ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದ ಇಲಾಖೆ

ಭೀಮಗಡ ಅಭಯಾರಣ್ಯದೊಳಗೆ ವಿದ್ಯುತ್‌ ಮಾರ್ಗ l ಅಧಿಕಾರಿಗಳ ಕರ್ತವ್ಯಲೋಪ ತನಿಖೆಯಲ್ಲಿ ಸಾಬೀತು
Last Updated 15 ಡಿಸೆಂಬರ್ 2018, 20:00 IST
ಅಕ್ಷರ ಗಾತ್ರ

ಬೆಳಗಾವಿ: ಭೀಮಗಡ ಅಭಯಾರಣ್ಯ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ವಿದ್ಯುತ್‌ ಮಾರ್ಗ ಅಳವಡಿಸಲು ಅವಕಾಶ ಕಲ್ಪಿಸುವ ಮೂಲಕ ಕರ್ತವ್ಯಲೋಪವೆಸಗಿದ ಬೆಳಗಾವಿ ವಿಭಾಗದ ಹಿಂದಿನ ಉಪಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್‌) ಬಿ.ವಿ.ಪಾಟೀಲ, ಖಾನಾಪುರ ಉಪವಿಭಾಗದ ಆಗಿನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್‌) ಸಿ.ಬಿ.ಪಾಟೀಲ ವಿರುದ್ಧ ಇಲಾಖೆ ಇನ್ನೂ ಕ್ರಮ ಕೈಗೊಂಡಿಲ್ಲ.

ಹೆಮ್ಮಡಗಾ ಮತ್ತು ದೇಗಾಂವ ಗ್ರಾಮಗಳ ಅಭಯಾರಣ್ಯ ವ್ಯಾಪ್ತಿಯ ಪ್ರದೇಶದಲ್ಲಿ 2016ರ ನವೆಂಬರ್‌ ಹಾಗೂ ಡಿಸೆಂಬರ್‌ ತಿಂಗಳುಗಳಲ್ಲಿ ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿ (ಹೆಸ್ಕಾಂ) ಕಾಂಕ್ರೀಟ್‌ ಕಂಬಗಳನ್ನು ನಿಲ್ಲಿಸಿ ಅನಧಿಕೃತವಾಗಿ ವಿದ್ಯುತ್‌ ಮಾರ್ಗ ನಿರ್ಮಿಸಿತ್ತು.

ಈ ಬಗ್ಗೆ ಬಂದ ದೂರಿನ ಕುರಿತು ತನಿಖೆ ನಡೆಸಿದ್ದ ಬೆಳಗಾವಿ ವೃತ್ತದ ಅರಣ್ಯ ಸಂಚಾರಿ ದಳದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಶೋಕ ಆರ್‌.ಪಾಟೀಲ ಅವರು ಕರ್ತವ್ಯಲೋಪವೆಸಗಿದ್ದ ಈ ಇಬ್ಬರು ಅಧಿಕಾರಿಗಳ ವಿರುದ್ಧ ಹಾಗೂ ಭೀಮಗಡ ವನ್ಯಜೀವಿ ವಲಯದ ಆಗಿನ ಆರ್‌ಎಫ್‌ಒ ಎಸ್‌.ಜಿ.ವಾಂದ್ರೆ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿದ್ದರು. ಬೆಳಗಾವಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಿಸಿಎಫ್‌) ಅವರು ತನಿಖಾ ವರದಿಯನ್ನು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ (ಪಿಸಿಸಿಎಫ್‌) 2017ರ ಆಗಸ್ಟ್‌ನಲ್ಲಿ ಕಳುಹಿಸಿದ್ದರು. ವರ್ಷ ಕಳೆದರೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮವಾಗಿಲ್ಲ. ಎಸಿಎಫ್‌ಸಿ.ಬಿ.ಪಾಟೀಲ ಪ್ರಕರಣ ನಡೆದ ಬಳಿಕ ಎರಡು ವರ್ಷಗಳವರೆಗೂ ಅದೇ ಹುದ್ದೆಯಲ್ಲಿದ್ದರು. ಇತ್ತೀಚೆಗಷ್ಟೇ ವರ್ಗ ಮಾಡಲಾಗಿದೆ. ಬಿ.ವಿ.ಪಾಟೀಲ ಅವರೀಗ ಕಾಳಿ ಹುಲಿ ಯೋಜನೆ ನಿರ್ದೇಶಕರಾಗಿದ್ದಾರೆ.

‘ಈ ಪ್ರದೇಶ ಅತ್ಯಂತ ವಿರಳ ಪ್ರಾಣಿ ಪ್ರಭೇದಗಳು ಹಾಗೂ ವಿಶಿಷ್ಟ ಸಸ್ಯ ಪ್ರದೇಶಗಳಿಂದ ಕೂಡಿದೆ. ನಿರ್ಬಂಧಿತ ಪ್ರದೇಶದಲ್ಲಿ ಭಾರಿ ವಾಹನಗಳು ಯಾವುದೇ ಅನುಮತಿ ಇಲ್ಲದೇ ತಿಂಗಳುಗಟ್ಟಲೆ ಸಂಚರಿಸಿವೆ. ವಿದ್ಯುತ್‌ ಸರಬರಾಜು ಮಾಡಲು ಅಗತ್ಯವಾದ ಸಾಮಗ್ರಿ ಸಾಗಿಸಿವೆ. ಹೆಸ್ಕಾಂ ಸಿಬ್ಬಂದಿ, ಗುತ್ತಿಗೆದಾರರು ಹಾಗೂ 50ಕ್ಕೂ ಅಧಿಕ ಕೆಲಸಗಾರರು ಇಲ್ಲಿ ಓಡಾಡಿದ್ದಾರೆ. ಅಧಿಕಾರಿಗಳ ಹಾಗೂ ಗುತ್ತಿಗೆದಾರರ ವಾಹನಗಳೂ ಇಲ್ಲಿ ಸಂಚರಿಸಿವೆ. 1972ರ ವನ್ಯಜೀವಿ ಕಾಯ್ದೆ ಹಾಗೂ 1980ರ ಅರಣ್ಯ ಸಂರಕ್ಷಣಾ ಕಾಯ್ದೆ ಪ್ರಕಾರ ಇದು ಗಂಭೀರ ಅಪರಾಧದ ಪ್ರಕರಣ. ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಅಧಿಕಾರಿಗಳ ಮೂಗಿನ ನೇರದಲ್ಲೇ ಈ ಉಲ್ಲಂಘನೆ ನಡೆದಿದೆ’ ಎಂಬ ಲೋಪವನ್ನು ತನಿಖಾಧಿಕಾರಿ ಬೊಟ್ಟು ಮಾಡಿದ್ದರು.

‘ಸುಮಾರು ಎರಡು ತಿಂಗಳು ಕಾಮಗಾರಿ ನಡೆದಿತ್ತು. ಈ ಅವಧಿಯಲ್ಲಿ ಡಿಸಿಎಫ್‌ ಬಿ.ವಿ.ಪಾಟೀಲ ಹಾಗೂ ಎಸಿಎಫ್‌ ಸಿ.ಬಿ.ಪಾಟೀಲ ಅವರೂ ಈ ಪ್ರದೇಶಕ್ಕೆ ಭೇಟಿ ನೀಡಿದ್ದರು. ಕಾಮಗಾರಿ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೆವು ಎಂದು ಇಲಾಖೆ ಸಿಬ್ಬಂದಿ ಹಾಗೂ ಆರ್‌ಎಫ್‌ಒ ಎಸ್‌.ಜಿ.ವಾಂದ್ರೆ ಹೇಳಿಕೆ ನೀಡಿದ್ದಾರೆ. ಹೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಕೂಡಾ ಇಂತಹದ್ದೇ ಹೇಳಿಕೆ ನೀಡಿದ್ದಾರೆ. ಆದರೂ ಈ ಕಾಮಗಾರಿಯ ಬಗ್ಗೆ ಮೊದಲೇ ತಿಳಿದಿದ್ದರೂ ಡಿಸಿಎಫ್‌ ಹಾಗೂ ಎಸಿಎಫ್‌ ಅವರು ಅದನ್ನು ತಡೆಯದಿರುವುದು ಆಘಾತಕರ’ ಎಂದೂ ಅವರು ಉಲ್ಲೇಖಿಸಿದ್ದರು.

ಮಂಜೂರಾತಿಗೆ ಮುನ್ನವೇ ಕಾಮಗಾರಿ

‘ಇಂಟೆಗ್ರೇಟೆಡ್‌ ಸಲ್ಯೂಷನ್ಸ್‌ ಸಂಸ್ಥೆಯು ವಿದ್ಯುತ್‌ ಮಾರ್ಗದ ಕಾಮಗಾರಿಯ ಗುತ್ತಿಗೆ ಪಡೆದಿತ್ತು. ಕಾಮಗಾರಿಗೆ ಹೆಸ್ಕಾಂ ಕಾರ್ಯಪಾಲಕ ಎಂಜಿನಿಯರ್‌ ಅವರು 2017ರ ಮಾ. 16ರಂದು ಆದೇಶ ಮಾಡಿದ್ದರು. ಆದರೆ, 2016ರ ನ.7ರಂದೇ ಅಭಯಾರಣ್ಯದೊಳಗೆ ಕಾಮಗಾರಿ ಆರಂಭವಾಗಿತ್ತು’ ಎಂದು ಪ್ರಕರಣದ ತನಿಖಾ ವರದಿ ಹೇಳಿದೆ.

ಎಫ್‌ಐಆರ್‌ ದಾಖಲಿಸುವಾಗಲೂ ವಿಳಂಬ

ವಿದ್ಯುತ್‌ ಕಾಮಗಾರಿಗೆ ಅಗತ್ಯ ಸಾಮಗ್ರಿ ಸಾಗಿಸಲು ಭಾರಿ ವಾಹನಗಳು 2016ರ ನ.7ರಂದೇ ಅಭಯಾರಣ್ಯದೊಳಗೆ ಪ್ರವೇಶಿಸಿದ್ದವು. ಆದರೆ, ಈ ಬಗ್ಗೆ ಅರಣ್ಯ ಇಲಾಖೆ ನ. 15ರಂದು ಪ್ರಥಮ ವರ್ತಮಾನ ವರದಿ (ಎಫ್‌ಐಆರ್‌) ಪ್ರಕರಣ ದಾಖಲಿಸಿಕೊಂಡಿತ್ತು. 2016ರ ಡಿ. 1ರಂದು ಇನ್ನೊಂದು ಎಫ್‌ಐಆರ್‌ ದಾಖಲಿಸಿಕೊಂಡಿತ್ತು. ಈ ಅನಧಿಕೃತ ಕಾಮಗಾರಿ ಭೀಮಗಡ ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿ ಕಚೇರಿಯ ಎದುರಿನಿಂದಲೇ ಆರಂಭವಾಗಿದ್ದರೂ ಎಫ್‌ಐಆರ್‌ ದಾಖಲಿಸಲು ಒಂದು ವಾರ ವಿಳಂಬ ಆಗಿದೆ ಎಂಬ ಅಂಶವೂ ತನಿಖಾ ವರದಿಯಲ್ಲಿದೆ.

ಅಳಿವಿನಂಚಿನಲ್ಲಿ ಬಾವಲಿಗಳ ಆವಾಸ

‘ಈ ಕಾಮಗಾರಿ ನಡೆಸಿದ್ದ ಪ್ರದೇಶವು 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಪ್ರಕಾರ ಗುರುತಿಸಿದ ಅತಿಮುಖ್ಯವಾಗಿರುವ ವನ್ಯಜೀವಿಗಳ ಆವಾಸ ಸ್ಥಾನ. ಕೆಂಪು ಪಟ್ಟಿಯಲ್ಲಿ ಸೇರಿರುವ ಬಾವಲಿ (ರಾಟನ್ಸ್‌ ಫ್ರೀ ಟೇಲ್ಡ್‌ ಬ್ಯಾಟ್‌) ಇಲ್ಲಿನ ಬಾರಾಪೇಡೆ ಗುಹೆಗಳಲ್ಲಿವೆ. ಬೆರಳೆಣಿಕೆ ಸಂಖ್ಯೆಯಲ್ಲಿರುವ ಈ ಜೀವಿಗಳ ರಕ್ಷಣೆ ಅತಿ ಜರೂರಾಗಿದೆ’ ಎಂಬ ಅಂಶವೂ ತನಿಖಾ ವರದಿಯಲ್ಲಿದೆ.

ಅಂಕಿ ಅಂಶ

218

ಭೀಮಗಡ ಅಭಯಾರಣ್ಯ ವ್ಯಾಪ್ತಿಯಲ್ಲಿ ಅಳವಡಿಸಿದ್ದ ಕಂಬಗಳು

5.70 ಕಿ.ಮೀ

ನಿರ್ಮಿಸಿರುವ ವಿದ್ಯುತ್‌ ಮಾರ್ಗದ ಉದ್ದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT