ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿಯ ಮುಚ್ಚಂಡಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್‌ ಕಲಿಕೆ

ಹಳೆ ವಿದ್ಯಾರ್ಥಿಗಳು, ಎಸ್‌ಡಿಎಂಸಿ ಸದಸ್ಯರ ಸಾಹಸ
Last Updated 5 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

ಬೆಳಗಾವಿ:ತಾಲ್ಲೂಕಿನ ಮುಚ್ಚಂಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹಾಗೂ ಮರಾಠಿ ಮಾಧ್ಯಮ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳು ಹಾಗೂ ಎಸ್‌ಡಿಎಂಸಿ ಸದಸ್ಯರು ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಆರಂಭಿಸಿ ಮಕ್ಕಳನ್ನು ಆಕರ್ಷಿಸುತ್ತಿದ್ದಾರೆ.

ಕಾನ್ವೆಂಟ್‌ ಮಾದರಿಯಲ್ಲಿ ಇಂಗ್ಲಿಷ್‌ ಕಲಿಕೆಗೆ ಬೇಕಾದ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ. ಈ ಮೂಲಕ ತಮ್ಮ ಶಾಲೆಯನ್ನು ಸಬಲಗೊಳಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಇದು ಶಿಕ್ಷಣ ಇಲಾಖೆ ಅಧಿಕಾರಿಗಳ ಮೆಚ್ಚುಗೆಗೂ ಪಾತ್ರವಾಗಿದೆ.

ನಗರದಿಂದ 15 ಕಿ.ಮೀ. ದೂರದಲ್ಲಿ ಈ ಶಾಲೆ ಇದೆ. ವಿವಿಧೆಡೆ ಕೆಲಸ ಮಾಡುತ್ತಿರುವ ಹಳೆಯ ವಿದ್ಯಾರ್ಥಿಗಳು ದಾನಿಗಳಿಂದ ದೇಣಿಗೆ ಸಂಗ್ರಹಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡಿದ್ದಾರೆ. ಇಲ್ಲಿ ಇಂಗ್ಲಿಷ್‌ನೊಂದಿಗೆ ಮಾತೃಭಾಷೆಯ (ಕನ್ನಡ ಹಾಗೂ ಮರಾಠಿ) ಶಿಕ್ಷಣವನ್ನೂ ನೀಡಲಾಗುತ್ತಿದೆ.

ಮೂರು ತರಗತಿಗಳು:ಕನ್ನಡ ಮಾಧ್ಯಮದಲ್ಲಿ 40 ಮಕ್ಕಳು ಕಲಿಯುತ್ತಿದ್ದಾರೆ. ಇವರಿಗೆ ಒಬ್ಬರು ಕನ್ನಡ ಶಿಕ್ಷಕಿ, ಇನ್ನೊಬ್ಬರು ಇಂಗ್ಲಿಷ್‌ ಶಿಕ್ಷಕಿ ಹಾಗೂ ಸಹಾಯಕಿ ಇದ್ದಾರೆ. ಮರಾಠಿ ಮಾಧ್ಯಮದಲ್ಲಿ ಎಲ್‌ಕೆಜಿಯೊಂದಿಗೆ ಯುಕೆಜಿಯೂ ಇದೆ. ಇಲ್ಲೂ ಮರಾಠಿ, ಇಂಗ್ಲಿಷ್‌ಗೆ ತಲಾ ಒಬ್ಬರು ಶಿಕ್ಷಕಿಯರಿದ್ದಾರೆ. ಇಬ್ಬರು ಸಹಾಯಕಿಯರು ಇದ್ದಾರೆ. ಇಲ್ಲಿ 42 ಮಕ್ಕಳು ಕಲಿಯುತ್ತಿದ್ದಾರೆ. ಶಿಕ್ಷಕಿಯರು ಹಾಗೂ ಆಯಾಗಳ ವೇತನವನ್ನೂ ಹಳೇ ವಿದ್ಯಾರ್ಥಿಗಳೇ ಕೊಡುತ್ತಿದ್ದಾರೆ. ಊರಿನ ಶಾಲೆ ಉಳಿಸಿಕೊಳ್ಳಲು ನೂರಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳು ತಲಾ ₹1 ಸಾವಿರ ಮೂಲಧನ ನೀಡಿದ್ದಾರೆ.

ಮಾದರಿ ಕಾರ್ಯ:‘ಈ ಶಾಲೆಯ ಹಳೆಯ ವಿದ್ಯಾರ್ಥಿಗಳು ಶ್ಲಾಘನೀಯ ಕೆಲಸ ಮಾಡಿದ್ದಾರೆ. ಅವರಿಗೆ ಎಸ್‌ಡಿಎಂಸಿಯವರು ಬೆಂಬಲ ನೀಡಿದ್ದಾರೆ. ಮಕ್ಕಳಿಗೆ ಸಮವಸ್ತ್ರ, ಶೂ, ಸಾಕ್ಸ್‌, ಪುಸ್ತಕ, ಲೇಖನ ಸಾಮಗ್ರಿ, ಬ್ಯಾಗ್, ಸ್ವೆಟರ್‌, ಬೆಲ್ಟ್‌ಗಳನ್ನು ಉಚಿತವಾಗಿ ಕೊಟ್ಟಿದ್ದಾರೆ. ಇದು ಸರ್ಕಾರಿ ಶಾಲೆಯೇ ಎನ್ನುವ ಅನುಮಾನ ಮೂಡುತ್ತದೆ. ಪೀಠೋಪಕರಣ, ಎರಡು ಕಂಪ್ಯೂಟರ್‌ಗಳ ವ್ಯವಸ್ಥೆಯನ್ನೂ ಮಾಡಿದ್ದಾರೆ. ಒಬ್ಬರು ಧ್ವನಿವರ್ಧಕ ದೇಣಿಗೆ ನೀಡಿದ್ದಾರೆ. ಮಕ್ಕಳು ಇಂಗ್ಲಿಷ್‌ ಕಲಿಯುತ್ತಿರುವುದನ್ನು, ಮಾತನಾಡುವುದನ್ನು ನೋಡಿದರೆ ಖುಷಿಯಾಗುತ್ತದೆ. ಇಲಾಖೆಯಿಂದಲೂ ಪ್ರೋತ್ಸಾಹ ಕೊಡುತ್ತಿದ್ದೇವೆ’ ಎಂದು ಬಿಇಒ ಲೀಲಾವತಿ ಹಿರೇಮಠ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾನ್ವೆಂಟ್‌ಗೆ ಮೊದಲ ವರ್ಷವೇ ಒಳ್ಳೆಯ ಪ್ರತಿಕ್ರಿಯೆ ಬಂದಿದೆ. ಕನ್ನಡ, ಮರಾಠಿ ಕಲಿಕೆಯೊಂದಿಗೆ ಇಂಗ್ಲಿಷ್‌ ಕೂಡ ಬೋಧಿಸಲಾಗುತ್ತಿದೆ. ಖಾಸಗಿ ಕಾನ್ವೆಂಟ್‌ಗೆ ಹೋಗುತ್ತಿದ್ದ ಕೆಲವು ಮಕ್ಕಳನ್ನೂ ಇಲ್ಲಿ ದಾಖಲಿಸಲಾಗಿದೆ. ಕಾನ್ವೆಂಟ್‌ಗಳ ರೀತಿಯೇ ಇಲ್ಲೂ ಉತ್ತಮ ಕಲಿಕೆ ಸಾಧ್ಯ ಎನ್ನುವುದನ್ನು ಪೋಷಕರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಹಲವರ ಸಹಕಾರದಿಂದ ಇದು ಸಾಧ್ಯವಾಗಿದೆ' ಎಂದು ಹಳೆಯ ವಿದ್ಯಾರ್ಥಿಗಳ ಗುಂಪಿನ ಸಂತೋಷ್ ಚೌಗುಲೆ ಹಾಗೂ ರಾಜು ವಾಲಿಶೆಟ್ಟಿ ಪ್ರತಿಕ್ರಿಯಿಸಿದರು.

ವಾಟ್ಸ್‌ ಆ್ಯಪ್‌ ಗ್ರೂಪ್ ರಚನೆ

‘ಸರ್ಕಾರವೇ ಎಲ್ಲವನ್ನೂ ಮಾಡಲಾಗದು. ಸ್ಥಳೀಯರು ಸಹಕರಿಸಿದರೆ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಬಹುದು ಎನ್ನುವುದಕ್ಕೆ ಮುಚ್ಚಂಡಿ ಶಾಲೆ ಉದಾಹರಣೆಯಾಗಿದೆ. ಇದರಿಂದ ಪ್ರೇರಣೆ ಪಡೆದು ಗ್ರಾಮೀಣ ವಲಯದ ಪ್ರತಿ ಶಾಲೆಗಳ ಹಿರಿಯ ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆ ಸಂಗ್ರಹಿಸಿ ವಾಟ್ಸ್‌ಆ್ಯಪ್ ಗ್ರೂಪ್‌ ರಚಿಸುತ್ತಿದ್ದೇವೆ' ಎಂದು ಲೀಲಾವತಿ ಮಾಹಿತಿ ನೀಡಿದರು.

‘ಮುಚ್ಚಂಡಿಯಂತಹ ಸಕ್ಸಸ್‌ ಸ್ಟೋರಿಗಳನ್ನು ಗ್ರೂಪ್‌ಗಳಲ್ಲಿ ಹಂಚಿಕೊಳ್ಳಲಾಗುವುದು. ಸರ್ಕಾರಿ ಶಾಲೆಗಳ ಮಹತ್ವ ತಿಳಿಸಿ ಕೊಡಲಾಗುವುದು. ಶಾಲೆ ಅಭಿವೃದ್ಧಿಗೆ ಮುಂದೆ ಬರುವಂತೆ ಪ್ರೇರೇಪಿಸಲಾಗುವುದು. ಈಗಾಗಲೇ ಹಿಂಡಲಗಾ, ಬಸ್ತವಾಡ ಶಾಲೆಯ ಗ್ರೂಪ್ ರಚನೆಯಾಗಿದೆ’ ಎಂದು ವಿವರಿಸಿದರು.

* ಮಕ್ಕಳ ಕಲಿಕೆಗೆ ಬೇಕಾದ ಕಿಟ್‌ಗಳನ್ನು ಹಿರಿಯ ವಿದ್ಯಾರ್ಥಿಗಳೇ ನೀಡಿದ್ದಾರೆ. ಮಕ್ಕಳು ಚುರುಕಾಗಿ ಇಂಗ್ಲಿಷ್‌ ಕಲಿಯುತ್ತಿದ್ದಾರೆ.

–ಲೀಲಾವತಿ ಹಿರೇಮಠ, ಬಿಇಒ

ಮುಖ್ಯಾಂಗಳು

* ಈ ವರ್ಷ 82 ಮಕ್ಕಳು ದಾಖಲು

* ಕೊಠಡಿ ಒದಗಿಸಿದ ಶಿಕ್ಷಣ ಇಲಾಖೆ

* ಕನ್ನಡದೊಂದಿಗೆ ಮರಾಠಿ, ಇಂಗ್ಲಿಷ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT