ಸುರಪುರ: 20 ಸಾವಿರಕ್ಕೂ ಹೆಚ್ಚು ನಕಲಿ ಮತದಾರರು

ಶನಿವಾರ, ಮಾರ್ಚ್ 23, 2019
24 °C
ಕಾನೂನು ಹೋರಾಟಕ್ಕೆ ಸಿದ್ಧತೆ ನಡೆಸಿದ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ

ಸುರಪುರ: 20 ಸಾವಿರಕ್ಕೂ ಹೆಚ್ಚು ನಕಲಿ ಮತದಾರರು

Published:
Updated:
Prajavani

ಯಾದಗಿರಿ: ‘ಸುರಪುರ ಕ್ಷೇತ್ರದಲ್ಲಿ 18 ವರ್ಷ ತುಂಬದ 20 ಸಾವಿರಕ್ಕೂ ಹೆಚ್ಚು ಜನರನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದೆ’ ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಆರೋಪಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘18 ವರ್ಷ ತುಂಬದವರನ್ನು ಬಿಎಲ್‌ಒಗಳು ಮತದಾರರ ಪಟ್ಟಿಗೆ ಸೇರಿಸಿದ್ದಾರೆ. ಅದನ್ನು ಅವರ ಶಾಲಾ ದಾಖಲಾತಿಗಳು ಖಚಿತಪಡಿಸಿವೆ’ ಎಂದು ತಿಳಿಸಿದರು.

‘ಪ್ರತಿಸಲ ವಿಧಾನಸಭೆ ಚುನಾವಣೆ ಸಂದರ್ಭಗಳಲ್ಲಿ ಮತಕ್ಷೇತ್ರದಲ್ಲಿ 4ರಿಂದ 6 ಸಾವಿರದಷ್ಟು ಹೊಸ ಮತದಾರರ ನೋಂದಣಿಯಾಗುತ್ತಿತ್ತು. ಆದರೆ, 2018ರಲ್ಲಿ ನಡೆದ ಚುನಾವಣೆಯಲ್ಲಿ ಏಕಾಏಕಿ 53 ಸಾವಿರ ಹೊಸ ಮತದಾರರು ನೋಂದಣಿಯಾಗಿದ್ದಾರೆ. ಇದು ಅಚ್ಚರಿ ಅನಿಸಿತ್ತು. ಆದರೆ, ಮತದಾನ ಸಮೀಪಿಸಿದ್ದರಿಂದ ಪರಿಶೀಲಿಸಲು ಆಗಿರಲಿಲ್ಲ’ ಎಂದರು.

‘2013ರ ಚುನಾವಣೆಯಲ್ಲಿ ನಾನು 60 ಸಾವಿರ ಮತಗಳನ್ನು ಪಡೆದಿದ್ದೆ. ಆಗ 17 ಸಾವಿರ ಮತಗಳ ಗೆಲುವಿನ ಅಂತರ ಇತ್ತು. 2018ರ ಚುನಾವಣೆಯಲ್ಲಿ 80 ಸಾವಿರ ಮತಗಳನ್ನು ಪಡೆದರೂ ಸೋತಿದ್ದೇನೆ. ಏಕೆ ಎಂಬುದು ಕಾಡುತ್ತಿತ್ತು. ಆಗ ಮತದಾರರಪಟ್ಟಿ ಪಡೆದು ದಾಖಲಾತಿ ಪರಿಶೀಲಿಸಿದಾಗ ನಕಲಿ ಮತದಾರರು ಮತ್ತು ಮತದಾರರ ಡಬ್ಲಿಂಗ್‌ ಆಗಿರುವುದು ಪತ್ತೆಯಾಗಿದೆ’ ಎಂದು ಹೇಳಿದರು

‘ಶಾಲಾ ದಾಖಲಾತಿ ಇಲ್ಲದ ಅಪ್ರಾಪ್ತರು ವೈದ್ಯರಿಂದ ದೃಢೀಕರಣ ಮಾಡಿಸಿಕೊಂಡು ಮತದಾರರ ಪಟ್ಟಿ ಸೇರಿದ್ದಾರೆ. ಒಬ್ಬ ವೈದ್ಯರು ಸಾವಿರಕ್ಕೂ ಹೆಚ್ಚು ಜನರಿಗೆ ಈ ರೀತಿಯ ದೃಢೀಕರಣ ಮಾಡಿರುವುದು ಬೆಳಕಿಗೆ ಬಂದಿದೆ’ ಎಂದು ತಿಳಿಸಿದರು

‘ಈ ಕುರಿತು ಜಿಲ್ಲಾಧಿಕಾರಿಗೆ ದೂರು ನೀಡಿದ್ದೆ. ಆದರೆ, ಆ ಸಂದರ್ಭದಲ್ಲಿ 4 ಸಾವಿರ ಅಪ್ರಾಪ್ತ ಮತದಾರರನ್ನು ಮಾತ್ರ ಪಟ್ಟಿಯಿಂದ ತೆಗೆದು ಹಾಕಿದ್ದರು. ಆದರೆ, ಸಂಪೂರ್ಣವಾಗಿ ಮತದಾರರ ಪಟ್ಟಿಯನ್ನು ಪರಿಶೀಲಿಸಿಲ್ಲ. ಅಪ್ರಾಪ್ತರ ನೋಂದಣಿ ಸಂವಿಧಾನ ವಿರೋಧಿ ಕೃತ್ಯ. ಅದನ್ನು ಯಾರೇ ಎಸಗಿದರೂ ಶಿಸ್ತುಕ್ರಮ ಜರುಗಿಸಬೇಕು. ಈ ಕುರಿತು ಕೋರ್ಟ್‌ ಮೆಟ್ಟಿಲೇರಲು ಸಿದ್ಧತೆ ನಡೆಸಿದ್ದೇನೆ. ಕೆಪಿಸಿಸಿಗೂ ದಾಖಲೆ ಸಹಿತ ಮಾಹಿತಿ ಒದಗಿಸಿದ್ದೇನೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !