ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡಗೋಡ: ಕೆರೆಯಿಂದ ಹೆಣ್ಣಾನೆ ರಕ್ಷಿಸಲು ಹರಸಾಹಸ

ಕಿವಿಯ ಹತ್ತಿರ ಹುಳಗಳು ಕಾಣಿಸಿಕೊಂಡು ನರಳಾಟ
Last Updated 29 ಏಪ್ರಿಲ್ 2020, 17:45 IST
ಅಕ್ಷರ ಗಾತ್ರ

ಮುಂಡಗೋಡ: ತಾಲ್ಲೂಕಿನ ಗುಂಜಾವತಿ ಅರಣ್ಯ ವ್ಯಾಪ್ತಿಯ ಹೆಣ್ಣಾನೆಯೊಂದು ಕೆರೆಯಲ್ಲಿ ನಡೆಯಲು ಆಗದೇ ನೀರಿನಲ್ಲಿ ಹೊರಳಾಡುತ್ತಿದೆ. ಅದನ್ನು ಕೆರೆಯಿಂದ ಹೊರಬರುವಂತೆ ಮಾಡಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

ಇಲ್ಲಿನ ಅರಳಿಕಟ್ಟೆ ಕೆರೆಯಲ್ಲಿರುವ ಹೆಣ್ಣಾನೆ ನಿತ್ರಾಣಗೊಂಡ ಸ್ಥಿತಿಯಲ್ಲಿರುವುದು ಬುಧವಾರ ಕಂಡುಬಂದಿದೆ. ಅದಕ್ಕೆ12ರಿಂದ 15 ವರ್ಷ ಆಗಿರಬಹುದು. ಇಡೀದಿನ ಕೆರೆಯಲ್ಲಿಯೇ ಹೊರಳಾಡುತ್ತಿದ್ದ ಆನೆ, ಮೇಲೇಳುವ ಪ್ರಯತ್ನ ಮಾಡುತ್ತಿದ್ದಂತೆ ಕುಸಿದು ನೀರಿಗೆ ಬೀಳುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳದಲ್ಲಿಯೇ ಇದ್ದು, ಅದನ್ನು ರಕ್ಷಿಸುವ ಪ್ರಯತ್ನ ಮಾಡುತ್ತಿದ್ದಾರೆ.

‘ಒಂದು ವಾರದ ಹಿಂದೆ ಇದೇ ಅರಣ್ಯ ವ್ಯಾಪ್ತಿಯಲ್ಲಿ ಕಿವಿ ಹತ್ತಿರ ಹುಳಗಳು ಕಾಣಿಸಿಕೊಂಡ ಸ್ಥಿತಿಯಲ್ಲಿ ಈ ಆನೆ ಕಾಣಿಸಿಕೊಂಡಿತ್ತು. ಅರಣ್ಯ ಇಲಾಖೆಯ ಸಿಬ್ಬಂದಿ ರಕ್ಷಿಸಲೆಂದು ಹತ್ತಿರ ಹೋದಾಗ ಪ್ರತಿರೋಧ ತೋರಿತ್ತು. ಅಂದಿನಿಂದ ನೂರಾರು ಮೀಟರ್ ಅಂತರದಲ್ಲಿಯೇ ಸುತ್ತಾಡುತ್ತಿದೆ. ಕೆರೆಯಿಂದ ಕೆರೆಗೆ ಜಾಗ ಬದಲಿಸುತ್ತ ನೋವು ನಿವಾರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಅದರ ನರಳಾಟ ನೋಡಿದರೆ ಕಣ್ಣೀರು ಬರುತ್ತಿದೆ’ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

‘ಆನೆಯು ತನ್ನ ಕಿವಿಯ ಹತ್ತಿರ ಹುಳ ಬಿದ್ದಿರುವ ಭಾಗವನ್ನು ನೀರಿನಲ್ಲಿ ಮುಳುಗಿಸಿಕೊಂಡು, ಆಗಾಗ ಸೊಂಡಿಲಿನಿಂದ ನೀರನ್ನು ಮೈಮೇಲೆ ಹಾಕಿಕೊಳ್ಳುತ್ತಿದೆ. ಕಟ್ಟಿಗೆಯಿಂದ ಸ್ಪರ್ಶಿಸಲು ಹೋದರೆ ಪ್ರತಿರೋಧ ತೋರುತ್ತಿದೆ’ ಎಂದು ಅರಣ್ಯ ಸಿಬ್ಬಂದಿ ಹೇಳಿದರು.

ನೀರು ಖಾಲಿ ಮಾಡಿದರು:‘ಕೆರೆಯಿಂದ ಮೇಲೇಳಲು ಅನುಕೂಲ ಆಗುವಂತೆ ಹಾಗೂ ಆನೆಯ ಕಾಲು ಕಾಣಿಸುವ ಹಂತದವರೆಗೆ ನೀರನ್ನು ಖಾಲಿ ಮಾಡಲಾಗಿದೆ. ಅದರ ಕಾಲುಗಳು ಕೆಸರಿನಲ್ಲಿ ಸಿಲುಕಿಲ್ಲ. ಕೆರೆಯಿಂದ ಎದ್ದು ಬರುವುದನ್ನು ಕಾಯುತ್ತಿದ್ದೇವೆ.ದಡದಲ್ಲಿ ಭತ್ತ ಹಾಗೂ ಹುಲ್ಲನ್ನು ತಂದು ಇಡಲಾಗಿದೆ. ಆನೆಯನ್ನು ರಕ್ಷಿಸಲು ಎಲ್ಲ ಪ್ರಯತ್ನವನ್ನು ಮಾಡಲಾಗುತ್ತಿದೆ’ ಎಂದು ವಲಯ ಅರಣ್ಯಾಧಿಕಾರಿ ಸುರೇಶ ಕುಲ್ಲೋಳ್ಳಿ ಹೇಳಿದರು.

‘ಹೆಣ್ಣಾನೆ ಕೆರೆಯಲ್ಲಿ ನಿತ್ರಾಣಗೊಂಡ ಸ್ಥಿತಿಯಲ್ಲಿ ಇರುವುದು ಕಂಡುಬಂದಿದೆ. ಅದರ ಚಲನವಲನವನ್ನು ಗಮನಿಸಲಾಗುತ್ತಿದ್ದು, ಅಗತ್ಯವಿದ್ದರೆ ಚಿಕಿತ್ಸೆ ಕೊಡಿಸಲಾಗುವುದು’ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಂ.ವಾಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT