ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊಲ್ಲರಹಳ್ಳಿ: ಶ್ರೀನಿವಾಸ ದೇವರ ಮಂಗಳ ಮಹೋತ್ಸವ

ಭಕ್ತಿ ಭಾವದಲ್ಲಿ ಮಿಂದೆದ್ದ ಭಕ್ತರು, ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಅವಕಾಶ
Last Updated 10 ಜೂನ್ 2018, 9:17 IST
ಅಕ್ಷರ ಗಾತ್ರ

ಮಾಯಕೊಂಡ: ಸಮೀಪದ ಅಣಜಿ ಗೊಲ್ಲರಹಳ್ಳಿಯಲ್ಲಿ ಶನಿವಾರ ನಡೆದ ಶ್ರೀನಿವಾಸ ದೇವರ ಮಂಗಳ ಮಹೋತ್ಸವ ಭಕ್ತಿ –ಭಾವ, ಸಂಪ್ರದಾಯಗಳಿಂದ ಗಮನ ಸೆಳೆಯಿತು. ಮಳೆಯ ಅಡಚಣೆಯ ನಡುವೆಯೂ ಸಾವಿರಾರು ಭಕ್ತರು ಶ್ರೀನಿವಾಸ ದೇವರ ಮಂಗಳ ಮಹೋತ್ಸವವನ್ನು ಕಣ್ಮನ ತುಂಬಿಕೊಂಡು ಪುನೀತರಾದರು.

ಭೂವೈಕುಂಠ ಎಂದೇ ಪ್ರಸಿದ್ಧವಾದ, ತಿರುಪತಿಯಿಂದ ಬಂದ ಶ್ರೀದೇವಿ, ಭೂದೇವಿ ಸಹಿತ ಶ್ರೀನಿವಾಸ ದೇವರ ಉತ್ಸವ ಮೂರ್ತಿಗಳಿಗೆ ಬೆಳಿಗ್ಗೆ ಪಂಚಾಮೃತ ಅಭಿಷೇಕ ಮತ್ತು ಪೂಜೆ ನೆರವೇರಿಸಲಾಯಿತು. ಊರ ಹೊರವಲಯದ ವಿಶಾಲ ವೇದಿಕೆಯಲ್ಲಿ ಮಂಗಳ ಮಹೋತ್ಸವ ನೆರವೇರಿಸಲು ವ್ಯವಸ್ಥೆ ಮಾಡಲಾಗಿತ್ತು.

ವಿಶೇಷವಾದ ತಿರುಮಂಜನಾಭಿಷೇಕ, ಅರ್ಚನಾ ಮತ್ತು ನಾಮ ಸಂಕೀರ್ತನೋತ್ಸವ ನಡೆಸಲಾಯಿತು. ವೇದಿಕೆಯ ಪರದೆಯ ಹಿಂದೆ ಪೂಜಾ ಕೈಂಕರ್ಯ ಮುಗಿಸಿ, ಮಹಾ ಮಂಗಳಾರತಿಯೊಂದಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಭಕ್ತರು ಪುಷ್ಪ, ಮಂತ್ರಾಕ್ಷತೆಯೊಂದಿಗೆ ಆಶೀರ್ವಾದ ಪಡೆದರು. ವಿವಿಧ ಪುಷ್ಪಾರ್ಚನೆ, ಅಭಿಷೇಕ ಮತ್ತು ನಾಮಸ್ತೋತ್ರಗಳಿಂದ ಪೂಜೆ ಸಲ್ಲಿಸಲಾಯಿತು. ಗಣ್ಯರು ಮತ್ತು ಆಗಮಿಕರನ್ನು ಸನ್ಮಾನಿಸಲಾಯಿತು.

ಮಹಾ ಮಂಗಳೋತ್ಸವದ ನಂತರ ಶ್ರೀದೇವಿ, ಭೂದೇವಿ ಸಹಿತ ಶ್ರೀನಿವಾಸ ದೇವರ ಉತ್ಸವ ಮೂರ್ತಿಗಳನ್ನು ಸಾರೋಟಿನಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಡೊಳ್ಳು, ವೀರಗಾಸೆ, ಕರಡಿ ಮಜಲು ತಂಡಗಳ ಕಲಾ ಪ್ರದರ್ಶನ ಮೆರವಣಿಗೆಗೆ ಮೆರುಗು ತಂದವು.

ವಿಶಾಲ ವೇದಿಕೆ ಮತ್ತು ಷಾಮಿಯಾನ ವ್ಯವಸ್ಥೆ ಮಾಡಲಾಗಿತ್ತಾದರೂ ಮಳೆಯಿಂದಾಗಿ ಷಾಮಿಯಾನದಡಿ ನೀರುನಿಂತು ಅವ್ಯವಸ್ಥೆಯುಂಟಾಗಿತ್ತು. 11ಗಂಟೆಯಾದರೂ ಮಳೆ ನಿಲ್ಲದ ಕಾರಣ ಭಕ್ತರಿಗೆ ಕೆಲಕಾಲ ತೊಂದರೆಯಾಯಿತು. ವೇದಿಕೆಯ ಮೇಲೆಯೇ ಭಕ್ತರು ಕುಳಿತು ಪೂಜೆಯಲ್ಲಿ ಪಾಲ್ಗೊಂಡರು. ಲಕ್ಮೀ ವೆಂಕಟೇಶ್ವರ ಟ್ರಸ್ಟ್ ಸಂಚಾಲಕ ಬಿ.ಟಿ. ಸಿದ್ದಪ್ಪ ನೇತೃತ್ವ ವಹಿಸಿದ್ದರು.

ಶಾಸಕ ಪ್ರೊ. ಲಿಂಗಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಎಸ್.ಕೆ. ಚಂದ್ರಪ್ಪ, ಉಪ ನೊಂದಣಾಧಿಕಾರಿ ರವೀಂದ್ರ ಗೌಡ, ಕಸಾಪ ತಾಲ್ಲೂಕು ಅಧ್ಯಕ್ಷ ಬಿ. ವಾಮದೇವಪ್ಪ ಮುಖಂಡರಾದ ಎಚ್. ಆನಂದಪ್ಪ, ಹನುಮಂತ ನಾಯ್ಕ, ವಿ. ವೆಂಕಟಪ್ಪ, ಮೆಳ್ಳೆಕಟ್ಟೆ ನಾಗರಾಜ, ಹಾಲೇಕಲ್ಲು ಚಂದ್ರನಾಯ್ಕ, ಧರ್ಮರಾಜ್, ರಾಕೇಶ್, ಗಿರಿರಾಜ್, ನಿವೃತ್ತ ಸಹಾಯಕ ನಿರ್ದೇಶಕ ಚೌಡಪ್ಪ, ಬಾಲಚಂದ್ರಪ್ಪ  ಇದ್ದರು.

ಅಣಜಿ ಗೊಲ್ಲರಹಳ್ಳಿಯ ಶ್ರೀನಿವಾಸ ದೇವರ ಮಂಗಳ ಮಹೋತ್ಸವ ಕಾರ್ಯಕ್ರಮ ತಿರುಪತಿ ಮಾದರಿ ಪೂಜಾ ವಿಧಾನಗಳಿಂದ ತುಂಬಿಹೋಗಿತ್ತು. ಹರಿದಾಸ ನಾಮ ಸಂಕೀರ್ತನೆ ಶ್ರವಣ ಮಾಡಿ ಭಕ್ತಿ ಪರವಶರಾದರು. ಬೆಂಗಳೂರಿನ ತಿರುಪತಿ ತಿರುಮಲ ದೇವಾಲಯಂ ಟ್ರಸ್ಟ್‌ನ ಆಸ್ಥಾನ ವಿದುಷಿ ದಿವ್ಯಾ ಗಿರಿಧರ ಅವರ ಕರ್ನಾಟಕ ಶಾಸ್ತ್ರೀಯ ಸಂಗೀತದ ದಾಸವಾಣಿ ಕಾರ್ಯಕ್ರಮ ಜನಮನ ಸೂರೆಗೊಂಡಿತು. ಪ್ರಧಾನ ಅರ್ಚಕ ಆನಂದ ತೀರ್ಥ ಪಗಡಾಲ ಅವರ ನಿರೂಪಣೆ, ಪ್ರವಚನ ಗಮನ ಸೆಳೆಯಿತು. ದಿವ್ಯಾ ಗಿರಿಧರ ಗಾಯನದ ‘ದಾರಿ ಯಾವುದಯ್ಯಾ ವೈಕುಂಠಕೆ, ದಾರಿ ತೋರಿ ತೋರಿಸಯ್ಯಾ’, ಕೀರ್ತನೆ ಜನರನ್ನು ಮಂತ್ರಮುಗ್ಧರನ್ನಾಗಿಸಿತು. ತಿರುಪತಿ ತಿರುಮಲ ದೇವಾಲಯಂ ಟ್ರಸ್ಟ್‌ನ ಆಗಮಿಕರಾದ ಸೀತಾರಾಮಾಚಾರ್ಯ, ಕುರೇಶ ಚಾರ್ಯ, ಹರಿಯಾಚಾರ್ಯರ ಮಂತ್ರೋದ್ಘೋಷಗಳು, ಕೀರ್ತನೆಗಳು ಗಮನ ಸೆಳೆದವು.

ಅಧಿಕ ಮಾಸ ಅಧಿಕ ಮಾಸದಲ್ಲಿ ಮಂತ್ರಾಲಯ, ಹೊಸಪೇಟೆ ಹಂಪಿ, ದಾವಣಗೆರೆಗಳಲ್ಲಿ ಶ್ರೀನಿವಾಸ ದೇವರ ಮಂಗಳ ಮಹೋತ್ಸವ ನಿಮಿತ್ತ ಸಂಚಾರ ಏರ್ಪಡಿಸಲಾಗಿದೆ.

ಶ್ರೀನಿವಾಸ ದೇವರ ಮಂಗಳ ಮಹೋತ್ಸವ ಕಾರ್ಯಕ್ರಮ ಅಧಿಕ ಮಾಸದಲ್ಲಿ ನಡೆಸುವುದೇ ವಿಶೇಷ. ಅಧಿಕ ಮಾಸ ಕಾಲದಲ್ಲಿ ಶುಭ ಕಾರ್ಯಮಾಡಿದರೆ ನೂರು ಪಟ್ಟು ಪುಣ್ಯ ಬರುತ್ತದೆ.

ಭಕ್ತರಿಂದ ಈ ಕಾರ್ಯಕ್ರಮಕ್ಕೆ 3 ವರ್ಷದಿಂದ ಬೇಡಿಕೆಯಿದ್ದು, ಇಲ್ಲಿನ ದೇವಾಲಯದ ಆಡಳಿತ ಮಂಡಳಿ ಸಂಚಾಲಕ ಬಿ.ಟಿ. ಸಿದ್ದಪ್ಪ ತಂಡದ ಶ್ರಮದ ಫಲವಾಗಿ ಇಂದು ನೆರವೇರಿದೆ, ಎಂದು ತಿರುಪತಿ ತಿರುಮಲ ದೇವಾಲಯ ಸಂಯೋಜಕ ಸುಜಯ ಕೃಷ್ಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT