ಅಬಕಾರಿ ಆದಾಯ ₹3000 ಕೋಟಿ ಏರಿಕೆ ನಿರೀಕ್ಷೆ

7
ನಾಲ್ಕು ತಿಂಗಳಲ್ಲಿ ₹ 883 ಕೋಟಿ ಹೆಚ್ಚುವರಿ ಸಂಗ್ರಹ

ಅಬಕಾರಿ ಆದಾಯ ₹3000 ಕೋಟಿ ಏರಿಕೆ ನಿರೀಕ್ಷೆ

Published:
Updated:

ಬೆಂಗಳೂರು: ಕೃಷಿ ಸಾಲ ಮನ್ನಾ ಘೋಷಣೆ ಬಳಿಕ ಸಂಪನ್ಮೂಲ ಸಂಗ್ರಹ ಹೇಗೆಂಬ ಚಿಂತೆಯಲ್ಲಿರುವ ರಾಜ್ಯ ಸರ್ಕಾರಕ್ಕೆ ಪ್ರಸಕ್ತ ಆರ್ಥಿಕ ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ನಿರೀಕ್ಷೆ ಮೀರಿ ಸಂಗ್ರಹವಾಗಿರುವ ₹ 883 ಕೋಟಿ ಅಬಕಾರಿ ಆದಾಯವು ಕೊಂಚ ನೆಮ್ಮದಿ ನೀಡಿದೆ.

ಇದಲ್ಲದೆ, ಏಪ್ರಿಲ್‌ನಿಂದ ಜುಲೈ ಅಂತ್ಯದವರೆಗೆ ಬಂದಿರುವ ಆದಾಯದಲ್ಲಿ ಶೇ 12ರಷ್ಟು ಏರಿಕೆಯಾಗಿದೆ. ಇದು ಇತ್ತೀಚಿನ ವರ್ಷಗಳಲ್ಲಿ ಅತ್ಯಧಿಕವಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ಆದಾಯ ಸಂಗ್ರಹ ಸ್ವಲ್ಪ ಕಡಿಮೆ ಆಗಿತ್ತು.

ಇಲಾಖೆ ಇದುವರೆಗೆ ₹ 6,541 ಕೋಟಿ ಆದಾಯ ಸಂಗ್ರಹಿಸಿದ್ದು, ಇದರಿಂದ ಪ್ರಸಕ್ತ ಆರ್ಥಿಕ ವರ್ಷದಲ್ಲಿ 19,750 ಕೋಟಿ ಆದಾಯ ನಿರೀಕ್ಷಿಸಲಾಗಿದೆ. ಅಬಕಾರಿ ಸುಂಕ ಹೆಚ್ಚಳದಿಂದಾಗಿ ಆದಾಯ ಸಂಗ್ರಹ ಗಣನೀಯವಾಗಿ ಏರಿದೆ. ಫೆಬ್ರುವರಿಯಲ್ಲಿ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ್ದ ಬಜೆಟ್‌ನಲ್ಲಿ ಅಗ್ಗದ ಮದ್ಯ ಬಿಟ್ಟು, ಉಳಿದ ಎಲ್ಲ ಬ್ರ್ಯಾಂಡ್‌ಗಳ ಮೇಲಿನ ಅಬಕಾರಿ ಸುಂಕವನ್ನು ಶೇ 8ರಷ್ಟು ಹೆಚ್ಚಿಸಿದ್ದರು.

ಆನಂತರ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಜುಲೈನಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಎಲ್ಲ ನಮೂನೆ ಮದ್ಯದ ಮೇಲೆ ಶೇ 4ರಷ್ಟು ಹೆಚ್ಚುವರಿ ಸುಂಕ ವಿಧಿಸಿದರು. ಹೊಸ ತೆರಿಗೆ ಆಗಸ್ಟ್‌ನಿಂದ ಜಾರಿಯಾಗಿದೆ. ಇದರಿಂದ ₹ 3000 ಕೋಟಿಗೂ ಅಧಿಕ ಆದಾಯ ಸಂಗ್ರಹವಾಗಲಿದೆ ಎಂದು ಮುಖ್ಯಮಂತ್ರಿ ಸಚಿವಾಲಯದ ಮೂಲಗಳು ತಿಳಿಸಿವೆ.

ಈ ವರ್ಷ ಮದ್ಯ ಮಾರಾಟ ಪ್ರಮಾಣವೂ ಏರಿಕೆಯಾಗಿದ್ದು, ಇದೇ ಅವಧಿಯಲ್ಲಿ 184.63 ಲಕ್ಷ ಮದ್ಯದ ಪೆಟ್ಟಿಗೆಗಳು (ಪ್ರತಿ ಪೆಟ್ಟಿಗೆಯಲ್ಲಿ 48 ಕ್ವಾರ್ಟರ್ ಬಾಟಲ್‌ಗಳು ಇರುತ್ತವೆ) ಮಾರಾಟವಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 172.46 ಲಕ್ಷ ಪೆಟ್ಟಿಗೆಗಳು ಮಾರಾಟವಾಗಿದ್ದವು.

ಕೃಷಿ ಸಾಲ ಮನ್ನಾದಿಂದ ಬೊಕ್ಕಸಕ್ಕೆ ₹44,000 ಕೋಟಿ ಹೊರೆಯಾಗಿದ್ದು, ಉಳಿದ ಕೆಲವು ಕಾರ್ಯಕ್ರಮಗಳಿಗೆ ಹಣಕ್ಕಾಗಿ ಪರದಾಡುವ ಸ್ಥಿತಿ ಸೃಷ್ಟಿಯಾಗಿದೆ.

ಅಬಕಾರಿ ಆದಾಯ ಸೋರಿಕೆ ಆಗದಂತೆ ಎಚ್ಚರವಹಿಸುವ ಉದ್ದೇಶದಿಂದ ಮದ್ಯದ ಬಾಟಲಿ ಮೇಲಿನ ಲೇಬಲ್‌ಗಳ ಹಾಲೋಗ್ರಾಂ ಬದಲಾವಣೆ ಮಾಡುವ ಉದ್ದೇಶವಿದೆ. ಅಲ್ಲದೆ, ಲೇಬಲ್‌ ದುರ್ಬಳಕೆ  ತಡೆಗೆ ‘ಕ್ಯುಆರ್‌ ಕೋಡ್‌’ ಅಳವಡಿಸುವ ಚಿಂತನೆಯೂ ಇದೆ. ಇದರಿಂದ ಗ್ರಾಹಕರಿಗೆ ಗುಣಮಟ್ಟದ ಮದ್ಯವೂ ದೊರೆಯಲಿದೆ ಎಂದು ಮೂಲಗಳು ತಿಳಿಸಿವೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !