ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಹಿಂದೆ ಸರಿಸದಿದ್ದರೆ ದೇಶದ ಜನತೆಗೆ ನೆಮ್ಮದಿ ಇಲ್ಲ: ಎಚ್.ಡಿ.ದೇವೇಗೌಡ

ರೋಡ್‌ ಶೋದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ವಿರುದ್ಧ ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ ವಾಗ್ದಾಳಿ
Last Updated 30 ನವೆಂಬರ್ 2019, 13:41 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಚಿಕ್ಕಬಳ್ಳಾಪುರದಲ್ಲಿ ಒಬ್ಬ ರೈತ ಜಿಲ್ಲಾಧಿಕಾರಿ ಎದುರು ವಿಷ ಕುಡಿದರೂ ಕೇಳುವವರಿಲ್ಲ. ಮುಖ್ಯಮಂತ್ರಿ ಪ್ರತಿನಿಧಿಯಾದ ಜಿಲ್ಲಾಧಿಕಾರಿ, ಎಸ್ಪಿ ಅವರು ಇಲ್ಲಿ ನಡುಗುತ್ತಾರೆ. ಇಂತಹ ವಾತಾವರಣ ಮರುಕಳುಹಿಸಲು ಅವಕಾಶ ಕೊಡಬೇಡಿ. ಅಧಿಕಾರಿಗಳು ಅಸಹಾಯಕತೆಯನ್ನು ನನ್ನ ಮುಂದೆ ತೋಡಿಕೊಳ್ಳುವ ದಿನ ಮತ್ತೆ ಬರಬಾರದು. ಕ್ಷೇತ್ರದ ಜನರನ್ನೆಲ್ಲ ಸದ್ಭಾವನೆಯಿಂದ ನೋಡಿಕೊಳ್ಳುವವರನ್ನು ಗೆಲ್ಲಿಸಬೇಕು’ ಎಂದು ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.

ನಗರದಲ್ಲಿ ಶನಿವಾರ ಜೆಡಿಎಸ್ ಅಭ್ಯರ್ಥಿ ಎನ್.ರಾಧಾಕೃಷ್ಣ ಅವರ ಪರ ರೋಡ್‌ ಶೋ ನಡೆಸಿ ಮತ ಯಾಚನೆ ಮಾಡಿದ ಅವರು, ‘ಜೆಡಿಎಸ್‌ ಪಕ್ಷಕ್ಕೆ ಸಹಾಯ ಮಾಡಿದ ರೈತ ಇಲ್ಲಿ ವಿಷ ಕುಡಿಯಬೇಕಾಯಿತು. ಆಗ ನಾನು ಇಲ್ಲಿಗೆ ಬಂದರೆ ಜಿಲ್ಲಾಧಿಕಾರಿ ನಡಗುತ್ತ ನಮ್ಮ ಎಂಎಲ್‌ಎ ಅವರನ್ನು ಎದುರಿಸುವುದು ಕಷ್ಟ ಎನ್ನುತ್ತಾರೆ. ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಸಕರ ಬಗ್ಗೆ ಭಯ ವ್ಯಕ್ತಪಡಿಸಿ, ಸತ್ತ ರೈತನ ಕುಟುಂಬಕ್ಕೆ ಸಹಾಯ ಮಾಡಲಾಗದ ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಇಂತಹ ಶಾಸಕ ಬೇಕೇನ್ರಿ’ ಎಂದು ಪ್ರಶ್ನಿಸಿದರು.

‘ಸಿದ್ದರಾಮಯ್ಯ ಅವರ ಕಾಲದಲ್ಲಿ ಐದು ವರ್ಷ ಚಿಕ್ಕಬಳ್ಳಾಪುರದಲ್ಲಿ ಆ ಪುಣ್ಯಾತ್ಮನೇ ಮುಖ್ಯಮಂತ್ರಿ. ಐದು ವರ್ಷ ಅವರು ಆಡಿದ್ದೇ ಆಟ. ಇಲ್ಲಿ ಶಾಸಕರೇ ಸುಪ್ರೀಂ ಜಿಲ್ಲಾಧಿಕಾರಿ. ಯಾವೊಬ್ಬ ಅಧಿಕಾರಿಗೂ ತಮ್ಮ ಅಧಿಕಾರ ಬಳಸುವ ಶಕ್ತಿ ಉಳಿದಿರಲಿಲ್ಲ. ಎಷ್ಟು ಕ್ವಾರಿಗಳು ಯಾರ ಹತೋಟಿಯಲ್ಲಿವೆ? ಅವರು ಹೇಳಿದಂತೆ ಅಧಿಕಾರಿಗಳು ಕೇಳಬೇಕು. ಇಲ್ಲಿ ಸೇರಿರುವ ಪೊಲೀಸರನ್ನು ನೋಡಿದರೆ ನನಗೂ ಮಾತನಾಡಲು ಭಯವಾಗುತ್ತದೆ. ಇದು ಚಿಕ್ಕಬಳ್ಳಾಪುರದ ವ್ಯವಸ್ಥೆ’ ಎಂದು ಪರೋಕ್ಷವಾಗಿ ಬಿಜೆಪಿ ಅಭ್ಯರ್ಥಿ, ಅನರ್ಹ ಶಾಸಕ ಡಾ.ಕೆ.ಸುಧಾಕರ್ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

‘ಇವತ್ತು ನಿಮಗೆ ಬೇಕಾಗಿರುವುದು ಎಲ್ಲರಲ್ಲಿ ಪ್ರೀತಿ ಬೆಳೆಸುವ, ಅಧಿಕಾರಿಗಳಿಗೆ ಅವರ ಕರ್ತವ್ಯ ನಿರ್ವಹಣೆ ಮಾಡಲು ಅವಕಾಶ ಕೊಡುವ ವಾತಾವರಣ ನಿರ್ಮಿಸುವವರು ಬೇಕು. ರಾಧಾಕೃಷ್ಣ ಅವರು ಹೊರಗಡೆಯಿಂದ ಬಂದವರಲ್ಲ. ಅವರು ಕೂಡ ಇದೇ ಜಿಲ್ಲೆಯವರು. ಅವರು ನಮ್ಮ ಸಂಬಂಧಿ ಇರಬಹುದು. ಆದರೆ ಅವರು ಚುನಾವಣೆ ಎದುರಿಸುತ್ತೇನೆ ಎಂದು ಮುಂದೆ ಬಂದರು, ಬಚ್ಚೇಗೌಡರು ಸ್ಥಾನ ಬಿಟ್ಟುಕೊಡುತ್ತೇನೆ ಎನ್ನುವ ಔದಾರ್ಯ ತೋರಿದರು. ಹೀಗಾಗಿ ಬಚ್ಚೇಗೌಡರ ಪರವಾಗಿ ರಾಧಾಕೃಷ್ಣ ನಿಂತಿದ್ದಾರೆ’ ಎಂದರು.

‘ಪ್ರತಿ ಜಿಲ್ಲೆಗೊಂದು ವೈದ್ಯಕೀಯ ಕಾಲೇಜು ಕೊಡಬೇಕು ಎಂಬುದು ಕೇಂದ್ರದ ತೀರ್ಮಾನ. ಅದರಂತೆ ಪ್ರತಿಯೊಂದು ಜಿಲ್ಲೆಯಲ್ಲೂ ಕಾಲೇಜು ನಿರ್ಮಾಣವಾಗುತ್ತವೆ. ಅದರಲ್ಲಿ ವಿಶೇಷತೆ ಇಲ್ಲ. ಪಂಚಾಯಿತಿಗಳು, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ರಾಜಕೀಯ ಮೀಸಲಾತಿ ಅಧಿಕಾರ ಕೊಟ್ಟವನು, ಈದ್ಗಾ ಮೈದಾನದ ಸಮಸ್ಯೆ ಬಗೆಹರಿಸಿದವನು, ವಿಧವಾ ಮಾಸಾಶನ ಜಾರಿಗೆ ತಂದವನು, ಮುಸ್ಲಿಮರಿಗೆ ಮೀಸಲಾತಿ ಕೊಟ್ಟವನು ನಾನು. ನಾಯಕ ಸಮಾಜದ 15 ಶಾಸಕರು, ಇಬ್ಬರನ್ನು ಸಂಸದರನ್ನಾಗಿ ಮಾಡಿದ್ದೇವೆ. ಬದುಕಿರುವವರೆಗೂ ನನ್ನ ಜನತೆಗಾಗಿ ಹೋರಾಡುವ ಶಕ್ತಿ ನನಗಿದೆ’ ಎಂದು ಹೇಳಿದರು.

‘ಕುಮಾರಸ್ವಾಮಿ ಅವರು ಮತ್ತೆ ಮುಖ್ಯಮಂತ್ರಿಯಾಗಬೇಕು ಎಂಬ ಆಸೆಗಲ್ಲ ಈ ಹೋರಾಟ. ಇವತ್ತು ದೇಶದ ಪರಿಸ್ಥಿತಿ ಹದಗೆಟ್ಟು ಹೋಗಿದೆ. ಮುಸ್ಲಿಮರು, ದಲಿತರು ನೆಮ್ಮದಿಯಿಂದ ಇಲ್ಲ. ಬಿಜೆಪಿ ಹಿಂದೆ ಸರಿಸಬೇಕು. ಇಲ್ಲದಿದ್ದರೆ ದೇಶದ ಜನತೆಗೆ ನೆಮ್ಮದಿ ಇಲ್ಲ. ಕೆಟ್ಟಿರುವ ರಾಜಕೀಯ ವ್ಯವಸ್ಥೆ ಸರಿಪಡಿಸುವ ತೀರ್ಪು ನ್ಯಾಯಾಲಯ ಕೊಡಲು ಸಾಧ್ಯವಿಲ್ಲ. ಅದನ್ನು ಮತದಾರರೇ ಮಾಡಬೇಕು. ಚಿಕ್ಕಬಳ್ಳಾಪುರಕ್ಕೂ ನನಗೂ ಅವಿನಾಭಾವ ಸಂಬಂಧವಿದೆ. ಮತ ಎಣಿಕೆ ದಿನ ನಾನು ಮತ್ತೊಮ್ಮೆ ಬರುತ್ತೇನೆ’ ಎಂದು ತಿಳಿಸಿದರು.

ವಿಧಾನಸಭೆ ಉಪ ಸಭಾಧ್ಯಕ್ಷ ಎಂ.ಕೃಷ್ಣಾರೆಡ್ಡಿ, ಶಾಸಕ ನಿಸರ್ಗ ನಾರಾಯಣಸ್ವಾಮಿ, ಜೆಡಿಎಸ್ ಅಭ್ಯರ್ಥಿ ಎನ್.ರಾಧಾಕೃಷ್ಣ, ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಂ.ಮುನೇಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT