ಖಾಸಗಿ ಬಸ್‌ಗೆ ಆನೆ ‘ರಂಗ’ ಬಲಿ

7
ಮತ್ತಿಗೋಡು ಆನೆ ಶಿಬಿರದ ಬಳಿ ಬೆಳಗಿನ ಜಾವ ನಡೆದ ದುರ್ಘಟನೆ

ಖಾಸಗಿ ಬಸ್‌ಗೆ ಆನೆ ‘ರಂಗ’ ಬಲಿ

Published:
Updated:
Deccan Herald

ಹುಣಸೂರು: ನಾಗರಹೊಳೆ ಹುಲಿ ರಕ್ಷಿತಾರಣ್ಯದ ಮತ್ತಿಗೋಡು ಆನೆ ಶಿಬಿರದ ಬಳಿ ಸೋಮವಾರ ಬೆಳಗಿನ ಜಾವ 2.30ಕ್ಕೆ ಖಾಸಗಿ ಬಸ್‌ ಡಿಕ್ಕಿ ಹೊಡೆದು ಸಾವು, ಬದುಕಿನ ಮಧ್ಯೆ ಹೋರಾಟ ನಡೆಸಿದ್ದ 46 ವರ್ಷದ ಗಂಡು ಸಾಕಾನೆ ‘ರಂಗ’ ಕೊನೆಗೂ ಬದುಕುಳಿಯಲಿಲ್ಲ.

ಆನೆಚೌಕೂರು ವಲಯದ ಮತ್ತಿಗೋಡು ಆನೆ ಶಿಬಿರದಿಂದ 100 ಮೀಟರ್‌ ದೂರದಲ್ಲಿ ನಸುಕಿನಲ್ಲಿ ರಸ್ತೆ ದಾಟುತ್ತಿದ್ದ ಆನೆಗೆ ಕೇರಳದ ಕಣ್ಣೂರಿ
ನಿಂದ ವಿರಾಜಪೇಟೆ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದ ಬಸ್‌ ಡಿಕ್ಕಿ ಹೊಡೆದಿದೆ.

ಅಫಘಾತದಲ್ಲಿ ಬೆನ್ನು ಮೂಳೆ ಮುರಿದಕೊಂಡು ರೋದಿಸುತ್ತ ನಡು ರಸ್ತೆಯಲ್ಲೇ ಉರುಳಿ ಬಿದ್ದ ರಂಗನನ್ನು ಶಿಬಿರದಲ್ಲಿದ್ದ ಅರಣ್ಯ ಸಿಬ್ಬಂದಿ, ಮಾವುತರು ಇತರ ಸಾಕಾನೆಗಳ ಸಹಾಯದೊಂದಿಗೆ ರಸ್ತೆ ಪಕ್ಕಕ್ಕೆ ಸಾಗಿಸಿದರು.

ಸ್ಥಳಕ್ಕೆ ಧಾವಿಸಿದ ಪಶು ವೈದ್ಯಾಧಿಕಾರಿ ಡಾ. ಮುಜಿಬ್ ರೆಹಮಾನ್‌ ಚಿಕಿತ್ಸೆ ನೀಡಿದರೂ ಸ್ಪಂದಿಸದ ‘ರಂಗ‘ ಬೆಳಿಗ್ಗೆ 8.30ಕ್ಕೆ ಸಾವನ್ನಪ್ಪಿತು. ಇದರಿಂದ ಶಿಬಿರದ ಆನೆಗಳ ಸಂಖ್ಯೆ 24ಕ್ಕೆ ಇಳಿದಿದೆ.

ಆನೆಯ ಬೆನ್ನುಮೂಳೆ ಮುರಿದು, ಚಪ್ಪೆ ಮತ್ತು ಬೆನ್ನಿನಲ್ಲಿ 10 ಇಂಚಿನಷ್ಟು ಆಳವಾದ ಗಾಯಗಳಾಗಿದ್ದವು ಎಂದು ಡಾ. ಮುಜಿಬ್‌ ತಿಳಿಸಿದ್ದಾರೆ.

ಬಸ್‌ ಚಾಲಕ ಇಸ್ಮಾಯಿಲ್‌ ನಾಲಕತ್‌ ಎಂಬುವರನ್ನು ಪೊನ್ನಂಪೇಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಡೀಪುರ ರಾತ್ರಿ ಸಂಚಾರ ನಿಷೇಧ ತೆರವಿಗೆ ರಾಜ್ಯ ಹೈಕೋರ್ಟ್‌ ಮೆಟ್ಟಿಲನ್ನು ಏರಿದವರಲ್ಲಿ ಈ ಬಸ್‌ ಮಾಲೀಕರು ಸಹ ಒಬ್ಬರು ಎನ್ನಲಾಗಿದೆ.

ಅಫಘಾತಕ್ಕೆ ಕಾರಣ ಏನು?: ‘ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ರಾತ್ರಿ ಸಂಚಾರ ನಿಷೇಧಿಸಿದ ಬಳಿಕ ಕೇರಳದ ವಾಹನಗಳು ಹೆಚ್ಚಾಗಿ ಗೋಣಿಕೊಪ್ಪಲು ಮಾರ್ಗವಾಗಿ ಸಂಚರಿಸುತ್ತಿವೆ. ರಾತ್ರಿ ಸಂಚರಿಸುವ ವಾಹನಗಳಿಗೆ ನಿರ್ಬಂಧ ಇಲ್ಲದಿರುವುದರಿಂದ ವೇಗವಾಗಿ ನುಗ್ಗುತ್ತವೆ. ಇದರಿಂದ ಅಪಘಾತ ಸಂಭವಿಸಿದೆ’ ಎಂದು ಎ.ಸಿ.ಎಫ್‌ ಪ್ರಸನ್ನ ಕುಮಾರ್ ತಿಳಿಸಿದರು.

ಮತ್ತಿಗೋಡು ಶಿಬಿರದ ಮುಂಭಾಗ ರಾಷ್ಟ್ರೀಯ ಉದ್ಯಾನವಿದ್ದರೆ, ಮತ್ತೊಂದು ಬದಿ ವಿರಾಜಪೇಟೆ ವಿಭಾಗದ ತಿತಿಮತಿ ಪ್ರಾದೇಶಿಕ ವಲಯದ ದೇವಮಚ್ಚಿ ಮೀಸಲು ಅರಣ್ಯವಿದೆ. ಈ ಮಾರ್ಗದಲ್ಲಿ ಸಾಮಾನ್ಯವಾಗಿ ಕಾಡಾನೆಗಳು ರಸ್ತೆ ದಾಟುತ್ತವೆ ಆನೆಚೌಕೂರು ಅರಣ್ಯ ಪ್ರದೇಶದಲ್ಲಿ 2015ರಲ್ಲಿ ವಾಹನ ಡಿಕ್ಕಿ ಹೊಡೆದು ‍ಕಾಡೆಮ್ಮೆಯೊಂದು ಸಾವನ್ನಪ್ಪಿತ್ತು.

ಭವಿಷ್ಯದ ದಸರಾ ಆನೆ

ಪುಂಡಾನೆಯಾಗಿ ’ರೌಡಿ ರಂಗ’ ಎಂದೇ ಹೆಸರು ಪಡೆದಿದ್ದ ಆನೆಯನ್ನು ರಾಮನಗರ ಜಿಲ್ಲೆಯಲ್ಲಿ ಸೆರೆ ಹಿಡಿದು ಕಳೆದ 2 ವರ್ಷಗಳಿಂದ ಮತ್ತಿಗೋಡು ಆನೆ ಶಿಬಿರದಲ್ಲಿ ಪಳಗಿಸಲಾಗಿತ್ತು.

ಈ ವರ್ಷದ ದಸರಾಕ್ಕೆ ಆಯ್ಕೆಯಾದ ಆನೆಗಳ ಪಟ್ಟಿಯಿಂದ ರಂಗನನ್ನು ಕೊನೆಯ ಕ್ಷಣದಲ್ಲಿ ಕೈಬಿಡಲಾಗಿತ್ತು.

ಮುಂದಿನ ವರ್ಷಗಳಲ್ಲಿ ಮೈಸೂರು ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳ ತಂಡಕ್ಕೆ ಸೇರಿಸುವ ಪ್ರಯತ್ನ ನಡೆದಿತ್ತು.

* ರಸ್ತೆಗಳಲ್ಲಿ ವೈಜ್ಞಾನಿಕ ರೀತಿಯಲ್ಲಿ ಉಬ್ಬುಗಳನ್ನು ಹಾಕುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

-ಸಾ.ರಾ.ಮಹೇಶ್, ಪ್ರವಾಸೋದ್ಯಮ ಸಚಿವ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 9

  Sad
 • 1

  Frustrated
 • 5

  Angry

Comments:

0 comments

Write the first review for this !