ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯಕ್ಕೆ ‘ಕೈ’ಯಿಂದ ಪ್ರತ್ಯೇಕ ರಣತಂತ್ರ

ಮುಖ್ಯಮಂತ್ರಿ– ಕೆಪಿಸಿಸಿ ಅಧ್ಯಕ್ಷ ಭೇಟಿ; 13ರಂದು ರಾಹುಲ್‌ ಚರ್ಚೆ ಸಾಧ್ಯತೆ
Last Updated 9 ಏಪ್ರಿಲ್ 2019, 16:03 IST
ಅಕ್ಷರ ಗಾತ್ರ

ಬೆಂಗಳೂರು: ಮಂಡ್ಯದಲ್ಲಿ ನಿಖಿಲ್‌ ಕುಮಾರಸ್ವಾಮಿ ಅವರನ್ನು ಗೆಲ್ಲಿಸುವ ನಿಟ್ಟಿನಲ್ಲಿ ಪ್ರತ್ಯೇಕ ರಣತಂತ್ರ ರೂಪಿಸುವ ಕುರಿತಂತೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಜೊತೆ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್ ಮಂಗಳವಾರಚರ್ಚೆ ನಡೆಸಿದರು.

ಕೆ.ಆರ್‌. ನಗರದಲ್ಲಿ ಇದೇ 13ರಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ರೋಡ್‌ ಶೋದಲ್ಲಿ ಭಾಗವಹಿಸಲಿದ್ದಾರೆ. ಈ ವೇಳೆ ಮಂಡ್ಯದ ಅತೃಪ್ತ ಕಾಂಗ್ರೆಸ್‌ ನಾಯಕರ ಜೊತೆ ಅವರು ಚರ್ಚೆ ನಡೆಸುವ ಸಾಧ್ಯತೆ ಇದೆ.

ಮಾಧ್ಯಮ ಸಂವಾದದಲ್ಲಿ ಮಂಗಳವಾರ ಮಾತನಾಡಿದ ದಿನೇಶ್‌ ಗುಂಡೂರಾವ್‌, ‘ನಿಖಿಲ್‌ ಅವರನ್ನು ಗೆಲ್ಲಿಸುವ ಸಂಬಂಧ ಅಗತ್ಯ ಕಾರ್ಯತಂತ್ರ ರೂಪಿಸಿದ್ದೇವೆ’ ಎಂದರು.

‘ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಪರ ಕಾಂಗ್ರೆಸ್‌ನ ಯಾವೊಬ್ಬ ನಾಯಕನೂ ಇಲ್ಲ’ ಎಂದೂ ಅವರು ಸಮರ್ಥನೆ ನೀಡಿದರು.

‘ಕೆ.ಆರ್‌. ನಗರ ವಿಧಾನಸಭಾ ಕ್ಷೇತ್ರ ಮೈಸೂರು ಜಿಲ್ಲೆಯ ವ್ಯಾಪ್ತಿಯಲ್ಲಿದ್ದರೂ ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರುತ್ತದೆ. ಇಲ್ಲಿ ರಾಹುಲ್‌ ಗಾಂಧಿ ಚುನಾವಣಾ ಪ್ರಚಾರ ನಡೆಸುವುದರಿಂದ ಮೈಸೂರು ಮತ್ತು ಮಂಡ್ಯ ಕ್ಷೇತ್ರಗಳಲ್ಲಿ ಪರಿಣಾಮ ಬೀರಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

‘ಬಹುತೇಕ ಕ್ಷೇತ್ರಗಳಲ್ಲಿ ಉಭಯ ಪಕ್ಷಗಳ ಕಾರ್ಯಕರ್ತರ ನಡುವೆ ಹೊಂದಾಣಿಕೆ ಇದೆ. ಹಾಸನದಲ್ಲಿ ಶೇ 80ರಷ್ಟು ಗೊಂದಲಗಳು ಬಗೆಹರಿದಿವೆ. ತುಮಕೂರಿನಲ್ಲಿ ಮಧುಗಿರಿ ತಾಲ್ಲೂಕಿನಲ್ಲಿ ಮಾತ್ರ ಸಣ್ಣಪುಟ್ಟ ಸಮಸ್ಯೆ ಇದೆ’ ಎಂದು ದಿನೇಶ್‌ ಹೇಳಿದರು.

ಹಿರಿಯ ಮುಖಂಡ ಎಚ್‌.ಟಿ. ಸಾಂಗ್ಲಿಯಾನ ಪಕ್ಷಕ್ಕೆ ರಾಜೀನಾಮೆ ನೀಡಿದ ಕುರಿತು ಪ್ರತಿಕ್ರಿಯಿಸಿದ ಅವರು, ‘ಕಾಂಗ್ರೆಸ್‌ ಮಾತ್ರ ಸಾಮಾಜಿಕ ನ್ಯಾಯದ ಪರ ಇದೆ. ಬಿಜೆಪಿ ಒಂದೇ ಒಂದು ಕ್ಷೇತ್ರದಲ್ಲಿ ಇತರ ಹಿಂದುಳಿದ ವರ್ಗದ ಅಭ್ಯರ್ಥಿಗೆ ಟಿಕೆಟ್‌ ನೀಡಿಲ್ಲ. ಅಷ್ಟೇ ಅಲ್ಲ, ಆ ಪಕ್ಷ ಅಲ್ಪಸಂಖ್ಯಾತ ಸಮುದಾಯವರಿಗೂ ಟಿಕೆಟ್‌ ನೀಡಿಲ್ಲ. ನಮ್ಮ ಸಂಪುಟದಲ್ಲಿ ಮೂವರು ಅಲ್ಪಸಂಖ್ಯಾತ ಸಂಚಿವರಿದ್ದಾರೆ. ಈ ಬಗ್ಗೆ ಸಾಂಗ್ಲಿಯಾನ ಅವರ ಜೊತೆ ಚರ್ಚೆ ಮಾಡುತ್ತೇವೆ’ ಎಂದರು.

ಕಾಂಗ್ರೆಸ್‌ ಕಾರ್ಯಕರ್ತರು ಪೂರ್ಣ ಮನಸ್ಸಿನಿಂದ ಬೆಂಬಲ ನೀಡಿದರೆ ಮಾತ್ರ ಮಂಡ್ಯದಲ್ಲಿ ನಿಖಿಲ್‌ ಸುಲಭ ಗೆಲುವು ಕಾಣಲು ಸಾಧ್ಯ. ಅದೇ ರೀತಿ ಮೈಸೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವಿಗೆ ಜೆಡಿಎಸ್‌ ಬೆಂಬಲ ಅಗತ್ಯ. ಈ ಹಿನ್ನೆಲೆಯಲ್ಲಿ ನಿಖಿಲ್‌ ಪರ ನಿಲ್ಲುವಂತೆ ಪಕ್ಷದ ಸ್ಥಳೀಯ ಮುಖಂಡರಿಗೆ ರಾಹುಲ್‌ ಮೂಲಕ ಸ್ಪಷ್ಟ ಸಂದೇಶ ರವಾನಿಸಲು ಕಾಂಗ್ರೆಸ್‌ ರಾಜ್ಯ ನಾಯಕರು ನಿರ್ಧರಿಸಿದ್ದಾರೆ ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT