ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಚುನಾವಣೆ: ಪಕ್ಷಕ್ಕೆ ಆಪತ್ತು ತಂದ ಜನಾರ್ದನ ರೆಡ್ಡಿ ಹೇಳಿಕೆ

ನಾಲ್ಕು ಕಡೆ ಸೋಲು: ಕ್ಷೇತ್ರ ಉಸ್ತುವಾರಿಗಳಿಂದ ಬಿಎಸ್‌ವೈಗೆ ವರದಿ
Last Updated 15 ನವೆಂಬರ್ 2018, 20:08 IST
ಅಕ್ಷರ ಗಾತ್ರ

ಬೆಂಗಳೂರು: ಉಪಚುನಾವಣೆಯಲ್ಲಿ ಎರಡು ಲೋಕಸಭಾ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಸೋಲಿನ ಕಾರಣಗಳ ಬಗ್ಗೆ ಕ್ಷೇತ್ರಗಳ ಉಸ್ತುವಾರಿಗಳು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರಿಗೆ ವರದಿ ಸಲ್ಲಿಸಿದ್ದಾರೆ.

ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹಾಗೂ ಶಾಸಕ ವಿ.ಸೋಮಣ್ಣ ಅವರ ಹೇಳಿಕೆಗಳ ಕುರಿತು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ಇದರಿಂದಾಗಿ ಮತ ಗಳಿಕೆಯಲ್ಲಿ ಭಾರಿ ಇಳಿಕೆ ಉಂಟಾಯಿತು ಎಂದು ಉಲ್ಲೇಖಿಸಲಾಗಿದೆ.

ರೆಡ್ಡಿ ಹೇಳಿಕೆಯಿಂದ ಚುನಾವಣೆಯ ಇಡೀ ದಿಕ್ಕೇ ಬದಲಾಯಿತು. ವೈಯಕ್ತಿಕ ಹಾಗೂ ಕೀಳು ಮಟ್ಟದ ಹೇಳಿಕೆಯಿಂದ ಕುರುಬ ಸಮುದಾಯ ಸಿಟ್ಟಾಯಿತು. ಎಲ್ಲ ಕ್ಷೇತ್ರಗಳಲ್ಲೂ ಕುರುಬ ಸಮುದಾಯ ಬಿಜೆಪಿ ವಿರುದ್ಧ ಮತ ಚಲಾಯಿಸಿತು. ಮುಂದಿನ ದಿನಗಳಲ್ಲಿ ರೆಡ್ಡಿ ಅವರಿಂದ ಅಂತರ ಕಾಯ್ದುಕೊಳ್ಳುವುದು ಸೂಕ್ತ ಎಂದು ಪ್ರಸ್ತಾಪ ಮಾಡಲಾಗಿದೆ.

ಶ್ರೀರಾಮುಲು ಅವರು ಮುಖ್ಯಮಂತ್ರಿಯಾಗಬೇಕು ಎಂದು ಸೋಮಣ್ಣ ಹೇಳಿಕೆ ನೀಡಿದ್ದರು. ಇದರಿಂದ ವಾಲ್ಮೀಕಿ ಸಮುದಾಯ ಒಂದಾಗಲಿಲ್ಲ. ಲಿಂಗಾಯತರು ಸಹ ಪಕ್ಷದಿಂದ ದೂರವಾದರು ಎಂದು ಹೇಳಲಾಗಿದೆ.

ಜಮಖಂಡಿ ವಿಧಾನಸಭಾ ಕ್ಷೇತ್ರದ ಸೋಲಿಗೆ ಲಿಂಗಾಯತ ಮತಗಳು ಕೈಕೊಟ್ಟಿದ್ದೇ ಪ್ರಮುಖ ಕಾರಣ ಎಂದು ವರದಿ ಉಲ್ಲೇಖಿಸಿದೆ.ಮೇ ತಿಂಗಳಿನಲ್ಲಿ ನಡೆದ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಸಂಗಮೇಶ ನಿರಾಣಿ (ಬಿಜೆಪಿ ಶಾಸಕ ಮುರುಗೇಶ ನಿರಾಣಿ ಸೋದರ) ಅವರು ಕಾಂಗ್ರೆಸ್ ಜತೆಗೆ ಒಳ ಒಪ್ಪಂದ ಮಾಡಿಕೊಂಡಿದ್ದೂ ಹೊಡೆತ ನೀಡಿತು ಎಂದು ವರದಿ ವಿವರಿಸಿದೆ.

ಪಕ್ಷದ ಆತ್ಮಾವಲೋಕನ ಸಭೆಯಲ್ಲಿ ವರದಿ ಕುರಿತು ಚರ್ಚಿಸಲು ನಿರ್ಧರಿಸಲಾಗಿದೆ. ಆತ್ಮಾವಲೋಕನ ಸಭೆ ಗುರುವಾರ ನಿಗದಿಯಾಗಿತ್ತು. ಕೇಂದ್ರ ಸಚಿವ ಅನಂತ್‌ ಕುಮಾರ್‌ ನಿಧನದ ಹಿನ್ನೆಲೆ ಸಭೆ ಮುಂದೂಡಲಾಗಿದೆ. ಶೀಘ್ರವೇ ಸಭೆ ನಡೆಸಲು ಬಿಜೆಪಿ ನಾಯಕರು ತೀರ್ಮಾನಿಸಿದ್ದಾರೆ.

ಬಿಜೆಪಿ ನಾಯಕರ ವಿರುದ್ಧ ರೆಡ್ಡಿ ಕೆಂಡಾಮಂಡಲ

ಸಂಕಷ್ಟದ ಸಮಯದಲ್ಲಿ ನೆರವಿಗೆ ಬಾರದೆ ಅಂತರ ಕಾಯ್ದುಕೊಂಡ ರಾಜ್ಯ ಬಿಜೆಪಿ ನಾಯಕರ ಬಗ್ಗೆ ಜನಾರ್ದನ ರೆಡ್ಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಗುರುವಾರ ಅವರು ಬೆಂಬಲಿಗರ ಜತೆಗೆ ಸಭೆ ನಡೆಸಿದರು. ಈ ಸಭೆಯಲ್ಲಿ ಆಪ್ತಮಿತ್ರ, ಶಾಸಕ ಬಿ.ಶ್ರೀರಾಮುಲು ಸಹ ಭಾಗವಹಿಸಿದ್ದರು.

‘ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಅಧಿಕಾರದ ಚುಕ್ಕಾಣಿ ಪಡೆಯಲು ನನ್ನ ಪಾತ್ರ ಮಹತ್ವದ್ದು. ಪಕ್ಷದ ಬೆಳವಣಿಗೆಗೆ ತನು ಮನ ಧನಸಹಾಯ ನೀಡಿದ್ದೇವೆ. ಚುನಾವಣಾ ಸಮಯದಲ್ಲಿ ದೊಡ್ಡ ಮೊತ್ತದ ನೆರವು ನೀಡಿದ್ದೇನೆ. ಆದರೆ, ಬಿಜೆಪಿ ನಾಯಕರಿಗೆ ಇವೆಲ್ಲ ನೆನಪಿಲ್ಲ. ಜೈಲುಪಾಲಾದ ವೇಳೆ ಯಾರೂ ನನ್ನ ನೆರವಿಗೆ ಬರಲಿಲ್ಲ’ ಎಂದು ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು ಎಂದು ಗೊತ್ತಾಗಿದೆ.

‘2008ರಲ್ಲಿ ಶಾಸಕ ಸಿ.ಟಿ.ರವಿ ಅವರಿಗೆ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಅವರು ತುಂಬಾ ಬೇಸರಗೊಂಡಿದ್ದರು. ಈ ವೇಳೆ ಪಕ್ಷದ ನಾಯಕರ ಮೇಲೆ ಒತ್ತಡ ತಂದು ಉನ್ನತ ಶಿಕ್ಷಣ ಖಾತೆಯನ್ನೇ ಕೊಡಿಸಿದ್ದೆ. ಅವರಿಗೆ ಇವೆಲ್ಲ ನೆನಪಿಲ್ಲ. ನಾನು ಬಿಜೆಪಿಯಲ್ಲಿ ಇಲ್ಲ ಎಂದು ಈಗ ಹೇಳಿಕೆ ನೀಡುತ್ತಿದ್ದಾರೆ. ಚುನಾವಣಾ ಸಮಯದಲ್ಲಷ್ಟೇ ಬಿಜೆಪಿ ನಾಯಕರಿಗೆ ನಾನು ನೆನಪಾಗುತ್ತೇನೆ’ ಎಂದರು.

ಹೊಸ ಪಕ್ಷ ಸ್ಥಾಪನೆಗೆ ಯೋಚನೆ: ಬಿಜೆಪಿ ನಾಯಕರ ನಡವಳಿಕೆಯಿಂದ ಬೇಸತ್ತಿರುವ ರೆಡ್ಡಿ ಹೊಸ ಪಕ್ಷ ಸ್ಥಾಪನೆಗೆ ಚಿಂತನೆ ನಡೆಸಿದ್ದಾರೆ.

‘ಅವರು ಜೆಡಿಎಸ್‌ ಅಥವಾ ಕಾಂಗ್ರೆಸ್‌ ಸೇರಲು ಆಸಕ್ತರಾಗಿದ್ದಾರೆ. ಬಂಧನಕ್ಕೂ ಮುನ್ನ ರೆಡ್ಡಿ ಅವರು ಮುಖ್ಯಮಂತ್ರಿ ಜತೆ ಮಾತನಾಡಲು ಪ್ರಯತ್ನಿಸಿದರು. ಅವರು ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಈ ಕಾರಣಕ್ಕೆ ಕೋಪಗೊಂಡು ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ’ ಎಂದು ಆಪ್ತರೊಬ್ಬರು ಹೇಳಿದರು.

ಭೂತದ ಬಾಯಲ್ಲಿ ಭಗವದ್ಗೀತೆ: ಶರವಣ ಲೇವಡಿ

‘ಚಿಟ್‌ಫಂಡ್‌ ಕಂಪನಿಯಿಂದ ವಂಚನೆಗೊಳಗಾದ ಜನರಿಗೆ ನ್ಯಾಯ ಕೊಡಿಸುವ ದಿಟ್ಟ ಕ್ರಮ ಕೈಗೊಂಡಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಅವರ ಸರ್ಕಾರದ ಬಗ್ಗೆ ಅವಹೇಳನ ಮಾಡಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಇನ್ನಾದರೂ ಬುದ್ಧಿ ಕಲಿಯಲಿ’ ಎಂದು ವಿಧಾನಪರಿಷತ್ತಿನ ಜೆಡಿಎಸ್‌ ಸದಸ್ಯ ಟಿ.ಎ. ಶರವಣ ಹೇಳಿದ್ದಾರೆ.

‘ರಾಜ್ಯದ ಖನಿಜ ಸಂಪತ್ತು ಲೂಟಿ ಮಾಡಿ ಜನಾರ್ದನ ರೆಡ್ಡಿ ಹಿಂದೆಯೂ ಜೈಲಿಗೆ ಹೋಗಿ ಬಂದಿದ್ದಾರೆ. ಅವರು ಕುಮಾರಸ್ವಾಮಿ ಅವರನ್ನು ಟೀಕೆ ಮಾಡುತ್ತಿರುವುದನ್ನು ನೋಡಿದರೆ ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಿದೆ’ ಎಂದು ಅವರು ಲೇವಡಿ ಮಾಡಿದ್ದಾರೆ.

‘ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮಿತ್ರ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಮತದಾರರು ಪಾಠ ಕಲಿಸಿದ್ದಾರೆ. ರೆಡ್ಡಿ ತೋಡಿದ ಗುಣಿಯೊಳಗೆ ಅವರೇ ಬಿದ್ದಿದ್ದಾರೆ’ ಎಂದು ಶರವಣ ಜರಿದಿದ್ದಾರೆ.

‘ಕೃಷ್ಣ ಜನ್ಮಸ್ಥಾನಕ್ಕೆ ಹೋಗಿ ರಾಮಾಯಣ, ಮಹಾಭಾರತ ಹಾಗೂ ವೇಮನರ ಕಥೆಗಳನ್ನು ಓದಿಕೊಂಡು ಬಂದಿರುವ ರೆಡ್ಡಿ, ಬದಲಾಗದೆ ಮೈತುಂಬಾವಿಷ ತುಂಬಿಕೊಂಡಿದ್ದಾರೆ. ಇಂಥವರು ಮುಖ್ಯಮಂತ್ರಿ ಅವರನ್ನು ವಿಷ ಸರ್ಪ ಹಾಗೂ ಸರ್ಕಾರವನ್ನು ರಾಕ್ಷಸ ಸರ್ಕಾರ ಎಂದು ಕರೆದಿರುವುದು ನಾಚಿಕೆಗೇಡು’ ಎಂದಿದ್ದಾರೆ.

ಬಿಗ್ ಪೀಪಲ್, ಬಿಗ್ ಟಾಕ್: ಸಚಿವ ಶಿವಕುಮಾರ್ ವ್ಯಂಗ್ಯ​

'ಬಿಗ್ ಪೀಪಲ್, ಬಿಗ್ ಟಾಕ್. ಅವರಿಗೆ ಒಳ್ಳೆಯದಾಗಲಿ. ಯಾರು ಏನು ಬೇಕಾದರೂ ಮಾತನಾಡಲಿ. ನಾನು ಎಲ್ಲವನ್ನೂ ಪ್ರಸಾದವೆಂದು ಸ್ವೀಕರಿಸುತ್ತೇನೆ' ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು.

'ಆ್ಯಂಬಿಡೆಂಟ್‌ ಪ್ರಕರಣದಲ್ಲಿ ಮೈತ್ರಿ ಸರ್ಕಾರ ‌ನನ್ನನ್ನು ಟಾರ್ಗೆಟ್ ಮಾಡುತ್ತಿದೆ' ಎಂದು ಗಾಲಿ ಜನಾರ್ದನ ರೆಡ್ಡಿ ಮಾಡಿದ ಆರೋಪಕ್ಕೆ ಶಿವಕುಮಾರ್ ಈ ರೀತಿ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದರು.

‘ಆ್ಯಂಬಿಡೆಂಟ್ ಕಂಪನಿ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ಮಾತನಾಡಲು ನಾನು ಗೃಹ ಸಚಿವನೂ ಅಲ್ಲ. ಪೊಲೀಸ್ ಆಯುಕ್ತರೂ ಅಲ್ಲ. ದಿನ ಬೆಳಗಾದರೆ ದಿನಪತ್ರಿಕೆಯ ಹೆಡ್‌ಲೈನ್ ಮಾತ್ರ ನೋಡುತ್ತೇನೆ. ಪೂರ್ತಿ ವಿವರ ಓದಲು ಸಮಯವಿಲ್ಲ. ಸದ್ಯಕ್ಕೆ ನನ್ನ ಕೆಲಸ ಮಾಡಿ ಮುಗಿಸಿದರೆ ಸಾಕಾಗಿದೆ' ಎಂದರು.

ಅರ್ಜಿ ಹಿಂಪಡೆದ ಬ್ರಿಜೇಶ್ ರೆಡ್ಡಿ

‘ಸಿಸಿಬಿ ಪೊಲೀಸರಿಂದ ನಾನು ಕಿರುಕುಳ ಅನುಭವಿಸುತ್ತಿದ್ದೇನೆ’ ಎಂದು ಆಕ್ಷೇಪಿಸಿ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ಆಂಬಿಡೆಂಟ್ ವಂಚನೆ ಪ್ರಕರಣದ ಆರೋಪಿ ಬಿಲ್ಡರ್ ಬ್ರಿಜೇಶ್ ರೆಡ್ಡಿ ಗುರುವಾರ ಹಿಂಪಡೆದಿದ್ದಾರೆ.

ಈ ಅರ್ಜಿ ಗುರುವಾರ ನ್ಯಾಯಮೂರ್ತಿ ಬಿ.ವೀರಪ್ಪ ಅವರ ಮುಂದೆ ವಿಚಾರಣೆಗೆ ಬಂದಾಗ ಅರ್ಜಿದಾರರ ಪರ ವಕೀಲರು, ಅರ್ಜಿ ಹಿಂಪಡೆಯಲು ಅವಕಾಶ ನೀಡುವಂತೆ ನ್ಯಾಯಪೀಠಕ್ಕೆ ಮನವಿ ಮಾಡಿದರು. ಇದಕ್ಕೆ ನ್ಯಾಯಪೀಠ ಸಮ್ಮಿತಿಸಿತು.

‘ವಂಚನೆ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ವಿಚಾರಣೆಗೆ ಹಾಜರಾಗಲು ನನಗೆ ನೋಟಿಸ್ ನೀಡಿದ್ದಾರೆ. ಆ ಸಂದರ್ಭದಲ್ಲಿ ಪೊಲೀಸರು ನನಗೆ ಕಿರುಕುಳ ನೀಡುವ ಸಾಧ್ಯತೆ ಇದೆ’ ಎಂದು ಆರೋಪಿಸಿ ಬ್ರಿಜೇಶ್ ರೆಡ್ಡಿ ಈ ಅರ್ಜಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT