ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಮತದಾನ: ‘ರಾಜಕೀಯ’ ಭವಿಷ್ಯಕ್ಕೆ ಭಾಷ್ಯ

ಮೂರು ಪಕ್ಷಗಳಿಗೆ ಸವಾಲು ತಂದೊಡ್ಡಿರುವ ಉಪಚುನಾವಣಾ ಕಣ
Last Updated 2 ನವೆಂಬರ್ 2018, 19:41 IST
ಅಕ್ಷರ ಗಾತ್ರ

ಬೆಂಗಳೂರು: ಮುಂದಿನ ಲೋಕಸಭೆ ಚುನಾವಣೆಗೆ ದಿಕ್ಸೂಚಿಯಾಗಲಿರುವ ಉಪ ಚುನಾವಣಾ ಕದನ ಮೂರು ಪಕ್ಷಗಳ ನಾಯಕರ ಭವಿಷ್ಯಕ್ಕೆ ಭಾಷ್ಯವನ್ನೂ ಬರೆಯಲಿದೆ.

ರಾಜ್ಯದಲ್ಲಿ ಯಾರ ಪರ ಒಲವಿದೆ ಎಂಬುದನ್ನು ಪರೀಕ್ಷೆಗೆ ಒಡ್ಡುವ ರೀತಿಯಲ್ಲಿ ನಡೆಯುತ್ತಿರುವ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಹಣೆ ಬರಹವನ್ನು ಶನಿವಾರ ಮತದಾರರು ಬರೆಯಲಿದ್ದಾರೆ. ಫಲಿತಾಂಶವು ರಾಜ್ಯದ ರಾಜಕೀಯದ ದಿಕ್ಕು–ದೆಸೆಗಳನ್ನು ಬದಲಿಸುವ ಸಾಧ್ಯತೆಯೂ ಇದೆ.

ಚುನಾವಣೆಗೆ ಎರಡು ದಿನ ಇರುವಾಗ ರಾಮನಗರ ಕ್ಷೇತ್ರದ ಬಿಜೆಪಿ ಅಧಿಕೃತ ಅಭ್ಯರ್ಥಿಯೇ ಮತ ಸಮರದಿಂದ ಪಲಾಯನ ಮಾಡಿದ್ದು, ಕಮಲ ಮುದುಡಿದಂತಾಗಿದೆ. ಅಭ್ಯರ್ಥಿ ಎಲ್‌. ಚಂದ್ರಶೇಖರ್‌ ಜೆಡಿಎಸ್‌ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಬೆನ್ನಿಗೆ ನಿಂತಿದ್ದಾರೆ.

ಬಿಜೆಪಿಯ ಭದ್ರಕೋಟೆ ಆಗಿರುವ ಶಿವಮೊಗ್ಗ ಮತ್ತು ಬಳ್ಳಾರಿಯಲ್ಲಿ ಶ್ರೀರಾಮುಲು ನಾಯಕತ್ವವನ್ನು ಮಣಿಸಲು ಮೈತ್ರಿ ಸರ್ಕಾರವೇ ಬೀಡು ಬಿಟ್ಟಿತ್ತು. ಸಂಪೂರ್ಣ ಶ್ರಮವನ್ನು ಇಲ್ಲಿ ವ್ಯಯಿಸಿದೆ. ಕಮಲ ಪಡೆಯ ಮುಂಚೂಣಿ ನಾಯಕರಿಗೆ ನೀರು ಕುಡಿಸಲು ಎಲ್ಲ ಬಗೆಯ ‘ತಂತ್ರ’ಗಳನ್ನೂ ಕೊನೆ ಕ್ಷಣದವರೆಗೆ ‘ಮಿತ್ರರ ಬಣ’ ಅನುಸರಿಸಿದೆ.

ಈ ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ, ಮುಂಬರುವ ಲೋಕಸಭೆಯಲ್ಲಿ ಜಂಟಿಯಾಗಿ ವಿಜಯ ಪತಾಕೆಯನ್ನು ಹಾರಿಸಲು ಸಾಧ್ಯ. ಇದರಿಂದ ರಾಜ್ಯದಲ್ಲಿ ಸರ್ಕಾರದ ಆಯಸ್ಸು ಗಟ್ಟಿಯಾಗುತ್ತದೆ. ಜೆಡಿಎಸ್‌ ಎರಡು ಕ್ಷೇತ್ರಗಳಲ್ಲಿ ಗೆದ್ದರೆ ಸಾಲದು. ಕಾಂಗ್ರೆಸ್‌ ಕೂಡ ಕನಿಷ್ಠ ಎರಡು ಕಡೆಗಳಲ್ಲಿ ಗೆಲ್ಲಬೇಕು. ಆ ರೀತಿ ಆದರೆ, ಮಾತ್ರ ಪುತ್ರ ನಿರಾತಂಕವಾಗಿ ಮುಖ್ಯಮಂತ್ರಿಯಾಗಿ ಮುಂದುವರಿಯಬಹುದು ಎಂಬುದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡರ ಅಪೇಕ್ಷೆ.

ಈ ಕಾರಣಕ್ಕಾಗಿ ಕಾಂಗ್ರೆಸ್‌ನ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌, ಮಲ್ಲಿಕಾರ್ಜುನ ಖರ್ಗೆ, ಜೆಡಿಎಸ್‌ನಿಂದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಎಚ್‌.ಡಿ.ದೇವೇಗೌಡ ಈ ಎರಡೂ ಕ್ಷೇತ್ರಗಳಲ್ಲಿ ‘ಶಕ್ತಿ’ ತುಂಬುವ ಕೆಲಸದಲ್ಲಿ ನಿರತರಾಗಿದ್ದರು. ಐದರಲ್ಲಿ ಕನಿಷ್ಠ ನಾಲ್ಕನ್ನಾದರೂ ಗೆಲ್ಲಬೇಕು ಎಂಬ ಹಠ ತೊಟ್ಟಿದ್ದರು.

ನರೇಂದ್ರ ಮೋದಿ ಅವರನ್ನು ಪ್ರಧಾನಿ ಹುದ್ದೆಯಲ್ಲಿ ಮುಂದುವರಿಸಬೇಕು ಎಂಬುದು ಬಿಜೆಪಿ ನಾಯಕರ ಹೆಬ್ಬಯಕೆ. ಇದಕ್ಕಾಗಿ ರಾಜ್ಯದಲ್ಲಿ ಮಿಷನ್‌–25 ಎಂಬ ಗುರಿಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೀಡಿದ್ದಾರೆ. ಆರು ತಿಂಗಳಲ್ಲಿ ಎದುರಾಗಲಿರುವ ಲೋಕಸಭೆ ಚುನಾವಣೆಗೆಮುನ್ನ ಪಕ್ಷದ ಸಾಮರ್ಥ್ಯವನ್ನು ಒರೆಗೆ ಹಚ್ಚುವ ಸವಾಲು ರಾಜ್ಯ ನಾಯಕರ ಮುಂದಿದೆ.

ಆದರೆ, ಉಪಚುನಾವಣೆಯಲ್ಲಿ ಬಿಜೆಪಿ ನಾಯಕರ ಸಂಘಟಿತ ಪ್ರಯತ್ನ ಕಂಡು ಬರಲಿಲ್ಲ. ಯಡಿಯೂರಪ್ಪ ಮತ್ತು ಈಶ್ವರಪ್ಪ ಶಿವಮೊಗ್ಗಕ್ಕೆ ಸೀಮಿತರಾದರೆ, ಶ್ರೀರಾಮುಲು ಬಳ್ಳಾರಿಯಲ್ಲೇ ಉಳಿದರು. ಆರ್‌.ಅಶೋಕ್‌ ಮತ್ತು ಡಿ.ವಿ.ಸದಾನಂದಗೌಡ ಅವರು ಮಂಡ್ಯ ಬಿಟ್ಟು ಆಚೆ ಹೋಗಲಿಲ್ಲ. ಜಗದೀಶ್‌ ಶೆಟ್ಟರ್‌ ವಿದೇಶಕ್ಕೆ ಹೋಗಿದ್ದರು.

ಇಂದು ಮತದಾನ

ರಾಮನಗರ ಮತ್ತು ಜಮಖಂಡಿ ವಿಧಾನಸಭಾ ಕ್ಷೇತ್ರಗಳು, ಮಂಡ್ಯ, ಶಿವಮೊಗ್ಗ ಮತ್ತು ಬಳ್ಳಾರಿ ಲೋಕಸಭಾ ಕ್ಷೇತ್ರಗಳಿಗೆ ಶನಿವಾರ ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ಮತದಾನ ನಡೆಯಲಿದೆ.

ವಾಹನಕ್ಕಾಗಿ 25 ಅಂಗವಿಕಲರ ನೋಂದಣಿ

ಚುನಾವಣಾ ಆಯೋಗ ಅಂಗವಿಕಲರಿಗೆ ಮತದಾನ ಮಾಡಲು ದೇಶದಲ್ಲೇ ಮೊದಲ ಬಾರಿಗೆ ವಾಹನ ವ್ಯವಸ್ಥೆ ಮಾಡಿದ್ದು, 25 ಅಂಗವಿಕಲರು ಮಾತ್ರ ಹೆಸರನ್ನು ನೋಂದಾಯಿಸಿದ್ದಾರೆ.

ಈ ಐದು ಕ್ಷೇತ್ರಗಳಲ್ಲಿ ಒಟ್ಟು 55,000 ಅಂಗವಿಕಲರಿದ್ದಾರೆ. ಆದರೆ, ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಹೆಸರು ನೋಂದಾಯಿಸಲು ಬಹಳಷ್ಟು ಜನರಿಗೆ ಸಾಧ್ಯವಾಗಿಲ್ಲ. ನೋಂದಾಯಿಸದೇ ಇದ್ದರೂ ಅಂಗವಿಕಲರಿಗೆ ವಾಹನ ವ್ಯವಸ್ಥೆ ಮಾಡಲು ಆಯೋಗ ಸಿದ್ಧತೆ ಮಾಡಿದೆ.

ಲೆಕ್ಕಾಚಾರ ಏನು?

ಕಾಂಗ್ರೆಸ್‌:ಒಂದೂ ಸ್ಥಾನ ಗೆಲ್ಲಲು ಸಾಧ್ಯವಾಗದೇ ಹೋದರೆ, ಪಕ್ಷದಲ್ಲಿ ಆಂತರಿಕ ಕಚ್ಚಾಟ ಭುಗಿಲೇಳುವ ಸಾಧ್ಯತೆ ಇದೆ. ಚುನಾವಣೆ ನೇತೃತ್ವ ವಹಿಸಿರುವ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ಹಿನ್ನಡೆಯಾಗಲಿದೆ. ಜೆಡಿಎಸ್‌ ಜತೆಗಿನ ಮೈತ್ರಿಯಿಂದ ಲಾಭವಿಲ್ಲ, ಅದನ್ನು ಕಡಿದುಕೊಳ್ಳಬೇಕು ಎಂಬ ಒತ್ತಡವೂ ಹೆಚ್ಚಬಹುದು.

ಬಿಜೆಪಿ:ತಮ್ಮ ಕೈಯಳತೆಯಲ್ಲೇ ಇರುವ ಶಿವಮೊಗ್ಗ–ಬಳ್ಳಾರಿ ಗೆಲ್ಲದೇ ಹೋದರೆ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ಉಪಾಧ್ಯಕ್ಷ ಶ್ರೀರಾಮುಲು ಅವರ ಹುದ್ದೆಗೆ ಸಂಚಕಾರ ಬರಬಹುದು. ಲೋಕಸಭೆ ಚುನಾವಣೆಯೊಳಗೆ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಯುವ ಹಾಗೂ ಸಮರ್ಥ ನಾಯಕರನ್ನು ತರಬೇಕು ಎಂಬ ಕೂಗು ಏಳಬಹುದು.

ಜೆಡಿಎಸ್‌:‌ಮಂಡ್ಯ ಮತ್ತು ರಾಮನಗರದಲ್ಲಿ ಜೆಡಿಎಸ್‌ ಗೆದ್ದರೆ ಹಳೆ ಮೈಸೂರಿಗೆ ಸೀಮಿತ ಎಂಬ ಹಣೆ ಪಟ್ಟಿ ಉಳಿಯಲಿದೆ. ‘ತೆನೆ ಹೊತ್ತ ಮಹಿಳೆ’ಯ ಸಖ್ಯದಿಂದ ಲಾಭವಿಲ್ಲ ಎಂಬ ಅಪಸ್ವರ ಕಾಂಗ್ರೆಸ್‌ನಲ್ಲಿ ಮೂಡುವುದರಿಂದ ಮೈತ್ರಿ ಸರ್ಕಾರದಲ್ಲಿ ಬಿಕ್ಕಟ್ಟು ತಲೆದೋರಬಹುದು. ಇದು, ಸರ್ಕಾರದ ಮೇಲೂ ಪರಿಣಾಮ ಬೀರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT