ಎಂಜಿನಿಯರ್‌ಗೆ ಎರಡು ಹುದ್ದೆ ಜವಾಬ್ದಾರಿ: ರೇವಣ್ಣ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ

7

ಎಂಜಿನಿಯರ್‌ಗೆ ಎರಡು ಹುದ್ದೆ ಜವಾಬ್ದಾರಿ: ರೇವಣ್ಣ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ

Published:
Updated:

ಬೆಂಗಳೂರು: ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಒತ್ತಡಕ್ಕೆ ಮಣಿದು ಸಮ್ಮಿಶ್ರ ಸರ್ಕಾರ ಸೂಪರಿಂಟೆಂಡಿಂಗ್‌ ಎಂಜಿನಿಯರ್‌ಗೆ ಎರಡು ಹುದ್ದೆಗಳ ಜವಾಬ್ದಾರಿ ವಹಿಸಿದೆ. ಇದು ಅಧಿಕಾರಿಗಳ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಗೊರೂರಿನ ಹೇಮಾವತಿ ಯೋಜನಾ ವಲಯಕ್ಕೆ ಈ ಹಿಂದೆ ಮುಖ್ಯ ಎಂಜಿನಿಯರ್‌ ಶ್ರೇಣಿಯ ಅಧಿಕಾರಿ ಇದ್ದರು. ಅವರನ್ನು ಕೆಲವು ಸಮಯದ ಹಿಂದೆ ವರ್ಗಾಯಿಸಿ ಸೂಪರಿಂಟೆಂಡಿಂಗ್‌ ಎಂಜಿನಿಯರ್‌ ಆಗಿದ್ದ ಎಚ್‌.ರವೀಂದ್ರ ಅವರನ್ನು ನಿಯೋಜಿಸಲಾಗಿತ್ತು. ರವೀಂದ್ರ ಅವರು ಅಕ್ಟೋಬರ್‌ 31ರಂದು ನಿವೃತ್ತರಾದರು. ಅವರ ಸ್ಥಾನಕ್ಕೆ ನಗರಾಭಿವೃದ್ಧಿ ಇಲಾಖೆಯ ತಾಂತ್ರಿಕ ಕೋಶದ ಸೂಪರಿಂಟೆಂಡಿಂಗ್‌ ಎಂಜಿನಿಯರ್‌ ಸಿ.ಮಂಜಪ್ಪ ಅವರನ್ನು ವರ್ಗ ಮಾಡಲಾಗಿತ್ತು. ಅವರ ಸೇವೆಯನ್ನು ಅಕ್ಟೋಬರ್‌ 30ಕ್ಕೆ ಜಲಸಂಪನ್ಮೂಲ ಇಲಾಖೆಗೆ ನೀಡಲಾಗಿತ್ತು.

‘ಮರುದಿನವೇ ಆದೇಶದಲ್ಲಿ ಪರಿಷ್ಕರಣೆ ಮಾಡಲಾಯಿತು. ಮಂಜಪ್ಪ ಅವರಿಗೆ ತಾಂತ್ರಿಕ ಕೋಶದ ಹೆಚ್ಚುವರಿ ಹೊಣೆಯನ್ನೂ ವಹಿಸಲಾಯಿತು. ಅವರು ವಾರದಲ್ಲಿ ಎರಡು ದಿನ (ಬುಧವಾರ ಹಾಗೂ ಶನಿವಾರ) ಇಲ್ಲಿ ಕೆಲಸ ಮಾಡಬೇಕು ಎಂಬ ನಿರ್ದೇಶನ ನೀಡಲಾಯಿತು. ಇದಕ್ಕೆ ರೇವಣ್ಣ ಅವರ ಒತ್ತಡವೇ ಕಾರಣ’ ಎಂದು ನಗರಾಭಿವೃದ್ಧಿ ಇಲಾಖೆಯ ಮೂಲಗಳು ತಿಳಿಸಿವೆ.

‘ನಗರಾಭಿವೃದ್ಧಿ ಇಲಾಖೆಯಲ್ಲಿ ಹೆಚ್ಚಿನ ಕೆಲಸದೊತ್ತಡ ಇದೆ. ಮಂಜಪ್ಪ ಜಾಗಕ್ಕೆ ಬೇರೊಬ್ಬರನ್ನು ನೇಮಿಸಬೇಕಿತ್ತು. ನಗರಾಭಿವೃದ್ಧಿ ಇಲಾಖೆಯಲ್ಲೂ ತಮ್ಮ ಮಾತು ನಡೆಯಬೇಕು ಎಂಬ ಕಾರಣಕ್ಕೆ ಮರುನಿಯೋಜನೆ ಮಾಡಿಸಿದ್ದಾರೆ. ಜತೆಗೆ, ಮಂಜಪ್ಪ ಅವರು ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಲೋಕೋಪಯೋಗಿ ಇಲಾಖೆಯಲ್ಲಿ 10 ಸೂಪರಿಂಟೆಂಡಿಂಗ್‌ ಎಂಜಿನಿಯರ್‌ಗಳು ಮುಖ್ಯ ಎಂಜಿನಿಯರ್‌ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಜಯಪ್ರಕಾಶ್ ಅವರು ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರೂ ಹೌದು. ಒಂದೇ ಸಮುದಾಯಕ್ಕೆ ಸೇರಿದ ಅಧಿಕಾರಿಗಳಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗುತ್ತಿದೆ ಎಂಬ ಆರೋಪವೂ ಇದೆ.

‘ಕಾಂಗ್ರೆಸ್‌ ಸರ್ಕಾರದಲ್ಲಿ ದಲಿತ ಹಾಗೂ ಅಹಿಂದ ಅಧಿಕಾರಿಗಳನ್ನು ಆಯಕಟ್ಟಿನ ಸ್ಥಾನಗಳಿಗೆ ನೇಮಿಸಲಾಗಿದೆ ಎಂದು ವಿರೋಧ ಪಕ್ಷದ ಮುಖಂಡ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದ್ದರು. ಈಗ ಅವರ ಅಣ್ಣ ರೇವಣ್ಣ ತಮ್ಮ ಜಾತಿ ಬಂಧುಗಳಿಗೆ ಆಯಕಟ್ಟಿನ ಹುದ್ದೆ ನೀಡುವ ಮೂಲಕ ಕಾಂಗ್ರೆಸ್‌ ಮಾದರಿಯನ್ನು ಅನುಸರಿಸುತ್ತಿದ್ದಾರೆ’ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ದೂರಿದರು.

ಎಲ್ಲ ಇಲಾಖೆಗಳ ಚಟುವಟಿಕೆಗಳಲ್ಲಿ ರೇವಣ್ಣ ಹಸ್ತಕ್ಷೇಪ ಮಾಡುತ್ತಿದ್ದಾರೆ. ತಮ್ಮ ವ್ಯಾಪ್ತಿ ಮೀರಿ ಅಧಿಕಾರಿಗಳ ವರ್ಗಾವಣೆ ಮಾಡಿಸುತ್ತಿದ್ದಾರೆ ಎಂಬ ಬಗ್ಗೆ ಸಚಿವ ಸಂಪುಟದ ಸದಸ್ಯರೇ ಈ ಹಿಂದೆ ಅಸಮಾಧಾನ ವ್ಯಕ್ತಪಡಿಸಿದ್ದರು. ಎಂಜಿನಿಯರ್‌ಗಳ ವರ್ಗಾವಣೆಗೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಆ ಅಧಿಕಾರಿಗಳಿಗೆ ಮರು ಸ್ಥಳ ನಿಯುಕ್ತಿ ಮಾಡಲಾಗಿತ್ತು.

ಮುಖ್ಯ ಎಂಜಿನಿಯರ್‌ ಹುದ್ದೆಯಲ್ಲಿ ಸೂಪರಿಂಟೆಂಡಿಂಗ್‌ ಎಂಜಿನಿಯರ್‌ಗಳು
*ರವೀಂದ್ರ, ಸಣ್ಣ ನೀರಾವರಿ ಇಲಾಖೆಯ ದಕ್ಷಿಣ ವಲಯ ಬೆಂಗಳೂರು
* ಎಸ್‌.ಎಂ.ರಾಜು, ಸಣ್ಣ ನೀರಾವರಿ ಇಲಾಖೆಯ ಉತ್ತರ ವಲಯ
* ಬಿ.ಟಿ.ಕಾಂತರಾಜು, ಗುಣ ನಿಯಂತ್ರಣ ವಲಯ, ಬೆಂಗಳೂರು
* ವೆಂಕಟೇಶ್‌, ಕೃಷ್ಣ ಭಾಗ್ಯ ಜಲ ನಿಗಮ ಆಲಮಟ್ಟಿ ಅಣೆಕಟ್ಟೆ ವಲಯ
* ಸಿ.ಮಂಜಪ್ಪ, ಹೇಮಾವತಿ ನದಿಯ ಗೊರೂರು ಯೋಜನಾ ವಲಯ
* ಪ್ರಕಾಶ್‌, ಕಾವೇರಿ ಜಲನಿಗಮ ದಕ್ಷಿಣ ವಲಯ ಮೈಸೂರು
* ರವೀಂದ್ರ ಬಾಬು, ರಸ್ತೆ ಮತ್ತು ಆಸ್ತಿ ನಿರ್ವಹಣೆ ಕೇಂದ್ರ ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !