ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು ಗಲಭೆ: ಗೃಹ ಸಚಿವರ ರಾಜೀನಾಮೆ, ಪೊಲೀಸರ ಅಮಾನತಿಗೆ ಎಚ್‌ಡಿಕೆ ಆಗ್ರಹ

ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಆಗ್ರಹ
Last Updated 23 ಡಿಸೆಂಬರ್ 2019, 2:35 IST
ಅಕ್ಷರ ಗಾತ್ರ

ಮಂಗಳೂರು: ‘ಮುಂದಿನ 24 ಗಂಟೆಗಳ ಒಳಗಾಗಿ ಗೃಹ ಸಚಿವರ ರಾಜೀನಾಮೆ ಪಡೆದು, ಗೋಲಿಬಾರ್‌ಗೆ ಕಾರಣರಾದ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಬೇಕು’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭಾನುವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಆಗ್ರಹಿಸಿದರು.

ಪೊಲೀಸ್ ಗುಂಡಿಗೆ ಮೃತರಾದ ನಗರದ ಕಂದಕ್‌ನ ಜಲೀಲ್ ಹಾಗೂ ಕುದ್ರೋಳಿಯ ನೌಸೀನ್ ಕುಟುಂಬಗಳನ್ನು ಭೇಟಿ ಮಾಡಿ ತಲಾ ₹ 5 ಲಕ್ಷ ಪರಿಹಾರ ನೀಡಿದ ಅವರು, ಗಾಯಾಳುಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ಇದು ಕೋಮುಗಲಭೆ ಅಲ್ಲ. ಪೊಲೀಸ್ ಮತ್ತು ಸಾರ್ವಜನಿಕರ ಸಂಘರ್ಷ. ಈ ಬಗ್ಗೆ ನಾವು ಸದನದಲ್ಲಿ ಪ್ರಶ್ನಿಸುತ್ತೇವೆ’ ಎಂದರು.

‘ಕರಾವಳಿ ಪೊಲೀಸರು ಗೃಹ ಇಲಾಖೆಯ ಆದೇಶ ಅನುಸರಿಸುತ್ತಾರಾ? ಇಲ್ಲ ಕಲ್ಲಡ್ಕ ಪ್ರಭಾಕರ ಭಟ್ಟರ ಮಾತು ಕೇಳುತ್ತಾರಾ?’ ಎಂದು ಹೇಳಿದ ಅವರು, ‘ಘಟನೆ ಹಿಂದಿನ ದಿನ ಭಟ್ಟರ ಮನೆಯಲ್ಲಿ ಯಾವ ಅಧಿಕಾರಿಗಳು ಇದ್ದರು ಎಂಬ ಬಗ್ಗೆ ತನಿಖೆ ನಡೆಸಿ’ ಎಂದು ಒತ್ತಾಯಿಸಿದರು.

‘ಘಟನೆಯಲ್ಲಿ ಗಾಯಗೊಂಡವರು ನಗರದ ಎರಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಪೈಕಿ ಕೇರಳದವರು ಯಾರೂ ಇಲ್ಲ. ಹಾಗಿದ್ದರೆ, ಪ್ರತಿಭಟನೆಯಲ್ಲಿ ಕೇರಳದವರು ಎಲ್ಲಿದ್ದರು ಎಂದು ಸರ್ಕಾರವೇ ತಿಳಿಸಲಿ’ ಎಂದು ಸವಾಲು ಹಾಕಿದರು.

‘ಆಸ್ಪತ್ರೆಯಲ್ಲಿ ಪೊಲೀಸರ ಸಮವಸ್ತ್ರದಲ್ಲಿ ದಾಂಧಲೆ ನಡೆಸಿದವರು ಆರ್.ಎಸ್.ಎಸ್. ಕಾರ್ಯಕರ್ತರೇ ಎಂಬ ಸಂಶಯವಿದೆ’ ಎಂದ ಅವರು, ‘ಜನ ಬೀದಿಯಲ್ಲಿದ್ದರೆ, ಇವರು ಬ್ಯಾಂಕ್ವೆಟ್‌ನಲ್ಲಿ ₹ 25 ಲಕ್ಷ ಖರ್ಚು ಮಾಡಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ’ ಎಂದು ಟೀಕಿಸಿದರು.

‘ಡಿವೈಎಸ್ಪಿ ಗಣಪತಿ ಹಾಗೂ ಐಎಎಸ್ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಸಂದರ್ಭದಲ್ಲಿ ಗೃಹ ಸಚಿವರ ರಾಜೀನಾಮೆಗೆ ಆಗ್ರಹಿಸಿದ್ದ ಬಿಜೆಪಿ ಮುಖಂಡರು, ಪೊಲೀಸರೇ ಅಮಾಯಕರ ಹೆಣ ಉರುಳಿಸಿದಾಗ ಏಕೆ ಗೃಹ ಸಚಿವರ, ಸಿ.ಎಂ. ರಾಜೀನಾಮೆಯನ್ನು ಕೇಳುತ್ತಿಲ್ಲ’ ಎಂದು ಪ್ರಶ್ನಿಸಿದರು.

‘33 ಪೊಲೀಸರಿಗೆ ಏಟು ಬಿದ್ದಿದ್ದರೆ, ಕರೆದುಕೊಂಡು ಬಂದು ತೋರಿಸಿ. ಕೇವಲ ಇಬ್ಬರು ಗಾಯಗೊಂಡಿದ್ದಾರೆ. ಆದರೆ, ಪೊಲೀಸರ ಗುಂಡೇಟು ತಿಂದ ಅಮಾಯಕರು ಆಸ್ಪತ್ರೆಯಲ್ಲಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT