ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಟ್ಟದಷ್ಟು ಸಾಲ: ಉದ್ಯಮಿಗಳು ಕಂಗಾಲು

ದೇಶೀಯ ಮಾರುಕಟ್ಟೆ ನಂಬಿದ ಗಾರ್ಮೆಂಟ್ಸ್‌ ಘಟಕಗಳಿಗೆ ವಿಪರೀತ ನಷ್ಟ, ಮುಚ್ಚುವ ಭೀತಿ
Last Updated 3 ಸೆಪ್ಟೆಂಬರ್ 2019, 8:53 IST
ಅಕ್ಷರ ಗಾತ್ರ

ಮಂಡ್ಯ: ದೇಶೀಯ ಮಾರುಕಟ್ಟೆಯನ್ನೇ ನಂಬಿ, ಸಿದ್ಧ ಉಡುಪು ತಯಾರಿಕಾ ಘಟಕ ನಡೆಸುತ್ತಿರುವ ಮಾಲೀಕರು ಕಳೆದೊಂದು ವರ್ಷದಿಂದ ಕಂಗಾಲಾಗಿದ್ದಾರೆ. ಸಾಲ ಬೆಟ್ಟದಂತೆ ಬೆಳೆಯುತ್ತಿದ್ದು ಕಾರ್ಖಾನೆ ಮುಚ್ಚುವ ಭೀತಿ ಎದುರಾಗಿದೆ.

ಮದ್ದೂರು ತಾಲ್ಲೂಕು ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದಲ್ಲಿರುವ ಶಾಹಿ ಎಕ್ಸ್‌ಪೋರ್ಟ್ಸ್‌ ಸಿದ್ಧ ಉಡುಪು ತಯಾರಿಕಾ ಘಟಕದ ವಹಿವಾಟು ಈಗ ಅಂತರರಾಷ್ಟ್ರೀಯ ಮಾರುಕಟ್ಟೆಯ ಮೇಲೆ ಅವಲಂಬಿತವಾಗಿದೆ. ನೋಟು ರದ್ದತಿ, ಜಿಎಸ್‌ಟಿ ಹಾಗೂ ಸರ್ಕಾರದ ಇನ್ನಿತರ ಕ್ರಮಗಳಿಂದಾಗಿ ದೇಶದೊಳಗಿನ ವಹಿವಾಟು ಕುಸಿತ ಕಂಡಿದೆ. ನಷ್ಟ ಸರಿದೂಗಿಸಿಕೊಳ್ಳಲು ಅಂತರರಾಷ್ಟ್ರೀಯ ವಹಿವಾಟಿನಲ್ಲಿ ಗಳಿಸಿದ ಲಾಭವನ್ನು ತಂದು ಸುರಿಯಲಾಗುತ್ತಿದೆ.

ಶಾಹಿ ಗಾರ್ಮೆಂಟ್ಸ್‌ ಕಾರ್ಖಾನೆಯಲ್ಲಿ 5 ಸಾವಿರ ಕಾರ್ಮಿಕರು ದುಡಿಯುತ್ತಿದ್ದಾರೆ. ಇಲ್ಲಿಯವರೆಗೆ ಕಾರ್ಮಿಕರ ಉದ್ಯೋಗದ ಮೇಲೆ ಯಾವುದೇ ಪರಿಣಾಮ ಉಂಟಾಗಿಲ್ಲ. ಜಿಲ್ಲೆ ಮಾತ್ರವಲ್ಲದೇ ಮೈಸೂರು, ರಾಮನಗರ, ಚಾಮರಾಜನಗರ ಜಿಲ್ಲೆಗಳಿಂದಲೂ ಇಲ್ಲಿಗೆ ಕಾರ್ಮಿಕರು ಬರುತ್ತಾರೆ.

ಶ್ರೀರಂಗಪಟ್ಟಣದ ಯೂರೊ ಕ್ಲಾಥಿಂಗ್‌ ಸೆಂಟರ್‌ ಘಟಕದಲ್ಲೂ ಇದೇ ಪರಿಸ್ಥಿತಿ ಇದೆ. ಇಲ್ಲಿ ಒಂದು ಸಾವಿರ ಕಾರ್ಮಿಕರಿದ್ದು ಉದ್ಯೋಗಕ್ಕೆ ತೊಂದರೆಯಾಗಿಲ್ಲ. ಅಂತರರಾಷ್ಟ್ರೀಯ ವಹಿವಾಟು ಯಾವುದೇ ಅಡ್ಡಿಯಿಲ್ಲದೇ ನಡೆಯುತ್ತಿರುವ ಕಾರಣ ಘಟಕ ಉಸಿರಾಡುತ್ತಿದೆ. ಆದರೆ, ದೇಶದೊಳಗಿನ ವಹಿವಾಟು ಮಾತ್ರ ನಷ್ಟದಲ್ಲೇ ಮುಂದುವರಿಯುತ್ತಿದೆ.

‘ನೋಟು ರದ್ದತಿ, ಜಿಎಸ್‌ಟಿ ಜಾರಿಯಿಂದಾಗಿ ದೇಶೀಯ ವಹಿವಾಟು ಶೇ 30ರಷ್ಟು ಕುಸಿದಿದೆ. ವಿದೇಶಿ ವಹಿವಾಟು ಚೆನ್ನಾಗಿ ನಡೆಯುತ್ತಿರುವ ಕಾರಣ ನಷ್ಟ ಸರಿದೂಗಿಸಲಾಗುತ್ತಿದೆ. ಜಿಎಸ್‌ಟಿ ಜಾರಿಯ ನಂತರ ಉಂಟಾಗಿರುವ ನಷ್ಟದಿಂದ ಸಗಟು ವರ್ತಕರು ಹೊರಬರುವ ಸ್ಥಿತಿ ನಿರ್ಮಾಣವಾಗಬೇಕು’ ಎನ್ನುತ್ತಾರೆ ಶಾಹಿ ಎಕ್ಸ್‌ಪೋರ್ಟ್ಸ್ ಘಟಕದ ಎಚ್‌ಆರ್‌ ವಿಭಾಗದ ಮುಖ್ಯಸ್ಥ ಕೆಂಪರಾಜ್‌.

ಸಾಲದ ಸುಳಿ: ದೇಶೀಯ ವಹಿವಾಟಿನ ಮೇಲೆ ಅವಲಂಬಿತವಾಗಿ ಸಿದ್ಧ ಉಡುಪು ತಯಾರಿಸುವ 10 ಘಟಕಗಳು ಜಿಲ್ಲೆಯಲ್ಲಿವೆ. ಇಲ್ಲಿ 50 ರಿಂದ 150 ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಸಗಟು ವರ್ತಕರು, ಉಡುಪುಗಳನ್ನು ಸಾಲ ಕೇಳುತ್ತಿರುವ ಕಾರಣ ಮಾಲೀಕರು ನಷ್ಟ ಅನುಭವಿಸುತ್ತಿದ್ದು ಘಟಕ ಮುಚ್ಚುವ ಭೀತಿ ಎದುರಾಗಿದೆ.

‘ನೋಟು ರದ್ದತಿಗಿಂತಲೂ ಮೊದಲು ಸಾಲ ಕೊಡುವ ಸಂಪ್ರದಾಯವೇ ಇರಲಿಲ್ಲ. ನೋಟು ರದ್ದತಿಯಿಂದ ಹಣದ ಹರಿವು ತಗ್ಗಿ ಸಾಲ ನೀಡುವ ಪ್ರಕ್ರಿಯೆ ಆರಂಭವಾಯಿತು. ಜಿಎಸ್‌ಟಿ ಜಾರಿಯಾದ ನಂತರ ಸಾಲ ನೀಡುವ ಪ್ರಕ್ರಿಯೆ ಮುಂದುವರಿಯಿತು. ಈಗ ಅದು ಬೆಟ್ಟದಷ್ಟು ಬೆಳೆದು ನಿಂತಿದೆ. ಸಾಲ ಪಡೆದ ವರ್ತಕರು ಸಂಪರ್ಕಕ್ಕೇ ಸಿಗುತ್ತಿಲ್ಲ. ಕಾರ್ಮಿಕರು ಕೆಲಸ ಮಾಡುತ್ತಿದ್ದು ಉತ್ಪಾದನೆಯನ್ನೂ ನಿಲ್ಲಿಸುವಂತಿಲ್ಲ, ಉತ್ಪಾದನೆ ಕಡಿತಗೊಳಿಸಿದರೆ ಉದ್ಯೋಗವನ್ನೂ ಕಡಿತಗೊಳಿಸಬೇಕು. ಇದೇ ಪರಿಸ್ಥಿತಿ ಮುಂದುವರಿದರೆ ಉದ್ಯೋಗಕ್ಕೂ ಸಂಚಕಾರ ಬರಲಿದೆ’ ಎಂದು ಲಾಗಿನ್‌ ಗಾರ್ಮೆಂಟ್ಸ್‌
ಮಾಲೀಕ ಮಾನವ್‌ ಆತಂಕ ವ್ಯಕ್ತಪಡಿಸಿದರು.

ಆತಂಕದ ಕಾರ್ಮೋಡ: ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಶೆಟ್ಟಿಹಳ್ಳಿಯಲ್ಲಿ ತಿಂಗಳ ಹಿಂದಷ್ಟೇ ಹೊಸದಾಗಿ ‘ಎಎಚ್‌ಪಿ ಅಪರಲ್ಸ್‌’ ಸಿದ್ಧ ಉಡುಪು ಘಟಕ ಕಾರ್ಯಾರಂಭ ಮಾಡಿದೆ. ಇಲ್ಲಿ 2 ಸಾವಿರ ಕಾರ್ಮಿಕರಿದ್ದಾರೆ. ಘಟಕದ ಆರಂಭಿಕ ಹಂತದಲ್ಲೇ ಆರ್ಥಿಕ ಹಿಂಜರಿತ ಉಂಟಾಗಿರುವುದು ಆತಂಕದ ಕಾರ್ಮೋಡ ಸೃಷ್ಟಿಸಿದೆ.

‘ವರ್ಷದವರೆಗೂ ಸಮಸ್ಯೆ ಇಲ್ಲ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಗ್ರಾಹಕರು ಸಿಕ್ಕಿದ್ದಾರೆ. ಆರ್ಥಿಕ ಹಿಂಜರಿತ ಮುಂದೆ ಯಾವ ಮಟ್ಟ ತಲುಪಲಿದೆ ಎಂಬುದನ್ನು ಕಾದು ನೋಡಬೇಕು. ಆಟೊಮೊಬೈಲ್‌ ಕ್ಷೇತ್ರದಲ್ಲಿ ಉಂಟಾಗಿರುವ ತಲ್ಲಣ ಗಾರ್ಮೆಂಟ್ಸ್‌ ಕ್ಷೇತ್ರಕ್ಕೆ ತಟ್ಟಿಲ್ಲ’ ಎಂಬುದು ಎಎಚ್‌ಪಿ ಅಪರಲ್ಸ್‌ ಘಟಕದ ಎಚ್‌ಆರ್‌ ಮುಖ್ಯಸ್ಥ ಬಾಲಕೃಷ್ಣ ಅನಿಸಿಕೆ.

‘ಕೊಟ್ಟಷ್ಟು ಸಂಬಳ ಕೊಡಿ, ಕೆಲಸದಿಂದ ತೆಗೀಬೇಡಿ’

ಸಿದ್ಧ ಉಡುಪು ಘಟಕಗಳು ಕಾರ್ಮಿಕರಿಗೆ ಕನಿಷ್ಠ ಕೂಲಿ ನೀಡುತ್ತಿಲ್ಲ ಎಂದು ಆರೋಪಿಸಿ ಕಾರ್ಮಿಕ ಸಂಘಟನೆಗಳು ಹೋರಾಟದಲ್ಲಿ ತೊಡಗಿವೆ. ಕಾರ್ಮಿಕರ ಮೇಲೆ ನಡೆಯುತ್ತಿರುವ ಶೋಷಣೆ ನಿಲ್ಲಬೇಕು ಎಂದೂ ಒತ್ತಾಯಿಸುತ್ತಿವೆ.

‘ಸಂಬಳ ಜಾಸ್ತಿ ಕೇಳಿದರೆ, ಗ್ರಾಮೀಣ ಪ್ರದೇಶದಲ್ಲಿ ಈಗ ಕೊಡುತ್ತಿರುವ ಸಂಬಳವೇ ಜಾಸ್ತಿಯಾಗಿದ್ದು, ಹೆಚ್ಚಿಗೆ ಬೇಕೆಂದರೆ ಕೆಲಸ ಬಿಟ್ಟು ಹೋಗಿ ಎನ್ನುತ್ತಾರೆ. ಹೀಗಾಗಿ ಕೊಟ್ಟಷ್ಟು ಸಂಬಳ ಕೊಡಿ, ಕೆಲಸದಿಂದ ಮಾತ್ರ ತೆಗೆಯಬೇಡಿ ಎಂದು ಮನವಿ ಮಾಡಿದ್ದೇವೆ’ ಎಂದು ಗೆಜ್ಜಲಗೆರೆ ಶಾಹಿ ಎಕ್ಸ್‌ಪೋರ್ಟ್ಸ್‌ ಕಾರ್ಮಿಕರೊಬ್ಬರು ತಿಳಿಸಿದರು.

‘ದೊಡ್ಡ ಕಾರ್ಖಾನೆಗಳಿಗೆ ಬಿಸಿ ತಟ್ಟಿಲ್ಲ’

ಮೈಸೂರು: ‘ಉದ್ಯೋಗ ಕಡಿತ ಅಥವಾ ಹೊಸ ನೇಮಕಾತಿ ಮಾಡದಂತೆ ಆಡಳಿತ ಮಂಡಳಿಯಿಂದ ಯಾವುದೇ ಸೂಚನೆ ಬಂದಿಲ್ಲ. ಆರ್ಥಿಕ ಹಿಂಜರಿತದ ಪರಿಣಾಮ ಇದುವರೆಗೆ ತಟ್ಟಿಲ್ಲ. ಮುಂದೆ ಏನಾಗುವುದೋ ತಿಳಿಯದು’ ಎಂದು ಮೈಸೂರು ಜಿಲ್ಲೆಯಲ್ಲಿ ಮೂರು ಘಟಕಗಳನ್ನು ಹೊಂದಿರುವ ಸಿದ್ಧ ಉಡುಪು ತಯಾರಿಕಾ ಕಾರ್ಖಾನೆಯ ವ್ಯವಸ್ಥಾಪಕರು ತಿಳಿಸಿದರು.

ಮೂರು ಘಟಕಗಳಲ್ಲಿ 5 ರಿಂದ 6 ಸಾವಿರ ನೌಕರರು ಕೆಲಸ ಮಾಡುತ್ತಿದ್ದಾರೆ. ಯಾರನ್ನೂ ಕೆಲಸದಿಂದ ತೆಗೆದುಹಾಕಿಲ್ಲ. ದೊಡ್ಡ ಕಾರ್ಖಾನೆಗಳಿಗೆ ಭಾರಿ ಹೊಡೆತ ಬಿದ್ದಿಲ್ಲ ಎಂದು ಹೇಳಿದರು.

ಜಿಲ್ಲೆಯ ತಿ.ನರಸೀಪುರ ಮತ್ತು ಮೈಸೂರು ನಗರದ ಹೊರವಲಯದ ಕೂರ್ಗಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಗಾರ್ಮೆಂಟ್ಸ್‌ ಕಾರ್ಖಾನೆಗಳಿವೆ. ಮೈಸೂರು, ನಂಜನಗೂಡು, ವರುಣಾ, ತಿ.ನರಸೀಪುರದ ಸಾವಿರಾರು ಮಹಿಳೆಯರು ಇಲ್ಲಿಗೆ ಕೆಲಸ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT