ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ ಪ್ರಮಾಣ ಹೆಚ್ಚಿಸಲು ₹ 15 ಕೋಟಿ ವೆಚ್ಚ!

ಚುನಾವಣಾ ಆಯೋಗದಿಂದ ಸ್ವೀಪ್ ‘ರಾಯಭಾರಿ’ಗಳಾಗಿ ದ್ರಾವಿಡ್‌, ಕಂಬಾರ್‌
Last Updated 24 ಮಾರ್ಚ್ 2019, 20:36 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆಯಬೇಕೆಂಬ ಕಾರಣಕ್ಕೆ ಮತದಾರರ ಜಾಗೃತಿಗೆ ಒತ್ತು ನೀಡಲು ಮುಂದಾಗಿರುವ ಚುನಾವಣಾ ಆಯೋಗ, ಈ ಉದ್ದೇಶಕ್ಕೆ ₹ 15 ಕೋಟಿ ವೆಚ್ಚ ಮಾಡಲಿದೆ.

‘ಮತದಾರರೇ ಮತಗಟ್ಟೆಗೆ ಬನ್ನಿ... ನಿಮ್ಮ ಹಕ್ಕು ಚಲಾಯಿಸಿ’ ಎಂದು ಮನವೊಲಿಸಲು ‘ಮತದಾರರ ಜಾಗೃತಿ ಮತ್ತು ‍ಪಾಲ್ಗೊಲ್ಳುವಿಕೆ’ (ಸ್ವೀಪ್‌) ಸಮಿತಿ ಕಾರ್ಯಕ್ರಮಗಳನ್ನು ರೂಪಿಸಿದ್ದು, ಜಿಲ್ಲಾ ಮಟ್ಟದಲ್ಲಿ ಅನುಷ್ಠಾನಗೊಳಿಸಲಿದೆ. ಪ್ರತಿ ಚುನಾವಣೆಗಳ ಸಂದರ್ಭದಲ್ಲಿ ಆಯೋಗ ಈ ಕಾರ್ಯಕ್ರಮವನ್ನು ಆಯೋಜಿಸುತ್ತದೆ.

ಈ ಬಾರಿಯ ರಾಜ್ಯಮಟ್ಟದ ‘ಚುನಾವಣಾ ರಾಯಭಾರಿ’ಗಳಾಗಿ ಮಾಜಿ ಕ್ರಿಕೆಟಿಗ ರಾಹುಲ್‌ ದ್ರಾವಿಡ್‌, ಸಾಹಿತಿ ಡಾ. ಚಂದ್ರಶೇಖರ ಕಂಬಾರ, ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಹೈಜಂಪ್‌ನಲ್ಲಿ (2012) ದೇಶವನ್ನು ಪ್ರತಿನಿಧಿಸಿ ಬೆಳ್ಳಿ ಗೆದ್ದುಕೊಂಡಿದ್ದ ಗಿರೀಶ್‌ ಎನ್‌. ಗೌಡ, ಅಂಧ ಸಾಧಕಿ ಅಶ್ವಿನಿ ಅಂಗಡಿ, ಕನ್ನಡ ನಟಿ ಪ್ರಣೀತಾ ಸುಭಾಷ್‌ ಭಾಗವಹಿಸಲಿದ್ದಾರೆ.

ಚಂದ್ರಶೇಖರ ಕಂಬಾರ           ರಾಹುಲ್‌ ದ್ರಾವಿಡ್
ಚಂದ್ರಶೇಖರ ಕಂಬಾರ ರಾಹುಲ್‌ ದ್ರಾವಿಡ್

ಜಿಲ್ಲಾಮಟ್ಟದಲ್ಲೂ ಸ್ವೀಪ್ ಚಟುವಟಿಕೆಗೆ ರಾಯಭಾರಿಗಳನ್ನು ನೇಮಿಸಲಾಗುತ್ತಿದೆ. ಹಾಸನ ಜಿಲ್ಲೆಗೆ ‘ಬಿಗ್ ಬಾಸ್’ ವಿಜೇತ ಕನ್ನಡ ರ‍್ಯಾಪರ್ ಚಂದನ್ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ. ಮತದಾನದ ಮಹತ್ವದ ಕುರಿತು ಅರಿವು ಮೂಡಿಸಲು ಮತ್ತು ಮತದಾರರನ್ನು ಹುರಿದುಂಬಿಸಲು ಚುನಾವಣಾ ಆಯೋಗ ಈ ‘ಅಂಬಾಸಿಡರ್‌’ಗಳನ್ನು ಬಳಸಿಕೊಳ್ಳಲಿದೆ.

ಈ ಕುರಿತು ಮಾಹಿತಿ ನೀಡಿದ ಸ್ವೀಪ್‌ ರಾಜ್ಯಮಟ್ಟದ ಸ್ವೀಪ್‌ ಸಮಿತಿ ಸಮಾಲೋಚಕ, ನಿವೃತ್ತ ಐಎಎಸ್‌ ಅಧಿಕಾರಿ ಪಿ.ಎಸ್‌. ವಸ್ತ್ರದ, ‘2013ರ ವಿಧಾನಸಭೆಯಲ್ಲಿ ಮೊದಲ ಬಾರಿಗೆ ಸ್ವೀಪ್‌ ಕಾರ್ಯಕ್ರಮಗಳನ್ನು ಆಯೋಗ ಹಮ್ಮಿಕೊಳ್ಳುತ್ತಿದೆ. 2014ರ ಲೋಕಸಭೆ ಚುನಾವಣೆಯಲ್ಲಿ ಸ್ವೀಪ್‌ ಕಾರ್ಯಕ್ರಮದ ಪರಿಣಾಮವಾಗಿ ಮತದಾನ ಪ್ರಮಾಣದಲ್ಲಿ ಪರಿಣಾಮ ಬೀರಿರುವುದು ಗಮನಕ್ಕೆ ಬಂದಿದೆ. ಆದರೆ, 2018ರ ವಿಧಾನಸಭೆ ಚುನಾವಣೆಯಲ್ಲಿ ಈ ಉದ್ದೇಶಕ್ಕೆ ಆಯೋಗ ₹ 12 ಕೋಟಿ ವೆಚ್ಚ ಮಾಡಲಾಯಿತು. ಇದರಿಂದಾಗಿ ಕೆಲವು ವಿಧಾನಸಭಾ ಕ್ಷೇತ್ರಗಳ ಮತಗಟ್ಟೆಗಳಲ್ಲಿ ಶೇ 90ಕ್ಕೂ ಹೆಚ್ಚು ಪ್ರಮಾಣ ಮತದಾನ ನಡೆದಿದೆ’ ಎಂದೂ ಅವರು ವಿವರಿಸಿದರು.

‘ಹಾಲಿನ ಪ್ಯಾಕೆಟ್‌, ವಿದ್ಯುತ್‌ ಬಿಲ್‌ಗಳ ರಶೀದಿಗಳಲ್ಲಿ ಮತದಾನದ ಜಾಗೃತಿಗೆ ಸಂಬಂಧಿಸಿದ ಘೋಷವಾಕ್ಯವನ್ನು ಮುದ್ರಿಸಲಾಗಿದೆ. ಮತದಾನ ದಿನ ಸಮೀಪಿಸಿದಾಗ ಚುನಾವಣೆ ನಡೆಯುವ ದಿನವನ್ನು ಮುದ್ರಿಸಲಾಗುವುದು. ಈ ಬಾರಿಯೂ ಆಕಾಶದಲ್ಲೇ ಹಾರಾಡುತ್ತಲೇ ಕರಪತ್ರಗಳನ್ನು ತೂರುತ್ತ (ಪಾರಾಗ್ಲೈಡಿಂಗ್‌) ಮತದಾನ ಕುರಿತು ಸಂದೇಶಗಳನ್ನು ತಲುಪಿಸುವುದು’ ಎಂದರು.

‘ಮತಗಟ್ಟೆಗಳಿಗೆ ಅಂಗವಿಕಲರು, ಅಂಧರು, ಹಿರಿಯ ನಾಗರಿಕರು ಹೀಗೆ ಎಲ್ಲ ವರ್ಗದ ಮತದಾರರನ್ನು ಆಕರ್ಷಿಸಲು, ಮತದಾನಕ್ಕೆ ಪ್ರೇರೇಪಿಸಲು ವಿಭಿನ್ನ ರೀತಿಯ ಕಾರ್ಯತಂತ್ರಗಳನ್ನು ರೂಪಿಸಲಾಗಿದೆ. ಮತಗಟ್ಟೆಗಳಲ್ಲಿ ಗಾಲಿ ಕುರ್ಚಿ, ವಾಕರ್, ವಾಕಿಂಗ್ ಸ್ಟಿಕ್ ಮುಂತಾದ ವಿಶೇಷ ಸೌಲಭ್ಯ ಒದಗಿಸಲಾಗುತ್ತದೆ’ ಎಂದೂ ತಿಳಿಸಿದರು.

26,000 ‘ಮತದಾರರ ಸಂಘ’

‘ಪ್ರತಿ ಮನೆಗಳನ್ನು ಗುರಿಯಾಗಿಸಿ ಜಾಗೃತಿ ಮೂಡಿಸಲು ಉದ್ದೇಶಿಸಲಾಗಿದೆ. ಈ ಕಾರಣಕ್ಕೆ ರಾಜ್ಯದಲ್ಲಿ ಮೊದಲ ಬಾರಿಗೆ ಪ್ರೌಢ, ಪದವಿ, ವೈದ್ಯಕೀಯ ಕಾಲೇಜು ಮತ್ತು ಪಾಲಿಟೆಕ್ನಿಕ್ ಸಂಸ್ಥೆಗಳಲ್ಲಿ 26,000 ಮತದಾರರ ಸಂಘಗಳನ್ನು ಸ್ಥಾಪಿಸಲಾಗಿದೆ’ ಎಂದು ಪಿ.ಎಸ್‌. ವಸ್ತ್ರದ ತಿಳಿಸಿದರು.

‘ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕ್ಯಾಂಪಸ್ ರಾಯಭಾರಿಗಳ ನೇಮಕ, ಸರ್ಕಾರಿ, ಅರೆ ಸರ್ಕಾರಿ, ಸಹಕಾರಿ ಸಂಸ್ಥೆಗಳ ಕಚೇರಿಗಳಲ್ಲಿ ಮತದಾರರ ಜಾಗೃತ ವೇದಿಕೆ ಸ್ಥಾಪಿಸಲಾಗುತ್ತಿದೆ. ಸ್ವೀಪ್‌ ಕಾರ್ಯಕ್ರಮಗಳಿಗೆ ನಿಗದಿಪಡಿಸಿದ ಹಣವನ್ನು ಜಿಲ್ಲಾವಾರು 20 ಲಕ್ಷದಿಂದ 25 ಲಕ್ಷದವರೆಗೆ ಹಂಚಲಾಗುವುದು’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT