ಬುಧವಾರ, ಅಕ್ಟೋಬರ್ 16, 2019
22 °C
ಶಿವಮೊಗ್ಗದಲ್ಲಿ ನಡೆದ ಬಿಜೆಪಿ ವಿಶೇಷ ಸಭೆ

ಯಾವುದೇ ಸಮಯದಲ್ಲಿ ಚುನಾವಣೆ: ಈಶ್ವರಪ್ಪ ಸುಳಿವು

Published:
Updated:
Prajavani

ಶಿವಮೊಗ್ಗ: ಯಾವುದೇ ಸಮಯದಲ್ಲಿ ಚುನಾವಣೆ ಎದುರಾದರೂ ಬಿಜೆಪಿ ಗೆಲುವು ಖಚಿತ ಎನ್ನುವ ಮೂಲಕ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ರಾಜ್ಯ ವಿಧಾನಸಭೆಗೆ ಶೀಘ್ರದಲ್ಲೇ ಚುನಾವಣೆ ನಡೆಯುವ ಸುಳಿವನ್ನು ಪರೋಕ್ಷವಾಗಿ ನೀಡಿದರು.

ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಿಜೆಪಿ ವಿಶೇಷ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ದಿಢೀರ್ ಚುನಾವಣೆ ಎದುರಾದರೆ ಬಿಜೆಪಿ ಸ್ಪಷ್ಟ ಬಹುಮತ ಪಡೆಯುವುದು ಖಚಿತ. ಬೂತ್‌ಮಟ್ಟದಲ್ಲಿ ಪಕ್ಷ ಸದೃಢವಾಗಿದೆ. ಸಾಕಷ್ಟು ಜನರು ಪಕ್ಷದ ಸದಸ್ಯರಾಗುತ್ತಿದ್ದಾರೆ. ಸಂಘಟನೆ ವಿಸ್ತಾರವಾಗುತ್ತಿದೆ. ನಳಿನ್‌ಕುಮಾರ್ ಕಟೀಲ್ ಶಕ್ತಿ ತುಂಬುತ್ತಿದ್ದು, ಪಕ್ಷ ಬಲಿಷ್ಠವಾಗಿದೆ’ ಎಂದರು.

ನಾಲ್ಕು ದಿನಗಳಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ನೆರೆ ಪರಿಹಾರದ ಮೊತ್ತ ಬಿಡುಗಡೆ ಮಾಡಲಿದೆ ಎಂದು ಮಾಹಿತಿ ನೀಡಿದರು.

ಸಿದ್ದರಾಮಯ್ಯಗೆ ಸಿ.ಎಂ ಆಗುವ ಭ್ರಮೆ: ‘ಹಣ, ಜಾತಿ ಬಲದ ಮೇಲೆ ಅಧಿಕಾರ ಹಿಡಿಯಬಹುದು ಎಂಬ ಭ್ರಮೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೇಲುತ್ತಿದ್ದಾರೆ’ ಎಂದು ಈಶ್ವರಪ್ಪ ಕುಟುಕಿದರು.

ಯಡಿಯೂರಪ್ಪ ಅವರ ತಂತಿ ಮೇಲಿನ ನಡಿಗೆ ಹೇಳಿಕೆಯನ್ನೇ ಇಟ್ಟುಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸಿದ್ದರಾಮಯ್ಯ ಯತ್ನಿಸುತ್ತಿದ್ದಾರೆ. ಐದು ವರ್ಷ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಜನರಿಗೆ ಅನುಕೂಲವಾಗುವ ಒಂದೂ ಯೋಜನೆ ರೂಪಿಸಲಿಲ್ಲ. ಈಗ ಜನಪರವಾಗಿ ಇರುವ ಸರ್ಕಾರವನ್ನು ಟೀಕಿಸುತ್ತಿದ್ದಾರೆ ಎಂದು ಹರಿಹಾಯ್ದರು.

Post Comments (+)