ಭಾನುವಾರ, ಡಿಸೆಂಬರ್ 15, 2019
17 °C

ಸೆರೆ ಹಿಡಿದ ಕಾಡಾನೆ ದುಬಾರೆಗೆ ರವಾನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪೊನ್ನಂಪೇಟೆ (ಕೊಡಗು): ಕುಟ್ಟ ವ್ಯಾಪ್ಯಿಯ ಗ್ರಾಮಗಳಿಗೆ ನುಗ್ಗಿ ದಾಂದಲೆ ನಡೆಸುತ್ತಿದ್ದ ಕಾಡಾನೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ಬುಧವಾರ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದರು.

ಮಂಚಳ್ಳಿ ಸಮೀಪದ ಬ್ಲೂಡೈಮಂಡ್ ಕಾಫಿ ತೋಟದಲ್ಲಿ ಬೀಡುಬಿಟ್ಟಿದ್ದ ಕಾಡಾನೆಯನ್ನು ಸೆರೆ ಹಿಡಿಯಲಾಯಿತು.

ಬೆಳಿಗ್ಗೆ 6ಕ್ಕೆ ಆರಂಭವಾಗಿದ್ದ ಕಾರ್ಯಾಚರಣೆಯಲ್ಲಿ, ಅಂದಾಜು 25 ವರ್ಷದ ಗಂಡಾನೆಯನ್ನು ಸಾಕಾನೆಗಳ ಸಹಾಯದಿಂದ ಮಧ್ಯಾಹ್ನ 2ರ ಸುಮಾರಿಗೆ ಬಂಧಿಸಲಾಯಿತು. ನಂತರ, ದುಬಾರೆ ಸಾಕಾನೆ ಶಿಬಿರಕ್ಕೆ ಲಾರಿ ಮೂಲಕ ರವಾನಿಸಲಾಯಿತು. ದುಬಾರೆಯ ಕ್ರಾಲ್‌ನಲ್ಲಿ ಬಂಧಿಸಿ ಪಳಗಿಸಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದರು.

ಮತ್ತಿಗೋಡು ಶಿಬಿರದ ಸಾಕಾನೆಗಳಾದ ಅಭಿಮನ್ಯು, ಬಲರಾಮ, ಗೋಪಾಲಸ್ವಾಮಿ, ಕೃಷ್ಣ, ಗಣೇಶ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದವು.
ಶ್ರೀಮಂಗಲ ವನ್ಯಜೀವಿ ವಲಯ ಎಸಿಎಫ್ ದಯಾನಂದ್, ಆರ್‍ಎಫ್‍ಒ ವೀರೇಂದ್ರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. 50 ಸಿಬ್ಬಂದಿಯೂ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಕುಟ್ಟ, ಶ್ರೀಮಂಗಲ, ಕುರ್ಚಿ ವ್ಯಾಪ್ತಿ ಜಮೀನಿಗೆ ನುಗ್ಗಿ ಈ ಆನೆ ಬೆಳೆ ನಾಶ ಪಡಿಸುತ್ತಿತ್ತು. ಇದು ಈ ಭಾಗದ ಬೆಳೆಗಾರರ ಆತಂಕಕ್ಕೂ ಕಾರಣವಾಗಿತ್ತು.

ಪ್ರತಿಕ್ರಿಯಿಸಿ (+)