ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿದ್ದುಪಡಿ: ಈಗ ವಿದ್ಯುತ್ ಸರದಿ

ಕೇಂದ್ರದಿಂದ ವಿದ್ಯುತ್‌ ಕಾಯ್ದೆ ತಿದ್ದುಪಡಿ ಪ್ರಸ್ತಾವ: ರೈತರು ಪಾವತಿಸಿದ ಬಳಿಕ ಸರ್ಕಾರದಿಂದ ಸಹಾಯಧನ
Last Updated 25 ಮೇ 2020, 19:55 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಸರ್ಕಾರವು 2003ರ ವಿದ್ಯುತ್‌ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ. ವಿದ್ಯುತ್‌ (ತಿದ್ದುಪಡಿ) ಕಾಯ್ದೆ 2020ರ ಕರಡುಪ್ರತಿಯನ್ನು ಏಪ್ರಿಲ್‌ 17ರಂದೇ ಪ್ರಕಟಿಸಲಾಗಿದೆ. ವಿದ್ಯುತ್‌ ವಿತರಣೆ ರಂಗದಲ್ಲಿ ಮಹತ್ವದಹಲವು ಬದಲಾವಣೆಗಳ ಉದ್ದೇಶದ ಈ ತಿದ್ದುಪಡಿಗೆ ವಿವಿಧ ವರ್ಗಗಳಿಂದ ಆಕ್ಷೇಪವೂ ವ್ಯಕ್ತವಾಗಿದೆ.

ಪ್ರಸ್ತಾವಿತ ತಿದ್ದುಪಡಿಯು ವಿದ್ಯುತ್‌ ಕ್ಷೇತ್ರವನ್ನು ಖಾಸಗೀಕರಣ ಮಾಡುವ ಹುನ್ನಾರವನ್ನು ಹೊಂದಿದೆ ಎಂದು ಅಖಿಲ ಭಾರತ ವಿದ್ಯುತ್‌ ಎಂಜಿನಿಯರ್‌ಗಳ ಒಕ್ಕೂಟವು (ಎಐಪಿಇಎಫ್) ಆರೋಪಿಸಿದೆ. ಸರ್ಕಾರದ ಈ ಪ್ರಯತ್ನವನ್ನು ವಿರೋಧಿಸಿ ಜೂನ್‌ 1ರಂದು ‘ಪ್ರತಿಭಟನಾ ದಿನ’ ಆಚರಿಸುವುದಾಗಿ ಒಕ್ಕೂಟ ಪ್ರಕಟಿಸಿದೆ.

ಕೇಂದ್ರದ ವಿದ್ಯುತ್‌ ಸಚಿವ ಆರ್‌.ಕೆ.ಸಿಂಗ್‌ ಅವರಿಗೆ ಒಕ್ಕೂಟವು ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿದೆ. ಸಾರ್ವಜನಿಕರ ಹಣದಿಂದ ಸೃಷ್ಟಿಸಲಾದ ಆಸ್ತಿ ಮತ್ತು ನೈಸರ್ಗಿಕ ಸಂಪನ್ಮೂಲವನ್ನು ಖಾಸಗಿ ಕಂಪನಿಗಳಿಗೆ ವರ್ಗಾಯಿಸಲು ಮುಂದಾಗಿರುವುದು ತೀವ್ರ ಕಳವಳಕಾರಿ ಎಂದು ಒಕ್ಕೂಟವು ಹೇಳಿದೆ.

ತಿದ್ದುಪಡಿಯ ಕರಡು ಪ್ರಕಟವಾದ ಸಮಯದ ಬಗ್ಗೆಯೂ ಆಕ್ಷೇಪ ವ್ಯಕ್ತವಾಗಿದೆ. ಇಡೀ ದೇಶವು ಕೋವಿಡ್–19 ಪಿಡುಗಿನ ವಿರುದ್ಧ ಹೋರಾಡುತ್ತಿರುವಾಗ ಮತ್ತು ದೇಶದಾದ್ಯಂತ ಲಾಕ್‌ಡೌನ್‌ ಇರುವ ಸಂದರ್ಭದಲ್ಲಿ ವಿದ್ಯುತ್‌ ಸಚಿವಾಲಯವು ಜನರ ವಿದ್ಯುತ್‌ ಹಕ್ಕುಗಳನ್ನು ದಮನ ಮಾಡಲು ಮುಂದಾಗಿದೆ ಎಂದು ಒಕ್ಕೂಟ ಆರೋಪಿಸಿದೆ.

ಪ್ರಸ್ತಾವಿತ ತಿದ್ದುಪಡಿ ಮಸೂದೆಯನ್ನು ಅಮಾನತಿನಲ್ಲಿ ಇಡಬೇಕು. ರಾಜ್ಯಗಳು ಕೊರೊನಾ ವೈರಾಣು ವಿರುದ್ಧದ ಹೋರಾಟದಲ್ಲಿ ಇವೆ. ಇಂತಹ ಸಂದರ್ಭದಲ್ಲಿ ತಿದ್ದುಪಡಿಗೆ ವಿವರವಾದ ಪ್ರತಿಕ್ರಿಯೆ ಸಲ್ಲಿಸುವುದು ರಾಜ್ಯಗಳಿಗೆ ಸಾಧ್ಯವಿಲ್ಲ. ಕೋವಿಡ್‌ ಪಿಡುಗು ಹಿನ್ನೆಲೆಗೆ ಸರಿದ ಬಳಿಕವೇ ತಿದ್ದುಪಡಿ ವಿಚಾರದಲ್ಲಿ ಮುಂದುವರಿಯಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಅವರು ಪ್ರಧಾನಿಗೆ ಮೇ 9ರಂದು ಬರೆದ ಪತ್ರದಲ್ಲಿ ಹೇಳಿದ್ದಾರೆ.

ವಿದ್ಯುತ್‌ ನಿಯಂತ್ರಣ ಆಯೋಗದ ರಚನೆಗೆ ಸಬಂಧಿಸಿ ರಾಜ್ಯ ಸರ್ಕಾರಗಳು ಹೊಂದಿರುವ ಅಧಿಕಾರವನ್ನು ಕಸಿದುಕೊಳ್ಳುವ ಪ್ರಸ್ತಾವವೂ ತಿದ್ದುಪಡಿಯಲ್ಲಿ ಇದೆ. ಸಂವಿಧಾನದಲ್ಲಿರುವ ಒಕ್ಕೂಟ ತತ್ವಗಳನ್ನು ಇದು ಉಲ್ಲಂಘಿಸುತ್ತದೆ ಎಂದೂ ಅವರು ಪ್ರತಿಪಾದಿಸಿದ್ದಾರೆ.

ಪ್ರತಿಕ್ರಿಯೆ: ಜೂನ್‌ 5ರವರೆಗೆ ಅವಕಾಶ

ಕಡುವಿಗೆ ಪ್ರತಿಕ್ರಿಯೆ ಸಲ್ಲಿಸುವ ಗಡುವನ್ನು ಕೇಂದ್ರ ವಿದ್ಯುತ್‌ ಸಚಿವಾಲಯವು ಜೂನ್‌ 5ರವರೆಗೆ ವಿಸ್ತರಿಸಿದೆ. ಏಪ‍್ರಿಲ್‌ 17ರಂದು ಈ ಕರಡು ಪ್ರಕಟವಾಗಿತ್ತು. ಮೇ 8ರ ಒಳಗೆ ಪ್ರತಿಕ್ರಿಯೆ ಸಲ್ಲಿಸಲು ಸೂಚಿಸಲಾಗಿತ್ತು. ಆದರೆ, ಈ ಗಡುವನ್ನು ವಿಸ್ತರಿಸಬೇಕು ಎಂದು ಸಚಿವಾಲಯಕ್ಕೆ ಹಲವು ವಿನಂತಿಗಳು ಬಂದಿವೆ. ಹಾಗಾಗಿ, ಗಡುವನ್ನು ವಿಸ್ತರಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.

ನಾಲ್ಕನೇ ಪ್ರಯತ್ನ: ವಿದ್ಯುತ್‌ ವಿತರಣೆ ವ್ಯವಸ್ಥೆಯ ಸುಧಾರಣೆಗಾಗಿ ಕಾಯ್ದೆ ತಿದ್ದುಪಡಿಯ ಕರಡನ್ನು 2014ರಲ್ಲಿಯೇ ಸಿದ್ಧಪಡಿಸಿ, ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ಮೊಬೈಲ್‌ ಫೋನ್‌ ಸೇವೆಯ ಕಂಪನಿಯನ್ನು ಬದಲಾಯಿಸುವ ರೀತಿಯಲ್ಲಿಯೇ ವಿದ್ಯುತ್‌ ವಿತರಣೆ ಕಂಪನಿಯನ್ನು ಬದಲಾಯಿಸಿಕೊಳ್ಳುವ ಅವಕಾಶವನ್ನು ಗ್ರಾಹಕರಿಗೆ ನೀಡುವ ಪ್ರಸ್ತಾವ ಈ ಕರಡುವಿನಲ್ಲಿ ಇತ್ತು. ಆದರೆ, ಲೋಕಸಭೆ ಅವಧಿ ಮುಗಿದ ಕಾರಣ ಮಸೂದೆಯು ರದ್ದಾಗಿತ್ತು. 2018 ಮತ್ತು 2019ರಲ್ಲಿಯೂ ತಿದ್ದುಪಡಿ ಕರಡನ್ನು ಪ್ರಕಟಿಸಲಾಗಿತ್ತು.

ತಿದ್ದುಪಡಿಯ ಮುಖ್ಯಾಂಶಗಳು

* ರೈತರು ಸೇರಿ ಯಾವುದೇ ವರ್ಗಕ್ಕೆ ನೀಡುವ ವಿದ್ಯುತ್‌ ಶುಲ್ಕ ಸಹಾಯಧನವನ್ನು ವಿದ್ಯುತ್‌ ದರ ನಿಗದಿ ಮಾಡುವಾಗ ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ. ಹಾಗಾಗಿ, ಎಲ್ಲ ವರ್ಗಗಳ ಗ್ರಾಹಕರು ವಿದ್ಯುತ್ತಿನ ಪೂರ್ಣ ಶುಲ್ಕವನ್ನು ಪಾವತಿಸಬೇಕು. ಸಹಾಯಧನದ ಮೊತ್ತವನ್ನು ಸರ್ಕಾರವು ಗ್ರಾಹಕರಿಗೆ ನೇರ ನಗದು ವರ್ಗಾವಣೆ ಮೂಲಕ ನೀಡಬೇಕು

* ವಿದ್ಯುತ್‌ ಗುತ್ತಿಗೆ ಜಾರಿ ಪ್ರಾಧಿಕಾರ (ಇಸಿಇಎ) ರಚನೆ: ವಿದ್ಯುತ್‌ ಮಾರಾಟ, ಖರೀದಿ, ಪ್ರಸರಣಕ್ಕೆ ಸಂಬಂಧಿಸಿದ ವ್ಯಾಜ್ಯಗಳನ್ನು ಬಗೆಹರಿಸುವ ಅಧಿಕಾರ ಈ ಪ್ರಾಧಿಕಾರಕ್ಕೆ ಇದೆ. ದರ ನಿಗದಿ, ನಿಯಂತ್ರಣ ಮತ್ತು ವಿದ್ಯುತ್‌ ಶುಲ್ಕಕ್ಕೆ ಸಂಬಂಧಿಸಿದ ವ್ಯಾಜ್ಯಗಳು ಈ ಪ್ರಾಧಿಕಾರದ ವ್ಯಾಪ್ತಿಗೆ ಬರುವುದಿಲ್ಲ

* ವಿತರಣೆ ಉಪ ಗುತ್ತಿಗೆ ಮತ್ತು ಫ್ರಾಂಚೈಸಿ: ಒಂದು ಪ್ರದೇಶದಲ್ಲಿ ವಿದ್ಯುತ್‌ ವಿತರಣೆಯ ಗುತ್ತಿಗೆ ಹೊಂದಿರುವ ಕಂಪನಿಯು, ತನ್ನ ವ್ಯಾಪ್ತಿಯೊಳಗೆ ವಿದ್ಯುತ್‌ ವಿತರಣೆಗೆ ಬೇರೊಂದು ಕಂಪನಿಗೆ ಉಪಗುತ್ತಿಗೆ ನೀಡಬಹುದು. ರಾಜ್ಯ ಆಯೋಗದ ಪೂರ್ವಾನುಮತಿ ಪಡೆದು ಈ ಗುತ್ತಿಗೆ ನೀಡಬಹುದು ಅಥವಾ ಈ ಕಂಪನಿಯನ್ನು ಫ್ರಾಂಚೈಸಿ ಎಂದು ನೇಮಿಸಿ, ರಾಜ್ಯ ಆಯೋಗಕ್ಕೆ ಮತ್ತೆ ಮಾಹಿತಿ ನೀಡಬಹುದು

* ನಿಯಂತ್ರಣ ವ್ಯವಸ್ಥೆ ಸ್ಥಾಪನೆ, ಆಯೋಗಗಳ ರಚನೆ ಮತ್ತು ಅದರ ಅಧ್ಯಕ್ಷ ಹಾಗೂ ಸದಸ್ಯರ ನೇಮಕದಲ್ಲಿನ ಗೊಂದಲಗಳನ್ನು ನಿವಾರಿಸುವ ಪ್ರಸ್ತಾವ

* ಶುಲ್ಕ ಪಾವತಿಯ ಖಾತರಿ ಇಲ್ಲದೇ ಇದ್ದರೆ ವಿತರಣಾ ಕಂಪನಿಗಳಿಗೆ ವಿದ್ಯುತ್‌ ಹಂಚಿಕೆಯನ್ನು ತಡೆ ಹಿಡಿಯುವ ಅವಕಾಶ

ಪ್ರಮುಖ ಆಕ್ಷೇಪಗಳು

* ಕೇಂದ್ರ ಮತ್ತು ರಾಜ್ಯ ವಿದ್ಯುತ್‌ ನಿಯಂತ್ರಣ ಆಯೋಗಗಳ ಅಧಿಕಾರವು ಇಸಿಇಎಯಿಂದಾಗಿ ಮೊಟಕಾಗುತ್ತದೆ

* ಉಪಗುತ್ತಿಗೆ ಅಥವಾ ಫ್ರಾಂಚೈಸಿ ನೇಮಕವು ವಿದ್ಯುತ್‌ ವಿತರಣೆ ವ್ಯವಸ್ಥೆಯ ಖಾಸಗೀಕರಣಕ್ಕೆ ದಾರಿ ಮಾಡಿಕೊಡುತ್ತದೆ

* ವಿವಿಧ ವರ್ಗಗಳಿಗೆ ನೀಡುವ ವಿದ್ಯುತ್ ಶುಲ್ಕ ಸಹಾಯಧನವನ್ನು ಈಗ ರಾಜ್ಯ ಸರ್ಕಾರಗಳು ನೇರವಾಗಿ ವಿದ್ಯುತ್‌ ವಿತರಣಾ ಕಂಪನಿಗಳಿಗೆ ಪಾವತಿಸುತ್ತದೆ. ಮುಂದೆ, ಗ್ರಾಹಕರೇ ನೇರವಾಗಿ ಶುಲ್ಕ ಪಾವತಿಸಬೇಕು. ಅವರ ಈ ವೆಚ್ಚವನ್ನು ‘ನೇರ ನಗದು ವರ್ಗಾವಣೆ’ ಮೂಲಕ ಸರ್ಕಾರಗಳು ಭರಿಸುತ್ತವೆ. ಆದರೆ, ಗ್ರಾಹಕರು ವಿದ್ಯುತ್‌ ಶುಲ್ಕ ಪಾವತಿಸದೇ ಇರಬಹುದು ಮತ್ತು ಸರ್ಕಾರದಿಂದ ಬಂದ ಸಹಾಯಧನವನ್ನು ಬೇರೆ ಉದ್ದೇಶಕ್ಕೆ ಬಳಸಬಹುದು

* ರೈತರು ಮತ್ತು ಬಡ ಗ್ರಾಹಕರಿಗೆ ಸಕಾಲದಲ್ಲಿ ವಿದ್ಯುತ್‌ ಶುಲ್ಕ ಪಾವತಿಸುವುದು ಸಾಧ್ಯವಾಗದೇ ಇರಬಹುದು. ಇದರಿಂದಾಗಿ ವಿದ್ಯುತ್‌ ವಿತರಣಾ ಕಂಪನಿಗಳ ಆರ್ಥಿಕ ಹೊರೆ ಇನ್ನಷ್ಟು ಹೆಚ್ಚಬಹುದು

(ಪೂರಕ ಮಾಹಿತಿ: ಪಿಟಿಐ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT