ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ದಿನದ ಪ್ರವೇಶ ಪರೀಕ್ಷೆ ಸುಸೂತ್ರ

ಸುಗಮ ಪರೀಕ್ಷೆಗೆ ಮುನ್ನುಡಿ ಬರೆದ ಗುಲಬರ್ಗಾ ವಿಶ್ವವಿದ್ಯಾಲಯ
Last Updated 12 ಜುಲೈ 2019, 14:04 IST
ಅಕ್ಷರ ಗಾತ್ರ

ಕಲಬುರ್ಗಿ: ಗುಲಬರ್ಗಾ ವಿಶ್ವವಿದ್ಯಾಲಯದ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶಕ್ಕಾಗಿ ಶುಕ್ರವಾರ ಪರೀಕ್ಷೆಗಳು ಸೂಸೂತ್ರವಾಗಿ ನಡೆದವು.

ಮೊದಲ ದಿನ ಎರಡು ವಿಭಾಗಗಳಲ್ಲಿ ಪರೀಕ್ಷೆ ನಡೆಸಲಾಯಿತು. ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1ರವರೆಗೆ ಭೌತವಿಜ್ಞಾನ, ಭೂಗರ್ಭ ಶಾಸ್ತ್ರ, ಸಮಾಜಕಾರ್ಯ ಹಾಗೂ ಮಧ್ಯಾಹ್ನ 3ರಿಂದ ಸಂಜೆ 5.30ರವರೆಗೆ ಗಣಿತಶಾಸ್ತ್ರ, ಸಸ್ಯಶಾಸ್ತ್ರ ಹಾಗೂ ಅರ್ಥಶಾಸ್ತ್ರ ವಿಭಾಗಗಳ ಪ್ರವೇಶಕ್ಕೆ ಪರೀಕ್ಷೆಗಳು ನಡೆದವು. ಬೆಳಿಗ್ಗೆ 1,021 ಹಾಗೂ ಮಧ್ಯಾಹ್ನ 1,398 ವಿದ್ಯಾರ್ಥಿಗಳು ಪರೀಕ್ಷೆಗೆ ತೆಗೆದುಕೊಂಡರು.

ಪರೀಕ್ಷೆ ನಡೆಸಲು ಸುಗಮವಾಗುವಂತೆ 11 ಯೂನಿಟ್‌ಗಳನ್ನು ಮಾಡಲಾಗಿದೆ. ಈ ಯೂನಿಟ್‌ಗಳಿಗೆ ತಲಾ 8ರಿಂದ 10 ಬ್ಲಾಕ್‌ಗಳನ್ನು ನೀಡಲಾಗಿದೆ. ವಿಶ್ವವಿದ್ಯಾಲಯದ ವಿವಿಧ ಕಟ್ಟಡಗಳಲ್ಲಿ ಬೆಳಿಗ್ಗೆ ಅವಧಿಗೆ 41 ಹಾಗೂ ಮಧ್ಯಾಹ್ನ ಅವಧಿಗೆ 56 ಬ್ಲಾಕ್‌ಗಳನ್ನು ಮಾಡಲಾಗಿದೆ.

ಪ್ರತಿ ಯೂನಿಟ್‌ಗೆ ಒಬ್ಬ ಮುಖ್ಯಸ್ಥರನ್ನು, ಪ್ರತಿ ಬ್ಲಾಕ್‌ಗೆ ಒಬ್ಬ ಕಿರಿಯ ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ. ಒಟ್ಟು 22 ಸ್ನಾತಕೋತ್ತರ ವಿಭಾಗಗಳ ಪ್ರವೇಶಕ್ಕಾಗಿ ಜುಲೈ 18ರವರೆಗೂ ಈ ಪರೀಕ್ಷೆಗಳು ನಡೆಯಲಿವೆ.

‘ಪ್ರಸಕ್ತ ಶೈಕ್ಷಣಿಕ ಸಾಲಿನ ಪ್ರವೇಶಕ್ಕೆ ಒಟ್ಟು 12,107 ಅರ್ಜಿಗಳು ಬಂದಿದ್ದು, ಇದರಲ್ಲಿ ಪ್ರವೇಶ ಪರೀಕ್ಷೆ ಹಾಗೂ ಪ್ರವೇಶ ಪರೀಕ್ಷೆ ರಹಿತ ವಿಷಯಗಳಿಗೆ 10,261 ವಿದ್ಯಾರ್ಥಿಗಳು ಅರ್ಜಿ ಶುಲ್ಕ ಪಾವತಿಸಿದ್ದಾರೆ. 8,939 ವಿದ್ಯಾರ್ಥಿಗಳು 22 ಸ್ನಾತಕೋತ್ತರ ವಿಭಾಗಳ ವಿಷಯಗಳಿಗಾಗಿ ಪ್ರವೇಶ ಪರೀಕ್ಷೆಯಲ್ಲಿ ಭಾಗವಹಿಸುವರು’ ಎಂದು ವಿ.ವಿ. ಹಂಗಾಮಿ ಕುಲಪತಿ ಪ್ರೊ.ಎಸ್.ಪಿ.ಮೇಲಕೇರಿ ತಿಳಿಸಿದ್ದಾರೆ.

ವಿದ್ಯಾರ್ಥಿಗಳ ಮೊಬೈಲ್‌ಗೆ ಮಾಹಿತಿ:

‘ಈ ಬಾರಿ ಪರೀಕ್ಷೆ ವಿವರಗಳನ್ನು ಆಸನ ಸಂಖ್ಯೆ, ಬ್ಲಾಕ್‌, ಯೂನಿಟ್‌ ಮಾಹಿತಿಗಳನ್ನು ವಿದ್ಯಾರ್ಥಿಗಳ ಮೊಬೈಲ್‌ಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದೇವೆ. ಇದರಿಂದಾಗಿ ವಿದ್ಯಾರ್ಥಿಗಳ ಶ್ರಮ ಕಡಿಮೆಯಾಗಿದೆ. ಪ್ರತಿ ವರ್ಷ ಮುಂಚಿತವಾಗಿಯೇ ಬಂದು ತಮ್ಮ ಬ್ಲಾಕ್‌, ಯೂನಿಟ್‌, ಸಂಖ್ಯೆಗಳನ್ನು ಹುಡುಕಲು ಪರದಾಡಬೇಕಾಗುತ್ತಿತ್ತು. ಈಗ ಅದನ್ನು ತಪ್ಪಿಸಿದ್ದೇವೆ’ ಎಂದು ಪ್ರವೇಶ ಪರೀಕ್ಷೆಯ ಮುಖ್ಯ ಸಂಯೋಜಕಿ ಪ್ರೊ.ಪರಿಮಳಾ ಅಂಬೇಕರ್‌ ತಿಳಿಸಿದರು.

‘ಮುಂಚಿತವಾಗಿಯೇ ಎಲ್ಲ ಮಾಹಿತಿಗಳು ಮೊಬೈಲ್‌ನಲ್ಲಿ ಸಿಕ್ಕಿದ್ದರಿಂದ ಏನೂ ಗೊಂದಲ ಉಂಟಾಗಲಿಲ್ಲ. ವಿದ್ಯಾರ್ಥಿಗಳು ಸಹ ನಿರ್ಭೀತಿಯಿಂದ ಪರೀಕ್ಷೆ ಬರೆಯಲು ಸಹಕಾರಿಯಾಯಿತು. ಪರೀಕ್ಷಾ ಸಿಬ್ಬಂದಿಯ ಶ್ರಮವೂ ಕಡಿಮೆಯಾಗಿದೆ. ಇದರ ಜತೆಗೆ, ಗ್ರಾಮೀಣ ಪ್ರದೇಶದಿಂದ ಬರುವವರ ಅನುಕೂಲಕ್ಕಾಗಿ ಒಂದು ಸಹಾಯವಾಣಿ ಕೇಂದ್ರ ತೆರೆಯಲಾಗಿದೆ. ಅಲ್ಲಿ ವಿವಿಧ ವಿಭಾಗಗಳ ನಾಲ್ವರು ಮುಖ್ಯಸ್ಥರು ಹಾಜರಿದ್ದು, ವಿದ್ಯಾರ್ಥಿಗಳಿಗೆ ನೆರವಾಗುತ್ತಿದ್ದಾರೆ. ಮತ್ತೆ ಹಲವರು ವಿಶ್ವವಿದ್ಯಾಲಯದ ವೆಬ್‌ಸೈಟ್‌ನಲ್ಲಿಯೂ ಈ ಮಾಹಿತಿ ಪಡೆದುಕೊಂಡಿದ್ದಾರೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರೊ.ದೇವಿದಾಸ ಮಾಲೆ ಹಾಗೂ ಪ್ರೊ.ಸುರೇಖಾ ಕ್ಷೀರಸಾಗರ ಅವರು ಈ ಪರೀಕ್ಷೆಯ ಸಹ ಸಂಯೋಜಕರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT