ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಚುನಾವಣೆ ಫಲಿತಾಂಶ ಲೋಕಸಭಾ ಚುನಾವಣೆ ದಿಕ್ಸೂಚಿ: ಎಚ್‌.ಡಿ.ಕುಮಾರಸ್ವಾಮಿ

ದೇವರು ಕೊಟ್ಟ ಅಧಿಕಾರ, ಐದು ವರ್ಷ ಭದ್ರ
Last Updated 23 ಅಕ್ಟೋಬರ್ 2018, 16:55 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಮೂರು ಲೋಕಸಭಾ ಕ್ಷೇತ್ರಗಳು ಮತ್ತು ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗಳ ಫಲಿತಾಂಶ 2019 ರ ಲೋಕಸಬಾ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಬೆಂಗಳೂರು ಪ್ರೆಸ್‌ಕ್ಲಬ್ ಮಂಗಳವಾರ ಏರ್ಪಡಿಸಿದ್ದ ಮಾಧ್ಯಮಗೊಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಜಾತ್ಯತೀತ ಶಕ್ತಿಗಳು ಒಗ್ಗೂಡಿ ಬಿಜೆಪಿಯನ್ನು ಸೋಲಿಸುವ ಮೂಲಕ ದೇಶಕ್ಕೆ ಒಂದು ಸಂದೇಶ ರವಾನೆ ಆಗಲಿದೆ ಎಂದರು.

ರಾಜ್ಯದ ಐದು ಕ್ಷೇತ್ರಗಳಲ್ಲದೆ, ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುತ್ತಿವೆ. ಈ ಎಲ್ಲ ಚುನಾವಣೆಗಳಲ್ಲೂ ಜಾತ್ಯತೀತ ಶಕ್ತಿಗಳಿಗೆ ಜಯ ಸಿಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

‘ಇದು ದೇವರು ಕೊಟ್ಟ ಅಧಿಕಾರ, ಐದು ವರ್ಷವೂ ಆಡಳಿತ ನಡೆಸುತ್ತೇನೆ. ದೈವ ಪ್ರೇರಣೆಯಿಂದಲೇ ನಾನು ಮುಖ್ಯಮಂತ್ರಿ ಆಗಿದ್ದು, ಎಷ್ಟು ದಿನ ಇರುತ್ತೇನೊ ಗೊತ್ತಿಲ್ಲ. ಹಣೆ ಬರಹ ಏನಿದೆಯೋ ಗೊತ್ತಿಲ್ಲ. ಇರುವಷ್ಟು ದಿನ ಜನರಿಗೆ ಸ್ಪಂದಿಸುವ ಕೆಲಸ ಮಾಡುತ್ತೇನೆ’ ಎಂದು ಅವರು ತಿಳಿಸಿದರು.

‘ಈ ಐದು ತಿಂಗಳಲ್ಲಿ ನಾನು ಕೇವಲ ಟೆಂಪಲ್‌ ರನ್‌ ಮಾಡಿಲ್ಲ. ರಾಜ್ಯದ ಅಭಿವೃದ್ಧಿಗಾಗಿ ಹಲವು ಬಾರಿ ನಾನು ದೆಹಲಿಗೆ ಭೇಟಿ ನೀಡಿದ್ದೇನೆ. ರೈತರ ಬೆಳೆಗಳಿಗೆ ಬೆಂಬಲ ಪಡೆಯಲು, ಕೊಡಗು ಪ್ರವಾಹದ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರಕ್ಕಾಗಿ ಪ್ರಯತ್ನ ಮಾಡಿದ್ದೇನೆ’ ಎಂದರು.

ಕೊಡಗಿನಲ್ಲಿ ಈ ಹಿಂದೆ ₹ 6 ಲಕ್ಷದಲ್ಲಿ ಮನೆ ನಿರ್ಮಿಸಿಕೊಡಲು ಉದ್ದೇಶಿಸಲಾಗಿತ್ತು. ಈಗ ಯೋಜನೆಯನ್ನು ಪರಿಷ್ಕರಿಸಿದ್ದು, ₹10 ಲಕ್ಷದಲ್ಲಿ ಡಬಲ್‌ ಬೆಡ್‌ರೂಂ ಮನೆ ಕಟ್ಟಿಸಿಕೊಡಲಾಗುವುದು ಎಂದು ಅವರು ಹೇಳಿದರು.

ಸಿದ್ದರಾಮಯ್ಯ ಸರ್ಕಾರದ ಕೊನೆಯ ಬಜೆಟ್‌ನ ಭರವಸೆಗಳೂ ಸೇರಿ ಒಟ್ಟು 460 ಕಾರ್ಯಕ್ರಮಗಳ ಘೋಷಣೆಗಳಿಗೆ ಸಂಬಂಧಿಸಿದಂತೆ ಆದೇಶಗಳನ್ನು ಹೊರಡಿಸಲಾಗಿದೆ. ಸಾಲಮನ್ನಾ ದೊಡ್ಡ ಸವಾಲು ಆಗಿತ್ತು. ಅದನ್ನು ಯಶಸ್ವಿಯಾಗಿ ನಿಭಾಯಿಸಿದ್ದೇವೆ. ನವೆಂಬರ್‌ 1 ರಿಂದ 44 ಲಕ್ಷ ರೈತ ಕುಟುಂಬಗಳಿಗೆ ಋಣುಮುಕ್ತ ಪತ್ರಗಳನ್ನು ವಿತರಿಸಲಾಗುವುದು ಎಂದರು.

ಮಕ್ಕಳ ಉನ್ನತ ವ್ಯಾಸಂಗಕ್ಕಾಗಿ ಸಾಲ ಪಡೆದು ಅದನ್ನು ತೀರಿಸಲಾಗದೇ ನೋವು ಅನುಭವಿಸುತ್ತಿರುವ ಕುಟುಂಬಗಳ ಮಾಹಿತಿ ಪಡೆಯಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಮಾಹಿತಿ ಪಡೆದ ಬಳಿಕ ಶೈಕ್ಷಣಿಕ ಸಾಲಾ ಮನ್ನಾದ ಸಾಧಕ– ಬಾಧಕ ಪರಿಶೀಲನೆ ನಡೆಸಲಾಗುವುದು ಎಂದರು.

ಲಂಚ ಪಡೆದು ಅಧಿಕಾರಿಗಳ ವರ್ಗಾವಣೆ ಇಲ್ಲ

‘ನನ್ನ ಕಚೇರಿಯಲ್ಲಿ ಪೇಮೆಂಟ್‌ ಸೀಟಿನ(ಲಂಚ ಪಡೆದು) ವರ್ಗಾವಣೆ ಇಲ್ಲ. ಮೆರಿಟ್‌ ಆಧಾರದ ಮೇಲೆಯೇ ಅಧಿಕಾರಿಗಳಿಗೆ ಸೂಕ್ತ ಹುದ್ದೆಗಳಿಗೆ ನಿಯೋಜಿಸುತ್ತೇವೆ. ಅಧಿಕಾರಿಗಳ ವರ್ಗಾವಣೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪ ಹಸಿ ಸುಳ್ಳು’ ಎಂದು ಅವರು ಬಿಜೆಪಿ ಟೀಕೆಗೆಪ್ರತಿಕ್ರಿಯಿಸಿದರು.

**

ನನ್ನ ಕಚೇರಿಯಲ್ಲಿ ಪೇಮೆಂಟ್‌ಗೆ ಅವಕಾಶ ಇಲ್ಲ, ಓನ್ಲಿ ಮೆರಿಟ್‌ಗೆ ಆದ್ಯತೆ
ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT