ಶಾಲಾ ಆವರಣದಲ್ಲಿ ಗಜಪಡೆ ದರ್ಶನ

7
ರಕ್ಷಣೆಗೆ ಮೊರೆಯಿಟ್ಟ ವಿದ್ಯಾರ್ಥಿಗಳು, ಪೋಷಕರು

ಶಾಲಾ ಆವರಣದಲ್ಲಿ ಗಜಪಡೆ ದರ್ಶನ

Published:
Updated:
ಕೊಡಗು ಜಿಲ್ಲೆ, ಸಿದ್ದಾಪುರ ಸಮೀಪದ ಗುಹ್ಯ ಸರ್ಕಾರಿ ಶಾಲಾ ಆವರಣದಿಂದ ಸೋಮವಾರ ಸಂಜೆ ಹೊರಬಂದ ಕಾಡಾನೆ ಹಿಂಡು

ಮಡಿಕೇರಿ: ವಿರಾಜಪೇಟೆ ತಾಲ್ಲೂಕು ಸಿದ್ದಾಪುರ ಸಮೀಪದ ಗುಹ್ಯ ಸರ್ಕಾರಿ ಶಾಲಾ ಆವರಣಕ್ಕೆ ಕಾಡಾನೆಗಳು ನುಗ್ಗಿದ್ದ ಪ್ರಕರಣದಿಂದ ಆತಂಕಕ್ಕೀಡಾಗಿರುವ ಪೋಷಕರು, ಶಾಲಾ ಶಿಕ್ಷಕರು ರಕ್ಷಣೆಗೆ ಮೊರೆಯಿಟ್ಟಿದ್ದಾರೆ.

ಸೋಮವಾರ ಸಂಜೆ ಸುರಿಯುವ ಮಳೆಯ ನಡುವೆ ಮರಿಯಾನೆ ಸಹಿತ ನಾಲ್ಕು ಕಾಡಾನೆಗಳು ಕಾಫಿ ಎಸ್ಟೇಟ್‌ನಿಂದ ಶಾಲಾ ಆವರಣಕ್ಕೆ ನುಗ್ಗಿದ್ದವು. ಸ್ಥಳೀಯರು ತೆಗೆದ ಆ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಶಾಲೆಯ ಶಿಕ್ಷಕರು, ಪೋಷಕರು ಹಾಗೂ ಶಾಲಾ ಮೇಲುಸ್ತುವಾರಿ ಸಮಿತಿ ಸದಸ್ಯರು ಮಡಿಕೇರಿ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್‌. ಗಾಯತ್ರಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

‘ಶಾಲೆಯ ಸುತ್ತ ಕಾಫಿ ತೋಟಗಳಿದ್ದು ಹಲಸಿನ ಹಣ್ಣಿನ ಆಸೆಗೆ ಕಾಡಾನೆಗಳು ಬರುತ್ತಿವೆ. ನಿತ್ಯವೂ ನಾವು ಆತಂಕದಿಂದಲೇ ಕಾಲ ಕಳೆಯುತ್ತಿದ್ದೇವೆ. ಶಾಲಾ ಆವರಣಕ್ಕೆ ಸೋಲಾರ್‌ ಬೇಲಿ ನಿರ್ಮಿಸಬೇಕು’ ಎಂದು ಶಿಕ್ಷಕರು ಕೋರಿದರು. ‘ಶಿಕ್ಷಣದಿಂದ ವಂಚಿತರಾದರೂ ಸರಿಯೇ. ಈ ಶಾಲೆಗೆ ಮಾತ್ರ ಮಕ್ಕಳನ್ನು ಕಳುಹಿಸುವುದಿಲ್ಲ ಎಂದು ಪೋಷಕರು ಹೇಳುತ್ತಾರೆ. ವಾರದಿಂದ ಶಾಲೆಯ ಸುತ್ತಮುತ್ತಲೇ ಕಾಡಾನೆಗಳು ಸುಳಿದಾಡುತ್ತಿವೆ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಆತಂಕದಲ್ಲಿದ್ದಾರೆ’ ಎಂದು ಎಸ್‌ಡಿಎಂಸಿ ಸದಸ್ಯರು ಅಳಲು ತೋಡಿಕೊಂಡರು.

‘ಗುಹ್ಯ ಭಾಗದಿಂದ ಮಕ್ಕಳನ್ನು ಶಾಲೆಗೆ ಕರೆತರಲು ಅರಣ್ಯ ಇಲಾಖೆ ವಾಹನ ವ್ಯವಸ್ಥೆ ಕಲ್ಪಿಸಿದೆ. ಪಳ್ಳಕೆರೆ ಭಾಗಕ್ಕೂ ವಾಹನ ವ್ಯವಸ್ಥೆ ಮಾಡಬೇಕು. ಆನೆಗಳು ನಾಡಿಗೆ ನುಗ್ಗುತ್ತಿದ್ದರೂ ಅರಣ್ಯ ಇಲಾಖೆಯವರು ಮತ್ತೆ ಕಾಡಿಗೆ ಅಟ್ಟುವ ಕೆಲಸ ಮಾಡುತ್ತಿಲ್ಲ. ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾಗಿದೆ’ ಎಂದು ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ವೆಂಕಟೇಶ್ ಅಲವತ್ತುಕೊಂಡರು.

ಕಾಡಾನೆ ಹಾವಳಿಯ ಅರಿವಿದ್ದು ಶಾಲಾ ವಿದ್ಯಾರ್ಥಿಗಳಿಗೆ ರಕ್ಷಣೆ ಒದಗಿಸಲು ಶಿಕ್ಷಣ ಇಲಾಖೆ ಬದ್ಧವಿದೆ. ಹಿರಿಯ ಅಧಿಕಾರಿಗಳ ಜತೆಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.
ಟಿ.ಎನ್. ಗಾಯತ್ರಿ, ಕ್ಷೇತ್ರ ಶಿಕ್ಷಣಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !