ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡು ಬಂದ್: ಜನಜೀವನ ಅಸ್ತವ್ಯಸ್ತ

Last Updated 5 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಚೆನ್ನೈ: ಸುಪ್ರೀಂ ಕೋರ್ಟ್ ಆದೇಶವಿದ್ದರೂ ಕಾವೇರಿ ನಿರ್ವಹಣಾ ಮಂಡಳಿ ರಚಿಸಲು ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿರುವುದನ್ನು ವಿರೋಧಿಸಿ, ಡಿಎಂಕೆ ಹಾಗೂ ಇತರ ಪಕ್ಷಗಳು ಕರೆ ನೀಡಿದ್ದ ಬಂದ್‌ನಿಂದ ತಮಿಳುನಾಡಿನಲ್ಲಿ ಗುರುವಾರ ಜನಜೀವನ ಅಸ್ತವ್ಯಸ್ತಗೊಂಡಿತ್ತು.

ಬಹುತೇಕ ಅಂಗಡಿಗಳು ಮುಚ್ಚಿದ್ದವು. ಡಿಎಂಕೆ, ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳ ಕಾರ್ಯಕರ್ತರು ರಸ್ತೆ ಹಾಗೂ ರೈಲು ಸಂಚಾರ ತಡೆದರು. ಇದರಿಂದಾಗಿ ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸಿದ್ದು, ಸಾಕಷ್ಟು ಜನರು ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಚೆನ್ನೈನಲ್ಲಿ ಬಹುತೇಕ ಸರ್ಕಾರಿ ಬಸ್‌ಗಳು ಸಂಚಾರ ನಡೆಸಿವೆ ಎಂದು ರಾಜ್ಯ ಸರ್ಕಾರ ಹೇಳಿದೆ. ಆದರೆ ಇತರೆ ಜಿಲ್ಲೆಗಳಲ್ಲಿ ಗಲಭೆ ಉಂಟಾಗಬಹುದು ಎನ್ನುವ ಭೀತಿಯಿಂದ ವಾಹನ ಸಂಚಾರ ವಿರಳವಾಗಿತ್ತು.

ಚೆನ್ನೈ, ವೆಲ್ಲೂರು, ಈರೋಡ್‌, ಶಿವಗಂಗಾದಲ್ಲಿ ಕಲ್ಲು ತೂರಾಟ ನಡೆದದ್ದು ಹೊರತುಪಡಿಸಿ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ. ಚೆನ್ನೈನಲ್ಲಿ ಕಲ್ಲು ತೂರಾಟದಿಂದಾಗಿ ಒಬ್ಬ ಪೊಲೀಸ್‌ ಕಾನ್‌ಸ್ಟೆಬಲ್‌ಗೆ ಗಾಯವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ. ಸ್ಟಾಲಿನ್ ಸಾವಿರಾರು ಕಾರ್ಯಕರ್ತರೊಂದಿಗೆ ಚೆನ್ನೈನಲ್ಲಿ ಮರೀನಾ ಕಡಲತೀರಕ್ಕೆ ತೆರಳಿ ಪ್ರತಿಭಟನೆ ನಡೆಸಿದರು. ಈ ವೇಳೆ ಡಿಎಂಕೆ, ಕಾಂಗ್ರೆಸ್, ವಿಸಿಕೆ ಹಾಗೂ ಎಂಡಿಎಂಕೆ ಕಾರ್ಯಕರ್ತರು ಬ್ಯಾರಿಕೇಡ್‌ಗಳನ್ನು ಮುರಿದು ಮುನ್ನುಗ್ಗಿದರು.  ಸ್ಟಾಲಿನ್ ಹಾಗೂ ಹಲವು ನಾಯಕರು ರಸ್ತೆ ಮೇಲೆ ಧರಣಿ ಕುಳಿತಿದ್ದರು. ಪರಿಸ್ಥಿತಿ ಕೈ ಮೀರಿದ್ದರಿಂದ ಪೊಲೀಸರು ಅವರನ್ನು ವಶಕ್ಕೆ ಪಡೆದರು. ಬಂದ್ ವೇಳೆ ಪ್ರತಿಭಟನೆ ನಡೆಸಿದ 25 ಸಾವಿರಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದ ಪೊಲೀಸರು ಬಳಿಕ ಅವರನ್ನು ಬಿಡುಗಡೆಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT