ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳೀಯ ಸಂಸ್ಥೆ ಚುನಾವಣೆ: ರಾಜ್ಯದ ವಿವಿಧೆಡೆ ಯಾರಿಗೆ ಮೇಲುಗೈ? ಪೂರ್ಣ ಮಾಹಿತಿ

Last Updated 14 ನವೆಂಬರ್ 2019, 10:36 IST
ಅಕ್ಷರ ಗಾತ್ರ

ಕುತೂಹಲ ಕೆರಳಿಸಿದ್ದ ರಾಜ್ಯ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಗಳಿಸಿದೆ. ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವ ಸಾಧ್ಯತೆಗಳು ಹೆಚ್ಚಿವೆ. ಕನಕಪುರ, ಗೌರಿಬಿದನೂರು ನಗರಸಭೆಗಳಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದ್ದು, ಕೋಲಾರ, ಮುಳಬಾಗಿಲು ಮತ್ತು ಚಿಂತಾಮಣಿ ನಗರಸಭೆಗಳಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಉಳಿದಂತೆ ಪುರಸಭೆ ಮತ್ತು ಪಟ್ಟಣ ಪಂಚಾಯತಿಗಳ ಫಲಿತಾಂಶವು ರಾಜಕೀಯ ಪಕ್ಷಗಳಿಗೆ ಕೆಲವೆಡೆ ಸಂತಸ ತಂದರೆ, ಇನ್ನು ಕೆಲವೆಡೆ ಸೋಲಿನ ಕಹಿ ನೀಡಿದೆ.

ರಾಜ್ಯ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದ ಸಮಗ್ರ ಮಾಹಿತಿ ಇಲ್ಲಿದೆ

ಮಂಗಳೂರು ಮಹಾನಗರ ಪಾಲಿಕೆ:
ಮಹಾನಗರ ಪಾಲಿಕೆಯ 60 ವಾರ್ಡ್‌ಗಳ ಪೈಕಿ 44 ವಾರ್ಡ್‌ಗಳಲ್ಲಿ ಜಯಭೇರಿ ಭಾರಿಸುವ ಮೂಲಕ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಕಳೆದ ಬಾರಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಈ ಬಾರಿ 14 ಸ್ಥಾನಗಳಿಗೆ ಕುಸಿದಿದೆ. ಎಸ್‌ಡಿಪಿಐ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಈ ಫಲಿತಾಂಶವು ಕಳೆದ ಬಾರಿ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಪಕ್ಷಕ್ಕೆ ಭಾರೀ ಆಘಾತ ನೀಡಿರುವುದು ಸ್ಪಷ್ಟವಾಗಿ ಕಂಡುಬಂದಿದೆ.

ದಾವಣಗೆರೆ ಮಹಾನಗರ ಪಾಲಿಕೆ:
ಮಹಾನಗರ ಪಾಲಿಕೆಯಲ್ಲಿ 22 ಸ್ಥಾನಗಳನ್ನು ಗಳಿಸುವ ಮೂಲಕ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿಗೆ 17 ಸ್ಥಾನ ದೊರೆತದ್ದು , ಜೆಡಿಎಸ್‌ 1 ಸ್ಥಾನದಲ್ಲಿ ಜಯಗಳಿಸಿದೆ. 5 ಸ್ಥಾನಗಳು ಪಕ್ಷೇತರರ ಪಾಲಾಗಿದ್ದು ಪಾಲಿಕೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.

ಮೂವರು ಶಾಸಕರ ಮತ್ತು ಒಬ್ಬ ಸಂಸದರ ಮತ ಸೇರಿ ಮೇಯರ್‌ ಆಯ್ಕೆಗೆ ಒಟ್ಟು 49 ಮತಗಳಿರಲಿವೆ. ಕಾಂಗ್ರೆಸ್‌ನ ಇಬ್ಬರು ಶಾಸಕರಿದ್ದಾರೆ. ಬಿಜೆಪಿಯಿಂದ ತಲಾ ಒಬ್ಬ ಶಾಸಕರು, ಸಂಸದರು ಇದ್ದಾರೆ. ಐವರು ಪಕ್ಷೇತರ ಪೈಕಿ ಒಬ್ಬರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿಯೊಂದಿಗೆ ಗುರುತಿಸಿಕೊಂಡ ಇಬ್ಬರು ಪಕ್ಷೇತರು ಗೆದ್ದಿದ್ದಾರೆ. ಮೇಲ್ನೋಟಕ್ಕೆ ಕಾಂಗ್ರೆಸ್‌ ಅಧಿಕಾರಕ್ಕೆ ಬರುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.

ಕನಕಪುರ ನಗರಸಭೆ:
ಕನಕಪುರ ನಗರಸಭೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಇದೇ ಮೊದಲ ಬಾರಿಗೆ ಬಿಜೆಪಿ ಖಾತೆ ತೆರೆದಿದೆ. 19 ವಾರ್ಡ್‌ಗಳಲ್ಲಿ ಕಾಂಗ್ರೆಸ್, 4 ವಾರ್ಡ್‌ಗಳಲ್ಲಿ ಜೆಡಿಎಸ್, 1 ವಾರ್ಡ್‌ನಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಚುನಾವಣೆಗೂ ಮುನ್ನವೇ 7 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರು.

ಗೌರಿಬಿದನೂರು ನಗರಸಭೆ:
ಗೌರಿಬಿದನೂರು ನಗರಸಭೆಯ ಒಟ್ಟು 31 ವಾರ್ಡುಗಳಲ್ಲಿ ಕಾಂಗ್ರೆಸ್- 15, ಜೆಡಿಎಸ್- 7, ಬಿಜೆಪಿ- 3 ಹಾಗೂ 6 ಪಕ್ಷೇತರ ಅಭ್ಯರ್ಥಿ ವಿಜೇತರಾಗಿದ್ದಾರೆ. ಆ ಮೂಲಕ ಕಾಂಗ್ರೆಸ್‌ ಪಕ್ಷವು ನಗರಸಭೆ ಅಧಿಕಾರಿ ಹಿಡಿಯುಲ್ಲಿ ಸಫಲವಾಗಿದೆ.

ಚಿಂತಾಮಣಿ ನಗರಸಭೆ:
ಚಿಂತಾಮಣಿ ನಗರಸಭೆಯಲ್ಲಿ ಜೆಡಿಎಸ್‌ ಮತ್ತು ಭಾರತೀಯ ಪ್ರಜಾ ಪಾರ್ಟಿ ಪಕ್ಷಗಳಿಗೆ ತಲಾ 14 ಸ್ಥಾನ ಸಿಕ್ಕಿದೆ. ಕಾಂಗ್ರೆಸ್‌ ಪಕ್ಷ 1 ಸ್ಥಾನದಲ್ಲಿ ಮತ್ತು ಪಕ್ಷೇತರರು 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಆ ಮೂಲಕ ಚಿಂತಾಮಣಿ ನಗರಸಭೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.

ಕೋಲಾರ ನಗರಸಭೆ:
ಕೋಲಾರ ನಗರಸಭೆಯ 35 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ನಿಚ್ಚಳ ಬಹುಮತ ಸಿಕ್ಕಿಲ್ಲ. 12 ವಾರ್ಡ್‌ಗಳಲ್ಲಿ ಕಾಂಗ್ರೆಸ್, 8 ವಾರ್ಡ್‌ಗಳಲ್ಲಿ ಜೆಡಿಎಸ್, 12 ವಾರ್ಡ್‌ಗಳಲ್ಲಿ ಪಕ್ಷೇತರರು ಹಾಗೂ 3 ವಾರ್ಡ್‌ಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ನಗರಸಭೆಯಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು 18 ಸದಸ್ಯ ಬಲ ಬೇಕಿದೆ.

ಮುಳಬಾಗಿಲು ನಗರಸಭೆ:
ಕೋಲಾರ ಜಿಲ್ಲೆಯ ಮುಳಬಾಗಿಲು ನಗರಸಭೆಯ 10 ವಾರ್ಡ್‌ಗಳಲ್ಲಿ ಜೆಡಿಎಸ್, 7 ವಾರ್ಡ್‌ಗಳಲ್ಲಿ ಕಾಂಗ್ರೆಸ್, 2 ವಾರ್ಡ್‌ಗಳಲ್ಲಿ ಬಿಜೆಪಿ, 1 ವಾರ್ಡ್‌ಗಳಲ್ಲಿ ಎಸ್‌ಡಿಪಿಐ ಹಾಗೂ 11 ವಾರ್ಡ್‌ಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ. ಆ ಮೂಲಕ 31 ಸಂಖ್ಯಾಬಲವಿರುವ ಮುಳುಬಾಗಿಲು ನಗರಸಭೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.

ಮಾಗಡಿ ಪುರಸಭೆ:
ಮಾಗಡಿ ಪುರಸಭೆಯಲ್ಲಿ ಜೆಡಿಎಸ್ ಪಕ್ಷವು ಸರಳ ಬಹುಮತ ಪಡೆದಿದೆ. ಒಟ್ಟು 23 ಸ್ಥಾನಗಳ ಪೈಕಿ 12ರಲ್ಲಿ ಜೆಡಿಎಸ್, 10ರಲ್ಲಿ ಕಾಂಗ್ರೆಸ್ ಹಾಗೂ 1 ವಾರ್ಡಿನಲ್ಲಿ ಬಿಜೆಪಿ ಗೆಲುವು ದಾಖಲಿಸಿದೆ.

ಬಿರೂರು ಪುರಸಭೆ:
ಚಿಕ್ಕಮಗಳೂರು ಜಿಲ್ಲೆಯ ಬೀರೂರು ಪುರಸಭೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಚುನಾವಣೆ ನಡೆದ 22 ವಾರ್ಡ್‌ಗಳ ಪೈಕಿ ಬಿಜೆಪಿ ಮತ್ತು ಕಾಂಗ್ರೆಸ್‌ ತಲಾ 9, ಜೆಡಿಎಸ್‌ 2 ಮತ್ತು ಪಕ್ಷೇತರರು 2 ಸ್ಥಾನಗಳಲ್ಲಿ ಜಯಗಳಿಸಿವೆ. ಪುರಸಭೆಯ ಒಟ್ಟು 23 ವಾರ್ಡ್‌ಗಳ ಪೈಕಿ ಒಂದರಲ್ಲಿ (16ನೇ ವಾರ್ಡ್‌) ಬಿಜೆಪಿ ಅಭ್ಯರ್ಥಿಯ ಅವಿರೋಧ ಆಯ್ಕೆ ನಡೆದಿತ್ತು. ಆ ಮೂಲಕ ಬಿಜೆಪಿ 10 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ.

ಕಂಪ್ಲಿ ಪುರಸಭೆ:
ಕಂಪ್ಲಿ ಪುರಸಭೆಯಲ್ಲಿ ಬಿಜೆಪಿ ಜಯ ಸಾಧಿಸಿದೆ. ಪುರಸಭೆಯ ಒಟ್ಟು 23 ಸ್ಥಾನಗಳಲ್ಲಿ ಬಿಜೆಪಿ 13 ಹಾಗೂ ಕಾಂಗ್ರೆಸ್ 10 ಸ್ಥಾನಗಳಲ್ಲಿ ಗೆಲವು ಸಾಧಿಸಿವೆ. ಆ ಮೂಲಕ ಬಿಜೆಪಿಯು ಕಂಪ್ಲಿ ಪುರಸಭೆಯ ಅಧಿಕಾರದ ಗದ್ದುಗೆ ಏರಿದೆ.

ಕುಡ್ಲಿಗಿ ಪಟ್ಟಣ ಪಂಚಾಯತಿ:
ಕೂಡ್ಲಿಗಿ ಪಟ್ಟಣ ಪಂಚಾಯತಿಯ ಒಟ್ಟು 20 ಸ್ಥಾನಗಳಲ್ಲಿ ಬಿಜೆಪಿ 7, ಕಾಂಗ್ರೆಸ್ 6, ಜೆಡಿಎಸ್ 4 ಹಾಗೂ ಮೂರು ಸ್ಥಾನಗಳಲ್ಲಿ ಪಕ್ಷೇತರರು ಜಯ ಗಳಿಸಿದ್ದಾರೆ. ಯಾವುದೇ ಪಕ್ಷಕ್ಕೆ ಪೂರ್ಣ ಬಹುಮತ ಸಿಗದ ಕಾರಣ, ಕೂಡ್ಲಿಗಿ ಪಟ್ಟಣ ಪಂಚಾಯತಿಯಲ್ಲಿ ಅತಂತ್ರ ಸ್ಥಿತಿ ತಲೆದೋರಿದೆ.

ಜೋಗ–ಕಾರ್ಗಲ್ ಪಟ್ಟಣ ಪಂಚಾಯತಿ:
ಜೋಗ–ಕಾರ್ಗಲ್ ಪಟ್ಟಣ ಪಂಚಾಯತಿ ಚುನಾವಣೆ ಫಲಿತಾಂಶ ಹೊರಬಂದದ್ದು, ಬಿಜೆಪಿಯು 9 ಸ್ಥಾನ ಗೆಲ್ಲುವ ಮೂಲಕ ಸರಳ ಬಹುಮತ ಗಳಿಸುವಲ್ಲಿ ಸಫಲವಾಗಿದೆ. ಕಾಂಗ್ರೆಸ್‌ಗೆ ಒಂದು ಸ್ಥಾನ ದೊರೆತರೆ, ಪಕ್ಷೇತರ ಅಭ್ಯರ್ಥಿ ಒಂದು ಸ್ಥಾನದಲ್ಲಿ ಜಯಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT