ಭಾಷೆ ಕಲಿಸುವುದು, ಉದ್ಯೋಗ ನೀಡುವುದು ಸರ್ಕಾರದ ಜವಾಬ್ದಾರಿ: ಚಂದ್ರಶೇಖರ ಕಂಬಾರ

7
‘ಒಂದರಿಂದ ಏಳನೇ ತರಗತಿಯ ವರೆಗೆ ಮಕ್ಕಳು ಮಾತೃಭಾಷೆಯಲ್ಲಿಯೇ ಕಲಿಯಲಿ’

ಭಾಷೆ ಕಲಿಸುವುದು, ಉದ್ಯೋಗ ನೀಡುವುದು ಸರ್ಕಾರದ ಜವಾಬ್ದಾರಿ: ಚಂದ್ರಶೇಖರ ಕಂಬಾರ

Published:
Updated:

ಬೆಂಗಳೂರು: 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಚಂದ್ರಶೇಖರ ಕಂಬಾರ ಅವರು ‘ಪ್ರಜಾವಾಣಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಸಾಹಿತ್ಯದ ಬಗೆಗಿನ ತಮ್ಮ ನಿಲುವು, ರಾಜ್ಯ ಸರ್ಕಾರದ ಉದ್ದೇಶಿತ ಆಂಗ್ಲ ಮಾಧ್ಯಮ ಶಾಲೆಗಳ ಆರಂಭಿಸುವ ಪ್ರಸ್ತಾವ ಹಾಗೂ ಭಾಷೆಯ ಆಧುನೀಕರಣ ಕುರಿತು ಮನದ ಮಾತುಗಳನ್ನು ಹಂಚಿಕೊಂಡರು.

ತಮ್ಮ ಸಾಹಿತ್ಯದಲ್ಲಿ ಜಾನಪದದ ಪ್ರಭಾವ ಹೆಚ್ಚಾಗಿರುವ ಕುರಿತು ಮಾತನಾಡಿದ ಕಂಬಾರರು, ‘ಜಾನಪದ ನನ್ನ ಭಾಷೆ. ಆ ಭಾಷೆಯಲ್ಲಿಯೇ ನಾನು ಎಲ್ಲರೊಡನೆ ಒಡನಾಡುತ್ತಿದ್ದುದರಿಂದ ಆರಂಭದಲ್ಲಿ ಅದು ನನ್ನ ಅರಿವಿಗೂ ಬಂದಿರಲಿಲ್ಲ. ನನ್ನ ಸಾಹಿತ್ಯದಲ್ಲಿ ಜಾನಪದ ಇದೆ ಎಂಬುದು ಗೊತ್ತಾದ ಬಳಿಕ ಅದನ್ನು ಪ್ರಜ್ಞಾಪೂರ್ವಕವಾಗಿ ಬಳಸಲು ಆರಂಭಿಸಿದೆ. ಪ್ರಜ್ಞಾಪೂರ್ವಕ ಬಳಕೆಯಿಂದ ಜಾನಪದಕ್ಕಿರುವ ಶಕ್ತಿ ಬೇರೆ ಪ್ರಕಾರಗಳಿಗಿಲ್ಲ ಎಂಬುದು ಗೊತ್ತಾಯಿತು. ಹೀಗಾಗಿ ಜಾನಪದವನ್ನು ನನ್ನ ಭಾಷೆಯಾಗಿ ಬಳಕೆ ಮಾಡಿಕೊಂಡೆ’ ಎಂಬುದಾಗಿ ಹೇಳಿಕೊಂಡರು.

ಕನ್ನಡವನ್ನು ಆಧುನೀಕರಣಗೊಳಿಸುವ ವಿಚಾರದಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಕಂಬಾರರು ತಮ್ಮ ಸಾಹಿತ್ಯದಲ್ಲಿ ದೇಸಿತನವನ್ನು ಎಂದೂ ಕಡೆಗಣಿಸಿದವರಲ್ಲ. ಈ ಕುರಿತಾಗಿರುವ ದ್ವಂದ್ವ ನಿಲುವುಗಳ ಬಗ್ಗೆ ಸ್ಪಷ್ಟಪಡಿಸಿದ ಸಮ್ಮೇಳನಾಧ್ಯಕ್ಷರು, ‘ಭಾಷೆಯನ್ನು ಹೆಚ್ಚು ಹೆಚ್ಚು ಬಳಕೆ ಮಾಡುವಂತಹ, ಸುಲಭಗೊಳಿಸುವಂತಹ ಹಾಗೂ ವ್ಯಾಪಕಗೊಳಿಸುವ ಸಾಧನಗಳ ಬಳಕೆಗೆ ತಮ್ಮ ತಕರಾರು ಇಲ್ಲ. ಆದರೆ, ಅವುಗಳನ್ನು ಬಳಸುವ ವಿಧಾನದಲ್ಲಿ ಎಚ್ಚರವಹಿಸಬೇಕು’ ಎಂಬುದನ್ನು ಉದಾಹರಣೆ ಸಹಿತ ವಿವರಿಸಿದರು.

‘ಹಳ್ಳಿಗಳಲ್ಲಿ ನಡೆಯುವ ಯಾವುದೇ ಒಂದು ಘಟನೆಯನ್ನು ಸಾಧನಗಳಲ್ಲಿ ‘ರೆಕಾರ್ಡ್‌’ ಮಾಡಿಕೊಂಡರೆ ಅದು ದಾಖಲೆಯಾಗಿ ಉಳಿಯುತ್ತದೆ. ಬೇಕಿದ್ದಾಗ ತೆಗದು ಓದಿ ಅಥವಾ ನೋಡಿ ಅದನ್ನು ಮರೆಯುತ್ತೇವೆ. ಆದರೆ, ಅದೇ ಘಟನೆಯನ್ನು ಜನರ ಬಾಯಿಂದ ಕೇಳಿದಾಗ, ಘಟನೆ ಕಥನರೂಪ ಪಡೆಯುತ್ತದೆ. ಮತ್ತಷ್ಟು ಕಥೆಗಳು ಹುಟ್ಟಿಕೊಳ್ಳುತ್ತವೆ. ಹಾಗಾಗಿ ಎಲ್ಲೆಲ್ಲಿ ಭಾಷೆಯ ಬೆಳವಣಿಗೆಗೆ ಮಾರಕವಾಗಬಹುದೋ ಅಲ್ಲಿ ಸಾಧನಗಳ ಬಳಕೆ ಬೇಡ’ ಎಂದರು.

‘ಕನ್ನಡ ಬಾರದವರಿಗೆ ಕನ್ನಡ ಕಲಿಸುವ ಸಲುವಾಗಿ ಜೆಎನ್‌ಯು ವಿಶ್ವವಿದ್ಯಾಲಯದಲ್ಲಿ ಜಾಲತಾಣ ತೆರೆಯಲಾಗಿದೆ. ಅಲ್ಲಿ ಸುಮಾರು ಹದಿನಾರು ಸಾವಿರ ಜನರು ಕಲಿಯುತ್ತಿದ್ದಾರೆ. ಅದು ಒಳ್ಳೆಯದಲ್ಲವೇ? ನಾವೀಗ ಶಾಲೆ ಮಾಡಿ ಕಲಿಸುವುದು ಬೇರೆ. ಆದರೆ, ಬೇರೆ ಬೇರೆ ಭಾಷೆಯವರು ಸುಲಭವಾಗಿ ಕನ್ನಡ ಕಲಿಯುವಂತೆ ಮಾಡುವುದಿದ್ದರೆ ತಂತ್ರಜ್ಞಾನವನ್ನೇಕೆ ಬಳಸಬಾರದು?’ ಎನ್ನುವ ಮೂಲಕ ಭಾಷೆಯ ಆಧುನೀಕರಣ ಬೆಂಬಲಿಸುವ ತಮ್ಮ ನಿಲುವನ್ನು ಸಮರ್ಥಿಸಿಕೊಂಡರು.

ಒಂದು ಸಾವಿರ ಆಂಗ್ಲ ಮಾಧ್ಯಮ ಶಾಲೆಗಳನ್ನು ಸ್ಥಾಪಿಸಿಲು ಉದ್ದೇಶಿಸಿರುವ ರಾಜ್ಯ ಸರ್ಕಾರದ ನಿಲುವಿಗೆ ವಿರೋಧ ವ್ಯಕ್ತಪಡಿಸಿದ ಸಿರಿಸಂಪಿಗೆ ಕವಿ, ‘ನಮ್ಮ ಕಲಿಕೆಯ ಭಾಷೆ ಮಾತೃಭಾಷೆಯಾಗಿದ್ದರೆ, ಯಾವ ಭಾಷೆಯನ್ನೂ ಸುಲಭವಾಗಿ ಕಲಿಯಬಹುದು. ಭಾಷೆ ಕಲಿಯುವುದಕ್ಕೂ ಪಕ್ವತೆ ಬೇಕು. ಹಾಗಾಗಿ ಮಕ್ಕಳು ಒಂದರಿಂದ ಏಳನೇ ತರಗತಿಯ ವರೆಗೆ ಮಾತೃಭಾಷೆಯಲ್ಲಿಯೇ ಕಲಿಯಲಿ. ಅದು ಮನಸ್ಸು ಪಕ್ವಗೊಳ್ಳುವ, ಗ್ರಹಿಕೆ ಬೆಳೆಯುವ ತಿಳಿವಳಿಕೆ ವಿಸ್ತಾರವಾಗುವ ವಯಸ್ಸು. ತಾಯಿಭಾಷೆಯನ್ನು ಕಲಿಯಲು ಅದು ಪಕ್ವವಾದ ವಯಸ್ಸು. ಆ ವಯಸ್ಸಿನಲ್ಲಿ ಮಾತೃಭಾಷೆಯನ್ನು ಸರಿಯಾಗಿ ಕಲಿತರೆ ಬೇರೆ ಭಾಷೆಗಳು ಸುಲಭವಾಗಿ ಕಲಿಯಬಹುದು. ಬಳಿಕ ಯಾವುದೇ ಭಾಷೆಯಲ್ಲಿ ಕಲಿತರೂ ಅಡ್ಡಿಯಿಲ್ಲ’ ಎಂದರು.

ಖಾಸಗಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿತ ಮಕ್ಕಳು ಯಾವುದೇ ಕ್ಷೇತ್ರದಲ್ಲಿ ಉದ್ಯೋಗ ಗಳಿಸಬಲ್ಲರು. ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದುವ ಬಡವರ್ಗದವರ ಮಕ್ಕಳು ಇಂತಹ ಅವಕಾಶದಿಂದ ವಂಚಿತರಾಗುತ್ತಿದ್ದಾರೆ ಎಂಬ ಅಸಮಾಧಾನ ಕುರಿತು ಪ್ರತಿಕ್ರಿಯಿಸಿದ ಅವರು, ‘ಮಕ್ಕಳಿಗೆ ಭಾಷೆ ಕಲಿಸುವುದು ಹಾಗೂ ಉದ್ಯೋಗಾವಕಾಶ ಸೃಷ್ಟಿಸುವುದು ಸರ್ಕಾರದ ಜವಾಬ್ದಾರಿ. ಹಾಗಾಗಿ ಶಿಕ್ಷಣ ರಾಷ್ಟ್ರೀಕರಣವಾಗಬೇಕು’ ಎಂದು ಪ್ರತಿಪಾದಿಸಿದರು.

ಸಮ್ಮೇಳನವು ಜ. 4ರಿಂದ 6ವರೆಗೆ ಧಾರವಾಡದಲ್ಲಿ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !