ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇವಿಎಂ ಖರೀದಿ: ₹75 ಕೋಟಿ ಪ್ರಸ್ತಾವ

ಮೈಸೂರಿನಲ್ಲಿ 19 ರಾಜ್ಯಗಳ ಚುನಾವಣಾ ಆಯುಕ್ತರ 27ನೇ ಸಮ್ಮೇಳನ ಆರಂಭ
Last Updated 4 ಡಿಸೆಂಬರ್ 2018, 20:15 IST
ಅಕ್ಷರ ಗಾತ್ರ

ಮೈಸೂರು: ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರ ಖರೀದಿಸಲು ₹75 ಕೋಟಿ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ರಾಜ್ಯ ಚುನಾವಣಾ ಆಯುಕ್ತ ಪಿ.ಎನ್.ಶ್ರೀನಿವಾಸಾಚಾರಿ ಇಲ್ಲಿ ಮಂಗಳವಾರ ಹೇಳಿದರು.

ಸರ್ಕಾರ ಆರ್ಥಿಕ ನೆರವು ನೀಡಿದರೆ ಹಂತ ಹಂತವಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ವಿದ್ಯುನ್ಮಾನ ಮತ ಯಂತ್ರಗಳನ್ನು ಅಳವಡಿಸಲಾಗುವುದು. ಇತರ ರಾಜ್ಯಗಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಳಕೆಯಾಗಿರುವ ಮತಯಂತ್ರಗಳನ್ನು ಮರುಬಳಕೆ ಮಾಡುವ ಬಗ್ಗೆಯೂ ಚಿಂತನೆ ನಡೆದಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ರಾಜ್ಯದಲ್ಲಿ ನಡೆಯುವ ಚುನಾವಣೆಗಳಲ್ಲಿ ಆನ್‌ಲೈನ್‌ ಮತದಾನ ವ್ಯವಸ್ಥೆಯನ್ನು ತಕ್ಷಣಕ್ಕೆ ಜಾರಿಗೆ ತರುವುದು ಕಷ್ಟಕರ. ಗುಜರಾತ್ ರಾಜ್ಯದಲ್ಲಿ ಈ ಕುರಿತು ಪ್ರಯೋಗ ನಡೆದಿದೆ. ಆದರೆ, ಇದನ್ನು ಜಾರಿಗೊಳಿಸಲು ಸಾಕಷ್ಟು ಪೂರ್ವಸಿದ್ಧತೆಗಳು ಇರಬೇಕಾಗುತ್ತದೆ ಎಂದು ಪ್ರತಿಕ್ರಿಯಿಸಿದರು.

ಇದಕ್ಕೂ ಮುನ್ನ ನಡೆದ 19 ರಾಜ್ಯಗಳ ಚುನಾವಣಾ ಆಯುಕ್ತರ 27ನೇ ಸಮ್ಮೇಳನದಲ್ಲಿ ಆನ್‌ಲೈನ್‌ ಮತದಾನ, ಆನ್‌ಲೈನ್‌ನಲ್ಲಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಸೇರಿದಂತೆ ನೂತನ ತಂತ್ರಜ್ಞಾನಗಳನ್ನು ಚುನಾವಣಾ ಪ್ರಕ್ರಿಯೆಯಲ್ಲಿ ಅಳವಡಿಸುವ ಕುರಿತು ಚರ್ಚಿಸಲಾಯಿತು.

ಈಗಾಗಲೇ ಗುಜರಾತ್ ರಾಜ್ಯವು ಆನ್‌ಲೈನ್‌ ವೋಟಿಂಗ್ ಸಿಸ್ಟಮ್ (ಓವಿಎಸ್‌)ಗೆ ಮುನ್ನುಡಿ ಬರೆದಿದೆ. ಮಹಾರಾಷ್ಟ್ರ, ಮಧ್ಯಪ್ರದೇಶ ರಾಜ್ಯಗಳ ಕೆಲವೆಡೆ ಆನ್‌ಲೈನ್‌ ನಾಮಪತ್ರ ಸಲ್ಲಿಕೆ ನಡೆದಿದೆ. ಇದರ ಸಾಧಕ– ಬಾಧಕಗಳನ್ನು ವಿಶ್ಲೇಷಿಸಲಾಯಿತು.

ಆಯೋಗದ ವಿರುದ್ಧ ನ್ಯಾಯಾಲಯಗಳಲ್ಲಿ ದಾಖಲಾಗುವ ಪ್ರಕರಣಗಳನ್ನು ನಿರ್ವಹಿಸುವ ಹೊಸ ಸಾಧ್ಯತೆಗಳ ಕುರಿತೂ ಪ್ರಸ್ತಾಪಿಸಲಾಯಿತು.

ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಮಧ್ಯಪ್ರದೇಶ ಚುನಾವಣಾ ಆಯೋಗದ ಆಯುಕ್ತ ಪರಶುರಾಮ್, ‘ಎಲೆಕ್ಟ್ರಾನಿಕ್ ಮತಯಂತ್ರಗಳ ಸರಳೀಕರಣದ ಬಗ್ಗೆ ಸಾಕಷ್ಟು ಚರ್ಚೆ ಆಗಬೇಕಿದೆ. ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸಿ, ಒಂದೇ ಮತಯಂತ್ರ ಬಳಕೆ ಮಾಡುವ ಸಾಧ್ಯತೆ ಕುರಿತೂ ಇಲ್ಲಿ ಪರಿಶೀಲಿಸಲಾಗುವುದು’ ಎಂದು ತಿಳಿಸಿದರು.

ಮೈಸೂರು ಪೇಯ್ಟ್ಸ್ ಮತ್ತು ವಾರ್ನಿಷ್‌ ಕಂಪನಿ ತಯಾರಿಸುವ ಶಾಯಿ ಕುರಿತು ಮಧ್ಯಪ್ರದೇಶ ಚುನಾವಣಾ ಆಯೋಗಕ್ಕೆ ಸಂಪೂರ್ಣ ನಂಬಿಕೆ ಇದೆ. ಬೇರೆ ಕಂಪನಿಯಿಂದ ಶಾಯಿ ಖರೀದಿಸುವ ಪ್ರಶ್ನೆಯೇ ಇಲ್ಲ. ಆದರೆ, ಇನ್ನುಳಿದ ರಾಜ್ಯಗಳ ಚುನಾವಣಾ ಆಯೋಗಗಳ ಕುರಿತು ಹೇಳಲು ಆಗುವುದಿಲ್ಲ. ಬೇರೆ ಖಾಸಗಿ ಕಂಪನಿಗಳು ನಡೆಸಿರುವ ಲಾಬಿಯ ಕುರಿತೂ ಮಾಹಿತಿ ಇಲ್ಲ‌’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

**

ಮೈಸೂರಿನಲ್ಲಿ ಪ್ರಜಾಪ್ರಭುತ್ವ

‘ಮೈಸೂರು, ಭಾರತದಲ್ಲೇ ಅತ್ಯಂತ ಹೆಚ್ಚು ಮಹತ್ವ ಪಡೆದ ನಗರ. ಇಲ್ಲಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ವಾತಂತ್ರ್ಯ ಭಾರತಕ್ಕೂ ಮೊದಲೇ ಪ್ರಜಾಪ್ರಭುತ್ವದ ಬೀಜಗಳನ್ನು ಬಿತ್ತಿದ್ದರು. ಮಹಾತ್ಮ ಗಾಂಧೀಜಿ ಮೈಸೂರು ಅರಸರನ್ನು ಹೊಗಳಿದ್ದರು. ಹೀಗಾಗಿ, ಸಮ್ಮೇಳನವನ್ನು ಮೈಸೂರಿನಲ್ಲೇ ಆಯೋಜಿಸಲಾಯಿತು’ ಎಂದು ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ಚುನಾವಣಾ ಆಯುಕ್ತ ಪಿ.ಎನ್.ಶ್ರೀನಿವಾಸಾಚಾರಿ ತಿಳಿಸಿದರು.

**
ಮುಖ್ಯಾಂಶಗಳು
ಎರಡು ದಿನ ನಡೆಯುವ ಸಮ್ಮೇಳನ

19 ರಾಜ್ಯಗಳ ಚುನಾವಣಾ ಆಯುಕ್ತರು ಭಾಗಿ

ಆನ್‌ಲೈನ್ ಮತದಾನದ ಚರ್ಚೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT