ಸಾಕಾನೆ ‘ರಂಗ’ ಸಾವು ಪ್ರಕರಣ: ಕಲ್ಪಕಾ ಬಸ್‌ ಚಾಲಕನಿಗೆ ಜಾಮೀನು

7
‘ಮತ್ತಿಗೋಡು ಶಿಬಿರ ಸ್ಥಳಾಂತರ ಇಲ್ಲ’

ಸಾಕಾನೆ ‘ರಂಗ’ ಸಾವು ಪ್ರಕರಣ: ಕಲ್ಪಕಾ ಬಸ್‌ ಚಾಲಕನಿಗೆ ಜಾಮೀನು

Published:
Updated:

ಗೋಣಿಕೊಪ್ಪಲು: ಕೊಡಗು ಜಿಲ್ಲೆಯ ಮತ್ತಿಗೋಡು ಸಾಕಾನೆ ಶಿಬಿರದ ಬಳಿ ನಡೆದಿದ್ದ ಸಾಕಾನೆ ‘ರಂಗ’ ಸಾವು ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದ ಕೇರಳದ ಖಾಸಗಿ ಬಸ್ ಚಾಲಕ ಇಸ್ಮಾಯಿಲ್‌ಗೆ ಪೊನ್ನಂಪೇಟೆ ನ್ಯಾಯಾಲಯವು ಮಂಗಳವಾರ ಜಾಮೀನು ಮಂಜೂರು ಮಾಡಿದೆ.

ಗೋಣಿಕೊಪ್ಪಲು ಕಡೆಯಿಂದ ಹುಣಸೂರು ಕಡೆಗೆ ತೆರಳುತ್ತಿದ್ದ ಕಲ್ಪಕಾ ಖಾಸಗಿ ಬಸ್, ಮತ್ತಿಗೋಡು ಶಿಬಿರದ ಬಳಿ ಸಾಕಾನೆಗೆ ಡಿಕ್ಕಿ ಹೊಡೆದು ಅದು ಮೃತಪಟ್ಟಿತ್ತು. ಬಸ್‌ ಚಾಲಕನನ್ನು ಪೊನ್ನಂಪೇಟೆ ಪೊಲೀಸರು ಅಂದೇ ಬಂಧಿಸಿದ್ದರು.

ಅಧಿಕಾರಿಗಳ ಸ್ಪಷ್ಟನೆ: ಸಾಕಾನೆ ಶಿಬಿರವು ಸುರಕ್ಷಿತ ಪ್ರದೇಶದಲ್ಲಿ ಇಲ್ಲ. ಇದೇ ಕಾರಣದಿಂದ ಶಿಬಿರವನ್ನು ಬೇರೆಡೆಗೆ ಸ್ಥಳಾಂತರಿಸುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ‘ಅದು ಸುಳ್ಳು ಸುದ್ದಿ’ ಎಂದು ಅರಣ್ಯಾಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ‘ರಂಗ’ ಸಾವು: ವನ್ಯಜೀವಿ ಪ್ರಿಯರಿಗೆ ನೋವು

‘ಮೈಸೂರು ಕಣ್ಣೂರು ಅಂತರರಾಜ್ಯ ಹೆದ್ದಾರಿಯಾದ ಮತ್ತಿಗೋಡು ಬಳಿಯಿರುವ ಸಾಕಾನೆ ಶಿಬಿರವನ್ನು ಸ್ಥಳಾಂತರಿಸುವ ಯಾವ ಚಿಂತನೆಯೂ ನಡೆದಿಲ್ಲ. ನಾಗರಹೊಳೆ ರಾಷ್ಟ್ರೀಯ ವನ್ಯಜೀವಿ ವಿಭಾಗದಲ್ಲಿರುವ ಈ ಶಿಬಿರದ ಆನೆಗಳಿಗೆ ಮೇವು ಮತ್ತು ನೀರು ಇಲ್ಲಿ ತೃಪ್ತಿಕರವಾಗಿ ಲಭಿಸುತ್ತಿದೆ. ಈ ಕಾರಣದಿಂದಲೇ ಮೂರ್ಕಲ್ಲು ಬಳಿಯಿದ್ದ ಶಿಬಿರವನ್ನು 10 ವರ್ಷಗಳ ಹಿಂದೆ ಮತ್ತಿಗೋಡಿಗೆ ಸ್ಥಳಾಂತರಿಸಲಾಯಿತು’ ಎಂದ ಶಿಬಿರದ ಅರಣ್ಯಾಧಿಕಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಶಿಬಿರದಲ್ಲಿ 31 ಆನೆಗಳಿದ್ದು ಇವುಗಳ ಮಾವುತರು ಹಾಗೂ ಕಾವಾಡಿಗಳ ಕುಟುಂಬಕ್ಕೆ ಸಾಕಾಗುವಷ್ಟು ಮನೆಗಳನ್ನು ನಿರ್ಮಿಸಿಕೊಡಲಾಗಿದೆ. ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಕಚೇರಿಯೂ ಇದೆ. ಆನೆಗಳು ರಸ್ತೆ ದಾಟುವಾಗ ವಾಹನಗಳಿಂದ ಅಪಾಯ ಎದುರಾಗದಂತೆ ರಸ್ತೆ ಉಬ್ಬು ನಿರ್ಮಿಸಲು ಲೋಕೋಪಯೋಗಿ ಇಲಾಖೆಗೆ ಪತ್ರದ ಮೇಲೆ ಪತ್ರ ಬರೆಯಲಾಗಿತ್ತು. ಮತ್ತೆ ಒತ್ತಡ ತಂದು ರಸ್ತೆ ಉಬ್ಬು ನಿರ್ಮಿಸಿ ವೇಗದ ಮಿತಿ ಫಲಕ ಹಾಕಲು ಕ್ರಮ ಕೈಗೊಳ್ಳಲಾಗುವುದೂ ಎಂದೂ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 2

  Sad
 • 1

  Frustrated
 • 4

  Angry

Comments:

0 comments

Write the first review for this !