ಬಲಿಷ್ಠ ಅಭ್ಯರ್ಥಿ ಆಯ್ಕೆಗೆ ಕಾಂಗ್ರೆಸ್‌ ಕಸರತ್ತು

ಮಂಗಳವಾರ, ಮಾರ್ಚ್ 26, 2019
26 °C
ಪಕ್ಷದ ಚುನಾವಣಾ ಸಮಿತಿಗೆ ಐವರ ಹೆಸರು ಶಿಫಾರಸು

ಬಲಿಷ್ಠ ಅಭ್ಯರ್ಥಿ ಆಯ್ಕೆಗೆ ಕಾಂಗ್ರೆಸ್‌ ಕಸರತ್ತು

Published:
Updated:
Prajavani

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಸತತ ಏಳು ಚುನಾವಣೆಗಳಲ್ಲಿ ಸೋಲು ಕಂಡಿರುವ ಕಾಂಗ್ರೆಸ್‌ ಪಕ್ಷ ಈ ಬಾರಿ ಕ್ಷೇತ್ರವನ್ನು ಮತ್ತೆ ವಶಕ್ಕೆ ಪಡೆಯಲು ಕಸರತ್ತು ಆರಂಭಿಸಿದೆ. ನಿರಂತರ ಗೆಲುವಿನ ಮೂಲಕ ಬಲವಾಗಿ ಬೇರೂರಿರುವ ಬಿಜೆಪಿಯನ್ನು ಮಣಿಸಲು ‘ಬಲಿಷ್ಠ’ ಅಭ್ಯರ್ಥಿಗಾಗಿ ಪಕ್ಷದ ಹೈಕಮಾಂಡ್‌ ತೂಗಿ, ಅಳೆಯುವ ಲೆಕ್ಕಾಚಾರಕ್ಕೆ ಕೈ ಹಾಕಿದೆ.

1991ರಿಂದ ಕೈತಪ್ಪಿ ಹೋಗಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಈ ಬಾರಿ ಕಾಂಗ್ರೆಸ್‌ ಪಾಲಿಗೆ ಪ್ರತಿಷ್ಠೆಯ ಕಣವಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲೂ ಹೀನಾಯವಾಗಿ ಸೋಲು ಕಂಡಿರುವ ಪಕ್ಷಕ್ಕೆ ಲೋಕಸಭಾ ಚುನಾವಣೆಯಲ್ಲಿ ಗೆಲುವಿನ ಮೂಲಕ ಚೇತರಿಕೆಯ ಮದ್ದು ನೀಡಲು ಪಕ್ಷದ ವರಿಷ್ಠರು ಆಲೋಚಿಸುತ್ತಿದ್ದಾರೆ. ನಾಮಪತ್ರ ಸಲ್ಲಿಕೆ ಆರಂಭಕ್ಕೆ ಎಂಟು ದಿನಗಳಷ್ಟೇ ಉಳಿದಿದ್ದು, ಕೈ ಪಾಳೆಯದ ಅಭ್ಯರ್ಥಿ ಯಾರು ಎಂಬುದು ಇನ್ನೂ ನಿಗೂಢವಾಗಿ ಉಳಿದಿದೆ.

ಚುನಾವಣೆಯ ಹೊಸ್ತಿಲಲ್ಲಿ ಹಾಲಿ ಸಂಸದ ನಳಿನ್‌ಕುಮಾರ್‌ ಕಟೀಲ್‌ ವಿರುದ್ಧ ಜಿಲ್ಲೆಯಲ್ಲಿ ಅಸಮಾಧಾನ ಮಾತುಗಳು ಕೇಳಿಬರುತ್ತಿವೆ. ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನದಲ್ಲಿ ವಿಳಂಬ ಸೇರಿದಂತೆ ಹಲವು ವಿಚಾರಗಳಲ್ಲಿ ಬಿಜೆಪಿಯ ಒಳಗೂ ಅವರ ವಿರುದ್ಧ ಅಸಮಾಧಾನ ಹೊಗೆಯಾಡುತ್ತಿದೆ. ಈ ಸಂದರ್ಭದಲ್ಲಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಗೆಲುವನ್ನು ಕಸಿದುಕೊಳ್ಳಲು ಕಾಂಗ್ರೆಸ್‌ ತಂತ್ರಗಾರಿಕೆ ರೂಪಿಸುತ್ತಿದೆ.

ಲೋಕಸಭಾ ಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿಗಳ ಆಯ್ಕೆ ಪರಿಶೀಲನಾ ಸಮಿತಿ (ಸ್ಕ್ರೀನಿಂಗ್‌ ಕಮಿಟಿ) ಸಭೆ ಸೋಮವಾರ ದೆಹಲಿಯಲ್ಲಿ ನಡೆದಿದೆ. ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್‌, ಮಾಜಿ ಸಚಿವ ವಿನಯಕುಮಾರ್‌ ಸೊರಕೆ, ಬಿ.ರಮಾನಾಥ ರೈ, ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಿಥುನ್‌ ರೈ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ (ಎಸ್‌ಸಿಡಿಸಿಸಿ) ಬ್ಯಾಂಕ್‌ ಅಧ್ಯಕ್ಷ ಎಂ.ಎನ್‌.ರಾಜೇಂದ್ರಕುಮಾರ್‌ ಅವರ ಹೆಸರುಗಳನ್ನು ಪಕ್ಷದ ರಾಜ್ಯ ಘಟಕದಿಂದ ಶಿಫಾರಸು ಮಾಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸೋಮವಾರ ನಡೆದ ಸಭೆ ಅಭ್ಯರ್ಥಿ ಆಯ್ಕೆಯ ಕುರಿತು ಅಂತಿಮ ತೀರ್ಮಾನಕ್ಕೆ ಬಂದಿಲ್ಲ. ಶುಕ್ರವಾರ (ಮಾರ್ಚ್‌ 15) ಕಾಂಗ್ರೆಸ್‌ನ ಕೇಂದ್ರ ಚುನಾವಣಾ ಸಮಿತಿಯ ಸಭೆ ನಡೆಯಲಿದೆ. ಅಲ್ಲಿ ಈ ಐವರು ಸಂಭವನೀಯರ ಕುರಿತು ಚರ್ಚೆ ನಡೆಯಲಿದೆ. ಅದೇ ದಿನ ಅಭ್ಯರ್ಥಿ ಆಯ್ಕೆ ಅಂತಿಮಗೊಳ್ಳುವ ಸಾಧ್ಯತೆ ಇದೆ ಎಂದು ಪಕ್ಷದ ಪ್ರಮುಖರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಬಲ ಪೈಪೋಟಿ: ದಕ್ಷಿಣ ಕನ್ನಡ ಕ್ಷೇತ್ರದ ಟಿಕೆಟ್‌ಗಾಗಿ ಕಾಂಗ್ರೆಸ್‌ ಮುಖಂಡರ ನಡುವೆ ಈಗ ಪ್ರಬಲ ಪೈಪೋಟಿ ಆರಂಭವಾಗಿದೆ. ಬಿಲ್ಲವರು ಮತ್ತು ಬಂಟರ ಜಾತಿ ಲೆಕ್ಕಾಚಾರವೂ ಅಭ್ಯರ್ಥಿ ಆಯ್ಕೆ ಹಿಂದೆ ಕೆಲಸ ಮಾಡುತ್ತಿದೆ. ದಕ್ಷಿಣ ಕನ್ನಡ, ಉಡುಪಿ– ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಲೋಕಸಭಾ ಕ್ಷೇತ್ರಗಳ ಪೈಕಿ ಎರಡು ಕಡೆ ಬಿಲ್ಲವ (ಈಡಿಗ) ಸಮುದಾಯದ
ವರಿಗೆ ಅವಕಾಶ ಕಲ್ಪಿಸಬೇಕೆಂಬ ಬೇಡಿಕೆ ಕಾಂಗ್ರೆಸ್‌ ಹೈಕಮಾಂಡ್‌ ಮುಂದಿದೆ.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಒತ್ತಾಸೆ ಹೊಂದಿರುವ ಬಿ.ಕೆ.ಹರಿಪ್ರಸಾದ್‌, ಅಲ್ಲಿ ಅವಕಾಶ ತಪ್ಪಿದರೆ ದಕ್ಷಿಣ ಕನ್ನಡದಲ್ಲಿ ಕಣಕ್ಕಿಳಿಯಲು ಒಲವು ತೋರಿದ್ದಾರೆ. ಬಿಲ್ಲವರ ಕೋಟಾದಡಿ ಟಿಕೆಟ್‌ಗಾಗಿ ವಿನಯಕುಮಾರ್‌ ಸೊರಕೆ ಪ್ರಬಲ ಪೈಪೋಟಿ ನಡೆಸಿದ್ದಾರೆ. ಈ ಹಿಂದೆ ಸೊರಕೆ ಉಡುಪಿ (1999–2004) ಕ್ಷೇತ್ರದ ಸಂಸದರಾಗಿದ್ದು, ಅಲ್ಲಿಯೂ ಅವರು ಆಕಾಂಕ್ಷಿಯಾಗಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡ ಬಳಿಕ ಲೋಕಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿದ್ದ ರಮಾನಾಥ ರೈ, ಮೊದಲ ಬಾರಿ ಟಿಕೆಟ್‌ ಪಡೆಯಲು ತೀವ್ರ ಪ್ರಯತ್ನ ಮುಂದುವರಿಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್‌ ಕೈತಪ್ಪಿದ್ದರಿಂದ ಬೇಸರಗೊಂಡಿದ್ದ ಮಿಥುನ್‌ ರೈ, ಯುವ ಕೋಟಾದಡಿ ಟಿಕೆಟ್‌ ನಿರೀಕ್ಷೆಯಲ್ಲಿದ್ದಾರೆ.

ಈ ಎಲ್ಲ ಬೆಳವಣಿಗೆಗಳ ನಡುವೆ ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಎನ್‌.ರಾಜೇಂದ್ರಕುಮಾರ್‌ ಹೆಸರು ಸಂಭವನೀಯರ ಪಟ್ಟಿಯಲ್ಲಿ ಕಾಣಿಸಿಕೊಂಡಿರುವುದು ಪೈಪೋಟಿಯನ್ನು ಮತ್ತಷ್ಟು ಹೆಚ್ಚಿಸಿದೆ. ಇತ್ತೀಚಿನವರೆಗೂ ರಾಜಕೀಯ ಪಕ್ಷಗಳಿಂದ ಅಂತರ ಕಾಯ್ದುಕೊಂಡಿದ್ದ ರಾಜೇಂದ್ರಕುಮಾರ್‌, ಮಾರ್ಚ್‌ 6ರಂದು ನಡೆದ ಕಾಂಗ್ರೆಸ್‌ನ ಪರಿವರ್ತನಾ ಯಾತ್ರೆಯಲ್ಲಿ ವೇದಿಕೆ ಏರಿದ್ದರು. ಈಗ ಅವರ ಹೆಸರು ಟಿಕೆಟ್‌ ಆಕಾಂಕ್ಷಿಗಳ ಸಾಲಿನಲ್ಲಿ ಮುನ್ನೆಲೆಗೆ ಬಂದಿದೆ.

ಬಿಲ್ಲವ– ಬಂಟರ ಪೈಪೋಟಿ

ದಕ್ಷಿಣ ಕನ್ನಡ ಕ್ಷೇತ್ರದಲ್ಲಿ 1977ರಿಂದ 1998ರವರೆಗೆ ಬಿ.ಜನಾರ್ದನ ಪೂಜಾರಿ ಸತತವಾಗಿ ಏಳು ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ನಾಲ್ಕು ಬಾರಿ ನಿರಂತರ ಗೆಲುವು ಸಾಧಿಸಿ, ಮೂರು ಬಾರಿ ನಿರಂತರ ಸೋಲು ಕಂಡಿದ್ದರು. ಅವರು 2009 ಮತ್ತು 2014ರಲ್ಲಿ ಮತ್ತೆ ಅಭ್ಯರ್ಥಿಯಾಗಿ ಪರಾಭವಗೊಂಡಿದ್ದರು.

ಈಗ ಮತ್ತೆ ಬಿಲ್ಲವರಿಗೆ ಟಿಕೆಟ್‌ ನೀಡುವಂತೆ ಆ ಸಮುದಾಯದ ಮುಖಂಡರು ಪಟ್ಟು ಹಿಡಿದಿದ್ದಾರೆ. ಬಂಟ ಸಮುದಾಯದ ನಳಿನ್‌ಕುಮಾರ್‌ ಕಟೀಲ್‌ ಅವರನ್ನು ಮಣಿಸಲು ಅದೇ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂಬ ಒತ್ತಾಯ ಇನ್ನೊಂದು ಬಣದಿಂದ ಬರುತ್ತಿದೆ.

ಬರಹ ಇಷ್ಟವಾಯಿತೆ?

 • 5

  Happy
 • 2

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !