ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಡ್ಲಾ ಕಾಡಿನಲ್ಲಿ ನಡಿಗೆಯ ಸೊಬಗು; ಅಪರೂಪದ ಸಸ್ಯ ಸಂರಕ್ಷಣೆಯ ಅರಿಗೆ ಯೋಜನೆ

ಅರಿವು ಮೂಡಿಸಲು ಅರಣ್ಯ ಇಲಾಖೆ ಕ್ರಮ
Last Updated 25 ಮೇ 2019, 19:45 IST
ಅಕ್ಷರ ಗಾತ್ರ

ಕಾರವಾರ:ನದಿಯದಂಡೆಯಲ್ಲಿ, ದ್ವೀಪದ ಸುತ್ತ ಬೆಳೆಯುವ ಅಪರೂಪದ ಸಸ್ಯ ಪ್ರಭೇದ ಕಾಂಡ್ಲಾದ ನಡುವೆ ನಡೆದುಕೊಂಡು ಹೋಗಲು ಸಾಧ್ಯವೇ? ಇಂತಹ ಪರಿಕಲ್ಪನೆಯನ್ನು ಜಿಲ್ಲೆಯ ಹೊನ್ನಾವರದ ಕಾಸರಕೋಡ ಕಡಲತೀರದಲ್ಲಿ ಅರಣ್ಯ ಇಲಾಖೆ ಸಾಕಾರಗೊಳಿಸಿದೆ. ಒಂದು ತಿಂಗಳ ಹಿಂದೆ ಪೂರ್ಣಗೊಂಡ ಯೋಜನೆಯು‘ಬೋರ್ಡ್ ವಾಕ್’ (ಕಾಂಡ್ಲಾ ವಾಕ್) ಎಂಬ ಹೆಸರಿನಲ್ಲಿ ಈಗ ಸಾರ್ವಜನಿಕರಿಗೆ ಮುಕ್ತವಾಗಿದೆ.

ನದಿಯುಸಮುದ್ರಕ್ಕೆ ಸೇರುವ ಅಳಿವೆ ಪ್ರದೇಶಗಳ ಜೌಗು ಮಣ್ಣಿನಲ್ಲಿ ಬೆಳೆಯುವ ಈ ಸಸ್ಯಗಳ ಬೇರುಗಳು, ಮಣ್ಣನ್ನು ಬಿಗಿಯಾಗಿ ಹಿಡಿದುಕೊಳ್ಳುತ್ತವೆ. ಸುನಾಮಿ ಬಂದರೂ ಇವು ಕೊಚ್ಚಿಕೊಂಡು ಹೋಗುವುದಿಲ್ಲ ಎಂಬ ನಂಬಿಕೆಯಿದೆ.ಹಾಗಾಗಿಪರಿಸರ ಸಂರಕ್ಷಣೆಯಲ್ಲಿ, ಮಣ್ಣು ಕೊಚ್ಚಿಕೊಂಡು ಹೋಗದಂತೆ ತಡೆಯುವಲ್ಲಿ ಈ ಸಸ್ಯಗಳಿಗೆ ವಿಶೇಷ ಮಹತ್ವವಿದೆ.

‘ಕಾಂಡ್ಲಾದ ಸಂರಕ್ಷಣೆಯ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವುದು ಮತ್ತು ಪ್ರವಾಸೋದ್ಯಮದ ಆಕರ್ಷಣೆಯಾಗಿ ‘ಬೋರ್ಡ್ ವಾಕ್’ ಕಾಮಗಾರಿ ಕೈಗೊಳ್ಳಲಾಗಿದೆ. ಶರಾವತಿ ನದಿಯ ಹಿನ್ನೀರಿನಲ್ಲಿಭದ್ರವಾಗಿ ಸಿಮೆಂಟ್ ಕಂಬಗಳನ್ನು ಹುಗಿಯಲಾಗಿದೆ. ಅವುಗಳಮೇಲೆ ಮರದ ಹಲಗೆಗಳನ್ನು ಅಳವಡಿಸಿ ಸಮೀಪದ ದ್ವೀಪಕ್ಕೆ ಸಂಪರ್ಕ ಕಲ್ಪಿಸಲಾಗಿದೆ. ಸುಮಾರು 100 ಮೀಟರ್ ಕಾಮಗಾರಿಗೆ ಅಂದಾಜು ₹ 5 ಲಕ್ಷ ಖರ್ಚಾಗಿದೆ’ ಎಂದು ಅರಣ್ಯ ಇಲಾಖೆಯ ಹೊನ್ನಾವರ ವಲಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಂದೀಶ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಸುತ್ತಲೂ ಇರುವ ಜಲರಾಶಿಯ ನಡುವೆ ಕಾಂಡ್ಲಾ ವನದಲ್ಲಿ ಹಲಗೆಗಳ ಮೇಲೆ ನಡೆಯುವುದು ಪ್ರವಾಸಿಗರಿಗೆ ವಿಶೇಷ ಅನುಭವ ನೀಡುತ್ತದೆ. ದ್ವೀಪದ ಸುತ್ತಮುತ್ತ ಇರುವನೀರುನಾಯಿ,ಕಾಣೆ ಮೀನು, ಪಕ್ಷಿಗಳನ್ನು ಹತ್ತಿರದಿಂದ ನೋಡುವ ಅವಕಾಶವೂ ಸಿಗಬಹುದು ಎನ್ನುತ್ತಾರೆ ಅರಣ್ಯ ಇಲಾಖೆಯ ಅಧಿಕಾರಿಗಳು.

ಇದೇ ಮಾದರಿಯನ್ನು ಕಾರವಾರದಲ್ಲೂ ಜಾರಿ ಮಾಡಲು ಅಧಿಕಾರಿಗಳು ಅರಣ್ಯ ಇಲಾಖೆಗೆ ಪ್ರಸ್ತಾವ ಕಳುಹಿಸಿದ್ದಾರೆ. ಸದಾಶಿವಗಡ ಸಮೀಪಕಾಳಿ ನದಿಯಲ್ಲಿರುವ ಕಾಂಡ್ಲಾ ವನಕ್ಕೆ ಹಲಗೆಗಳ ಮೂಲಕ ಸಂಪರ್ಕ ನೀಡಲು ಉದ್ದೇಶಿಸಲಾಗಿದೆ. ಇದಕ್ಕೆ ಬೇಕಾಗುವ ಖರ್ಚು, ವೆಚ್ಚಗಳನ್ನು ಲೆಕ್ಕಾಚಾರ ಹಾಕಲಾಗುತ್ತಿದೆ ಎಂದುಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ನಾವಿ ಹೇಳಿದರು.

ಮೂರು ಲಕ್ಷ ಗಿಡಗಳ ನಾಟಿ:ಈ ಸಸ್ಯ ಪ್ರಭೇದದ ಸಂರಕ್ಷಣೆಗೆರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜಂಟಿಯಾಗಿಯೋಜನೆ ಜಾರಿ ಮಾಡಿವೆ. ಅರಣ್ಯ ಇಲಾಖೆಯ ಕಾರವಾರ ಮತ್ತು ಅಂಕೋಲಾ ಉಪ ವಲಯಗಳಲ್ಲೇ 2018–19ನೇ ಸಾಲಿನಲ್ಲಿ ಮೂರು ಲಕ್ಷ ಕಾಂಡ್ಲಾ ಗಿಡಗಳನ್ನು ನೆಡಲಾಗಿದೆ. ಇದು ಅಂದಾಜು 30 ಹೆಕ್ಟೇರ್‌ಗಳಷ್ಟಾಗುತ್ತವೆ ಎಂದುಮಂಜುನಾಥ ನಾವಿ ತಿಳಿಸಿದರು.

ಫೆಬ್ರುವರಿ, ಮಾರ್ಚ್ ತಿಂಗಳಲ್ಲಿ ಕಾಂಡ್ಲಾ ಗಿಡಗಳಲ್ಲಿ ಬಿಳಲುಬೆಳೆಯುತ್ತವೆ.ಅವುಗಳನ್ನು ಕತ್ತರಿಸಿ, ಸಮುದ್ರದಲ್ಲಿ ಅಲೆಗಳ ಇಳಿತ ಇದ್ದಾಗ ಅಳಿವೆಯಲ್ಲಿ ನೆಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT