ಮಂಗಳವಾರ, ಸೆಪ್ಟೆಂಬರ್ 17, 2019
24 °C

ಕಾಡಾನೆ ಹಾವಳಿಗೆ ನೆಲಕಚ್ಚಿದ ತೆಂಗು,ಬಾಳೆ, ಭತ್ತ : ನಲುಗಿದ ಬೆಳೆಗಾರರು

Published:
Updated:
Prajavani

ಗೋಣಿಕೊಪ್ಪಲು: ಕಳತ್ಮಾಡು ಗ್ರಾಮದ ಕತ್ರಿಕೊಲ್ಲಿ ಕಾಳಪ್ಪ ಅವರ ಕಾಫಿ ತೋಟಕ್ಕೆ ಲಗ್ಗೆ ಹಾಕಿರುವ ಕಾಡಾನೆ ಹಿಂಡು ತೋಟದ ತೆಂಗು, ಅಡಿಕೆ, ಕಾಳು ಮೆಣಸು, ಬಾಳೆ ಹಾಗೂ ಕಾಫಿ ಗಿಡಗಳನ್ನು ತುಳಿದು ತಿಂದು ಹಾನಿಗೊಳಿಸಿವೆ.

15ಕ್ಕು ಹೆಚ್ಚಿನ ಕಾಡಾನೆಗಳ ಹಿಂಡು ತೋಟದಲ್ಲಿಯೇ 10 ದಿನಗಳಿಂದಲೂ ತಂಗಿದ್ದು ಕಾಡಿನತ್ತ ತೆರಳುತ್ತಿಲ್ಲ. ತೋಟವನ್ನೇ ತಂಗುದಾಣವಾಗಿಸಿಕೊಂಡು ಸಿಕ್ಕಿದ ಆಹಾರ ತಿಂದು ಅಲ್ಲಿಯೇ ಸುತ್ತಾಡುತ್ತಿವೆ. ಮಳೆ ಹಾನಿಯಿಂದ ತೀವ್ರ ನಷ್ಟವಾಗಿದ್ದು ಇದೀಗ ಕಾಡಾನೆಯಿಂದಲೂ ಹಾನಿ ಅನುಭವಿಸುವಂತಾಗಿದೆ ಎಂದು ತೋಟದ ಮಾಲೀಕ ಕಾಳಪ್ಪ ಅಲವತ್ತುಕೊಂಡಿದ್ದಾರೆ.

ಅರಣ್ಯ ಇಲಾಖೆಯವರು ಕಾಡಾನೆಗಳನ್ನು ಕಾರ್ಯಾಚರಣೆ ನಡೆಸಿ ತೋಟದಿಂದ ಕಾಡಿನತ್ತ ಓಡಿಸುತ್ತಾರೆ. ಮತ್ತೆ ಕೆಲ ಸಮಯದ ಬಳಿಕ ಮತ್ತೆ ಬಂದು ಕಾಫಿ ತೋಟ ಸೇರುತ್ತವೆ. ಇವುಗಳ ಹಾವಳಿ ತಡೆ ಗಟ್ಟಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಹಾನಿಯಾಗಿರುವ ಬೆಳೆಗೆ ಸೂಕ್ತ ಪರಿಹಾರ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಅರುವತ್ತೊಕ್ಕಲು ಜೋಡುಬೀಟಿ ಗ್ರಾಮದ ಅಮ್ಮತ್ತೀರ ಎ.ಅನಂತಮಯ್ಯ ಅವರ ಕಾಫಿ ತೋಟಕ್ಕೂ ನುಗ್ಗಿರುವ ಕಾಡಾನೆ ಹಿಂಡು ತೋಟದ ಬಾಳೆ, ತೆಂಗು ಹಾಗೂ ಕಾಫಿಯನ್ನು ಸಂಪೂರ್ಣ ತುಳಿದು, ತಿಂದು ಹಾಳುಮಾಡಿವೆ. ಅತಿವೃಷ್ಟಿಯಿಂದ ನಲುಗಿರುವ ಬೆಳೆಗಾರು ಕಾಡಾನೆ ಹಾವಳಿಯಿಂದ ಚೇತರಿಸಿಕೊಳ್ಳಲಾಗದೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮತ್ತೊಂದು ಕಡೆ ಮಾಯಮುಡಿಯ ಆಪಟ್ಟೀರ ಟಾಟುಮೊಣ್ಣಪ್ಪ ಅವರ ನಾಟಿ ಮಾಡಿದ್ದ ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ ಮಾಡಿ ತುಳಿದು ಹಾನಿ ಮಾಡಿವೆ. ನಾಟಿ ಮಾಡಿ ಕೇವಲ 15 ದಿನಗಳಾಗಿದ್ದ ಗದ್ದೆಯ ಭತ್ತದ ಪೈರನ್ನು ಕೆಸರಿನಲ್ಲಿ ತುಳಿದು ಹಾಕಿವೆ. ಗದ್ದೆಯಲ್ಲೂ ಕಾಡಾನೆಗಳು ಮನಬಂದಂತೆ ಓಡಾಡಿವೆ.

ಅತಿವೃಷ್ಟಿಯ ನಡುವೆ ನಾಟಿ ಮಾಡಿದ್ದ ಭತ್ತದ ಪೈರನ್ನು ಉಳಿಸಿಕೊಳ್ಳಲಾಗದೆ ಮೊಣ್ಣಪ್ಪ ಹತಾಶರಾಗಿದ್ದಾರೆ. ಭತ್ತದ ಕೃಷಿ ಲಾಭಕ್ಕಿಂತ ನಷ್ಟವೇ ಹೆಚ್ಚು. ಆದರೂ ಬಿಡಬಾರದು ಎಂಬ ದೃಷ್ಟಿಯಿಂದ ಬಹಳಷ್ಟು ವೆಚ್ಚಮಾಡಿ, ರಸಗೊಬ್ಬರ ಹಾಕಿ ನಾಟಿ ಮಾಡಲಾಗಿತ್ತು. ಕಾಡಾನೆಗಳು ನಿರಂತರ ಗದ್ದೆಮೇಲೆ ದಾಟಿ ಕಾಫಿ ತೋಟದತ್ತ ತೆರಳುತ್ತಿವೆ. ಈ ಬಗ್ಗೆ ಅರಣ್ಯ ಇಲಾಖೆ ಪರಿಶೀಲನೆ ನಡೆಸಿ ಸಂಭವಿಸಿರುವ ಸಾವಿರಾರು ರೂಪಾಯಿ ನಷ್ಟವನ್ನು ಭರಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

Post Comments (+)