ಹೆತ್ತವರ ಕತ್ತೆತ್ತಿಯೂ ನೋಡದ ಮಗ

ಸೋಮವಾರ, ಏಪ್ರಿಲ್ 22, 2019
33 °C
ಹೇಬಿಯಸ್ ಕಾರ್ಪಸ್‌ ಅರ್ಜಿ ವಜಾಗೊಳಿಸಿದ ಹೈಕೋರ್ಟ್‌

ಹೆತ್ತವರ ಕತ್ತೆತ್ತಿಯೂ ನೋಡದ ಮಗ

Published:
Updated:
Prajavani

ಬೆಂಗಳೂರು: ಅಕ್ಕ, ಅಮ್ಮ, ಅಪ್ಪ ಎಲ್ಲರೂ ನನ್ನ ಓದಿಗೆ ಅಡ್ಡಿಯಾಗಿದ್ದಾರೆ. ನನ್ನ ಕನಸುಗಳನ್ನು ಛಿದ್ರಗೊಳಿಸಿದ್ದಾರೆ. ಬದುಕು ಮೂರಾಬಟ್ಟೆಯಾಗಿದೆ. ಸುಖಾಸುಮ್ಮನೇ ಪೊಲೀಸರಿಗೆ ದೂರು ಕೊಟ್ಟು ಒದೆಸಿದ್ದಾರೆ. ಅವರಿಂದ ದೂರಾಗಿ ನಾನೀಗ ಜೀವನ ರೂಪಿಸಿಕೊಂಡಿದ್ದೇನೆ. ಮತ್ತೆಂದೂ ಅವರ ಬಳಿ ಹೋಗುವುದಿಲ್ಲ. ದಯವಿಟ್ಟು ನನ್ನ ಪಾಡಿಗೆ ನನ್ನ ಬಿಟ್ಟುಬಿಡಿ...

ಸೆಂಥಿಲ್‌ (33) ಎಂಜಿನಿಯರಿಂಗ್‌ ಶಿಕ್ಷಣ ಮೊಟಕುಗೊಳಿಸಿದ ಯುವಕ ನ್ಯಾಯಪೀಠದ ಮುಂದೆ ನುಡಿದ ಮನದಾಳದ ಮಾತುಗಳಿವು.

ನಗರದ ಟಿಸಿಎಂ ರಾಯನ್‌ ರಸ್ತೆ ನಿವಾಸಿ ಬಾಲಮ್ಮ ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಕೆ.ಎನ್‌.ಫಣೀಂದ್ರ ಹಾಗೂ ನ್ಯಾಯಮೂರ್ತಿ ಎಚ್‌.ಬಿ.ಪ್ರಭಾಕರ ಶಾಸ್ತ್ರಿ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು. ಕೋರ್ಟ್‌ಗೆ ಖುದ್ದು ಹಾಜರಾಗಿದ್ದ ಸೆಂಥಿಲ್‌, ‘ನಾನು ಅಪ್ಪ, ಅಮ್ಮನ ಜೊತೆ ಹೋಗಲಾರೆ. ಅವರು ನನಗೆ ಸಾಕಷ್ಟು ಕಿರುಕುಳ ಕೊಟ್ಟಿದ್ದಾರೆ’ ಎಂದು ಖಂಡತುಂಡವಾಗಿ ನುಡಿದರು.

ಇದಕ್ಕೆ ದುಃಖತಪ್ತರಾದ ತಾಯಿ ಬಾಲಮ್ಮ, ‘ಮಗನನ್ನು ಮನೆಗೆ ಬರಲು ಆದೇಶಿಸಿ’ ಎಂದು ಕಣ್ಣೀರುಗರೆಯುತ್ತಾ ನ್ಯಾಯಪೀಠಕ್ಕೆ ಮನವಿ ಮಾಡಿದರು. ಈ ಕೋರಿಕೆಗೆ ಸೆಂಥಿಲ್‌ ಸಹೋದರಿ ಹಂಸವೇಣಿ ದನಿಗೂಡಿಸಿದರು.

ಇದಕ್ಕೆ ನ್ಯಾಯಮೂರ್ತಿ ಕೆ.ಎನ್‌.ಫಣೀಂದ್ರ ಅವರು ಸೆಂಥಿಲ್‌ಗೆ, ‘ನೀನೊಬ್ಬನೇ ಮಗ ಎಂದು ಹೇಳುತ್ತೀಯಾ, ತಂದೆ ತಾಯಿಗೆ ಸಾಕಷ್ಟು ವಯಸ್ಸಾಗಿದೆ. ಅವರನ್ನು ನೋಡಿಕೊಳ್ಳುವವರು ಯಾರು. ಹಾಗೆಲ್ಲಾ ಮಾಡಬಾರದು. ಒಂದಷ್ಟು ಯೋಚಿಸು’ ಎಂದು ತಿಳಿಹೇಳಿದರು.

ಆದರೆ, ಇದಕ್ಕೆ ಒಪ್ಪದ ಸೆಂಥಿಲ್‌ ಖಚಿತ ದನಿಯಲ್ಲಿ, ‘ನಾನು ಇವರೊಟ್ಟಿಗೆ ಜೀವನ ಮಾಡುವುದಿಲ್ಲ. ಸದ್ಯ ಗಾಂಧಿನಗರದ ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡು ನೆಮ್ಮದಿಯಾಗಿದ್ದೇನೆ. ನನ್ನ ಪಾಡಿಗೆ ನನ್ನ ಬಿಟ್ಟುಬಿಡಿ’ ಎಂದು ಮನವಿ ಮಾಡಿದರು.

ಇದಕ್ಕೆ ತಂದೆ-ತಾಯಿಗೆ ಕಿವಿಮಾತು ಹೇಳಿದ ನ್ಯಾಯಮೂರ್ತಿಗಳು, ‘ನೀವು ಚೆನ್ನಾಗಿ ಸಾಕಿದ್ದರೆ ಅವನೇಕೆ ಮನೆ ಬಿಟ್ಟು ಹೋಗುತ್ತಿದ್ದ. 18 ವರ್ಷ ಪೂರೈಸಿದ ಮೇಲೆ ಅವರಿಚ್ಛೆಗೆ ಅನುಸಾರವಾಗಿ ಬದುಕಬಹುದು. ಈ ಕುರಿತು ಆದೇಶ ಮಾಡಲು ಕೋರ್ಟ್‌ಗೆ ಅಧಿಕಾರವಿಲ್ಲ’ ಎಂದು ಅರ್ಜಿ ವಜಾಗೊಳಿಸಿದರು.

ಶ್ಲಾಘನೆ: ‘ಕೃಷ್ಣಪ್ಪ ಅವರನ್ನು ಹುಡುಕಲು ಕೇರಳಕ್ಕೆ ತೆರಳಲು ಬಾಲಮ್ಮ ಅವರಿಂದ ₹ 3 ಸಾವಿರ ಪೀಕಿದ್ದ ಕಾಟನ್‌ಪೇಟೆ ಎಎಸ್‌ಐ ಮತ್ತು ಒಬ್ಬ ಕಾನ್‌ಸ್ಟೆಬಲ್‌ ಅವರನ್ನು ಸೇವೆಯಿಂದ ಅಮಾನತುಪಡಿಸಿ ತನಿಖೆಗೆ ಆದೇಶಿಸಿದ ಪಶ್ಚಿಮ ವಲಯದ ಡಿಸಿಪಿ ರವಿ ಡಿ.ಚೆನ್ನಣ್ಣವರ ಅವರ ಕ್ರಮದ ಬಗ್ಗೆ ನ್ಯಾಯಪೀಠ ಶ್ಲಾಘನೆ ವ್ಯಕ್ತಪಡಿಸಿತು.‘ಪ್ರಕರಣದಲ್ಲಿ ಅರ್ಜಿದಾರರಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾದ ಪೇದೆ ಫಕೀರ‌ಪ್ಪ ವಿರುದ್ಧ ಕಾನೂನು ಕ್ರಮ ಜರುಗಿಸಿ’ ಎಂದೂ ಡಿಸಿಪಿ ಅವರಿಗೆ ನಿರ್ದೇಶಿಸಿತು.

ಅರ್ಜಿಯಲ್ಲಿ ಏನಿತ್ತು?: ‘ನನ್ನ ಮಗ ಸೆಂಥಿಲ್ ಕುಮಾರ್ ಆಕ್ಸ್‌ರ್ಫ್‌ಢ್ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ವ್ಯಾಸಂಗ ಮಾಡುತ್ತಿದ್ದ. 2009ರ ಜುಲೈ 7ರಂದು ಉಪನ್ಯಾಸಕ ಸಿ.ಬಿ.ಕೃಷ್ಣಪ್ಪ ಅವರ ಬಳಿ ಟ್ಯೂಷನ್‌ಗೆ ಹೋಗಿದ್ದ. ಆದರೆ, ಮತ್ತೆ ಮನೆಗೆ ಬಂದಿಲ್ಲ. ನಾಪತ್ತೆಯಾದ ಅವನನ್ನು ಹುಡುಕಿಕೊಡಿ ಎಂದು ಕಾಟನ್‌ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದೆವು. ಆದರೆ, ಪೊಲೀಸರು ಅವನನ್ನು ಪತ್ತೆ ಹಚ್ಚಿಲ್ಲ. ಕೃಷ್ಣಪ್ಪ ನನ್ನ ಮಗನನ್ನು ಅಕ್ರಮ ಬಂಧನದಲ್ಲಿ ಇರಿಸಿದ್ದಾರೆ’ ಎಂದು ಬಾಲಮ್ಮ ಅರ್ಜಿಯಲ್ಲಿ ತಿಳಿಸಿದ್ದರು.

ಬರಹ ಇಷ್ಟವಾಯಿತೆ?

 • 20

  Happy
 • 1

  Amused
 • 7

  Sad
 • 0

  Frustrated
 • 1

  Angry

Comments:

0 comments

Write the first review for this !