ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಪೆ ಕಾಮಗಾರಿಗೆ ಹಿಡಿದ ಕನ್ನಡಿ : ಆರೋಪ

ಅರಣ್ಯದ ನಡುವಿನ ರೈಲ್ವೆ ಕಂಬಿ ಗೇಟ್ ಮುರಿದ ಕಾಡಾನೆ
Last Updated 3 ಮೇ 2020, 15:19 IST
ಅಕ್ಷರ ಗಾತ್ರ

ಗೋಣಿಕೊಪ್ಪಲು : ಕಾಡಾನೆಗಳು ಅರಣ್ಯದಿಂದ ಹೊರಗೆ ಬರದಂತೆ ಎಂಬ ಉದ್ದೇಶದಿಂದ ಅರಣ್ಯ ಇಲಾಖೆ ನಿರ್ಮಿಸಿರುವ ರೈಲ್ವೆ ಕಂಬಿ ಗೇಟ್ ಅನ್ನು ಕಾಡಾನೆಗಳೇ ಮುರಿದು ಹಾಕಿರುವ ಘಟನೆ ತಿತಿಮತಿ ಸಮೀಪದ ಜಂಗಲ್ ಹಾಡಿಯಲ್ಲಿ ಜರುಗಿದೆ.

ಅರಣ್ಯದೊಳಗಿರುವ ಜನರ ಓಡಾಟಕ್ಕೆ ಅನುಕೂಲವಾಗಲಿ ಎಂದು ಹಾಡಿ ಹಾದಿಗೆ ರೈಲ್ವೆ ಕಂಬಿಯಿಂದಲೇ ಗೇಟ್ ಅಳವಡಿಸಲಾಗಿತ್ತು. ಶನಿವಾರ ರಾತ್ರಿ ಗೇಟ್ ಬಳಿಗೆ ಬಂದಿರುವ ಕಾಡಾನೆಗಳ ಹಿಂಡು ಗೇಟ್ ಗೆ ಆಧಾರವಾಗಿ ನಿಲ್ಲಿಸಿದ್ದ ರೈಲ್ವೆ ಕಂಬಿಯನ್ನು ಮುರಿದು ಗೇಟ್ ಅನ್ನು ಒದ್ದು ದೂರ ಎಸೆದಿವೆ.ಇದೀಗ ಎತ್ತಲಾರದ ಸ್ಥಿತಿಯಲ್ಲಿ ಭಾರಿ ಪ್ರಮಾಣದ ಗೇಟ್ ರಸ್ತೆಯಲ್ಲೇ ಬಿದ್ದಿದೆ. ಆನೆಗಳು ಗೇಟ್ ಒಳಗೆ ನುಗ್ಗಿ ಕಾಫಿ ತೋಟದತ್ತ ಸರಾಗವಾಗಿ ಬರುತ್ತಿವೆ.

ಕಾಡಾನೆಗಳು ನಿರಂತರವಾಗಿ ಓಡಾಡುತ್ತಿದ್ದ ಚೆಕ್ಕೇರ ಕಾಫಿತೋಟ ಚಾಮುಂಡಿ ಮೂಲೆಯಿಂದ ಜಂಗಲ್ ಹಾಡಿ ಕುಂಜಿ ರಾಮನ ಕೆರೆ ವರೆಗೆ 2.8 ಕಿಮೀ ದೂರ ಒಂದು ವರ್ಷದ ಹಿಂದೆ ರೈಲ್ವೆ ಕಂಬಿ ನಿರ್ಮಿಸಲಾಗಿದೆ.ಅರಣ್ಯದೊಳಗೆ ನೂರಾರು ವರ್ಷಗಳಿಂದ ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿರುವ ಬುಡಕಟ್ಟು ಜನರ ಓಡಾಟಕ್ಕೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಹಾಡಿ ಹಾದಿಯಲ್ಲಿ ಗೇಟ್ ಅಳವಡಿಸಲಾಗಿತ್ತು. ಈ ಗೇಟ್ ಗೆ ಸಂಜೆ ಅರಣ್ಯ ಇಲಾಖೆಯವರು ಬೀಗ ಹಾಕುತ್ತಿದ್ದರು. ಬೆಳಿಗ್ಗೆ 7 ಗಂಟೆಗೆ ಬಂದು ತೆರೆಯುತ್ತಿದ್ದರು.

ರೈಲ್ವೆ ಕಂಬಿ ನಿರ್ಮಾಣದಿಂದ ಆನೆಗಳು ಕಾಫಿ ತೋಟದತ್ತ ಬರುವುದಕ್ಕೆ ತುಸು ತೊಡಕಾಗಿತ್ತು. ಇದನ್ನು ಅರಿತ ಕಾಡಾನೆಗಳು ಆಕ್ರೋಶಗೊಂಡು ಈಗ ಗೇಟ್ ಅನ್ನೇ ಒದ್ದು ಬೀಳಿಸಿವೆ.

ಕಳಪೆ ಕಾಮಗಾರಿ : ಈ ಬಗ್ಗೆ ಪ್ರಜಾವಾಣಿಯೊಂದಿಗೆ ಮಾತನಾಡಿದ ನೊಕ್ಯದ ಕಾಫಿ ಬೆಳೆಗಾರ ಹಾಗೂ ಜಿಲ್ಲಾ ರೈತ ಸಂಘದ ಪದಾಧಿಕಾರಿ ಚೆಪ್ಪುಡೀರ ಕಾರ್ಯಪ್ಪ, 2019 ಜನವರಿಯಲ್ಲಿ ಕೇಂದ್ರ ಸರ್ಕಾರದ ಸೂಚನೆಯಂತೆ ಕಾಡಾನೆಗಳನ್ನು ನಿಯಂತ್ರಿಸಲು ರೈಲ್ವೆ ಕಂಬಿಯ ಬ್ಯಾರಿ ಕೇಡ್ ನಿರ್ಮಿಸಲಾಯಿತು. ಅಂದಾಜು ₹1.50 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕಾಮಗಾರಿ ಸಂಪೂರ್ಣವಾಗಿ ಕಳಪೆ ಗುಣಮಟ್ಟದ್ದಾಗಿದೆ. ಬೃಹತ್ ಗಾತ್ರದ ಕಬ್ಬಿಣದ ಕಂಬಿಗಳನ್ನು ಆಳವಾಗಿ ನೆಟ್ಟಿಲ್ಲ. ಜತೆಗೆ ಬಳಸಿರುವ ನೆಟ್ ಬೋಲ್ಟ್‌ಗಳು ತೀರ ಕಳಪೆ ಮಟ್ಟದ್ದಾಗಿವೆ. ಕಂಬಿಗಳಿಗೆ ಗುಣಮಟ್ಟದಲ್ಲಿ ಬೆಸುಗೆ ಕೂಡ ಹಾಕಲಾಗಿಲ್ಲ ಎಂದು ದೂರಿದರು.

ಕುಂಜಿರಾಮನ ಕೆರೆಯ ದಡದ ಮೇಲೆ ರೈಲ್ವೆ ಕಂಬಿ ಅಳವಡಿಸಲಾಗಿದೆ. ಆದರೆ ಆನೆಗಳು ಕೆರೆ ಒಳಗಿನಿಂದ ಬಗ್ಗಿಕೊಂಡು ರೈಲ್ವೆ ಕಂಬಿ ದಾಟುತ್ತಿವೆ. ಕೆರೆಯ ಒಳಗೆ ಇನ್ನೊಂದು ಕಂಬಿ ನೆಟ್ಟಿದ್ದರೆ ಆನೆ ನುಸುಳುವಿಕೆಯನ್ನು ತಡೆಗಟ್ಟಬಹುದಿತ್ತು ಎಂದು ಹೇಳಿದರು.

ಕಾಡಾನೆಗಳ ಹಾವಳಿಯನ್ನು ಶಾಶ್ವತವಾಗಿ ತಡೆಗಟ್ಟುವ ಸರ್ಕಾರದ ದೂರ ದೃಷ್ಟಿಯ ಯೋಜನೆ ಅಧಿಕಾರಿಗಳ ದಿವ್ಯ ನಿರ್ಲಕ್ಷದಿಂದ ಹೇಗೆ ಹಳ್ಳ ಹಿಡಿಯುತ್ತವೆ ಎಂಬುದಕ್ಕೆ ಇದು ಪ್ರಮುಖ ಸಾಕ್ಷಿಯಾಗಿದೆ. ಕಾಮಗಾರಿ ನಡೆಯುವಾಗಲೇ ಕಳಪೆ ಗುಣಮಟ್ಟದ ಬಗ್ಗೆ ಅರಣ್ಯಾಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಆದರೂ ಅವರು ಕಿವಿಗೆ ಹಾಕಿಕೊಳ್ಳಲಿಲ್ಲ. ಈ ಯೋಜನೆಯಲ್ಲಿ ಭಾರಿ ಪ್ರಮಾಣದ ಭ್ರಷ್ಟಾಚಾರ ನಡೆದಿದೆ. ಇದರ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.

ಅರಣ್ಯಾಧಿಕಾರಿ ಸ್ಪಷ್ಟನೆ: ಈ ಬಗ್ಗೆ ನಾಗರಹೊಳೆ ವನ್ಯ ಜೀವಿ ವಿಭಾಗದ ಎಸಿಎಫ್ ಪ್ರಸನ್ನಕುಮಾರ್ ಪ್ರತಿಕ್ರಿಯಿಸಿ, ತಜ್ಞರಿಂದ ಪರಿಶೀಲನೆ ನಡೆದು ಅನುಮೋದನೆಗೊಂಡ ಬಳಿಕ ಕಾಮಗಾರಿ ಆರಂಭಿಸಲಾಯಿತು. ಬಳಸಿರುವ ಸಾಮಗ್ರಿಗಳ ಗುಣಮಟ್ಟದ ಬಗ್ಗೆ ಬಾಹ್ಯ ತಜ್ಞರಿಂದಲೂ ಪರಿಶೀಲನೆ ನಡೆದಿದೆ. ಕಾಮಗಾರಿ ಮತ್ತು ವಸ್ತುಗಳೆಲ್ಲವೂ ಗುಣಮಟ್ಟದಿಂದಲೇ ಕೂಡಿದೆ.ಆದರೆ ಆನೆಗಳು ಸುಮಾರು 5 ಸಾವಿರ ಕಿಲೋ ತೂಕ ಇರುವುದರಿಂದ ಐದಾರು ಆನೆಗಳು ಒಟ್ಟಿಗೆ ಸೇರಿ ನೂಕಿದಾಗ ಕಂಬಿಗಳ ಬೆಸುಗೆ ಬಿಟ್ಟು ಹೋಗುವ ಸಾಧ್ಯತೆ ಇರುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT