ಭೂಕುಸಿತ ಅಧ್ಯಯನಕ್ಕೆ ತಜ್ಞರ ಸಮಿತಿ: ಸಚಿವ ಆರ್‌.ವಿ.ದೇಶಪಾಂಡೆ

7

ಭೂಕುಸಿತ ಅಧ್ಯಯನಕ್ಕೆ ತಜ್ಞರ ಸಮಿತಿ: ಸಚಿವ ಆರ್‌.ವಿ.ದೇಶಪಾಂಡೆ

Published:
Updated:

ಮಂಗಳೂರು: ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವ ಭಾರಿ ಪ್ರಮಾಣದ ಭೂಕುಸಿತಗಳ ಕುರಿತು ಅಧ್ಯಯನ ನಡೆಸಿ, ವಾಸ್ತವಿಕ ಸಂಗತಿ ಅರಿಯಲು ತಜ್ಞರ ಸಮಿತಿ ನೇಮಕ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ತಿಳಿಸಿದರು.

ಕೊಡಗು ಜಿಲ್ಲೆಯ ಜೋಡುಪಾಲದಲ್ಲಿ ಭೂಕುಸಿತ ಸಂಭವಿಸಿದ ಸ್ಥಳಕ್ಕೆ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿ, ಹಿಂದಿರುಗಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭೂಕುಸಿತಕ್ಕೆ ಏನು ಕಾರಣ ಎಂಬುದು ಈವರೆಗೂ ಗೊತ್ತಾಗಿಲ್ಲ. ಸುಲಭವಾಗಿ ಕಾರಣ ಹೇಳಲಾಗದು. ಆದ್ದರಿಂದ ತಜ್ಞರ ಸಮಿತಿ ರಚಿಸುವಂತೆ ಮುಖ್ಯಮಂತ್ರಿಯವರಲ್ಲಿ ಮನವಿ ಮಾಡುತ್ತೇನೆ. ಒಪ್ಪಿಗೆ ದೊರೆತ ಬಳಿಕ ಸಮಿತಿ ನೇಮಿಸಲಾಗುವುದು’ ಎಂದರು.

ಪ್ರವಾಹ ಮತ್ತು ಭೂಕುಸಿತದಿಂದ ಸಂಕಷ್ಟದಲ್ಲಿರುವ ಜನರ ರಕ್ಷಣೆ, ಸ್ಥಳಾಂತರ ಮತ್ತು ಪುನರ್ವಸತಿ ರಾಜ್ಯ ಸರ್ಕಾರದ ಮುಂದಿರುವ ಆದ್ಯತೆಗಳು. ಎಲ್ಲ ಪರಿಹಾರ ಕೇಂದ್ರಗಳ ಪರಿಶೀಲನೆ ನಡೆಸಿದ್ದು, ಯಾವುದೇ ಕೊರತೆ ಇಲ್ಲ. ಮತ್ತೆ ಭೂಕುಸಿತ ಸಂಭವಿಸುವ ಅಪಾಯ ಇರುವುದರಿಂದ ತಕ್ಷಣದಲ್ಲೇ ಮನೆಗೆ ತೆರಳದಂತೆ ಸಂತ್ರಸ್ತರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದರು.

ತಾತ್ಕಾಲಿಕ ಪ್ರವೇಶ: ಸಂಪಾಜೆ ಮತ್ತು ಕಲ್ಲುಗುಂಡಿ ಪರಿಹಾರ ಕೇಂದ್ರಗಳಲ್ಲಿ ವಾಸ್ತವ್ಯ ಹೂಡಿರುವವರಲ್ಲಿ ಇರುವ ಶಾಲಾ ಮಕ್ಕಳನ್ನು ಗುರುತಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಂತಹ ಎಲ್ಲ ಮಕ್ಕಳಿಗೂ ಸಮೀಪದ ಶಾಲೆಗಳಲ್ಲಿ ತಾತ್ಕಾಲಿಕ ಪ್ರವೇಶ ನೀಡುವಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಆದೇಶ ನೀಡಲಾಗಿದೆ ಎಂದರು.

ಆನ್‌ಲೈನ್‌ ಪಾವತಿಗೆ ಅವಕಾಶ: ನೆರೆ ಪರಿಹಾರ ಕಾರ್ಯಾಚರಣೆಗಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ಆನ್‌ಲೈನ್‌ ಮೂಲಕವೂ ದೇಣಿಗೆ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾಡಳಿತದ ಅನುಮತಿ ಪಡೆಯದೇ ಹಣ ಸಂಗ್ರಹಿಸುವುದು ಮತ್ತು ಅದನ್ನು ಜಿಲ್ಲಾಡಳಿತಕ್ಕೆ ಪಾವತಿ ಮಾಡದಿರುವವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕೊಡಗು ಜಿಲ್ಲೆಯಲ್ಲಿ ನಡೆಯುತ್ತಿರುವ ಪರಿಹಾರ ಕಾರ್ಯಾಚರಣೆಗೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ವಿವಿಧ ಸಂಘಟನೆಗಳ ಕಾರ್ಯಕರ್ತರು ಶ್ರಮವಹಿಸುತ್ತಿದ್ದಾರೆ. ಎಲ್ಲರಿಗೂ ಸರ್ಕಾರ ಧನ್ಯವಾದ ಅರ್ಪಿಸುತ್ತದೆ ಎಂದರು.

ಗುಡ್ಡ ಕುಸಿತ: ಕಳಸ- ಕಾರ್ಕಳ ಸಂಪರ್ಕ ಕಡಿತ

ಕಳಸ: ಕಳಸ ಹೋಬಳಿ ವ್ಯಾಪ್ತಿಯ ಕುದುರೆಮುಖ ರಾಷ್ಟ್ರೀಯ ಉದ್ಯಾನದಲ್ಲಿ ಭಾನುವಾರ ಬೆಳಿಗ್ಗೆ ಸಂಭವಿಸಿದ ಭೂಕುಸಿತದಿಂದಾಗಿ ದಿನವಿಡೀ ಕಳಸ- ಕಾರ್ಕಳ- ಮಂಗಳೂರು ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತೊಡಕು ಉಂಟಾಗಿತ್ತು.

ಕುದುರೆಮುಖದಿಂದ 15 ಕಿ.ಮೀ. ದೂರದ ಗಂಗಾಮೂಲ ಸಮೀಪದಲ್ಲಿ ಮುಂಜಾನೆ ರಸ್ತೆ ಬದಿಯ ಧರೆ ಕುಸಿದು, ರಾಜ್ಯ ಹೆದ್ದಾರಿ 66ರ ಮೇಲೆ ಮಣ್ಣು ಜರಿದಿತ್ತು. ಇದರಿಂದಾಗಿ ವಾಹನಗಳೆಲ್ಲ ಅರಣ್ಯದ ಮಧ್ಯೆ ನಿಲ್ಲುವಂತಾಯಿತು. ಶಿರಾಡಿ 
ಘಾಟಿ ಬಂದ್ ಆಗಿದ್ದರಿಂದ ಕೆಲ ದಿನಗಳಿಂದ ಕೆಎಸ್‍ಆರ್‍ಟಿಸಿಯ ವೋಲ್ವೊ ಮತ್ತು ರಾಜಹಂಸ ಬಸ್‍ಗಳು ಕಳಸ- ಕುದುರೆಮುಖ ಮೂಲಕವೇ ಮಂಗಳೂರು ತಲುಪುತ್ತಿದ್ದವು. ಆ ಬಸ್‍ಗಳೂ ಭಾನುವಾರ ಕುದುರೆಮುಖ ಉದ್ಯಾನದಲ್ಲೇ ಕಾಯಬೇಕಾಯಿತು.

ಖಾಸಗಿ ಬಸ್‍ಗಳು ಭೂಕುಸಿತದ ಎರಡೂ ಬದಿ ಕಾರ್ಯಾಚರಿಸಿ ಪ್ರಯಾಣಿಕರನ್ನು ನಿಗದಿತ ಸ್ಥಳಕ್ಕೆ ಸೇರಿಸಿ ಮೆಚ್ಚುಗೆಗೆ ಪಾತ್ರವಾದವು. ಆದರೆ, ಖಾಸಗಿ ವಾಹನಗಳಲ್ಲಿ ಬಂದಿದ್ದವರು ಮಾತ್ರ ಬಸವಳಿದರು. ಕಾರ್ಕಳ, ಮಂಗಳೂರು ಕಡೆಗೆ ಹೊರಟಿದ್ದ ಅನೇಕ ವಾಹನಗಳು ಕಳಸಕ್ಕೆ ಮರಳಿ, ಚಾರ್ಮಾಡಿ ಮೂಲಕ ಕರಾವಳಿ ತಲುಪಿದವು. ಮಂಗಳೂರು, ಕಾರ್ಕಳದಿಂದ ಕಳಸದ ಕಡೆಗೆ ಬರುತ್ತಿದ್ದ ವಾಹನಗಳು ಹಿಂದಿರುಗಿ ಎಸ್.ಕೆ. ಬಾರ್ಡರ್, ಶೃಂಗೇರಿ ಮೂಲಕ ಕಳಸದ ಕಡೆಗೆ ಸುತ್ತಿ ಬಳಿಸಿ ಸಾಗಿದವು.

ಸಂಜೆಯ ವೇಳೆಗೆ ರಸ್ತೆಯ ಮಣ್ಣನ್ನು ಭಾಗಶಃ ತೆರವುಗೊಳಿಸಿ ಲಘು ವಾಹನ ಸಂಚರಿಸಲು ಅನುವು ಮಾಡಲಾಯಿತು.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !