ವಿದ್ಯುತ್‌ ದುರಂತ: 3 ಜಿಲ್ಲೆಗಳಲ್ಲಿ 333 ಮಂದಿ ಸಾವು

7
ಅಧಿವೇಶನದಲ್ಲಿ ಚರ್ಚೆಗೆ ಭೀಮಪ್ಪ ಗಡಾದ ಆಗ್ರಹ

ವಿದ್ಯುತ್‌ ದುರಂತ: 3 ಜಿಲ್ಲೆಗಳಲ್ಲಿ 333 ಮಂದಿ ಸಾವು

Published:
Updated:

ಬೆಳಗಾವಿ: ವಿಜಯಪುರ, ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ 2015–16ನೇ ಸಾಲಿನಿಂದ ಈ ವರ್ಷದ ಸೆಪ್ಟೆಂಬರ್‌ ಅಂತ್ಯದವರೆಗೆ ಸಂಭವಿಸಿದ ವಿದ್ಯುತ್‌ ಅವಘಡಗಳಲ್ಲಿ 333 ಜನರು ಪ್ರಾಣ ಕಳೆದುಕೊಂಡಿದ್ದಾರೆ. 241 ಮಂದಿ ಅಂಗವಿಕಲರಾಗಿದ್ದಾರೆ. 163 ಜಾನುವಾರುಗಳು ಮೃತಪಟ್ಟಿವೆ' ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ವಿದ್ಯುತ್‌ ‍ಪರಿವೀಕ್ಷಣಾಲಯದ ಬೆಳಗಾವಿ ವೃತ್ತದ ಉಪ ಮುಖ್ಯ ಪರಿವೀಕ್ಷಕರು ರೈತ ಜಾಗೃತ ಸಮಿತಿ ಅಧ್ಯಕ್ಷ ಪಿ.ಎನ್. ಮುಳ್ಳೂರ ಅವರಿಗೆ ಮಾಹಿತಿ ಹಕ್ಕು ಕಾಯ್ದೆಯಡಿ ಈ ಮಾಹಿತಿ ನೀಡಿದ್ದಾರೆ’ ಎಂದು ಹೇಳಿದರು.

‘48 ವರ್ಷಗಳಿಗಿಂತಲೂ ಹಳೆಯದಾಗಿರುವ, ತುಕ್ಕು ಹಿಡಿದ ವಿದ್ಯುತ್‌ ತಂತಿಗಳು, ಮುರಿದು ಬೀಳುತ್ತಿರುವ ವಿದ್ಯುತ್‌ ಕಂಬಗಳು ಹಾಗೂ ಹೈವೋಲ್ಟೇಜ್‌ನಿಂದಾಗಿ ಅವಘಡಗಳು ಸಂಭವಿಸುತ್ತಿವೆ. ಈ ದುರಂತಗಳಲ್ಲಿ ಮೃತಪಟ್ಟವರಲ್ಲಿ ಬಹುತೇಕರು ರೈತರೇ ಆಗಿದ್ದಾರೆ. 798 ವಿವಿಧ ರೀತಿಯ ಬೆಂಕಿ ಅವಘಡಗಳಿಂದ 6ಸಾವಿರ ಎಕರೆಗಿಂತಲೂ ಹೆಚ್ಚಿನ ಕಬ್ಬು ಹಾಗೂ ಇತರ ಬೆಳೆಗಳು ಸುಟ್ಟು ಹೋಗಿ, ರೈತರಿಗೆ ಅಪಾರ ಹಾನಿಯಾಗಿದೆ. ಇತ್ತೀಚೆಗೆ ಉಗಾರದಲ್ಲಿ ವಿದ್ಯುತ್‌ ತಂತಿ ತುಂಡಾಗಿ ಬಿದ್ದು 40 ಎಕರೆಯಷ್ಟು ಕಬ್ಬು ಸುಟ್ಟು ಹೋಗಿತ್ತು’ ಎಂದು ಮಾಹಿತಿ ನೀಡಿದರು.

ಇನ್ನೂ ಹೆಚ್ಚಿರಬಹುದು

‘ಮೂರು ಜಿಲ್ಲೆಗಳಲ್ಲಿಯೇ ಇಷ್ಟೊಂದು ಜನ ಮೃತಪಟ್ಟಿದ್ದಾರೆ ಎಂದರೆ, ಇಡೀ ರಾಜ್ಯದಲ್ಲಿ ಎಷ್ಟು ಮಂದಿ ಬಲಿಯಾಗಿರಬಹುದು? ಹೀಗಾಗಿ, ಈ ದುರಂತಗಳನ್ನು ತಡೆಯುವ ಕುರಿತು ಹಾಗೂ 333 ಮಂದಿಯ ಸಾವಿಗೆ ಕಾರಣವಾದವರಿಗೆ ಯಾವ ಶಿಕ್ಷೆ ನೀಡಬೇಕು ವಿಧಾನಮಂಡಲ ಅಧಿವೇಶನದಲ್ಲಿ ಚರ್ಚಿಸಬೇಕು’ ಎಂದು ಆಗ್ರಹಿಸಿದರು.

‘ತುಂಬಾ ಹಳೆಯದಾಗಿರುವ ತಂತಿ ಹಾಗೂ ಕಂಬಗಳನ್ನು ಬದಲಾಯಿಸಲು ಸರ್ಕಾರವು ಕ್ರಮ ಕೈಗೊಳ್ಳದೇ ಇರುವುದು, ಕಂಬದಿಂದ ಕಂಬಕ್ಕೆ ಹೆಚ್ಚಿನ ಅಂತರವಿರುವುದರಿಂದ ವಿದ್ಯುತ್ ತಂತಿಗಳು ಜೋತು ಬೀಳುತ್ತಿರುವುದು, ವಿದ್ಯುತ್‌ ಬಳಕೆಗೆ ಅನುಗುಣವಾಗಿ ಕೇಂದ್ರಗಳು ಇಲ್ಲದಿರುವುದು ಹಾಗೂ ಪರಿವರ್ತಕಗಳ ಮೇಲೆ ಲೋಡ್‌ ಹೆಚ್ಚುತ್ತಿರುವುದು ಅಪಾಯಗಳು ಸಂಭವಿಸಲು ಕಾರಣವಾಗಿವೆ’ ಎಂದು ಆರೋಪಿಸಿದರು.

‘ಇಲಾಖೆಯ ಕೆಲವು ಅಧಿಕಾರಿಗಳು, ಸಿಬ್ಬಂದಿ ಹಾಗೂ ಮಾರ್ಗದಾಳುಗಳು ಕೇಂದ್ರ ಸ್ಥಾನದಲ್ಲಿ ವಾಸ್ತವ್ಯ ಮಾಡದಿರುವುದು ಕೂಡ ಅವಘಡಗಳಿಗೆ ಕಾರಣ ಎನ್ನಲಾಗುತ್ತಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಇನ್ನು, ಕೆಲವು ರೈತರು ಅಕ್ರಮ ಸಕ್ರಮ ಯೋಜನೆಯಲ್ಲಿ ಕಂಪನಿಗಳಿಗೆ ಹಣ ಪಾವತಿಸಿದ್ದರೂ ಸಾಮಗ್ರಿಗಳು ದೊರೆತಿಲ್ಲ. ಕೆಲವು ಅಧಿಕಾರಿಗಳು ಹೆಚ್ಚಿನ ಹಣ ನೀಡಿದವರಿಗೆ ಮಾತ್ರ ಸಾಮಗ್ರಿಗಳನ್ನು ಕೊಟ್ಟಿದ್ದಾರೆ’ ಎಂದು ದೂರಿದರು.

ಕ್ರಮ ಕೈಗೊಳ್ಳಬೇಕು

‘ಅಕ್ರಮ ಸಕ್ರಮ ಯೋಜನೆಯಲ್ಲಿ ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ, 4 ವರ್ಷಗಳ ಅವಧಿಯಲ್ಲಿ 89,988 ಅರ್ಜಿಗಳು ಬಂದಿವೆ. ಅವುಗಳಲ್ಲಿ 53,284 ಕಾಮಗಾರಿಗಳು ಪ್ರಗತಿಯಲ್ಲಿವೆ. 19,777 ಪಂಪ್‌ಸೆಟ್‌ಗಳ ಕೆಲಸ ಬಾಕಿ ಇದೆ. ಇವುಗಳ ವೆಚ್ಚ ಒಟ್ಟು ₹ 300 ಕೋಟಿ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ’ ಎಂದು ವಿವರಿಸಿದರು.

‘ರೈತರ ಪಂಪ್‌ಸೆಟ್‌ಗಳಿಗೆ ಸತತ 7 ಗಂಟೆಗಳ ಕಾಲ ವಿದ್ಯುತ್‌ ಪೂರೈಸುವುದಾಗಿ ಮುಖ್ಯಮಂತ್ರಿ ವಿಧಾನಮಂಡಲ ಅಧಿವೇಶನದಲ್ಲಿ ತಿಳಿಸಿದ್ದಾರೆ. ಹಲವು ತಾಂತ್ರಿಕ ತೊಂದರೆಗಳಿರುವಾಗ ಇದು ಸಾಧ್ಯವೇ ಎನ್ನುವುದನ್ನು ಚಿಂತಿಸಬೇಕಾಗಿದೆ. ಹಳೆಯ ತಂತಿ, ಕಂಬ ಹಾಗೂ ಪರಿವರ್ತಕಗಳನ್ನು ಬದಲಾಯಿಸಲು ಸರ್ಕಾರ ತುರ್ತಾಗಿ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು. ಹೋರಾಟಗಾರ ಚನ್ನಪ್ಪ ಇದ್ದರು.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !