ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌: ನಿರ್ವಹಣೆಯತ್ತ ಬೇಕಿದೆ ಚಿತ್ತ

ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಕೆ ಸೂಕ್ತl ಸಹಾಯಧನ ನೇರಪಾವತಿ ಸ್ವಾಗತಾರ್ಹ
Last Updated 1 ಜೂನ್ 2020, 3:20 IST
ಅಕ್ಷರ ಗಾತ್ರ

ವಿದ್ಯುತ್ ವಿತರಣೆ ಕ್ಷೇತ್ರದಲ್ಲಿ ಬದಲಾವಣೆಗಳನ್ನು ತರುವ ಉದ್ದೇಶದೊಂದಿಗೆ ಕೇಂದ್ರ ಸರ್ಕಾರವು 2003ರ ವಿದ್ಯುತ್ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ. ಸಂಬಂಧಪಟ್ಟವರು ಪ್ರತಿಕ್ರಿಯೆ ನೀಡಲು ಇದೇ 5ರವರೆಗೆ ಅವಕಾಶ ಇದೆ. ತಿದ್ದುಪಡಿಯಲ್ಲಿ ಇರುವ ಅಂಶಗಳ ಪರ– ವಿರೋಧ ಚರ್ಚೆಗಳು ಆರಂಭವಾಗಿವೆ. ‘ವಿದ್ಯುತ್‌ ಕ್ಷೇತ್ರದಲ್ಲಿ ನಿರ್ವಹಣೆಯ ಕೊರತೆ ಇದೆಯೇ ವಿನಾ, ಮೂಲಸೌಕರ್ಯಗಳ ಕೊರತೆ ಇಲ್ಲ. ಆದ್ದರಿಂದ ನಿರ್ವಹಣೆಯ ವಿಚಾರವನ್ನು ಕಾಯ್ದೆಯಲ್ಲಿ ಸೇರಿಸಬೇಕು’ ಎಂಬ ವಾದ ಒಂದೆಡೆಯಾದರೆ, ‘ಇದು ವಿದ್ಯುತ್‌ ಕ್ಷೇತ್ರವನ್ನು ಖಾಸಗೀಕರಣಗೊಳಿಸುವ ಪ್ರಯತ್ನ, ಇದಕ್ಕೆ ಅವಕಾಶ ನೀಡಬಾರದು’ ಎಂಬ ಆಕ್ಷೇಪವೂ ಕೇಳಿ ಬಂದಿದೆ...

ಕೇಂದ್ರ ಸರ್ಕಾರ ರೂಪಿಸಿರುವ ವಿದ್ಯುತ್‌ ತಿದ್ದುಪಡಿ ಕಾಯ್ದೆಯ ಕರಡುವಿನ ಕುರಿತ ಚರ್ಚೆ ಚಾಲ್ತಿಯಲ್ಲಿದೆ. ಈ ಕ್ಷೇತ್ರದಲ್ಲಿನ ಮೂಲಸೌಕರ್ಯ ವಲಯದ ನಿರ್ವಹಣೆಗೆ ಒತ್ತು ನೀಡುವಂತಹ ಅಂಶಗಳನ್ನು ಕಾಯ್ದೆಯಲ್ಲಿ ಸೇರ್ಪಡೆ ಮಾಡುವುದು ಅವಶ್ಯಕವಾಗಿದೆ.

ಗಮನಿಸಬೇಕಾದ ಅಂಶವೆಂದರೆ, ನಮ್ಮ ರಾಜ್ಯದ ವಿದ್ಯುತ್‌ ವಲಯ ದಲ್ಲಿ ಮೂಲಸೌಕರ್ಯ ಕೊರತೆ ಇಲ್ಲ. ಅವುಗಳ ನಿರ್ವಹಣೆಯಲ್ಲಿ ಕೊರತೆ ಇದೆ.

ರಾಜ್ಯದ ಒಟ್ಟು ಗರಿಷ್ಠ ವಿದ್ಯುತ್‌ ಬೇಡಿಕೆ 12 ಸಾವಿರ ಮೆಗಾವಾಟ್. ಆದರೆ, 28 ಸಾವಿರ ಮೆಗಾವಾಟ್‌ ವಿದ್ಯುತ್‌ ಉತ್ಪಾದಿಸುವ ಸಾಮರ್ಥ್ಯವನ್ನು ರಾಜ್ಯ ಹೊಂದಿದೆ. ಸುಮಾರು 1,500 ಕೋಟಿ ಯುನಿಟ್‌ ಹೆಚ್ಚುವರಿ ವಿದ್ಯುತ್‌ ನಮ್ಮಲ್ಲಿದೆ. ರಾಜ್ಯದಲ್ಲಿ ಶೇ 20ರಷ್ಟು ಹೈಟೆನ್ಷನ್ ವಿದ್ಯುತ್‌ ಅನ್ನು ಬೃಹತ್‌ ಕೈಗಾರಿಕೆಗಳು, ಶೇ 3ರಷ್ಟನ್ನು ಸುಮಾರು 5 ಲಕ್ಷಕ್ಕೂ ಹೆಚ್ಚಿರುವ ಸಣ್ಣ ಕೈಗಾರಿಕೆಗಳು ಬಳಸುತ್ತವೆ. ಕೈಗಾರಿಕೆಗಳಲ್ಲಿ ಹೆಚ್ಚು ವಿದ್ಯುತ್‌ ಬಳಕೆಯಾಗದೇ ಹೋದರೆ ಉತ್ಪಾದನಾ ವಲಯ ನಿರೀಕ್ಷಿತ ಮಟ್ಟಕ್ಕೆ ಬೆಳೆಯದೆ, ಆರ್ಥಿಕ ಬೆಳವಣಿಗೆ ಕುಂಠಿತಗೊಳ್ಳುತ್ತದೆ.

ವಿದ್ಯುತ್ ದರ ಕಡಿಮೆಯಾಗಲಿ: ಸರಬರಾಜು ಕಂಪನಿಗಳು ಗೃಹ ಬಳಕೆ ಉದ್ದೇಶಕ್ಕೆ ಯುನಿಟ್‌ಗೆ ಕನಿಷ್ಠ ₹3.25ರಂತೆ ಮಾರಾಟ ಮಾಡುತ್ತಿವೆ. ಆದರೆ, ಕೈಗಾರಿಕೆಗಳಿಗೆ ₹7.25ರಂತೆ ಮಾರಾಟ ಮಾಡಲಾಗುತ್ತಿದೆ. ನಿಶ್ಚಿತ ಶುಲ್ಕ, ತೆರಿಗೆ ಎಲ್ಲ ಸೇರಿಸಿದರೆ ಕೈಗಾರಿಕೆಗಳು ಯುನಿಟ್‌ ಒಂದಕ್ಕೆ ₹10ರಿಂದ ₹11ರವರೆಗೆ ಭರಿಸುತ್ತಿವೆ. ಸದ್ಯದಲ್ಲಿ, ಮುಕ್ತ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ವಿದ್ಯುತ್‌ ಸಿಗುತ್ತಿರುವುದರಿಂದ ಕೈಗಾರಿಕಾ ಗ್ರಾಹಕರು ಈ ಮಾರುಕಟ್ಟೆಯನ್ನೇ ಅವಲಂಬಿಸುವಂತಾಗಿದೆ. ಇದರ ಬದಲು ಕೈಗಾರಿಕೆಗಳಿಗೆ ಸರ್ಕಾರವೇ ₹6ರಂತೆ ವಿದ್ಯುತ್‌ ಮಾರಾಟ ಮಾಡಿದರೂ ಯಾವುದೇ ನಷ್ಟವಾಗುವುದಿಲ್ಲ. ಇದರಿಂದ ಕೈಗಾರಿಕೆಗಳ ಬೆಳವಣಿಗೆಯಾಗುವುದರಿಂದ ಉದ್ಯೋಗಾವಕಾಶಗಳು ವಿಪುಲವಾಗಿ ಸೃಷ್ಟಿಯಾಗುತ್ತವೆ. ಕೈಗಾರಿಕಾ ವಲಯದಿಂದ ಸರ್ಕಾರದ ಬೊಕ್ಕಸಕ್ಕೆ ಸೇರುವ ಆದಾಯವೂ ಹೆಚ್ಚಾಗುವುದರಿಂದ ರಾಜ್ಯವು ಆರ್ಥಿಕವಾಗಿ ವೃದ್ಧಿ ಹೊಂದುತ್ತದೆ.

ಕಾರ್ಯಕ್ಷಮತೆ ಹೆಚ್ಚಿಸಬೇಕು: ರಾಜ್ಯದಲ್ಲಿ ಕೃಷಿ ಪಂಪ್‌ಸೆಟ್‌ಗಳು 24 ಲಕ್ಷಕ್ಕೂ ಹೆಚ್ಚು ಇವೆ ಎಂದು ವಿದ್ಯುತ್‌ ಸರಬರಾಜು ಕಂಪನಿಗಳು ಹೇಳುತ್ತವೆ. ಈ ಕಂಪನಿಗಳು ಅಂದಾಜಿಸುವಂತೆ ರಾಜ್ಯದಲ್ಲಿ ಶೇ 37ರಷ್ಟು ಅಂದರೆ, ವರ್ಷಕ್ಕೆ 1,759 ಕೋಟಿ ಯುನಿಟ್‌ನಷ್ಟು ವಿದ್ಯುತ್‌ ಈ ಉದ್ದೇಶಕ್ಕೆ ಬಳಕೆಯಾಗುತ್ತಿದೆ. ವರ್ಷಕ್ಕೆ ಬಜೆಟ್‌ನಲ್ಲಿ ₹11 ಸಾವಿರ ಕೋಟಿಯನ್ನು ಸಹಾಯಧನಕ್ಕೆ ಮೀಸಲಿಡಬೇಕಾಗುತ್ತದೆ. ಕೈಗಾರಿಕೆಗಳು ಕೂಡ ಸುಮಾರು ₹3 ಸಾವಿರ ಕೋಟಿಯಷ್ಟು ‘ಕ್ರಾಸ್‌ ಸಬ್ಸಿಡಿ’ಯನ್ನು ಭರಿಸುತ್ತಿವೆ. ಅಂದರೆ ವರ್ಷಕ್ಕೆ ಸುಮಾರು ₹14 ಸಾವಿರ ಕೋಟಿಯನ್ನು ಈ ಉದ್ದೇಶಕ್ಕೆ ತೆಗೆದಿಡಬೇಕಾಗುತ್ತದೆ.

ವಿದ್ಯುತ್‌ ವಿತರಣೆ ವೇಳೆಯಲ್ಲಿನ ನಷ್ಟವನ್ನು ಈ ಕೃಷಿ ಪಂಪ್‌ಸೆಟ್‌ ಗಳಿಗೆ ನೀಡುವ ವಿದ್ಯುತ್‌ ಲೆಕ್ಕಕ್ಕೂ ಸೇರಿಸುವ ಮೂಲಕ ನಷ್ಟವನ್ನು ಮುಚ್ಚಿಡುವ ಪ್ರಯತ್ನವೂ ನಡೆಯುತ್ತಿದೆ. ವ್ಯವಸ್ಥೆಯಲ್ಲಿನ ಈ ಲೋಪವು ರಾಜ್ಯದ ಆರ್ಥಿಕತೆಗೆ ಮಾರಕವಾಗಿದೆ. ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ನೀಡಲು ಪ್ರತಿ ವರ್ಷ ₹11 ಸಾವಿರ ಕೋಟಿ ವ್ಯಯಿಸುವ ಬದಲು, ಈ ಮೋಟಾರ್‌ಗಳ ರೋಟಾರ್‌ ಬದಲಿಸಿ, ಸೌರವಿದ್ಯುತ್‌ನಿಂದ ಇವು ಕಾರ್ಯನಿರ್ವಹಿಸುವಂತೆ ಮಾರ್ಪಾಡು ಮಾಡಬೇಕು. ಹೀಗೆ ಮಾಡುವುದರಿಂದ ಹಗಲಿನಲ್ಲಿಯೇ ಕೃಷಿಗೆ ನೀರು ದೊರಕಿದಂತಾಗುತ್ತದೆಯಲ್ಲದೆ, ಗ್ರಿಡ್‌ ಮೇಲಿನ ಅವಲಂಬನೆಯೂ ತಪ್ಪುತ್ತದೆ.

ಸೌರವಿದ್ಯುತ್‌ ಉತ್ಪಾದನೆಗೆ ಪೂರಕ ವಾತಾವರಣವಿರುವ ಜಿಲ್ಲೆಗಳಲ್ಲಿ ಸೌರವಿದ್ಯುತ್‌ ಸ್ಥಾವರಗಳನ್ನು ಸರ್ಕಾರ ಸ್ಥಾ‍‍ಪಿಸಬೇಕು. ಅದೇ ರೀತಿ, ಕೃಷಿ ಕ್ಷೇತ್ರಕ್ಕೆ ಆದ್ಯತೆ ನೀಡಿ ಪ್ರತಿ ಜಿಲ್ಲೆಯನ್ನು ‘ಗ್ರೋಥ್‌ ಸೆಂಟರ್‌’ ಎಂದು ಗುರುತಿಸಿ, ಸ್ಥಳೀಯವಾಗಿ ದೊರಕುವ ಸಂಪನ್ಮೂಲಗಳನ್ನು ಬಳಸಿಕೊಂಡು ಕಾರ್ಯನಿರ್ವಹಿಸುವಂತಹ ಕೈಗಾರಿಕೆಗಳನ್ನು ಸ್ಥಾಪಿಸಬೇಕು. ಸ್ಥಳೀಯವಾಗಿ ಉತ್ಪಾದನೆಯಾಗುವ ವಿದ್ಯುತ್‌ ಅನ್ನು, ಸ್ಥಳೀಯವಾಗಿಯೇ ಬಳಸುವ ವ್ಯವಸ್ಥೆ ಅಳವಡಿಸಿಕೊಳ್ಳುವುದು ಸೂಕ್ತ.

ನೇರ ಪಾವತಿ ಸ್ವಾಗತಾರ್ಹ: ರೈತರ ಖಾತೆಗೆ ನೇರವಾಗಿ ಸಹಾಯಧನ ಪಾವತಿಸುವ ಪ್ರಸ್ತಾವ ಈ ತಿದ್ದುಪಡಿ ಕಾಯ್ದೆಯಲ್ಲಿದೆ. ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮಾ ಮಾಡುವುದು ಉತ್ತಮ ನಿರ್ಧಾರವೇ. ಆದರೆ, ಅರ್ಹ ಫಲಾನುಭವಿಗಳು ಯಾರು ಎಂದು ಗುರುತಿಸುವುದೇ ದೊಡ್ಡ ಸವಾಲು. ಅಲ್ಲದೆ, ಯಾರಿಗೆ, ಎಷ್ಟು ಸಹಾಯಧನ ಕೊಡಬೇಕು ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ಕಾಲುವೆ ನೀರು, ನದಿ ನೀರು ಸೇರಿದಂತೆ ಬಯಲು ಸೀಮೆಯಲ್ಲಿನ ರೈತ ಬಳಸುವ ವಿದ್ಯುತ್‌ ಪ್ರಮಾಣವೇ ಬೇರೆ, ಸಾವಿರ ಅಡಿಗಿಂತಲೂ ಹೆಚ್ಚು ಆಳದಿಂದ ನೀರನ್ನು ಎತ್ತಬೇಕಾಗು ವುದರಿಂದ ಕೋಲಾರದ ರೈತ ಬಳಸುವ ವಿದ್ಯುತ್‌ ಪ್ರಮಾಣವೇ ಬೇರೆ. ಪರಿಸ್ಥಿತಿ ಹೀಗಿರುವಾಗ ಎಲ್ಲ ರೈತರಿಗೂ ಸಮಾನ ಸಹಾಯಧನ ನೀಡುವುದು ಸಮಂಜಸ ಎನಿಸುವುದಿಲ್ಲ, ಸಾಧ್ಯವೂ ಇಲ್ಲ.

ಈ ನಿಟ್ಟಿನಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಸುವುದರಿಂದ ಎಷ್ಟು ವಿದ್ಯುತ್‌ ಈ ವಲಯಕ್ಕೆ ಸರಬರಾಜು ಮಾಡಲಾಗಿದೆ, ಅದರಲ್ಲಿ ಎಷ್ಟು ಬಳಕೆಯಾಗಿದೆ ಎಂಬ ಲೆಕ್ಕ ಸಿಗುತ್ತದೆ. ರೈತರು ಸರ್ಕಾರದಿಂದ ಸಹಾಯಧನವನ್ನು ಪಡೆದು, ವಿದ್ಯುತ್‌ ಸರಬರಾಜು ಕಂಪನಿಗಳಿಗೆ ವಿದ್ಯುತ್‌ ಶುಲ್ಕ ಪಾವತಿಸುವುದರಿಂದ ಅವರಿಗೆ ಹಕ್ಕು ಲಭಿಸಿದಂತಾಗುತ್ತದೆ. ಅಲ್ಲದೆ, ರೈತರ ಹೆಸರಿನಲ್ಲಿ ಆಗುತ್ತಿದ್ದ ವಿದ್ಯುಚ್ಛಕ್ತಿ ಸೋರಿಕೆಯನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ಪ್ರಮುಖ ಅಂಶವೆಂದರೆ, ಕೃಷಿಗೆ ಉಚಿತವಾಗಿ ನೀಡಲಾಗುತ್ತಿರುವ ವಿದ್ಯುತ್‌ ಅನ್ನು ತೆಗೆದು ಹಾಕಲಾಗುತ್ತದೆ ಎಂದು ಕಾಯ್ದೆಯಲ್ಲಿ ಎಲ್ಲಿಯೂ ಹೇಳಿಲ್ಲ. ಇನ್ನು ಮುಂದೆ ಎಲ್ಲದಕ್ಕೂ ಲೆಕ್ಕ ಸಿಗುವುದರಿಂದ ರೈತನ ಬಾಳು ಹಸನಾಗಲಿದೆ.

ಕಾನೂನಿನ ಹಿಡಿತ: ನಮ್ಮ ಸಂವಿಧಾನದಲ್ಲಿ ವಿದ್ಯುತ್‌ ಸಮವರ್ತಿ ಪಟ್ಟಿಯಲ್ಲಿರುವ ವಿಷಯ. ಕೇಂದ್ರ ಸರ್ಕಾರವೇ ವಿದ್ಯುತ್‌ ದರ ನಿಯಂತ್ರಣ ಪ್ರಾಧಿಕಾರದ ಮುಖ್ಯಸ್ಥರು ಮತ್ತು ಸದಸ್ಯರನ್ನು ನೇಮಕ ಮಾಡುವ ವಿಷಯದಲ್ಲಿ ಕಾನೂನು ತೊಡಕುಗಳು ಉಂಟಾಗಬಹುದು. ಆದರೆ, ಹಾಲಿ ಇರುವ ನಿಯಂತ್ರಣ ಪ್ರಾಧಿಕಾರಗಳು ಹೆಚ್ಚಾಗಿ ಸರ್ಕಾರದ ಪರವೇ ಇರುವುದರಿಂದ ಈ ನಿರ್ಧಾರ ಸಮಂಜಸವಾದುದಾಗಿದೆ.

ಇನ್ನೊಂದು ಮುಖ್ಯಅಂಶವೆಂದರೆ, ವಿದ್ಯುತ್‌ ಉತ್ಪಾದನಾ ಕಂಪನಿಗಳು ಮತ್ತು ಸರಬರಾಜು ಸಂಸ್ಥೆಗಳಿಗೆ ಉಂಟಾಗುವ ವಿವಾದಗಳನ್ನು ಬಗೆಹರಿಸುವುದಕ್ಕಾಗಿ ಪ್ರತ್ಯೇಕವಾದ ‘ಎಲೆಕ್ಟ್ರಿಸಿಟಿ ಕಂಟ್ರಾಕ್ಟ್‌ ಎನ್‌ಫೋರ್ಸ್‌ಮೆಂಟ್‌ ಅಥಾರಿಟಿ’ ಎಂಬ ಸಂಸ್ಥೆಯನ್ನು ರಚಿಸುವ ಬಗ್ಗೆ ಈ ತಿದ್ದುಪಡಿಯಲ್ಲಿ ಹೇಳಲಾಗಿದೆ. ಇದರಿಂದ ವಿವಾದಗಳು ಶೀಘ್ರ ಬಗೆಹರಿಯಲಿದ್ದು, ಎಲ್ಲರ ಹಿತ ಕಾಯಲು ಸಾಧ್ಯವಾಗುತ್ತದೆ.

ಖಾಸಗೀಕರಣಕ್ಕೆ ಅವಕಾಶ

ಎಲ್ಲ ಎಸ್ಕಾಂಗಳ ಅಡಿಯಲ್ಲಿ ವಿದ್ಯುತ್‌ ವಿತರಣೆಗೆ ಉಪಗುತ್ತಿಗೆ ಮತ್ತು ಫ್ರಾಂಚೈಸಿ ನೀಡುವ ಪ್ರಸ್ತಾವ ಕಾಯ್ದೆಯಲ್ಲಿದೆ. ಉಪಗುತ್ತಿಗೆ ಪಡೆದವರ ಖರ್ಚು ಕೂಡ ಗ್ರಾಹಕರ ತಲೆ ಮೇಲೆ ಬೀಳುವುದರಿಂದ ವಿದ್ಯುತ್‌ ದರ ಹೆಚ್ಚಾಗುವ ಸಾಧ್ಯತೆ ಇದೆ. ಅಲ್ಲದೆ, ಖಾಸಗಿಯವರಿಗೆ ಉಪಗುತ್ತಿಗೆ ನೀಡುವುದರಿಂದ ಪರೋಕ್ಷವಾಗಿ ಖಾಸಗೀಕರಣಕ್ಕೆ ಅವಕಾಶ ನೀಡಿದಂತಾಗುತ್ತದೆ. ಆದರೆ,ವಿದ್ಯುತ್‌ ಸರಬರಾಜು ಸಂಸ್ಥೆಗಳು, ಉಪಗುತ್ತಿಗೆ ಪಡೆದವರು ಅಥವಾ ಫ್ರಾಂಚೈಸಿ ಹೊಂದಿದವರು ಗ್ರಾಹಕನಿಗೆ ಸಮರ್ಪಕವಾಗಿ ವಿದ್ಯುತ್‌ ಪೂರೈಸದೆ ಹೋದರೆ, ಅವರಿಗೆ ₹1 ಕೋಟಿಯವರೆಗೆ ದಂಡ ಹಾಕುವ ಅಂಶವೂ ಈ ಕಾಯ್ದೆಯಲ್ಲಿದೆ. ಇದರಿಂದ ವಿದ್ಯುತ್‌ ಪೂರೈಕೆದಾರರು ಹಕ್ಕುಬಾಧ್ಯತೆಗೆ ಒಳಪಡಬೇಕಾಗುತ್ತದೆ. ಹೆಚ್ಚಿನ ಮಟ್ಟಿಗೆ, ಗ್ರಾಹಕರ ಪರವಾದ ಅಂಶಗಳು ಈ ತಿದ್ದುಪಡಿ ಕಾಯ್ದೆಯಲ್ಲಿರುವುದು ಸ್ವಾಗತಾರ್ಹವಾಗಿದೆ.

ಲೇಖಕರು: ಕೆಇಆರ್‌ಸಿ ಸಲಹಾ ಸಮಿತಿಯ ಮಾಜಿ ಸದಸ್ಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT