ಮದವೇರಿದ ಆನೆ ನಿಯಂತ್ರಣಕ್ಕೆ ಹರಸಾಹಸ

ಶುಕ್ರವಾರ, ಏಪ್ರಿಲ್ 26, 2019
21 °C

ಮದವೇರಿದ ಆನೆ ನಿಯಂತ್ರಣಕ್ಕೆ ಹರಸಾಹಸ

Published:
Updated:
Prajavani

ಕುಶಾಲನಗರ: ಕೊಡಗಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ದುಬಾರೆ ಸಾಕಾನೆ ಶಿಬಿರದಲ್ಲಿನ ಸಾಕಾನೆಯೊಂದಕ್ಕೆ ಮದವೇರಿದ ಕಾರಣ ಪ್ರವಾಸಿಗರಿಗೆ ದುಬಾರೆ ಪ್ರವಾಸಿ ತಾಣ ವೀಕ್ಷಣೆಗೆ ನಿರ್ಬಂಧ ಹೇರಲಾಗಿದೆ.

ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಗೋಪಿ ಆನೆಗೆ ಮದವೇರಿದ್ದು, ಈ ಕಾರಣ ಯಾವುದೇ ಅನಾಹುತ ಸಂಭವಿಸದಿರಲಿ ಎಂಬ ಮುನ್ನೆಚ್ಚರಿಕೆಯಿಂದ ಅರಣ್ಯ ಇಲಾಖೆಯು ಪ್ರವೇಶವನ್ನು ನಿರ್ಬಂಧಿಸಿದೆ.

ಗೋಪಿ ಮಾವುತರ ಮತ್ತು ಕಾವಾಡಿಗರ ಕಣ್ಣು ತಪ್ಪಿಸಿ ಕಾಡಿಗೆ ಪಲಾಯನ ಮಾಡಿದೆ. ಅಲ್ಲಿನ ಕಾಡಾನೆಗಳೊಂದಿಗೆ ಕಾದಾಟ ನಡೆಸುವ ಸಾಧ್ಯತೆ ಇದ್ದು, ಇದರಿಂದ ಅಪಾಯ ಸಂಭವಿಸಬಹುದು ಎಂಬ ಉದ್ದೇಶದಿಂದ ಅದನ್ನು ಸಾಕಾನೆ ಶಿಬಿರಕ್ಕೆ ಕರೆತರಲು ಅರಣ್ಯ ಸಿಬ್ಬಂದಿ ಹಾಗೂ ಮಾವುತರು ಹರಸಾಹಸ ಪಡುತ್ತಿದ್ದಾರೆ.

ಅಲ್ಲದೇ ಕುಡಿಯುವ ನೀರಿನ ಸಮಸ್ಯೆಯಿಂದ ಹಿಂಡು ಹಿಂಡಾಗಿ ಆನೆಗಳು ಕಾಡಿನಿಂದ ನಾಡಿನತ್ತ ಬರಲಾರಂಭಿಸಿವೆ. ಇಂತಹ ಕಾಡಾನೆಗಳ ಹಿಂಡು ಶಿಬಿರಕ್ಕೆ ಬಂದರೆ ಸಾಕಾನೆಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬ ಕಾರಣದಿಂದ ಕಾಡಾನೆಗಳು ಶಿಬಿರ ಪ್ರವೇಶ ಮಾಡದಂತೆ ಅರಣ್ಯ ಸಿಬ್ಬಂದಿ, ಮಾವುತರು ಹಾಗೂ ಕಾವಾಡಿಗರು ಎಚ್ಚರಿಕೆ ವಹಿಸಿದ್ದಾರೆ.

ಆನೆಗಳ ಬಳಿಗೆ ಯಾರೂ ಹೋಗದಂತೆ ಸೂಚನೆ ನೀಡಲಾಗಿದ್ದು, ಮದ ಇಳಿಯುವವರೆಗೂ ತೀವ್ರ ನಿಗಾ ವಹಿಸಲಾಗುತ್ತಿದೆ ಎಂದು ಶಿಬಿರದ ಅರಣ್ಯಾಧಿಕಾರಿ ರಂಜನ್ ತಿಳಿಸಿದ್ದಾರೆ. ಅಲ್ಲದೆ ಸಾಕಾನೆಗೆ ಮದ ಇಳಿಯಲು ಮುಂದಿನ ಹತ್ತು ದಿನಗಳ ಸಮಯ ಬೇಕಾಗಿದ್ದು, ಎಚ್ಚರಿಕೆಯಿಂದ ಆನೆಯನ್ನು ನಿರ್ವಹಣೆ ಮಾಡಬೇಕಾಗಿದೆ ಎಂದು ವನ್ಯಜೀವಿ ವಿಭಾಗದ ವೈದ್ಯಾಧಿಕಾರಿ ಡಾ.ಮುಜೀಬ್ ತಿಳಿಸಿದ್ದಾರೆ.

ಶಿಬಿರಕ್ಕೆ ಪ್ರವೇಶವನ್ನು ನಿರ್ಬಂಧಿಸಿರುವುದಿಂದ ದೂರದ ಊರುಗಳಿಂದ ಬಂದ ಪ್ರವಾಸಿಗರು ನಿರಾಸೆಯಿಂದ ಹಿಂತಿರುಗುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !