ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನರ್ಹರ ಒತ್ತಡ: ಬಿಎಸ್‌ವೈಗೆ ಸವಾಲು; ಕೈ–ದಳಕ್ಕೆ ಪ್ರತಿಷ್ಠೆ

ದಿಢೀರ್ ದೆಹಲಿಗೆ ದೌಡಾಯಿಸಿದ ಯಡಿಯೂರಪ್ಪ
Last Updated 21 ಸೆಪ್ಟೆಂಬರ್ 2019, 20:18 IST
ಅಕ್ಷರ ಗಾತ್ರ

ಬೆಂಗಳೂರು: ಮೈತ್ರಿ ಸರ್ಕಾರ ಬೀಳಿಸಿ ಅನರ್ಹಗೊಂಡಿರುವ 17 ಶಾಸಕರ ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಅಕ್ಟೋಬರ್ 21ರಂದು ಚುನಾವಣೆ ನಡೆಯಲಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರ ಉಳಿಸಿಕೊಳ್ಳಬೇಕಾದರೆ ಕನಿಷ್ಠ ಆರು ಕ್ಷೇತ್ರಗಳಲ್ಲಿ ಗೆಲ್ಲುವುದು ಅನಿವಾರ್ಯವಾಗಲಿದೆ.

‘ಪಕ್ಷಕ್ಕೆ ದ್ರೋಹ ಮಾಡಿ ಬಿಜೆಪಿ ಜತೆ ಕೈ ಜೋಡಿಸಿದರು’ ಎಂದು ಕಾಂಗ್ರೆಸ್‌– ಜೆಡಿಎಸ್‌ ನಾಯಕರು ಅನರ್ಹರ ಬಗ್ಗೆ ಕಿಡಿಕಾರುತ್ತಿದ್ದು, ಅನರ್ಹರಿಗೆ ಪಾಠ ಕಲಿಸುವ ಉಮೇದಿನಲ್ಲಿದ್ದಾರೆ. ಉಪ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳುವುದು
ಹಾಗೂ ಬಿಜೆಪಿ ಬೆಳವಣಿಗೆಗೆ ತಡೆ ಹಾಕುವುದು ವಿರೋಧ ಪಕ್ಷಗಳ ನಾಯಕರ ಮುಂದಿನ ದೊಡ್ಡ ಸವಾಲಾಗಿದೆ.

ಲೋಕಸಭೆ ಚುನಾವಣೆಯ ಭರ್ಜರಿ ಗೆಲುವಿನ ಬಳಿಕ ಬಿಜೆಪಿ ನಾಯಕರು ‘ಆಪರೇಷನ್‌ ಕಮಲ’ದ ಕಾರ್ಯಾಚರಣೆಗೆ ಇಳಿದಿದ್ದರು. ಇದರಿಂದಾಗಿ ಕಾಂಗ್ರೆಸ್‌ನ 14 (ಆ ಪಕ್ಷ ಸೇರಿದ್ದ ಆರ್. ಶಂಕರ್‌ ಸೇರಿ), ಜೆಡಿಎಸ್‌ನ 3 ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಇದರಿಂದ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ಪತನವಾಗಿತ್ತು. 17 ಶಾಸಕರ ರಾಜೀನಾಮೆಯನ್ನು ಅಂಗೀಕರಿಸದ ಅಂದಿನ ಸಭಾಧ್ಯಕ್ಷ ಕೆ.ಆರ್. ರಮೇಶ್‌ ಕುಮಾರ್ ಅವರು ಎಲ್ಲರನ್ನೂ 15 ನೇ ವಿಧಾನಸಭೆಯ ಅವಧಿ ಮುಗಿಯವರೆಗೆ( 2023) ಯಾವುದೇ ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸಿದ್ದರು. ಇದನ್ನು ಪ್ರಶ್ನಿಸಿ, ಅನರ್ಹರೂ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದಾರೆ.

ಉಪ ಚುನಾವಣೆಯ ಅಂದಾಜಿನಲ್ಲಿದ್ದ ಕಾಂಗ್ರೆಸ್ ನಾಯಕರು ಎಲ್ಲ ಕ್ಷೇತ್ರಗಳಿಗೆ ವೀಕ್ಷಕರನ್ನು ಕಳುಹಿಸಿ, ಆಕಾಂಕ್ಷಿಗಳ ಪಟ್ಟಿಯನ್ನು ತಯಾರಿಸಿದ್ದಾರೆ. ಅನರ್ಹರ ಕ್ಷೇತ್ರಗಳಲ್ಲಿ ಪ್ರಚಾರವನ್ನೂ ಆರಂಭಿಸಿದ್ದಾರೆ. ಅನರ್ಹರ ಮೂರು ಕ್ಷೇತ್ರಗಳ ಜತೆಗೆ, ಯಶವಂತಪುರದತ್ತಲೂ ಜೆಡಿಎಸ್ ನಾಯಕರು ಹೆಚ್ಚು ಲಕ್ಷ್ಯ ವಹಿಸಿದ್ದಾರೆ.

ಸರ್ಕಾರ ರಚನೆ, ಸಚಿವ ಸ್ಥಾನ ಹಂಚಿಕೆಯ ಗೊಂದಲದಲ್ಲಿ ಮುಳುಗಿದ್ದ ಬಿಜೆಪಿ ನಾಯಕರು ತಮ್ಮ ಎದುರಾಳಿಗಳಷ್ಟು ಚುನಾವಣೆಗೆ ಸಿದ್ಧತೆ ನಡೆಸಿಲ್ಲ. ಆದರೆ, ಬೂತ್ ಮಟ್ಟದಲ್ಲಿ ಪಕ್ಷದ ಸಂಘಟನೆ, ಸದಸ್ಯತ್ವ ನೋಂದಣಿಯಲ್ಲಿ ತೊಡಗಿಕೊಂಡಿದ್ದಾರೆ. ಅನರ್ಹರ ಅರ್ಜಿ ಇತ್ಯರ್ಥವಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ನಾಯಕರು, ಅವರಿಗೆ ಟಿಕೆಟ್ ಕೊಡಬೇಕಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಅಭ್ಯರ್ಥಿ ಆಯ್ಕೆ ಬಗ್ಗೆಯೂ ಹೆಚ್ಚಿನ ಗಮನ ಕೊಟ್ಟಿಲ್ಲ.

ಆದರೆ, ಮುಖ್ಯಮಂತ್ರಿ ಯಡಿಯೂರಪ್ಪ, ಅನರ್ಹರ ಕ್ಷೇತ್ರಗಳಿಗೆ ಅನುದಾನದ ಹೊಳೆಯನ್ನೇ ಹರಿಸಿದ್ದಾರೆ. ಹಿಂದಿನ ಸರ್ಕಾರದಲ್ಲಿ ಶಾಸಕರ ಕ್ಷೇತ್ರಗಳಿಗೆ ನೀಡಿದ್ದ ಅನುದಾನವನ್ನು ಕಡಿತಗೊಳಿಸಿ, ಅನರ್ಹರಿಗೆ ಆದ್ಯತೆ ಕೊಟ್ಟಿದ್ದಾರೆ. ಆದರೆ, ಅಭಿವೃದ್ಧಿ ಕಾರ್ಯಗಳಿಗೆ ಇನ್ನೂ ಚಾಲನೆ ನೀಡಿಲ್ಲ.

ಗೆಲುವು ಅನಿವಾರ್ಯ: ವಿಧಾನಸಭೆಯಲ್ಲಿ ಬಿಜೆಪಿ 105 ಸದಸ್ಯರ ಬಲ ಹೊಂದಿದ್ದು, ಪಕ್ಷೇತರ ಸದಸ್ಯ ಎಚ್. ನಾಗೇಶ್‌ ಸರ್ಕಾರಕ್ಕೆ ಬೆಂಬಲ ಕೊಟ್ಟು ಸಚಿವರಾಗಿದ್ದಾರೆ. 224 ಬಲದ ವಿಧಾನಸಭೆಯಲ್ಲಿ ಎರಡು ಕ್ಷೇತ್ರಗಳಿಗೆ ಚುನಾವಣೆ ನಡೆಯದೇ ಇರುವುದರಿಂದ ಫಲಿತಾಂಶ ಬಂದ ಬಳಿಕ ಸದಸ್ಯ ಬಲ 222 ಆಗಲಿದೆ. ಬಿಜೆಪಿ ಸರಳ ಬಹುಮತ (112) ಪಡೆಯಬೇಕಾದರೆ ಕನಿಷ್ಠ 6 ಸ್ಥಾನಗಳಲ್ಲಿ ಗೆಲ್ಲಲೇಬೇಕಿದೆ.

ದೆಹಲಿಗೆ ದೌಡು: ಅನರ್ಹರ ಒತ್ತಡ ಹಾಕಿದ್ದರಿಂದಾಗಿ, ಯಡಿಯೂರಪ್ಪ ಶನಿವಾರ ಸಂಜೆಯೇ ದೆಹಲಿಗೆ ತೆರಳಿದರು. ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಿ ಅನರ್ಹರಿಗೆ ನ್ಯಾಯ ಕೊಡಿಸುವುದು ಅವರ ದಿಢೀರ್ ಭೇಟಿಯ ಉದ್ದೇಶ ಎಂದು ಪಕ್ಷದ ಮೂಲಗಳು ಹೇಳಿವೆ.

ತಟ್ಟೆಗೆ ಮಣ್ಣು ಹಾಕಿಬಿಟ್ಟಿರಿ

ಅನರ್ಹಗೊಳಿಸಿದ ಸಭಾಧ್ಯಕ್ಷರ ಕ್ರಮ ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಇತ್ಯರ್ಥವಾಗುವ ಮೊದಲೇ ಉಪ ಚುನಾವಣೆ ಘೋಷಣೆಯಾಗಿರುವುದರಿಂದಾಗಿ 17 ಅನರ್ಹ ಶಾಸಕರು ಬಿಜೆಪಿ ನಾಯಕರ ವಿರುದ್ಧ ಸಿಡಿದೆದ್ದಿದ್ದಾರೆ.

ಅರ್ಜಿ ಸೋಮವಾರ(ಸೆ.23) ವಿಚಾರಣೆಗೆ ಬರಲಿದ್ದು, ಅಲ್ಲಿ ತಮ್ಮ ಪರವಾದ ತೀರ್ಪು ಹೊರಬರಲಿದೆ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ, ಅದಕ್ಕೆ ಮೊದಲೇ ಚುನಾವಣೆ ಘೋಷಣೆಯಾಗಿದ್ದು, ಕೋರ್ಟ್‌ನಿಂದ ಯಾವುದೇ ತೀರ್ಪು ಹೊರಬರದೇ ಇದ್ದರೆ ಅನರ್ಹರು ಸ್ಪರ್ಧಿಸುವ ಅವಕಾಶವೇ ಇಲ್ಲ.

ಚುನಾವಣೆ ಘೋಷಣೆಯಾಗುತ್ತಿದ್ದಂತೆ ಉಪಮುಖ್ಯಮಂತ್ರಿಗಳಾದ ಅಶ್ವತ್ಥನಾರಾಯಣ, ಲಕ್ಷ್ಮಣ ಸವದಿ ಅವರಿಗೆ ಕರೆ ಮಾಡಿದ ಅನರ್ಹರು, ಹೇಗಾದರೂ ತಮ್ಮನ್ನು ಕಾಪಾಡಿ ಎಂದು ದುಂಬಾಲು ಬಿದ್ದರು. ಇದು ಗಮನಕ್ಕೆ ಬರುತ್ತಿದ್ದಂತೆ ಮಲ್ಲೇಶ್ವರದಲ್ಲಿರುವ ಅರಣ್ಯ ಇಲಾಖೆ ಅತಿಥಿಗೃಹಕ್ಕೆ ಎಲ್ಲರನ್ನೂಯಡಿಯೂರಪ್ಪ ಕರೆಸಿಕೊಂಡರು.‘ಊಟಕ್ಕೆ ಬನ್ನಿ’ ಎಂದು ಯಡಿಯೂರಪ್ಪ ಕರೆಯುತ್ತಿದ್ದಂತೆ, ‘ನಮ್ಮ ತಟ್ಟೆಗೆ ಮಣ್ಣು ಬಿದ್ದಿದೆ. ಭವಿಷ್ಯವೇ ಮಸುಕಾಗಿದೆ. ಇಂತಹ ಹೊತ್ತಿನಲ್ಲಿ ನಿಮ್ಮ ಊಟ ಯಾರಿಗೆ ಬೇಕು’ ಎಂದು ಕಿಡಿಕಾರಿದರು.

‘ನಮ್ಮಿಂದ ನೀವು ಮುಖ್ಯಮಂತ್ರಿಯಾಗಿದ್ದೀರಿ. ಕೊಟ್ಟ ಭರವಸೆ ಈಡೇರಿಸಿಲ್ಲ. ಕೂಡಲೇ ಅಮಿತ್ ಶಾ ಭೇಟಿ ಮಾಡಿಸದಿದ್ದರೆ ನಮ್ಮ ರಾಜಕೀಯ ಸಮಾಧಿ ಖಂಡಿತ’ ಎಂದು ತಮ್ಮ ಸಿಟ್ಟು ಹೊರಹಾಕಿದರು.

ಚುನಾವಣೆ ಇಲ್ಲ

ಪ್ರತಾಪಗೌಡ ಪಾಟೀಲ (ಮಸ್ಕಿ), ಮುನಿರತ್ನ (ಆರ್.ಆರ್.ನಗರ) ಗೆಲುವು ಪ್ರಶ್ನಿಸಿ ಬಿಜೆಪಿ ಅಭ್ಯರ್ಥಿಗಳು ಸಲ್ಲಿಸಿರುವ ಅರ್ಜಿ ಹೈಕೋರ್ಟ್‌ನಲ್ಲಿ ಇತ್ಯರ್ಥವಾಗದಿರುವುದರಿಂದ ಈ ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾಗಿಲ್ಲ. ಮಸ್ಕಿಯಲ್ಲಿ ಸೋತಿದ್ದ ಬಸವನಗೌಡ ತುರವೀಹಾಳ, ಆರ್.ಆರ್.ನಗರದಲ್ಲಿ ಸೋತಿದ್ದ ತುಳಸಿ ಮುನಿರಾಜಗೌಡ ತಕರಾರು ಸಲ್ಲಿಸಿದ್ದಾರೆ.

**

ಚುನಾವಣೆ ಇಷ್ಟು ಬೇಗ ಬರುತ್ತದೆ ಎಂಬ ನಿರೀಕ್ಷೆ ಇರಲಿಲ್ಲ. ಆದರೂ, ಚುನಾವಣೆ ಎದುರಿಸಲು ಕಾಂಗ್ರೆಸ್‌ ಸಿದ್ಧವಾಗಿದೆ. ಜೆಡಿಎಸ್‌ನೊಂದಿಗೆ ಮೈತ್ರಿ ಕುರಿತು ಹೈಕಮಾಂಡ್‌ ತೀರ್ಮಾನಿಸುತ್ತದೆ
– ಸಿದ್ದರಾಮಯ್ಯ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ

**

ಉಪ ಚುನಾವಣೆಯಲ್ಲಿ ಯಾರ ಜತೆಯೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. 15 ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಸ್ಪರ್ಧೆ ಮಾಡಲಿದ್ದು, 8ರಿಂದ 10 ಕ್ಷೇತ್ರಗಳಲ್ಲಿ ಪಕ್ಷ ಗೆಲ್ಲುವುದು ನಿಶ್ಚಿತ
– ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ

**

ಸುಪ್ರೀಂಕೋರ್ಟ್‌ ಮತ್ತು ಚುನಾವಣಾ ಆಯೋಗ ಅನರ್ಹ ಶಾಸಕರ ಬಗ್ಗೆ ನಿರ್ಣಯ ಕೈಗೊಳ್ಳುತ್ತದೆ. ಚುನಾವಣೆಗೆ ನಮ್ಮ ಪಕ್ಷ ಸಿದ್ಧವಾಗಿದೆ. 15ರಲ್ಲೂ ಗೆಲ್ಲುತ್ತೇವೆ
– ನಳಿನ್ ಕುಮಾರ್ ಕಟೀಲ್,ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT