ಸೋಲಿನ ಬಳಿಕ ಗಟ್ಟಿಗೊಂಡ ಮೈತ್ರಿ

ಶನಿವಾರ, ಮಾರ್ಚ್ 23, 2019
24 °C
ನಾಲ್ಕು ತಿಂಗಳ ಹಿಂದೆ ನಡೆದಿದ್ದ ಉಪಚುನಾವಣೆಯಲ್ಲಿ ಪರಾಭವಗೊಂಡಿದ್ದ ಕಾಂಗ್ರೆಸ್‌–ಜೆಡಿಎಸ್‌

ಸೋಲಿನ ಬಳಿಕ ಗಟ್ಟಿಗೊಂಡ ಮೈತ್ರಿ

Published:
Updated:
Prajavani

ಶಿವಮೊಗ್ಗ: ನಾಲ್ಕು ತಿಂಗಳ ಹಿಂದೆ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ನಡೆದಿದ್ದ ಉಪಚುನಾವಣೆಯ ಸೋಲು ಕಾಂಗ್ರೆಸ್–ಜೆಡಿಎಸ್ ಮೈತ್ರಿ ಬಲವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. 

2014ರ ಸಾರ್ವತ್ರಿಕ ಚುನಾವಣೆಯಲ್ಲಿ 3,63,305 ಮತಗಳ ಭಾರಿ ಅಂತರದಿಂದ ಗೆಲುವು ಪಡೆದಿದ್ದ ಬಿಜೆಪಿ ಅಭ್ಯರ್ಥಿ ಬಿ.ಎಸ್. ಯಡಿಯೂರಪ್ಪ ಕಾಂಗ್ರೆಸ್, ಜೆಡಿಎಸ್ ವಲಯದಲ್ಲಿ ತಲ್ಲಣ ಮೂಡಿಸಿದ್ದರು. ಅವರು ಪಡೆದಿದ್ದ ಒಟ್ಟು ಮತಗಳು 6,06,216. ಕಾಂಗ್ರೆಸ್‌ನ ಮಂಜುನಾಥ ಭಂಡಾರಿ 2,42,911 ಹಾಗೂ ಜೆಡಿಎಸ್‌ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ 2,40,636 ಮತಗಳನ್ನು ಪಡೆದಿದ್ದರು. ಎರಡೂ ಪಕ್ಷಗಳ ಅಭ್ಯರ್ಥಿಗಳು ಪಡೆದ ಮತಗಳನ್ನು ಸೇರಿಸಿದರೂ ಬಿಜೆಪಿ 1,22,669 ಅಂತರದಿಂದ ಮುಂದಿತ್ತು.

ಇತ್ತ 2018ರಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 7ರಲ್ಲಿ ಬಿಜೆಪಿ ಗೆಲುವು ಪಡೆದಿತ್ತು. ಕಾಂಗ್ರೆಸ್ ಒಂದು ಕ್ಷೇತ್ರ ತನ್ನದಾಗಿಸಿ
ಕೊಂಡಿತ್ತು. ಜೆಡಿಎಸ್ ಎಂಟೂ ಕ್ಷೇತ್ರಗಳಲ್ಲೂ ನೆಲೆ ಕಳೆದುಕೊಂಡಿತ್ತು. ಇಂತಹ ಸ್ಥಿತಿಯಲ್ಲಿ ಕಾಂಗ್ರೆಸ್, ಜೆಡಿಎಸ್‌ಗೆ ಮರುಜೀವ ನೀಡಿದ್ದು ಲೋಕಸಭಾ ಉಪಚುನಾವಣೆ. ಕಾಂಗ್ರೆಸ್‌ನಲ್ಲಿ ಸಮರ್ಥ ಅಭ್ಯರ್ಥಿಗಳು ದೊರೆಯದ ಕಾರಣ ಜಿಲ್ಲೆಯ ಕಾಂಗ್ರೆಸ್ ಮುಖಂಡರೇ ಮುಂದೆ ನಿಂತು ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದರು.

ಈ ಚುನಾವಣೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ಜೆಡಿಎಸ್‌ನ ಎಸ್‌.ಮಧು ಬಂಗಾರಪ್ಪ ಸೋಲು ಕಂಡರೂ, ಗೆಲುವಿನ ಅಂತರ ಗಣನೀಯವಾಗಿ ಕಡಿಮೆಯಾಗಿತ್ತು. 2014ರ (3,63,305 ಮತಗಳು) ಗೆಲುವಿನ ಅಂತರ 2018ರಲ್ಲಿ 52,148ಕ್ಕೆ ಇಳಿಕೆಯಾಗಿತ್ತು. ಚಲಾವಣೆಯಾದ ಒಟ್ಟು ಮತಗಳಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಶೇ 50.72ರಷ್ಟನ್ನು ಗಳಿಸಿದರೆ, ಮೈತ್ರಿ ಅಭ್ಯರ್ಥಿ ಶೇ 45.85ರಷ್ಟನ್ನು ಪಡೆದಿದ್ದರು. ಸೋಲಿನ ಅಂತರ ಶೇ 4.87ರಷ್ಟು ಇತ್ತು. ಈ ಫಲಿತಾಂಶ ಎರಡೂ ಪಕ್ಷದ ಮುಖಂಡರು ಕಳೆದುಕೊಂಡಿದ್ದ ಆತ್ಮವಿಶ್ವಾಸ ವೃದ್ಧಿಸಲು ಕಾರಣವಾಗಿತ್ತು. ಹಾಗಾಗಿಯೇ, ಈ ಬಾರಿ ಯಾವುದೇ ಅಪಸ್ವರ ಇಲ್ಲದೆ ಮತ್ತೆ ಮಧುಬಂಗಾರಪ್ಪ ಅವರನ್ನೇ ಮೈತ್ರಿ ಅಭ್ಯರ್ಥಿ ಎಂದು ಎರಡೂ ಪಕ್ಷಗಳ ಮುಖಂಡರು ಒಪ್ಪಿಕೊಂಡಿದ್ದಾರೆ. ಮೈತ್ರಿ ಮತ್ತಷ್ಟು ಗಟ್ಟಿ ಮಾಡಿಕೊಂಡಿದ್ದಾರೆ. ಉಪ ಚುನಾವಣೆಯ ನ್ಯೂನತೆಗಳನ್ನು ತಿದ್ದಿಕೊಂಡು ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಹಾವು–ಮುಂಗುಸಿಯಂತೆ ಇದ್ದ ಭದ್ರಾವತಿಯ ಬಿ.ಕೆ.ಸಂಗಮೇಶ್ವರ, ಎಂ.ಜೆ.ಅಪ್ಪಾಜಿ, ತೀರ್ಥಹಳ್ಳಿಯ ಕಿಮ್ಮನೆ ರತ್ನಾಕರ, ಆರ್.ಎಂ.ಮಂಜುನಾಥ ಗೌಡ ದ್ವೇಷ ಮರೆತು ಮೈತ್ರಿಗೆ ಸಹಕರಿಸುತ್ತಿದ್ದಾರೆ. 

ಬಿಜೆಪಿಗೆ ಬಲ ತುಂಬಿದ್ದ ಬಂಗಾರಪ್ಪ:ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ 1998ರವರೆಗೂ ನೆಲೆ ಕಂಡು
ಕೊಳ್ಳಲು ಸಾಧ್ಯವಾಗಿರಲಿಲ್ಲ. 1991ರಲ್ಲಿ ಯಡಿಯೂರಪ್ಪ ಅವರೇ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಆಗ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಬಂಗಾರಪ್ಪ ಅವರು ರಾಜಕೀಯ ಅನುಭವವೇ ಇಲ್ಲದ ಕೆ.ಜಿ.ಶಿವಪ್ಪ ಅವರನ್ನು ಕಣಕ್ಕಿಳಿಸಿ, ಬಿಜೆಪಿ ಎದುರು ಗೆಲ್ಲಿಸಿಕೊಂಡಿದ್ದರು. 1996ರಲ್ಲಿ ಕೆಸಿಪಿಯಿಂದ ತಾವೇ ಸ್ಪರ್ಧಿಸಿ ಲೋಕಸಭೆ ಪ್ರವೇಶಿಸಿದ್ದರು. 1998ರಲ್ಲಿ ಬಿಜೆಪಿಗೆ ಮೊದಲ ಗೆಲುವು ತಂದುಕೊಟ್ಟವರು ಆಯನೂರು ಮಂಜುನಾಥ್.

ಮರು ವರ್ಷವೇ ನಡೆದ ಮತ್ತೊಂದು ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಕಣಕ್ಕೆ ಇಳಿದಿದ್ದ ಬಂಗಾರಪ್ಪ ಅವರೇ ಗೆಲುವು ಪಡೆದರು. 2004ರಲ್ಲಿ ಬಿಜೆಪಿ ಸೇರಿ ಮತ್ತೆ ಆಯ್ಕೆಯಾದರು. ಒಂದೇ ವರ್ಷಕ್ಕೆ ಬಿಜೆಪಿ ತೊರೆದರೂ, ಅವರು ಕರೆದುಕೊಂಡು ಹೋಗಿದ್ದ ಪ್ರಮುಖ ಮುಖಂಡರು ಆ ಪಕ್ಷದಲ್ಲೇ ಉಳಿದರು. ಇದರಿಂದ ಬಿಜೆಪಿ ಬಲ ವೃದ್ಧಿಸಿತು. 2009ರಿಂದ ಇಲ್ಲಿಯವರೆಗೂ ಕ್ಷೇತ್ರ ಆ ಪಕ್ಷದ ಭದ್ರ ಕೋಟೆಯಾಗಿ ಉಳಿದಿದೆ. ಉಪ ಚುನಾವಣೆಯಲ್ಲಿ ಪರಸ್ಪರ ಸೆಣಸಿದ್ದ ಬಿಜೆಪಿಯ ಬಿ.ವೈ.ರಾಘವೇಂದ್ರ, ಮೈತ್ರಿ ಅಭ್ಯರ್ಥಿ ಎಸ್‌.ಮಧು ಬಂಗಾರಪ್ಪ ಮತ್ತೆ ಕಣಕ್ಕೆ ಇಳಿದಿದ್ದಾರೆ. 

ಬರಹ ಇಷ್ಟವಾಯಿತೆ?

 • 14

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !