ಶುಕ್ರವಾರ, ಡಿಸೆಂಬರ್ 6, 2019
21 °C
ಬಸ್, ಅಂಬ್ಯುಲೆನ್ಸ್, ಸರ್ಕಾರಿ ವಾಹನ ತಪಾಸಣೆ

ಚುನಾವಣಾ ಕೆಲಸ ನಿರ್ಲಕ್ಷಿಸಿದರೆ ಕಠಿಣ ಕ್ರಮ: ಮೌದ್ಗಿಲ್ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಉಪ ಚುನಾವಣೆ ಬಹಳ ಸೂಕ್ಷ್ಮವಾಗಿದ್ದು, ನೀತಿ ಸಂಹಿತೆ ಪಾಲನೆ ಹಾಗೂ ಚುನಾವಣಾ ಅಕ್ರಮ ತಡೆಗಟ್ಟುವಲ್ಲಿ ನಿರ್ಲಕ್ಷ್ಯ ತೋರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಮಾದರಿ ನೀತಿಸಂಹಿತೆ ಜಾರಿ ವಿಶೇಷ ಅಧಿಕಾರಿ ಮುನೀಷ್ ಮೌದ್ಗಿಲ್ ಎಚ್ಚರಿಕೆ ನೀಡಿದರು.

ಇಲ್ಲಿ ಸೋಮವಾರ ನಡೆದ ವಿವಿಧ ತಂಡಗಳ ನೋಡಲ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಚುನಾವಣಾ ಆಯೋಗವು ಉಪ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದೆ. ಮಾದರಿ ನೀತಿ ಸಂಹಿತೆಯ ಕಟ್ಟುನಿಟ್ಟಿನ ಜಾರಿ ಬಹಳ ಮುಖ್ಯವಾಗಿದೆ. ಹೀಗಾಗಿ, ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು. ಚೆಕ್‌ಪೋಸ್ಟ್, ಎಫ್.ಎಸ್.ಟಿ, ವಿ.ಎಸ್.ಟಿ, ಮಾದರಿ ನೀತಿಸಂಹಿತೆ, ವೆಚ್ಚ ವೀಕ್ಷಕ ತಂಡಗಳು, ಅಬಕಾರಿ, ಪೊಲೀಸ್ ಮತ್ತಿತರ ತಂಡಗಳು ನಿಗಾ ವಹಿಸಬೇಕು’ ಎಂದು ಸೂಚಿಸಿದರು.

ನೇರವಾಗಿ ದೂರು ಸಲ್ಲಿಸಲು ಮನವಿ

‘ಜಿಲ್ಲೆಯ ಮೂರು ಮತ ಕ್ಷೇತ್ರಗಳಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮತ್ತು ಅಕ್ರಮಗಳ ಕುರಿತ ಸಾರ್ವಜನಿಕರು ಮತ್ತು ಪಕ್ಷದ ಪ್ರತಿನಿಧಿಗಳು ನೀಡುವ ದೂರುಗಳಿಗೆ ಸ್ಥಳೀಯ ಅಧಿಕಾರಿಗಳು ಮತ್ತು ಸಂಬಂಧಿಸಿದ ಅಧಿಕಾರಿಗಳು ಸ್ಪಂದಿಸದಿದ್ದರೆ ನೇರವಾಗಿ ತಮಗೇ ದೂರು ಸಲ್ಲಿಸಬಹುದು. ಅಕ್ರಮ ಕಂಡುಬಂದಲ್ಲಿ ಮೊ: 9900099111 ಸಂಪರ್ಕಿಸಿ ಮಾಹಿತಿ ನೀಡಬಹುದು’ ಎಂದು ತಿಳಿಸಿದರು.

ನೀತಿ ಸಂಹಿತೆ ಉಲ್ಲಂಘನೆ ಹಾಗೂ ಚುನಾವಣಾ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ವಿವರಿಸಿದರು.

‘ಅಬಕಾರಿ ಇಲಾಖೆಯಿಂದ 77 ಪ್ರಕರಣ ದಾಖಲು ಮಾಡಲಾಗಿದೆ’ ಎಂದು ಅಬಕಾರಿ ಆಯುಕ್ತ ಬಸವರಾಜ ತಿಳಿಸಿದರು.

ನಗರ ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್ ಕುಮಾರ್, ಹೆಚ್ಚುವರಿ ಎಸ್ಪಿ ಡಾ.ರಾಮಲಕ್ಷ್ಮಣ ಅರಸಿದ್ದಿ, ಹೆಚ್ಚುವರಿ ಜಿಲ್ಲಾಧಿಕಾರಿ ಸತೀಶ್ ಕುಮಾರ್, ಮಾದರಿ ನೀತಿಸಂಹಿತೆ ನೋಡಲ್ ಅಧಿಕಾರಿ ಜಗದೀಶ್ ರೂಗಿ, ವೆಚ್ಚ ವೀಕ್ಷಕ ನೋಡಲ್ ಅಧಿಕಾರಿ ಈರಣ್ಣ ಚಂದರಗಿ, ದೂರು ನಿರ್ವಹಣಾ ಕೋಶದ ಅಧಿಕಾರಿ ನಿಸಾರ್ ಅಹ್ಮದ್, ಎಂಸಿಎಂಸಿ ನೋಡಲ್ ಅಧಿಕಾರಿ ಗುರುನಾಥ ಕಡಬೂರ ಇದ್ದರು.

ಎಂಸಿಸಿ ಕೋಶಕ್ಕೆ ಭೇಟಿ

ಬಳಿಕ ಮಾದರಿ ನೀತಿಸಂಹಿತೆ ಕೋಶಕ್ಕೆ ಭೇಟಿ ನೀಡಿದ ಮೌದ್ಗಿಲ್, ಮೂರೂ ಮತ ಕ್ಷೇತ್ರಗಳಲ್ಲಿ ಸ್ಥಾಪಿಸಲಾಗಿರುವ ಪ್ರತಿ ಚೆಕ್‌ಪೋಸ್ಟ್ ಕಾರ್ಯನಿರ್ವಹಣೆ ಮೇಲೆ ಎಂಸಿಸಿ ಕೋಶದಿಂದಲೇ ನಿಗಾ ವಹಿಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

‘ಮಾದರಿ ನೀತಿಸಂಹಿತೆ ಪಾಲನೆ ಹಾಗೂ ಅಕ್ರಮ ತಡೆಗಟ್ಟಲು ರಚಿಸಲಾಗಿರುವ ಎಫ್.ಎಸ್.ಟಿ. ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿದೆ. ತಂಡದ ಚಲನವಲನಗಳ ಮೇಲೂ ನಿಗಾ ವಹಿಸಲಾಗಿದೆ. ಅಂತೆಯೇ ಚೆಕ್‌ಪೋಸ್‌ಗಳಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳ ಮೂಲಕ ಜಿಲ್ಲಾ ಕೇಂದ್ರದಿಂದಲೇ ಗಮನಿಸಲಾಗುತ್ತಿದೆ’ ಎಂದು ಬೊಮ್ಮನಹಳ್ಳಿ ವಿವರಿಸಿದರು.

‘ಚುನಾವಣೆ ನಡೆಯುತ್ತಿರುವ 3 ಮತಕ್ಷೇತ್ರಗಳನ್ನು ಪ್ರವೇಶಿಸುವ ಎಲ್ಲ ಮಾರ್ಗಗಳಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಲಾಗಿದೆ. ಅಕ್ಕಪಕ್ಕದ ಕ್ಷೇತ್ರಗಳಲ್ಲೂ ಯಾವ ರೀತಿ ನಿಗಾ ವಹಿಸಬೇಕು ಎಂಬ ಬಗ್ಗೆ ಆಯೋಗದೊಂದಿಗೆ ಚರ್ಚಿಸಿ ತಕ್ಷಣ ಕ್ರಮ ಕೈಗೊಳ್ಳಲಾಗುವುದು’ ಎಂದು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

‘ಖಚಿತ ಮಾಹಿತಿ ಸಿಕ್ಕರೆ ಪಕ್ಕದ ಮತಕ್ಷೇತ್ರಗಳ ವ್ಯಾಪ್ತಿಯಲ್ಲೂ ಕಾರ್ಯಾಚರಣೆ ನಡೆಸಲಾಗುವುದು. ಸಾರಿಗೆ ಬಸ್, ಅಂಬ್ಯುಲೆನ್ಸ್ ಸೇರಿದಂತೆ ಎಲ್ಲ ಬಗೆಯ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ. ಪೊಲೀಸ್ ಸೇರಿದಂತೆ ಎಲ್ಲ ಬಗೆಯ ಸಾರ್ವಜನಿಕ ಸಾರಿಗೆ ವಾಹನಗಳನ್ನು ಮತ್ತು ಸರ್ಕಾರಿ ವಾಹನಗಳನ್ನೂ ತಪಾಸಣೆ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು