ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಚುನಾವಣೆ: ಗೆದ್ದ ಮೈತ್ರಿ–ಬಿದ್ದ ಬಿಜೆಪಿ

ಐದು ಕ್ಷೇತ್ರ: ಜೆಡಿಎಸ್‌ 2, ಕಾಂಗ್ರೆಸ್ 2, ಬಿಜೆಪಿ 1l ಕಮಲ ಪಕ್ಷದ ನಾಯಕರಿಗೆ ಸೋಲಿನ ಉತ್ತರ
Last Updated 7 ನವೆಂಬರ್ 2018, 19:04 IST
ಅಕ್ಷರ ಗಾತ್ರ

ಬೆಂಗಳೂರು: ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿಕೂಟದ ನಾಯಕರು ಐದು ಕ್ಷೇತ್ರಗಳ ಉಪಚುನಾವಣೆಯಲ್ಲಿ ‘ಸಂಘಟಿತ’ವಾಗಿ ಕೊಟ್ಟ ಏಟಿಗೆ ಬಿಜೆಪಿ ಮುಗ್ಗರಿಸಿ ಬಿದ್ದಿದೆ.

ಲೋಕಸಭೆ ಮಹಾ ಚುನಾವಣೆಗೆ ಮುನ್ನ ಪರೀಕ್ಷಾರ್ಥ ಪ್ರಯೋಗದಂತೆ ನಡೆದ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ‘ಜನಪ್ರಿಯತೆ’ಯ ಅಲೆಯಲ್ಲಿ ರಾಜ್ಯದ ಉಪ ಕಣಗಳ ಮತದಾರರು ಕೊಚ್ಚಿಹೋಗಲಿಲ್ಲ. ಬಿಜೆಪಿಯೇ ಥರಗುಟ್ಟಿತು.

‘ರಾಜ್ಯದಲ್ಲಿರುವುದು ‘ಅಪವಿತ್ರ ಮೈತ್ರಿ’ ಸರ್ಕಾರ, ಹೀಗೆ ಕೂಡಿಕೆ ಮಾಡಿಕೊಂಡವರಿಗೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಆಡಿಕೊಂಡಿದ್ದ ಬಿಜೆಪಿ ನಾಯಕರಿಗೆ ಸೋಲಿನ ಉತ್ತರ ನೀಡಿದ ಮತದಾರರು, ಒಂದರ್ಥದಲ್ಲಿ ಮೈತ್ರಿ ಸರ್ಕಾರಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ.

ಇದರ ಬೆನ್ನಲ್ಲೇ, ಉಪ ಚುನಾವಣೆ ಫಲಿತಾಂಶ ಮೈತ್ರಿ ಸರ್ಕಾರಕ್ಕೆ ಸಿಕ್ಕಿದ ಜನಾದೇಶವಾಗಿದೆ ಎಂದು ಆಡಳಿತಾರೂಢ ಪಕ್ಷಗಳ ನಾಯಕರು ಪ್ರತಿಪಾದಿಸುತ್ತಿದ್ದಾರೆ.

ಗಟ್ಟಿಯಾದ ಮೈತ್ರಿ: ಜೆಡಿಎಸ್‌ನ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸರ್ಕಾರ ಈಗ ಬೀಳಲಿದೆ, ಇಂದು ಬೀಳಲಿದೆ ಎಂಬ ಆತಂಕ ಇದ್ದೇ ಇತ್ತು. ಕೆಲವು ಕಾಂಗ್ರೆಸ್ ಶಾಸಕರ ಜತೆ ಕೈಜೋಡಿಸಿದ್ದ ಬಿಜೆಪಿ ನಾಯಕರು ಸರ್ಕಾರ ಪತನಕ್ಕೆ ಮುಹೂರ್ತವನ್ನೂ ನಿಗದಿ ಮಾಡಿದ್ದರು. ಇದೇ 6ರಂದು ಉಪ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ಸರ್ಕಾರ ಪತನವಾಗಲಿದೆ ಎಂದೂ ಕೆಲವರು ‘ಭವಿಷ್ಯ’ವನ್ನು ನುಡಿದಿದ್ದರು.

ಮಂಡ್ಯ ಲೋಕಸಭೆ ಹಾಗೂ ರಾಮನಗರ ವಿಧಾನಸಭೆ ಕ್ಷೇತ್ರದಲ್ಲಿ ಜೆಡಿಎಸ್‌ ಗೆಲುವು ನಿಶ್ಚಿತವಾಗಿತ್ತು.ಬಳ್ಳಾರಿ, ಶಿವಮೊಗ್ಗ ಲೋಕಸಭೆ ಹಾಗೂ ಜಮಖಂಡಿ ವಿಧಾನಸಭೆ ಕ್ಷೇತ್ರಗಳು ಕುತೂಹಲದ ಕೇಂದ್ರಗಳಾಗಿದ್ದವು. ಈ ಕ್ಷೇತ್ರಗಳಲ್ಲಿ ಬಿಜೆಪಿಯೇ ಅಖಂಡ ಬಲ ಹೊಂದಿತ್ತು. ಈ ಚುನಾವಣೆ ಮೈತ್ರಿ ಕೂಟಕ್ಕೆ ಸವಾಲಾಗಿತ್ತು.

ಐದು ಕ್ಷೇತ್ರಗಳಲ್ಲಿ ನಾಲ್ಕನ್ನು ಮೈತ್ರಿ ಕೂಟ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಇದು ಮೈತ್ರಿಯನ್ನು ಮತ್ತಷ್ಟು ಬಲಗೊಳಿಸಿದೆ. ಭಿನ್ನಮತ–ಹಗೆತನವನ್ನು ಮರೆತು ಒಟ್ಟಿಗೆ ಹೋರಾಡಿದರೆ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿಯನ್ನು ಹುರಿದಿಕ್ಕಬಹುದು ಎಂಬ ವಿಶ್ವಾಸ ಮೂಡಿಸಿದೆ. ಅನಿಶ್ಚಿತತೆ ತಂತಿಯ ಮೇಲಿದ್ದ ಜೆಡಿಎಸ್–ಕಾಂಗ್ರೆಸ್ ಮೈತ್ರಿಯ ಭವಿಷ್ಯ ಈಗ ಗಟ್ಟಿಯಾಗಿದೆ. ಈಗ ಬಿಜೆಪಿ ಮಕಾಡೆ ಮಲಗಿರುವುದರಿಂದಾಗಿ, ಸರ್ಕಾರ ಪತನದ ಯತ್ನವನ್ನು ಕೈಬಿಡುವ ಸಾಧ್ಯತೆಯೂ ಹೆಚ್ಚಿದೆ.

ಬಿಜೆಪಿಗೆ ಮರ್ಮದೇಟು: 2014ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ 3,60,000 ಮತಗಳ ಅಂತರದಿಂದ ಬಿಜೆಪಿಯ ಬಿ.ಎಸ್. ಯಡಿಯೂರಪ್ಪ ಗೆದ್ದಿದ್ದರು. ಆಗ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ಕ್ಷೇತ್ರಗಳ ಪೈಕಿ 2013ರಲ್ಲಿ ಕೆಜೆಪಿಯಿಂದ ಗೆದ್ದು ಬಳಿಕ ಬಿಜೆಪಿ ಸೇರಿದ್ದ ಯಡಿಯೂರಪ್ಪ ಮಾತ್ರ ಆ ಪಕ್ಷದ ಪ್ರತಿನಿಧಿಯಾಗಿದ್ದರು. ಉಳಿದ ಕ್ಷೇತ್ರಗಳ ಪೈಕಿ 4ರಲ್ಲಿ ಕಾಂಗ್ರೆಸ್, 3ರಲ್ಲಿ ಜೆಡಿಎಸ್‌ ಇತ್ತು. ಆದರೆ, ಈಗ ಚಿತ್ರಣ ಬದಲಾಗಿದೆ. ಭದ್ರಾವತಿ ಬಿಟ್ಟರೆ ಉಳಿದ ಏಳೂ ಕಡೆ ಬಿಜೆಪಿ ಶಾಸಕರಿದ್ದಾರೆ. ಹಾಗಿದ್ದರೂ ಯಡಿಯೂರಪ್ಪ ಪುತ್ರ ಬಿ.ವೈ. ರಾಘವೇಂದ್ರ ಅವರು 52,108 ಮತಗಳಿಂದ ಗೆದ್ದರು.

ನಾಮಪತ್ರ ಸಲ್ಲಿಸುವ ಹಿಂದಿನ ದಿನ ರಾತ್ರಿ ಬಿ ಫಾರಂ ಪಡೆದ ಜೆಡಿಎಸ್‌ನ ಮಧು ಬಂಗಾರಪ್ಪ, ಭಾರಿ ಪೈಪೋಟಿ ನೀಡಿದ್ದಾರೆ. ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷರ ಭದ್ರಕೋಟೆಯಲ್ಲಿ ಕೊನೆಗಳಿಗೆಯಲ್ಲಿ ನುಸುಳಿ, ಅಲ್ಲಿ ಕಡಿಮೆ ಅಂತರದಲ್ಲಿ ಸೋತಿರುವುದನ್ನು ನೋಡಿದರೆ ಅದು ಖಂಡಿತಾ ಸೋಲಲ್ಲ. ಬಿಜೆಪಿಯದು ನೆಪಮಾತ್ರ ಗೆಲುವು ಎಂದಷ್ಟೇ ಹೇಳುವಂತಿದೆ.

ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರ ಬಳ್ಳಾರಿಯಲ್ಲಿ ವಾಲ್ಮೀಕಿ ಸಮುದಾಯದ ನಾಯಕ, ಬಿಜೆಪಿ ಶಾಸಕ ಬಿ. ಶ್ರೀರಾಮುಲು ಅವರದ್ದೇ ಪಾರಮ್ಯ. 2014ರಲ್ಲಿ ಶ್ರೀರಾಮುಲು ಅವರು 85,144 ಮತಗಳಿಂದ ಗೆದ್ದಿದ್ದರು. ಆಗಲೂ ಈಗಲೂ ಕಾಂಗ್ರೆಸ್–ಬಿಜೆಪಿ ಶಾಸಕರ ಅನುಪಾತದಲ್ಲಿ ದೊಡ್ಡ ಮೊತ್ತದ ವ್ಯತ್ಯಾಸವಾಗಿಲ್ಲ. 9 ಕ್ಷೇತ್ರಗಳ ಪೈಕಿ 6ರಲ್ಲಿ ಕಾಂಗ್ರೆಸ್, 3ರಲ್ಲಿ ಬಿಜೆಪಿ ಶಾಸಕರಿದ್ದಾರೆ. ಕಾಂಗ್ರೆಸ್ ಶಾಸಕರ ‘ಭಿನ್ನಮತ’ದ ಮಧ್ಯೆ ನಾಮಪತ್ರ ಸಲ್ಲಿಸುವ ಒಂದು ದಿನ ಮೊದಲು ಅಭ್ಯರ್ಥಿಯಾಗಿ ಕಣಕ್ಕೆ ಇಳಿದ ವಿ.ಎಸ್. ಉಗ್ರಪ್ಪ 2.43 ಲಕ್ಷ ಮತಗಳ ಭಾರಿ ಅಂತರದಿಂದ ಗೆದ್ದಿದ್ದಾರೆ. ತಮ್ಮ ಸೋದರಿ ಜೆ. ಶಾಂತಾ ಅವರನ್ನು ಗೆಲ್ಲಿಸಿಕೊಳ್ಳುವಲ್ಲಿ ಶ್ರೀರಾಮುಲು ಸೋತಿದ್ದಾರೆ.

ಜಮಖಂಡಿ ವಿಧಾನಸಭೆ ಕ್ಷೇತ್ರದಲ್ಲಿ 2018ರ ಮೇನಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ಶ್ರೀಕಾಂತ ಕುಲಕರ್ಣಿ ಹಾಗೂ ಅದೇ ಪಕ್ಷದ ಬಂಡಾಯ ಅಭ್ಯರ್ಥಿ ಸಂಗಮೇಶ ನಿರಾಣಿ ಕಣದಲ್ಲಿದ್ದರು. ಹಾಗಿದ್ದರೂ ಕಾಂಗ್ರೆಸ್‌ನ ಸಿದ್ದು ನ್ಯಾಮಗೌಡರು 2795 ಮತಗಳಿಂದ ಗೆದ್ದಿದ್ದರು. ಸಿದ್ದು ನ್ಯಾಮಗೌಡರ ಅಕಾಲಿಕ ನಿಧನದಿಂದಾಗಿ ಎದುರಾದ ಈ ಉಪ ಚುನಾವಣೆಯಲ್ಲಿ ಕುಲಕರ್ಣಿ ಹಾಗೂ ಸಂಗಮೇಶ ಒಟ್ಟಾಗಿದ್ದರು. ಹಾಗಿದ್ದರೂ 39,480 ಮತಗಳಿಂದ ಸಿದ್ದು ನ್ಯಾಮಗೌಡರ ಪುತ್ರ ಆನಂದ್ ಗೆದ್ದಿದ್ದಾರೆ. ಬಿಜೆಪಿ ಒಗ್ಗಟ್ಟಾಗಿದ್ದರೂ, ಕಾಂಗ್ರೆಸ್ ನಾಯಕರ ‘ಒಗ್ಗೂಡುವಿಕೆ’ಯಿಂದ ಕಮಲ ಮುದುಡಿದೆ.

ಮಂಡ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್‌ ಪ್ರಾತಿನಿಧ್ಯವಿದೆ. ಜೆಡಿಎಸ್‌ನ ಶಿವರಾಮೇಗೌಡರು 3.24 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದಾರೆ. ಆದರೆ, ಕೊನೆಗಳಿಗೆಯಲ್ಲಿ ಅಭ್ಯರ್ಥಿಯಾಗಿ ಧುಮುಕಿದ ಬಿಜೆಪಿಯ ಡಾ. ಸಿದ್ದರಾಮಯ್ಯ 2.44 ಲಕ್ಷ ಮತಗಳನ್ನು ಪಡೆದಿದ್ದಾರೆ. ಈ ಪೈಕಿ ಗೌಡರ ವಿರುದ್ಧ ಇರಬಹುದಾದ ಕಾಂಗ್ರೆಸ್‌ ಮತಗಳೂ ಸೇರಿರಬಹುದು. ಆದರೆ, ಇದು ಮಂಡ್ಯದಂತಹ ನೆಲದಲ್ಲಿ ಬಿಜೆಪಿ ಮೊಳೆಯುತ್ತಿರುವುದನ್ನು ಸೂಚಿಸುವಂತಿದೆ.

**

ಉಪ ಚುನಾವಣೆ ದಿಕ್ಸೂಚಿಯಲ್ಲ

ವಿಧಾನಸಭೆ ಅಥವಾ ಉಪ ಚುನಾವಣೆಗಳು ಲೋಕಸಭೆ ಮಹಾ ಚುನಾವಣೆಗೆ ಎಂದೂ ದಿಕ್ಸೂಚಿಯಾದ ನಿದರ್ಶನಗಳಿಲ್ಲ.

ಲೋಕಸಭೆ ಅಥವಾ ವಿಧಾನಸಭೆ ಉಪ ಚುನಾವಣೆಗಳಲ್ಲಿ ರಾಜ್ಯದಲ್ಲಿ ಆಡಳಿತ ನಡೆಸುವ ಪಕ್ಷದ ಅಭ್ಯರ್ಥಿಗಳು ಗೆಲುವಿನ ಪತಾಕೆ ಹಾರಿಸಿದ ಅನೇಕ ಪುರಾವೆಗಳು ಸಿಗುತ್ತವೆ. ಬಿಜೆಪಿ ಅಧಿಕಾರದಲ್ಲಿದ್ದಾಗ 2008–09 ಹಾಗೂ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ 2013–14ರಲ್ಲಿ ನಡೆದ ಇಂತಹ ಚುನಾವಣೆಗಳ ಇತಿಹಾಸ, ಬಳಿಕ ನಡೆದಿದ್ದ ಲೋಕಸಭೆ ಚುನಾವಣೆಗಳ ಫಲಿತಾಂಶಗಳನ್ನು ಅವಲೋಕಿಸಿದರೆ ಇದು ಸ್ಪಷ್ಟ. ಹೀಗಾಗಿಯೇ ಇದು ಮೂರು ಪಕ್ಷಗಳಿಗೂ ಪಾಠವಾಗಿರುವುದಂತೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT