‘ಅಭ್ಯರ್ಥಿಗಳು ಅಪರಾಧ ಮಾಹಿತಿ ಪ್ರಕಟಿಸದಿದ್ದರೆ ಕ್ರಮ’

ಮಂಗಳವಾರ, ಏಪ್ರಿಲ್ 23, 2019
27 °C
ರಾಜ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಎಚ್ಚರಿಕೆ

‘ಅಭ್ಯರ್ಥಿಗಳು ಅಪರಾಧ ಮಾಹಿತಿ ಪ್ರಕಟಿಸದಿದ್ದರೆ ಕ್ರಮ’

Published:
Updated:

ಬೆಂಗಳೂರು: ‘ಅಪರಾಧ ಹಿನ್ನೆಲೆಯುಳ್ಳ ಅಭ್ಯರ್ಥಿಗಳು ತಮ್ಮ ವಿರುದ್ಧದ ಪ್ರಕರಣಗಳ ಮಾಹಿತಿಯನ್ನು ಮತದಾನ ದಿನಾಂಕದ ಎರಡು ದಿನಗಳ ಮುಂಚೆ ಮಾಧ್ಯಮಗಳಲ್ಲಿ ಪ್ರಕಟಿಸದಿದ್ದರೆ, ಚುನಾವಣಾ ಆಯೋಗದ ಕಾನೂನುಬದ್ಧ ನಿರ್ದೇಶನ ಪಾಲಿಸುವಲ್ಲಿ ಅಭ್ಯರ್ಥಿಯ ಪಕ್ಷ ವಿಫಲವಾಗಿದೆ ಎಂದು ಪರಿಗಣಿಸಲಾಗುತ್ತದೆ’ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಅಭ್ಯರ್ಥಿಯ ಅಪರಾಧ ಪ್ರಕರಣಗಳ ಮಾಹಿತಿಯನ್ನು ಸಂಬಂಧಿಸಿದ ಪಕ್ಷವು ತನ್ನ ಅಧಿಕೃತ ವೆಬ್‌ ಸೈಟ್‌ನಲ್ಲಿ ಪ್ರಕಟಿಸಬೇಕು. ಅಭ್ಯರ್ಥಿಯು ತನ್ನ ವಿರುದ್ಧದ ಅಪರಾಧ ಪ್ರಕರಣಗಳ ಮಾಹಿತಿಯನ್ನು ತಾನು ಪ್ರತಿನಿಧಿಸುವ ಪಕ್ಷಕ್ಕೆ ಸಲ್ಲಿಸಿದ್ದೇನೆ ಎಂದು ಚುನಾವಣಾ ಅಧಿಕಾರಿಗಳ ಮುಂದೆ ಘೋಷಿಸಿಕೊಳ್ಳಬೇಕು’ ಎಂದು ಹೇಳಿದರು.

‘ಪ್ರಚಾರದ ವೇಳೆ ಇತರೆ ರಾಜಕೀಯ ಪಕ್ಷಗಳ ನಾಯಕರನ್ನು ವೈಯಕ್ತಿಕವಾಗಿ ನಿಂದಿಸಿದರೆ, ಅದನ್ನು ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಈ ಸಂಬಂಧ ಕೆಲವರ ವಿರುದ್ಧ ಪ್ರಕರಣಗಳು ಕೂಡ ದಾಖಲಾಗಿವೆ’ ಎಂದು ತಿಳಿಸಿದರು. 

‘ಸಚಿವ ಚನ್ನಬಸಪ್ಪ.ಎಸ್‌.ಶಿವಳ್ಳಿ ಅವರ ನಿಧನದಿಂದ ತೆರೆವಾಗಿರುವ ಧಾರವಾಡ ಜಿಲ್ಲೆ ಕುಂದಗೋಳ ವಿಧಾನಸಭೆ ಕ್ಷೇತ್ರಕ್ಕೆ ಮೇ 19ರಂದು ಚುನಾವಣೆ ನಡೆಯಲಿದೆ. ಇದೇ 10ರಿಂದಲೇ ಅಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳದವರು ಮೇ12ರೊಳಗೆ ನೋಂದಾಯಿಸಿಕೊಳ್ಳಬೇಕು’ ಎಂದು ತಿಳಿಸಿದರು.

ಕಪ್ಪು ಪೆಟ್ಟಿಗೆಯ ಕುರಿತು ಡಿಸಿ ವರದಿ

‘ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರಕ್ಕೆ ಚಿತ್ರದುರ್ಗಕ್ಕೆ ಭೇಟಿ ನೀಡಿದ್ದ ವೇಳೆ ಹೆಲಿಕಾಪ್ಟರ್‌ನಿಂದ ಕೆಳಗಿಳಿಸಿದ ‘ಕಪ್ಪು ಬಣ್ಣದ ಪೆಟ್ಟಿಗೆ’ಯ ಕುರಿತು ಅಲ್ಲಿನ ಜಿಲ್ಲಾ ಚುನಾವಣಾಧಿಕಾರಿ ತನಿಖೆ ನಡೆಸಿ, ವರದಿ ಸಲ್ಲಿಸಿದ್ದಾರೆ. ಅದರಲ್ಲಿ ಭದ್ರತಾ ಸಲಕರಣೆಗಳು ಹಾಗೂ ಇತರೆ ಸಾಮಗ್ರಿಗಳಲ್ಲಿದ್ದವು, ಮೈಸೂರಿನಲ್ಲಿ ಕಾರ್ಯಕ್ರಮವಿದ್ದುದ್ದರಿಂದ ಅಲ್ಲಿಗೆ ತೆಗೆದುಕೊಂಡು ಹೋಗಲಾಯಿತು ಎಂದು ವರದಿಯಲ್ಲಿ ತಿಳಿಸಲಾಗಿದೆ’ ಎಂದು ಸಂಜೀವ್‌ ಕುಮಾರ್ ಹೇಳಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !