ಮಾಜಿ ಶಾಸಕ ಸಂಭಾಜಿ ಮಗ ಶಂಕಾಸ್ಪದ ಸಾವು

7
ಯಶವಂತಪುರ ರೈಲು ನಿಲ್ದಾಣ ಬಳಿ ಶವ ಪತ್ತೆ * ರೈಲಿನಿಂದ ಬಿದ್ದು ಮೃತಪಟ್ಟಿರುವ ಶಂಕೆ

ಮಾಜಿ ಶಾಸಕ ಸಂಭಾಜಿ ಮಗ ಶಂಕಾಸ್ಪದ ಸಾವು

Published:
Updated:
Deccan Herald

ಬೆಂಗಳೂರು: ಬೆಳಗಾವಿ ದಕ್ಷಿಣ ಕ್ಷೇತ್ರದ ಮಾಜಿ ಶಾಸಕ ಸಂಭಾಜಿ ಪಾಟೀಲ ಅವರ ಮಗ ಸಾಗರ್ (40) ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಅವರ ಶವ ಯಶವಂತಪುರ ರೈಲು ನಿಲ್ದಾಣ ಸಮೀಪ ಸೋಮವಾರ ರಾತ್ರಿ ಪತ್ತೆಯಾಗಿದೆ.

‘ಹಳಿಯಿಂದ 20 ಮೀಟರ್ ದೂರದಲ್ಲಿ ಶವ ಬಿದ್ದಿತ್ತು. ಅದನ್ನು ಗಮನಿಸಿದ್ದ ಪ್ರಯಾಣಿಕರೊಬ್ಬರು, ಗಸ್ತಿನಲ್ಲಿದ್ದ ಪೊಲೀಸರಿಗೆ ಮಾಹಿತಿ ನೀಡಿದ್ದರು. ಶವದ ಗುರುತು ಪತ್ತೆ ಹಚ್ಚಿದ ಪೊಲೀಸರು, ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಶವ ಹಸ್ತಾಂತರಿಸಿದ್ದಾರೆ’ ಎಂದು ರೈಲ್ವೆ ಪೊಲೀಸ್‌ನ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.‌

‘ಸಾಗರ್ ಹಾಗೂ ಸ್ನೇಹಿತರು, ಪ್ರಕರಣವೊಂದರ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾಗಲು ಬೆಂಗಳೂರಿಗೆ ಬಂದಿದ್ದರು. ಸೋಮವಾರ ರಾತ್ರಿ ಬೆಳಗಾವಿಗೆ ವಾಪಸ್‌ ಹೋಗಲು ರಾಣಿ ಚನ್ನಮ್ಮ ಎಕ್ಸ್‌ಪ್ರೆಸ್‌ ರೈಲು ಹತ್ತಿದ್ದರು. ಪ್ರಯಾಣದ ವೇಳೆಯೇ ಸಾಗರ್‌, ರೈಲಿನಿಂದ ಬಿದ್ದು ಮೃತಪಟ್ಟಿರುವ ಶಂಕೆ ಇದೆ’ ಎಂದು ಹೇಳಿದರು.

ಮೂತ್ರ ವಿಸರ್ಜನೆಗೆ ಹೋಗಿದ್ದರು: ‘ಮಗನ ಜೊತೆ ತಂದೆ ಸಂಭಾಜಿ ಸಹ ಬೆಂಗಳೂರಿಗೆ ಬಂದಿದ್ದರು. ಆದರೆ, ಅವರು ನಗರದಲ್ಲೇ ಉಳಿದುಕೊಂಡಿದ್ದರು. ಸಾಗರ್‌ ಹಾಗೂ ಅವರ ಸ್ನೇಹಿತರು ಮಾತ್ರ ಊರಿಗೆ ವಾಪಸ್ ಹೊರಟಿದ್ದರು’ ಎಂದು ಪೊಲೀಸರು ಹೇಳಿದರು.

‘ರೈಲು ಯಶವಂತಪುರ ನಿಲ್ದಾಣ ತಲುಪಿದಾಗ, ಎ.ಸಿ ಬೋಗಿಯಲ್ಲಿದ್ದ ಸಾಗರ್, ಮೂತ್ರ ವಿಸರ್ಜನೆಗೆ ಹೋಗುವುದಾಗಿ ಸ್ನೇಹಿತರಿಗೆ ಹೇಳಿ ಶೌಚಾಲಯದತ್ತ ಹೋಗಿದ್ದರು. ರೈಲು, ನಿಲ್ದಾಣದಿಂದ ತುಮಕೂರಿನತ್ತ ಹೊರಟಿತ್ತು. ಸಾಗರ್‌, ವಾಪಸ್‌ ಬಂದಿರಲಿಲ್ಲ. ಅನುಮಾನಗೊಂಡ ಸ್ನೇಹಿತರು, ಅವರ ಮೊಬೈಲ್‌ಗೆ ಕರೆ ಮಾಡಿದರೂ ಪ್ರತಿಕ್ರಿಯೆ ಬಂದಿರಲಿಲ್ಲ. ಆ ಬಗ್ಗೆ ಸ್ನೇಹಿತರು ಹೇಳಿಕೆ ನೀಡಿದ್ದಾರೆ’ ಎಂದು ಹೇಳಿದರು.

‘ಇತ್ತ ಶವದ ಪಕ್ಕದಲ್ಲೇ ಮೊಬೈಲ್‌ ಬಿದ್ದಿತ್ತು. ಅದಕ್ಕೆ ಕರೆ ಮಾಡಿದ್ದವರ ನಂಬರ್‌ಗೆ ವಾಪಸ್‌ ಕರೆ ಮಾಡಲಾಯಿತು. ವಿಷಯ ತಿಳಿದ ಕೂಡಲೇ ಸ್ನೇಹಿತರು, ಅರ್ಧದಲ್ಲೇ ರೈಲಿನಿಂದ ಇಳಿದು ಬೆಂಗಳೂರಿಗೆ ವಾಪಸ್‌ ಬಂದರು. ಶವವನ್ನು ಗುರುತು ಹಿಡಿದರು. ಮೃತ ವ್ಯಕ್ತಿ ಮಾಜಿ ಶಾಸಕರ ಮಗ ಎಂಬುದು ಅವಾಗಲೇ ಗೊತ್ತಾಯಿತು’ ಎಂದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !