ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಂಡಾಟ ಮೆರೆದ ಕಾಡಾನೆ ದುಬಾರೆ ಅತಿಥಿ!

ಮೇರಿ ಲ್ಯಾಂಡ್ ಎಸ್ಟೇಟ್‍ನಲ್ಲೇ ವಾಸ್ತವ್ಯ , ಅರಿವಳಿಕೆ ಚುಚ್ಚುಮದ್ದು ನೀಡಿ ಅರಣ್ಯ ಇಲಾಖೆಯಿಂದ ಸೆರೆ
Last Updated 28 ಮೇ 2019, 12:27 IST
ಅಕ್ಷರ ಗಾತ್ರ

ಸಿದ್ದಾಪುರ: ಕಾಫಿತೋಟದಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳ ಹಿಂಡಿನಲ್ಲಿದ್ದ ಪುಂಡಾನೆಯೊಂದನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ನೆಲ್ಯಹುದಿಕೇರಿ ಸಮೀಪದ ನಲ್ವತ್ತೆಕ್ರೆಯ ಮೇರಿ ಲ್ಯಾಂಡ್ ಎಸ್ಟೇಟ್‍ನಲ್ಲಿ ಕಳೆದ ಕೆಲವು ದಿನಗಳಿಂದ ಕಾಡಾನೆ ಹಿಂಡು ಬೀಡುಬಿಟ್ಟಿದ್ದು, ಕಾಡಾನೆ ಹಿಂಡಿನ ಪೈಕಿ ಹೆಣ್ಣಾನೆಯೊಂದು ಜನರಿಗೆ ಉಪಟಳ ನೀಡುತ್ತಿತ್ತು.

ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾಕಾನೆಯೊಂದಿಗೆ ಎರಡು ದಿನಗಳಿಂದ ನೆಲ್ಯಹುದಿಕೇರಿಯಲ್ಲಿ ಬೀಡುಬಿಟ್ಟಿದ್ದರು.

ದುಬಾರೆ ಹಾಗೂ ಮತ್ತಿಗೋಡು ಸಾಕಾನೆ ಶಿಬಿರದ ಸಾಕಾನೆಗಳಿಗೆ ಪೂಜೆ ಸಲ್ಲಿಸಿ ಬಳಿಕ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾಕಾನೆಗಳ ಮೆಲೇರಿ ಕಾರ್ಯಾಚರಣೆಗಿಳಿದರು.

ಮೇರಿಲ್ಯಾಂಡ್ ಕಾಫಿ ತೋಟದಲ್ಲಿ ಪುಂಡಾನೆ ಇರುವುದನ್ನು ಪತ್ತೆಹಚ್ಚಿ ಬಳಿಕ ಅರಣ್ಯ ವೈದ್ಯಾಧಿಕಾರಿ ಮುಜೀಬ್ ರೆಹಮಾನ್ ಪುಂಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡಿದರು. ಕಾಫಿ ತೋಟದ ಮಧ್ಯಭಾಗದಲ್ಲಿ ಪುಂಡಾನೆ ಇದ್ದು, ಅರಿವಳಿಕೆ ಚುಚ್ಚುಮದ್ದು ನೀಡಿದೊಡನೆ ಕಾಡಾನೆಯು ಸ್ವಲ್ಪ ದೂರ ಹೋಗಿ ನೆಲಕ್ಕುರುಳಿತ್ತು.

ಮತ್ತಿಗೋಡು ಸಾಕಾನೆ ಶಿಬಿರದ ಸಾಕಾನೆಗಳಾದ ಅಭಿಮನ್ಯು ಹಾಗೂ ಕೃಷ್ಣ, ದುಬಾರೆ ಸಾಕಾನೆ ಶಿಬಿರದ ಸಾಕಾನೆಗಳಾದ ಹರ್ಷ, ಧನಂಜಯ, ಲಕ್ಷ್ಮಣ, ಈಶ್ವರ, ಅಜ್ಜಯ್ಯ, ವಿಕ್ರಂ ಸಹಾಯದಿಂದ ಸೆರೆ ಹಿಡಿಯಲಾಗಿದ್ದ ಹೆಣ್ಣಾನೆಯನ್ನು ಹಗ್ಗದ ಮೂಲಕ ಕಟ್ಟಿ ಎಳೆದುಕೊಂಡು ಬರಲಾಯಿತು.

ಸೆರೆಯಾದ ಕಾಡಾನೆಯು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದು, ಸಾಕಾನೆಗಳು ಹಗ್ಗವನ್ನು ಬಿಗಿಯಾಗಿ ಎಳೆದು, ಹಿಂಬದಿಯಿಂದ ದೂಕಿಕೊಂಡು ಮುಖ್ಯ ರಸ್ತೆಗೆ ತರಲಾಯಿತು.

ಮುಖ್ಯರಸ್ತೆಯಲ್ಲಿಯೂ ಕೂಡ ಸೆರೆಯಾದ ಕಾಡಾನೆ ತಪ್ಪಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡಿತ್ತು. ಸಾಕಾನೆಗಳ ಮಾವುತರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳ ಸಹಕಾರದೊಂದಿಗೆ ಕಾಡಾನೆಯನ್ನು ಲಾರಿಗೆ ಹತ್ತಿಸಲಾಗಿ, ದುಬಾರೆಯ ಸಾಕಾನೆ ಶಿಬಿರಕ್ಕೆ ಸಾಗಿಸಲಾಯಿತು.

ಕಾರ್ಯಾಚರಣೆಯಲ್ಲಿ ಸೋಮವಾರಪೇಟೆ ವಿಭಾಗದ ಎ.ಸಿ.ಎಫ್. ಚಿಣ್ಣಪ್ಪ, ಆರ್‌ಎಫ್‌ಒ ಅರುಣ, ಉಪ ವಲಯ ಅರಣ್ಯಾಧಿಕಾರಿ ರಂಜನ್, ವಿಲಾಸ್ ಗೌಡ ಹಾಗೂ ಸಿಬ್ಬಂದಿಗಳು ಮತ್ತು ಮಾವುತರು ಸೇರಿ 70 ಮಂದಿ ಭಾಗವಹಿಸಿದ್ದರು.

20 ವರ್ಷ ಪ್ರಾಯದ ಹೆಣ್ಣಾನೆ: ನೆಲ್ಯಹುದಿಕೇರಿಯ ಮೇರಿ ಲ್ಯಾಂಡ ಕಾಫಿ ತೋಟದಲ್ಲಿ ಸೆರೆಹಿಡಿಯಲಾದ ಕಾಡಾನೆಯು ಅಂದಾಜು 20 ವರ್ಷ ಪ್ರಾಯವಾಗಿದ್ದು, ಆರೋಗ್ಯವಂತ ಆನೆಯಾಗಿದೆ ಎಂದು ಅರಣ್ಯ ವೈದ್ಯಾಧಿಕಾರಿ ಮುಜೀಬ್ ರೆಹಮಾನ್ ತಿಳಿಸಿದ್ದಾರೆ.

ನೆಲ್ಯಹುದಿಕೇರಿ, ಅಭ್ಯತ್ ಮಂಗಲ ವ್ಯಾಪ್ತಿಯಲ್ಲಿ ಬೀಡುಬಿಟ್ಟಿದ್ದ 4 ಕಾಡಾನೆಗಳ ಪೈಕಿ ಸೆರೆಯಾದ ಕಾಡಾನೆ ಜನಸಾಮಾನ್ಯರಿಗೆ ಉಪಟಳ ನೀಡುತ್ತಿತ್ತು.

ಮತ್ತೊಂದು ಪುಂಡಾನೆ ಸೆರೆಗೆ ಸಜ್ಜು: ಕುಶಾಲನಗರ ಅರಣ್ಯ ವ್ಯಾಪ್ತಿಯಲ್ಲಿ ಒಟ್ಟು 2 ಪುಂಡಾನೆಗಳನ್ನು ಸೆರೆ ಹಿಡಿಯಲು ಸರ್ಕಾರ ಅನುಮತಿ ನೀಡಿದ್ದು, ಈಗಾಗಲೇ ಒಂದು ಪುಂಡಾನೆಯನ್ನು ಸೆರೆ ಹಿಡಿಯಲಾಗಿದೆ. ಮತ್ತೊಂದು ಪುಂಡಾನೆಯು ಸುಂಟಿಕೊಪ್ಪ ಬಳಿಯ ಮೋದೂರಿನಲ್ಲಿ ಇದೆ ಎಂಬ ಮಾಹಿತಿ ಇದ್ದು, ಸೆರೆ ಹಿಡಿಯುವ ಕಾರ್ಯಾಚರಣೆಯನ್ನು ಕೂಡಲೇ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT