ಪ್ರಚಾರ ಅಂತ್ಯ; ಇನ್ನು ಒಳತಂತ್ರ

ಶುಕ್ರವಾರ, ಏಪ್ರಿಲ್ 26, 2019
35 °C
14 ರಾಜ್ಯಗಳ 96 ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಮತದಾನಕ್ಕೆ ಇನ್ನೊಂದು ದಿನ

ಪ್ರಚಾರ ಅಂತ್ಯ; ಇನ್ನು ಒಳತಂತ್ರ

Published:
Updated:

ಬೆಂಗಳೂರು: ರಾಜ್ಯದ ಘಟಾನುಘಟಿ ನಾಯಕರ ರಾಜಕೀಯ ಭವಿಷ್ಯ ನಿರ್ಧರಿಸುವ ಲೋಕಸಭಾ ಚುನಾವಣೆಯ ಮೊದಲ ಹಂತದ ಬಹಿರಂಗ ಪ್ರಚಾರ ಅಂತ್ಯಗೊಂಡಿದೆ. ಗೆಲುವಿಗಾಗಿ, ಮತದಾರರ ಮನೆ ಬಾಗಿಲಿಗೆ ತೆರಳಿ  ಕೊನೆಕ್ಷಣದ ಕಸರತ್ತಿಗೆ ಅಭ್ಯರ್ಥಿಗಳು ಮುಂದಾಗಿದ್ದಾರೆ.

ರಾಜ್ಯದ 28 ಕ್ಷೇತ್ರಗಳ ಪೈಕಿ ಮೊದಲ ಹಂತದಲ್ಲಿ 14 ಕ್ಷೇತ್ರಗಳಲ್ಲಿ ಇದೇ 18ರಂದು  ಮತದಾನ ನಡೆಯಲಿದೆ. ಬಹಿರಂಗ ಪ್ರಚಾರದ ಕೊನೆಯ ದಿನವಾದ ಮಂಗಳವಾರ ಅಭ್ಯರ್ಥಿಗಳು ಸಾರ್ವಜನಿಕ ಸಭೆ, ರ‍್ಯಾಲಿಗಳ ಮೂಲಕ ಜನರ ಮನ ಗೆಲ್ಲುವ ಪ್ರಯತ್ನ ಮಾಡಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಎಲ್ಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಸವಾಲು ಎದುರಾಗಿದೆ.

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಪಟ್ಟು ಹಿಡಿದು ಆಪ್ತ ಸಿ.ಎಚ್‌.ವಿಜಯಶಂಕರ್ ಅವರಿಗೆ ಮೈಸೂರಿನಲ್ಲಿ ಟಿಕೆಟ್‌ ಕೊಡಿಸಿದ್ದಾರೆ. ಈ ಕ್ಷೇತ್ರವನ್ನು ಗೆಲ್ಲಿಸಿಕೊಂಡು ಬರುವ ಜತೆಗೆ, ಮಂಡ್ಯ, ತುಮಕೂರು, ಹಾಸನಗಳಲ್ಲಿ ಜೆಡಿಎಸ್‌ ಅಭ್ಯರ್ಥಿಗಳು ಹಾಗೂ ಉಳಿದೆಡೆ ಬಿಜೆಪಿಗೆ ಸೋಲುಣಿಸಿ, ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ತಮ್ಮ ಪ್ರಭಾವದ ಪರಿಧಿಯನ್ನು ವಿಸ್ತರಿಸಿಕೊಳ್ಳುವ ಜವಾಬ್ದಾರಿಯೂ ಅವರ ಹೆಗಲೇರಿದೆ. ಹೀಗಾಗಿ, ಎಡಬಿಡದೇ ಪ್ರಚಾರದಲ್ಲಿ ತೊಡಗಿದ್ದರು.

ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ಪುತ್ರ ನಿಖಿಲ್‌ ಕುಮಾರಸ್ವಾಮಿ ಹಾಗೂ ಅಣ್ಣನ ಮಗ ಪ್ರಜ್ವಲ್‌ ರೇವಣ್ಣ ಅವರನ್ನು ಗೆಲುವಿನ ದಡ ಮುಟ್ಟಿಸಲು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬೆವರು ಹರಿಸಿದ್ದಾರೆ. ಉಳಿದ ಕಡೆಗಳಲ್ಲಿ ಮಿತ್ರಕೂಟದ ಭಾಗಿದಾರ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲು ತಮ್ಮ ಶಕ್ತಿಯನ್ನು ವ್ಯಯಿಸುವ ಉತ್ತರದಾಯಿತ್ವವೂ ಅವರ ಬೆನ್ನೇರಿದೆ.

‘ಮಂಡ್ಯ, ಹಾಸನ, ತುಮಕೂರು ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಗಳು ಅತೀ ಸೂಕ್ಷ್ಮ ಕ್ಷೇತ್ರಗಳಾಗಿವೆ. ಅಲ್ಲಿಯ ಅಭ್ಯರ್ಥಿಗಳು ಹಾಗೂ ಪ್ರತಿಯೊಂದು ಮತಗಟ್ಟೆಗೂ ಹೆಚ್ಚಿನ ಭದ್ರತೆ ಒದಗಿಸಲು ಆದ್ಯತೆ ನೀಡಲಾಗಿದೆ’ ಎಂದು ಹೇಳಿದರು.

ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಕಮಲ್ ಪಂತ್ ಮಾತನಾಡಿ, ಚುನಾವಣೆಗೆ ಸಂಬಂಧಪಟ್ಟಂತೆ ರಾಜ್ಯದಲ್ಲಿ 18 ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದರು.

ವೆಬ್‌ ಕಾಸ್ಟಿಂಗ್‌: 14 ಲೋಕಸಭಾ ಕ್ಷೇತ್ರಗಳ 3500 ಸೂಕ್ಷ್ಮ ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್‌ ನಡೆಸಲು ಕ್ರಮ ಕೈಕೊಳ್ಳಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಚುನಾವಣೆ ಮುಗಿಯುವವರೆಗೆ ಎಲ್ಲ ಕ್ಷೇತ್ರಗಳಲ್ಲಿ ಅದರಲ್ಲೂ ಆರ್ಥಿಕವಾಗಿ ಸೂಕ್ಷ್ಮ ಎನಿಸಿರುವ ಕ್ಷೇತ್ರಗಳಿರುವ ಮತಗಟ್ಟೆಗಳಿಗೆ ಹೆಚ್ಚಿನ ನಿಗಾ ಇಡಲಾಗಿದೆ. ಮುಂದಿನ 24 ತಾಸು ಮತ್ತಷ್ಟು ಕಟ್ಟೆಚ್ಚರ ವಹಿಸಲಾಗುವುದು ಎಂದರು.

 

ನಾಯಕರ ಯಾನ ಎಲ್ಲೆಲ್ಲಿ
* ಪ್ರಧಾನಿ ನರೇಂದ್ರ ಮೋದಿ
ಚಿತ್ರದುರ್ಗ, ಮೈಸೂರು,  ಗಂಗಾವತಿ, ಮಂಗಳೂರು, ಬೆಂಗಳೂರು
* ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ
ಬೆಂಗಳೂರಿನ ಬನಶಂಕರಿ, ಯಲಹಂಕ, ತುಮಕೂರು, ಹೊನ್ನಾಳಿ
ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ
ಬೆಂಗಳೂರು, ಕೋಲಾರ, ಚಿತ್ರದುರ್ಗ, ಕೆ.ಆರ್.ನಗರ

ನಾಲ್ಕು ಕ್ಷೇತ್ರಗಳು ಅತೀ ಸೂಕ್ಷ್ಮ
ಮೊದಲ ಹಂತದ ಚುನಾವಣೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಭದ್ರತೆ ಕೈಗೊಳ್ಳಲು ಪೊಲೀಸ್ ಇಲಾಖೆ ಸಜ್ಜಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ಎನ್‌.ನೀಲಮಣಿ ರಾಜು, ‘ಮತಗಟ್ಟೆಗಳನ್ನು ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮವೆಂದು ವಿಂಗಡಿಸಲಾಗಿದೆ. ಅಲ್ಲೆಲ್ಲ ಹಿರಿಯ ಅಧಿಕಾರಿಗಳು ಸೇರಿದಂತೆ 90,997 ಸಿಬ್ಬಂದಿಯನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ’ ಎಂದರು.

ಎರಡನೇ ಹಂತ: ಮತದಾನಕ್ಕೆ ಸಜ್ಜು
ನವದೆಹಲಿ:
ಕರ್ನಾಟಕದ 28 ಕ್ಷೇತ್ರಗಳ ಪೈಕಿ 14, ನೆರೆಯ ಮಹಾರಾಷ್ಟ್ರದ 10 ಹಾಗೂ ತಮಿಳುನಾಡಿನ 38 ಕ್ಷೇತ್ರಗಳು ಸೇರಿದಂತೆ ರಾಷ್ಟ್ರದಾದ್ಯಂತ ಒಟ್ಟು 96 ಲೋಕಸಭೆ ಕ್ಷೇತ್ರಗಳಿಗೆ ಎರಡನೇ ಹಂತದ ಮತದಾನ ಗುರುವಾರ ನಡೆಯಲಿದೆ.

ಒಡಿಶಾ, ಅಸ್ಸಾಂ ಮತ್ತು ಬಿಹಾರದ ತಲಾ 5, ಛತ್ತೀಸಗಢ, ಪಶ್ಚಿಮ ಬಂಗಾಳಗಳ ತಲಾ 3, ಜಮ್ಮು ಮತ್ತು ಕಾಶ್ಮೀರದ 2, ಮಣಿಪುರ, ತ್ರಿಪುರಾ ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯ ತಲಾ 1 ಹಾಗೂ ಉತ್ತರ ಪ್ರದೇಶದ 8 ಕ್ಷೇತ್ರಗಳು ಎರಡನೇ ಹಂತದಲ್ಲಿ ನಡೆಯಲಿರುವ ಮತದಾನಕ್ಕೆ ಸನ್ನದ್ಧಗೊಂಡಿವೆ.

**
ಕೆಲವು ಕ್ಷೇತ್ರಗಳಲ್ಲಿ ಭದ್ರತೆಗೆ ಹೆಚ್ಚಿನ ಬೇಡಿಕೆ ಬಂದಿರುವ ಕಾರಣ ಸಿಆರ್‌ಪಿಎಫ್‌ನ ಹೆಚ್ಚುವರಿ ಪಡೆಗಳನ್ನು ಕಳುಹಿಸಲಾಗಿದೆ.
-ಸಂಜೀವ್‌ ಕುಮಾರ್, ರಾಜ್ಯ ಮುಖ್ಯ ಚುನಾವಣಾಧಿಕಾರಿ

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !