ಶನಿವಾರ, ಸೆಪ್ಟೆಂಬರ್ 19, 2020
21 °C

ಟಿವಿ ನೋಡಿ ಸಭಾಧ್ಯಕ್ಷರು ಆದೇಶ ಮಾಡಬೇಕಿಲ್ಲ: ವಕೀಲ ಕೆ.ಬಿ.ಕೆ.ಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಮಾಧ್ಯಮಗಳಲ್ಲಿ ಬಿತ್ತರವಾದ ಸುದ್ದಿ ಆಧರಿಸಿ ಸಭಾಧ್ಯಕ್ಷರು ತಮ್ಮ ವಿವೇಚನಾ ಅಧಿಕಾರ ಬಳಸಲಾಗುತ್ತದೆಯೇ, ಹಾಗಾದರೆ ಅದು ಸಂಸದೀಯ ನಡವಳಿಕೆಗಳಿಗೆ ವಿರುದ್ಧ. ಅವರು ತಮ್ಮ ವಿವೇಚನಾಧಿಕಾರ ಬಳಸಲು ಸಮಯದ ಅವಶ್ಯಕತೆ ಇದೆ’ ಎಂಬುದು ವಕೀಲ ಕೆ.ಬಿ.ಕೆ.ಸ್ವಾಮಿ ಅವರ ಅಭಿಪ್ರಾಯ.

ಸದ್ಯದ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ‘ಯಾವ ಶಾಸಕರೂ ನೇರ ಸಭಾಧ್ಯಕ್ಷರನ್ನು ಭೇಟಿಯಾಗಿ ತಮ್ಮ ವೈಯಕ್ತಿಕ ನಿಲುವು ವ್ಯಕ್ತಪಡಿಸದೇ ಇರುವುದರಿಂದ ಸಭಾಧ್ಯಕ್ಷರು ರಾಜೀನಾಮೆ ಪತ್ರಗಳ ಪರಿಶೀಲನೆ ನಡೆಸುವುದು ಅವಶ್ಯ’ ಎಂದರು.

‘ರಾಜೀನಾಮೆ ನೀಡುವ ಒಬ್ಬೊಬ್ಬ ಪ್ರತಿನಿಧಿಯನ್ನೂ ಪ್ರತ್ಯೇಕವಾಗಿ ಕರೆದು ಅವರ ರಾಜೀನಾಮೆ ಪಡೆದು ವಿಚಾರಿಸಿ ನಂತರ ಸಭಾಧ್ಯಕ್ಷರು ವಿವೇಚನೆ ಬಳಸಬೇಕು. ಸಭಾಧ್ಯಕ್ಷರಾಗಿದ್ದ ಕೆ.ಜಿ.ಬೋಪಯ್ಯ ಪ್ರಕರಣದಲ್ಲಿ ಇದನ್ನು ಸುಪ್ರೀಂ ಕೋರ್ಟ್‌ ಈಗಾಗಲೇ ಸ್ಪಷ್ಟಪಡಿಸಿದೆ’ ಎಂದರು.

ಎಲ್ಲಿದೆ ಕಾನೂನು?

‘ಶಾಸಕರು ಸ್ವತಃ ವಿಧಾನಸಭಾಧ್ಯಕ್ಷರೆದುರು ರಾಜೀನಾಮೆ ಕೊಟ್ಟರೆ ಮಾತ್ರವೇ ಸಿಂಧು ಆಗುತ್ತದೆ ಎಂಬುದು ತಪ್ಪು. ಆ ರೀತಿ ಯಾವ ಕಾನೂನೂ ಹೇಳುವುದಿಲ್ಲ’ ಎನ್ನುತ್ತಾರೆ ವಕೀಲ ಪವನಚಂದ್ರ ಶೆಟ್ಟಿ.

‘ಶಾಸಕರೆಲ್ಲಾ ವಿಧಾನಸಭಾಧ್ಯಕ್ಷರ ಬಳಿ ಬಂದಿದ್ದು ಸಿಸಿಟಿವಿಯಲ್ಲಿ ದಾಖಲಾಗಿದೆ. ಅಷ್ಟೇಕೆ ಮಾಧ್ಯಮಗಳಲ್ಲಿ ಕ್ಷಣಕ್ಷಣದ ಚಟುವಟಿಕೆ ಸೆರೆಯಾಗಿದೆ. ಇನ್ನೇನು ಸಾಕ್ಷ್ಯ ಬೇಕು’ ಎನ್ನುತ್ತಾರೆ.

‘ಯಾವುದೇ ಶಾಸಕ ರಾಜೀನಾಮೆ ಕೊಡಲು ಆಮಿಷ, ಬೆದರಿಕೆ, ಒತ್ತಾಯ ಇರಬಾರದು. ಅಷ್ಟಕ್ಕೂ ಫೋನಿನಲ್ಲೇ ಮಾತನಾಡಿಸಿ ಸಭಾಧ್ಯಕ್ಷರು ತಮ್ಮ ಆದೇಶ ಪ್ರಕಟಿಸಬಹುದು’ ಎಂಬುದು ಶೆಟ್ಟಿ ಅಭಿಮತ.

‘ಸಂವಿಧಾನದ 190 (3) ಮತ್ತು (ಬಿ) ಅನುಸಾರ ಶಾಸಕ ತನ್ನ ರಾಜೀನಾಮೆಯನ್ನು ಸ್ವತಃ ಕೈಬರಹದಲ್ಲಿ ಸಹಿಮಾಡಿ ಕೊಟ್ಟಿದ್ದಾರೆಯೋ ಎಂದು ಪರಿಶೀಲಿಸುವುದನ್ನು ಬಿಟ್ಟು ಸಭಾಧ್ಯಕ್ಷರು ಯಾರ ಕೈಗೂ ಸಿಗದಂತೆ ಹೋಗಿರುವುದು ಸಾಂವಿಧಾನಿಕ ಕರ್ತವ್ಯ ಲೋಪ ಎಂದೇ ಅರ್ಥ ಎಂದು’ ಅವರು ವಿಶ್ಲೇಷಿಸಿದರು.

ಕಾನೂನು ಕ್ರಮಕ್ಕೆ ಆಗ್ರಹ

‘ಯಾವುದೇ ಸಾರ್ವಜನಿಕ ಹಿತಾಸಕ್ತಿ ಇಲ್ಲದೆ ರಾಜೀನಾಮೆ ನೀಡಿರುವ 14 ಶಾಸಕರ ವಿರುದ್ಧ ಕಾನೂನು ಕ್ರಮ ಜರುಗಿಸಿ ಅವರ ಪ್ರಮಾಣ ಪತ್ರ ವಜಾಗೊಳಿಸಬೇಕು’ ಎಂದು ವಕೀಲೆ ಗೀತಾ ಮಿಶ್ರಾ ಕೇಂದ್ರ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು ನೀಡಿದ್ದಾರೆ.

ಆಯೋಗ ನೀಡಿರುವ ‘ಅರ್ಹತಾ ಪ್ರಮಾಣಪತ್ರ’ ಅನೂರ್ಜಿತಗೊಳಿಸಬೇಕು. ಇವರ ವಿರುದ್ಧ ಪ್ರಜಾಪ್ರತಿನಿಧಿ ಹಾಗೂ ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಕ್ರಮ ಕೈಗೊಂಡು, ನಿಗದಿತ ಅವಧಿಯವರೆಗೆ ಚುನಾವಣೆಗೆ ಸ್ಪರ್ಧಿಸದಂತೆ ತಡೆಯಬೇಕು’ ಎಂದು ಕೋರಿದ್ದಾರೆ.

* ಶಾಸಕರು ಆಮಿಷಕ್ಕೆ ಒಳಗಾಗಿದ್ದಾರೆ. ಸಭಾಧ್ಯಕ್ಷರು ಇತ್ಯರ್ಥ ಮಾಡುವತನಕ ಅವರೆಲ್ಲಾ ಆಯಾ ಪಕ್ಷದ ಸದಸ್ಯರಾಗಿಯೇ ಮುಂದುವರಿಯುತ್ತಾರೆ.

-ಎ.ಎಸ್.ಪೊನ್ನಣ್ಣ, ಹಿರಿಯ ವಕೀಲ

* ರಾಜೀನಾಮೆ ಸ್ವೀಕಾರಕ್ಕೆ ವಿಳಂಬ ಮಾಡುತ್ತಿರುವ ಸಭಾಧ್ಯಕ್ಷರು ಸಾಂವಿಧಾನಿಕ ಕರ್ತವ್ಯ ನಿರ್ವಹಿಸುವಲ್ಲಿ ವಿಫಲವಾಗಿದ್ದಾರೆ.

-ಗಂಗಾಧರ ಆರ್.ಗುರುಮಠ, ಹಿರಿಯ ವಕೀಲ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು