ಆದರೆ, ಮೂವರು ಗೆದ್ದಿರುವ ತುಮಕೂರಿಗೆ ಸಂಪುಟದಲ್ಲಿ ಉಪ ಮುಖ್ಯಮಂತ್ರಿ ಸಹಿತ ಮೂರು ಸಚಿವ ಸ್ಥಾನ ಸಿಕ್ಕಿದೆ ಎಂದೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಸಂಪುಟದಲ್ಲಿ ಖಾಲಿ ಇರುವ ಪಕ್ಷದ ಎಲ್ಲ ಆರೂ ಸ್ಥಾನಗಳನ್ನೂ ನಮ್ಮ ಭಾಗಕ್ಕೇ ನೀಡಬೇಕು’ ಎಂದೂ ಬಲವಾಗಿ ವಾದಿಸಿದ್ದಾರೆ.

‘ಮುಖ್ಯಮಂತ್ರಿ ನಮ್ಮ ಕೈಗೆ ಸಿಗುತ್ತಿಲ್ಲ, ನಮ್ಮ ನಾಯಕರೂ ನಮ್ಮ ಕೈಗೆ ಸಿಗುತ್ತಿಲ್ಲ. ಹೀಗಾದರೆ ಕ್ಷೇತ್ರದ ಕೆಲಸಗಳನ್ನು ಮಾಡಿಸಿಕೊಳ್ಳುವುದು ಹೇಗೆ’ ಎಂದೂ ಕೆಲವು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಮ್ಮ ಗೌರವ ಕಾಪಾಡಿ: ‘ಸ್ಥಳೀಯ ಸಂಸ್ಥೆ ಅಥವಾ ಬೇರೆ ಕ್ಷೇತ್ರದಿಂದ ಆಯ್ಕೆಯಾಗಿದ್ದರೂ ನಮಗೆ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ’ ಎಂದು ಕೆಲವು ಪರಿಷತ್ ಸದಸ್ಯರು ಕೋರಿದರು.

ರಾಮಲಿಂಗಾರೆಡ್ಡಿ, ಬೇಗ್, ಎಂ.ಬಿ. ಪಾಟೀಲ ಗೈರು

ಬೆಳಗಾವಿ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಸಚಿವರಾದ ಆರ್‌.ವಿ. ದೇಶಪಾಂಡೆ, ಸಿ. ಪುಟ್ಟರಂಗಶೆಟ್ಟಿ, ಸಚಿವ ಸ್ಥಾನ ಆಕಾಂಕ್ಷಿಗಳಾದ ಎಂ.ಬಿ. ಪಾಟೀಲ, ಆರ್‌. ರೋಷನ್ ಬೇಗ್, ರಾಮಲಿಂಗಾ ರೆಡ್ಡಿ, ಬಿ.ನಾಗೇಂದ್ರ ಸಭೆಗೆ ಗೈರಾಗಿದ್ದರು.

‘ತೀವ್ರ ಜ್ವರದಿಂದ ಬಳಲುತ್ತಿದ್ದು, ಸಭೆಗೆ ಬರಲಾಗುತ್ತಿಲ್ಲ ಎಂದು ರಮೇಶ ಜಾರಕಿಹೊಳಿ ಅವರು ಸಿದ್ದರಾಮಯ್ಯ ಅವರಿಗೆ ತಿಳಿಸಿದ್ದರು’ ಎಂದು ಮೂಲಗಳು ಹೇಳಿವೆ. ವಿಧಾನಸಭೆಯ 80, ವಿಧಾನಪರಿಷತ್‌ನ 39 ಸದಸ್ಯರು ಸೇರಿ ಒಟ್ಟು 119 ಶಾಸಕ ಬಲ ಇದ್ದು,  ಸಭೆಯಲ್ಲಿ ಸಭಾಧ್ಯಕ್ಷ ಮತ್ತು ಸಭಾಪತಿ ಬಿಟ್ಟು 117 ಶಾಸಕರು  ಭಾಗವಹಿಸಬೇಕಿತ್ತು. ಈ ಪೈಕಿ ಮೂವರು ಶಾಸಕರು ಸಭೆಗೆ ಬರುವುದಿಲ್ಲವೆಂದು ತಿಳಿಸಿದ್ದರು. 20 ಶಾಸಕರು ಗೈರಾಗಿದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 2

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !