ಶ್ವಾಸಕೋಶದ ಕಾರ್ಯಕ್ಕೆ ಶಕ್ತಿ; ಬೆನ್ನಿಗೆ ಚೈತನ್ಯ

7

ಶ್ವಾಸಕೋಶದ ಕಾರ್ಯಕ್ಕೆ ಶಕ್ತಿ; ಬೆನ್ನಿಗೆ ಚೈತನ್ಯ

Published:
Updated:
Deccan Herald

ಅರ್ಧಕಟಿ ಚಕ್ರಾಸನ

ಕಟಿ ಎಂದರೆ ಸೊಂಟ. ಸೊಂಟದಿಂದ ಅರ್ಧ ಪಕ್ಕಕ್ಕೆ ಬಾಗುವ ಆಸನವೇ ಅರ್ಧಕಟಿ ಚಕ್ರಾಸನ.

ಮಾಡುವ ಕ್ರಮ: ಸಮಸ್ಥಿತಿಯಲ್ಲಿ ನಿಂತುಕೊಳ್ಳಿ. ಬಲಗೈಯನ್ನು ನಿಧಾನವಾಗಿ ತೆಗೆದುಕೊಳ್ಳುತ್ತ ಭುಜದ ನೇರದಲ್ಲಿ ತರಬೇಕು. ಈಗ ಉಸಿರನ್ನು ನಿಧಾನವಾಗಿ ಬಿಡಿ ಅಂಗೈಯನ್ನು ಮೇಲ್ಮುಖವಾಗಿ ತಿರುಗಿಸಿಕೊಳ್ಳಿ. ಉಸಿರನ್ನು ತೆಗೆದುಕೊಳ್ಳುತ್ತಾ ನಿಧಾನವಾಗಿ ಬಲಗೈಯನ್ನು ಬಲ ಕಿವಿಗೆ ತಾಗುವಷ್ಟು ಎತ್ತರಕ್ಕೆ ಎತ್ತಿ. ನಿಧಾನವಾಗಿ ಎಡಪಕ್ಕಕ್ಕೆ ಉಸಿರನ್ನು ಹೊರಕ್ಕೆ ಹಾಕುತ್ತಾ ಬಾಗಿ ನಿಮ್ಮ ಎಡಗೈಯನ್ನು ತೊಡೆಯಿಂದ ಕೆಳಗೆ ಮೊಣಕಾಲಿನ ಕಡೆಗೆ ಸರಿಸುತ್ತಾ ಬಾಗಬೇಕು. ದೃಷ್ಟಿ ತೋಳಿನಿಂದ ಮೇಲಕ್ಕೆ ನೋಡುತ್ತಿರಬೇಕು. ಸ್ಥಿತಿಯಲ್ಲಿದ್ದಾಗ ಕಾಲುಗಳು ನೇರವಾಗಿರಬೇಕು. ಎದೆಯ ಭಾಗವನ್ನು ಹಿಗ್ಗಿಸುತ್ತಾ ಇರಿ. ಸ್ಥಿತಿಯಲ್ಲಿದ್ದಾಗ ಉಸಿರಾಟವು ಸಹಜವಾಗಿರಲಿ. ನಿಧಾನವಾಗಿ ಉಸಿರನ್ನು ತೆಗೆದುಕೊಳ್ಳುತ್ತ ಮೇಲಕ್ಕೆ ಬರಬೇಕು. ಉಸಿರನ್ನು ಬಿಡುತ್ತಾ ಬಲಗೈಯನ್ನು ನಿಧಾನವಾಗಿ ಭುಜದ ನೇರದಲ್ಲಿ ತನ್ನಿ. ಅಂಗೈಯನ್ನು ಕೆಳಮುಖವಾಗಿ ತಿರುಗಿಸಿಕೊಂಡು ಒಮ್ಮೆ ಉಸಿರನ್ನು ತೆಗೆದುಕೊಂಡು, ಉಸಿರನ್ನು ಬಿಡುತ್ತಾ ಬಲಗೈಯನ್ನು ಸಮಸ್ಥಿತಿಗೆ ತನ್ನಿ. ಇದು ಅರ್ಧಕಟಿ ಚಕ್ರಾಸನ ಇದೇ ರೀತಿಯಲ್ಲಿ ಇನ್ನೊಂದು ಕಡೆಗೆ ಮಾಡಬೇಕು.

ಲಾಭಗಳು: ಎಡಕ್ಕೆ ಬಲಕ್ಕೆ ಬಾಗುವುದರಿಂದ ಪಕ್ಕೆಲುಬುಗಳು ಹಿಗ್ಗಲ್ಪಟ್ಟು ಶರೀರವನ್ನು ಕ್ರಿಯಾಶೀಲ
ಗೊಳಿಸುವುದು. ಬೆನ್ನು ನೋವು ಇರುವವರು ಗೋಡೆಗೆ ಬೆನ್ನುಕೊಟ್ಟು ನಿಂತು ಈ ಆಸನವನ್ನು ಅಭ್ಯಾಸ ಮಾಡಿದರೆ ಬೆನ್ನಿಗೆ ವಿಶ್ರಾಂತಿ ಸಿಗುತ್ತದೆ.

ಅರ್ಧ ಚಕ್ರಾಸನ

ಸೊಂಟದಿಂದ ಹಿಂದಕ್ಕೆ ಅರ್ಧ ಬಾಗುವುದು.

ಮಾಡುವ ಕ್ರಮ: ಸಮಸ್ಥಿತಿಯಲ್ಲಿ ನಿಂತುಕೊಳ್ಳಿ. ಎರಡೂ ಕೈ ಹಸ್ತವನ್ನು ಸೊಂಟದ ಕೆಳಭಾಗದಲ್ಲಿ ಇಟ್ಟುಕೊಳ್ಳಬೇಕು. ಹೆಬ್ಬೆರಳು ಬೆನ್ನುಮೂಳೆಯ ಕೆಳ ತುದಿಯನ್ನು ಒತ್ತುತ್ತಿರಲಿ. ಎರಡೂ ಮೊಣಕೈಗಳನ್ನು ಹತ್ತಿರ ತಂದು, ಒಮ್ಮೆ ದೀರ್ಘವಾಗಿ ಉಸಿರನ್ನು ತೆಗೆದುಕೊಂಡು ಎದೆಯ ಭಾಗವನ್ನು ಹಿಗ್ಗಿಸಿಕೊಂಡು ಸೊಂಟದಿಂದ ಶರೀರವನ್ನು ಮೇಲಕ್ಕೆತ್ತಿ, ಉಸಿರನ್ನು ಬಿಡುತ್ತಾ ಹಿಂದಕ್ಕೆ ಬಾಗಬೇಕು. ದೃಷ್ಟಿ ಕಣ್ಣಿನ ನೇರದಲ್ಲಿರಲಿ. ನಿಧಾನವಾಗಿ ಉಸಿರನ್ನು ತೆಗೆದು
ಕೊಳ್ಳುತ್ತ ಮೇಲಕ್ಕೆ ಬರಬೇಕು. ಕೈಗಳು ಸಮಸ್ಥಿತಿಗೆ ತರಬೇಕು. ಇದು ಅರ್ಧ ಚಕ್ರಾಸನ.

ವಿ.ಸೂ. ಇದನ್ನು ಮಾಡುವಾಗ ಪ್ರಾರಂಭದಲ್ಲಿ ಎರಡೂ ಪಾದದ ನಡುವೆ ಅರ್ಧ ಅಡಿಯಷ್ಟು ಅಂತರವಿಟ್ಟು ಮಾಡಿ. ಹಿಂದಕ್ಕೆ ಬಾಗುವಾಗ ಕಾಲುಗಳನ್ನು ನೇರಮಾಡುತ್ತಾ ಹೋಗಬೇಕು.

ಲಾಭಗಳು: ಎದೆಯ ಭಾಗವು ಹಿಗ್ಗುವುದರಿಂದ ಶ್ವಾಸಕೋಶದ ಕಾರ್ಯಕ್ಕೆ ಶಕ್ತಿ ನೀಡುವುದು ಬೆನ್ನಿಗೆ ಚೈತನ್ಯ ನೀಡುವ ಆಸನವಿದು.

ವಿನಾಯಕ ತಲಗೇರಿ

ಯೋಗ ಗುರು(9480397682)

ಚಿತ್ರಗಳು: ಇಂದು ಗ್ರಾಫಿಕ್ಸ್‌

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !