ಶನಿವಾರ, ಜನವರಿ 25, 2020
27 °C
ಸಾಹಿತ್ಯ ಸಮ್ಮೇಳನದ ವೇದಿಕೆ ಸಮೀಪ ಒಟ್ಟು 800 ಮಳಿಗೆಗಳಿಗೆ ಅವಕಾಶ

ಕಲಬುರ್ಗಿ: ಪುಸ್ತಕ, ವಾಣಿಜ್ಯ ಮಳಿಗೆಗೆ ಸಕಲ ವ್ಯವಸ್ಥೆ

ರಾಹುಲ ಬೆಳಗಲಿ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ವಿವಿಧ ಬಗೆಯ ಸಾಹಿತ್ಯ ಪ್ರಕಾರದ ಪುಸ್ತಕಗಳನ್ನು ಖರೀದಿಸುವ ಸಾಹಿತ್ಯಾಸಕ್ತರಿಗೆ ಮತ್ತು ಪುಸ್ತಕಗಳ ಪ್ರದರ್ಶಕರು– ಮಾರಾಟಗಾರರಿಗೆ ಈ ಸಲದ ಕಲಬುರ್ಗಿಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ವಿಶಿಷ್ಟ ಅನುಭೂತಿ ನೀಡಲಿದೆ. 

ಸಾಹಿತ್ಯಾಸಕ್ತರಿಗೆ, ಪ್ರಕಾಶಕರಿಗೆ ಮತ್ತು ವಾಣಿಜ್ಯ ಮಾರಾಟಗಾರರಿಗೆ ಯಾವುದೇ ತೊಂದರೆ ಆಗಬಾರದು, ಸೌಕರ್ಯ ಪೂರೈಸುವಲ್ಲಿ ಕೊರತೆ ಎದುರಾಗಬಾರದು ಎಂದು ಎಚ್ಚರ ವಹಿಸಿರುವ ಸಮ್ಮೇಳನದ ಪುಸ್ತಕ ಪ್ರದರ್ಶನ ಮತ್ತು ವಾಣಿಜ್ಯ ಮಳಿಗೆಗಳ ಸಮಿತಿಯು ಈಗಾಗಲೇ ಹಲವು ಸುತ್ತಿನ ಸಭೆ ನಡೆಸಿದೆ. ಅಪಸ್ವರಕ್ಕೆ ಆಸ್ಪದ ನೀಡದಂತೆ ಸಿದ್ಧತೆ ನಡೆಸಿದೆ. 

ಪುಸ್ತಕ ಮತ್ತು ವಾಣಿಜ್ಯ ಮಳಿಗೆಗೆ 10X10 ಸ್ಥಳಾವಕಾಶ ನಿಗದಿಪಡಿಸಲಾಗಿದ್ದು, ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ. ಒಟ್ಟು 500 ಪುಸ್ತಕ ಮಳಿಗೆ ಮತ್ತು 300 ವಾಣಿಜ್ಯ ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಸೌಲಭ್ಯ, ವ್ಯವಸ್ಥೆ: ‘ಪ್ರತಿ ಮಳಿಗೆಯಲ್ಲಿ ಎರಡು ಕುರ್ಚಿ, ಮೇಜು ಮತ್ತು ಟ್ಯೂಬ್‌ಲೈಟ್ ಇರುತ್ತದೆ. ಮೊಬೈಲ್ ಫೋನ್‌ ಚಾರ್ಜ್‌ ಮಾಡಿಕೊಳ್ಳಲು ಪ್ಲಗ್‌ ವ್ಯವಸ್ಥೆ ಮಾಡಲಾಗುವುದು. ಮಳಿಗೆ ನಾಮಫಲಕ, ಊಟದ ಕೂಪನ್‌ ವಿತರಿಸಲಾಗುವುದು’ ಎಂದು ಪುಸ್ತಕ ಪ್ರದರ್ಶನ ಮತ್ತು ವಾಣಿಜ್ಯ ಮಳಿಗೆಗಳ ಸಮಿತಿ ಕಾರ್ಯಾಧ್ಯಕ್ಷ ಶರಣಪ್ಪ ಸತ್ಯಂಪೇಟೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಮ್ಮೇಳನದ ವೇದಿಕೆ ಸಮೀಪದ ಸ್ಥಳದಲ್ಲಿ ಮಳಿಗೆ ಹಾಕಲಾಗುವುದು. ಆವರಣದಲ್ಲಿ ನೀರಿನ ವ್ಯವಸ್ಥೆ ಇರಲಿದೆ. ನಾಲ್ಕೂ ದಿಕ್ಕುಗಳಿಂದ ಆವರಣ ಪ್ರವೇಶಿಸಲು ಅವಕಾಶ ಕಲ್ಪಿಸುವುದರ ಜೊತೆಗೆ ಅಲ್ಲಲ್ಲಿ ಮಾರ್ಗದರ್ಶಿ ಫಲಕಗಳನ್ನು ಹಾಕಲಾಗುವುದು. ಸಾರ್ವಜನಿಕರಿಗೆ ಮಳಿಗೆಗಳ ಕುರಿತು ಮಾಹಿತಿ ನೀಡಲು 25 ಸ್ವಯಂ ಸೇವಕರು ಇರುತ್ತಾರೆ’ ಎಂದು ಅವರು ವಿವರಿಸಿದರು.

‘ದೂಳು ಏಳದಂತೆ ಸಾಕಷ್ಟು ಮುಂಜಾಗ್ರತೆ ವಹಿಸಲಾಗುವುದು. ಆಗಾಗ್ಗೆ ನೀರು ಸಿಂಪಡಿಸಲಾಗುವುದು. ಸ್ವಚ್ಛತೆ ಕಾಯ್ದುಕೊಳ್ಳಲು ಪ್ರಥಮ ಆದ್ಯತೆ ನೀಡಲಾಗುವುದು. ಇನ್ನೂ ಹೆಚ್ಚಿನ ಸೌಕರ್ಯ ಕಲ್ಪಿಸಲು ಜಿಲ್ಲಾಧಿಕಾರಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಜೊತೆ ಚರ್ಚಿಸಲಾಗುವುದು’ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು