ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತಿಯುತ ಮುಕ್ತಾಯ, ಶೇ... ರಷ್ಟು ಮತದಾನ

ವೃದ್ಧರಲ್ಲೂ ಬತ್ತದ ಉತ್ಸಾಹ, ಅಂಗವಿಕಲರಿಗೆ ಗಾಲಿ ಕುರ್ಚಿ ವ್ಯವಸ್ಥೆ
Last Updated 13 ಮೇ 2018, 10:39 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಶನಿವಾರ ನಡೆದ ಮತದಾನದ ವೇಳೆ ಸಣ್ಣ ಪುಟ್ಟ ಘರ್ಷಣೆ ಹೊರತು ಪಡಿಸಿದರೆ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, ಶೇ...ಮತದಾನವಾಗಿದೆ.

....ಕ್ಷೇತ್ರದಲ್ಲಿ ಗರಿಷ್ಠ ಮತದಾನವಾದರೆ, .....ಕ್ಷೇತ್ರದಲ್ಲಿ ಕಡಿಮೆ ಮತದಾನವಾಗಿದೆ. 2013ರ ವಿಧಾನಸಭಾ ಚುನಾವಣೆಯಲ್ಲಿ ಶೇ 78.77 ರಷ್ಟು ಮತದಾನವಾಗಿತ್ತು. ಈ ಬಾರಿ ಅತ್ಯುತ್ತುಮವಾಗಿ ನಡೆದ ಮತದಾರರ ಜಾಗೃತಿ ಚಟುವಟಿಕೆಗಳು ಹಾಗೂ ಮಾಧ್ಯಮದ ಮೂಲಕ ಮೂಡಿ ಬಂದ ಅರಿವಿನಿಂದ ಉತ್ತಮವಾಗಿ ಮತದಾನ ಆಗಿದೆ.

ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ನಡೆದ ಪ್ರಕ್ರಿಯೆಯಲ್ಲಿ ಮತದಾರರು ಸರದಿ ಸಾಲಿನಲ್ಲಿ ನಿಂತು ಹಕ್ಕು ಚಲಾಯಿಸಿದರು. ಯುವಕರು, ಮಹಿಳೆಯರು, ವೃದ್ಧರು ಉತ್ಸಾಹದಿಂದಲೇ ಪಾಲ್ಗೊಂಡಿದ್ದರು.

ಅದರಲ್ಲೂ ಹೊಳೆನರಸಿಪುರ ಮತ್ತು ಅರಕಲಗೂಡು ವಿದಾನಸಭಾ ಕ್ಷೇತ್ರದಲ್ಲಿ ಮತದಾರರಲ್ಲಿ ಉತ್ಸಾಹ ಕಂಡು ಬಂದಿತ್ತು. ಆರಂಭದಲ್ಲಿ ಮಂದಗತಿಯಲ್ಲಿ ಸಾಗಿದ್ದ ಅರಸೀಕೆರೆ ಕ್ಷೇತ್ರದ ಮತದಾನ ಮಧ್ಯಾಹ್ನದ ವೇಳೆಗೆ ಬಿರುಸು ಕಂಡಿತು.
ವಯೋವೃದ್ಧರು, ಅಂಗವಿಕಲರು ವ್ಹೀಲ್‌ ಚೇರ್ ಹಾಗೂ ಮತ್ತೊಬ್ಬರ ನೆರವನಿಂದ ಬಂದು ಮತ ಹಾಕಿದರು.

ಶ್ರವಣಬೆಳಗೊಳ ವಿಧಾನಸಭಾ ಕೇತ್ರದಲ್ಲಿ ಎಂ.ಕೆ.ಹೊಸೂರು ಗ್ರಾಮದಲ್ಲಿ ಶತಾಯುಷಿ ಬೋರಮ್ಮ (105) ತಮ್ಮ ಮೊಮ್ಮಗನ ನೆರವಿನಿಂದ ಮತ ಚಲಾಯಿಸಿದರು. ಅದೇ ರೀತಿ ಚೌಡೇನಹಳ್ಳಿಯ ಪುಪ್ಪೇಗೌಡ (100) ಅವರು ಯಲಗುಂದ ಮತಗಟ್ಟೆಯಲ್ಲಿ ವೋಟ್‌ ಹಾಕಿದರು.

ಬೆಳಗ್ಗೆಯಿಂದಲೇ ಕೆಲ ಮತಗಟ್ಟೆಗಳಲ್ಲಿ ಬಿರುಸಿನ ಮತದಾನ ನಡೆದರೆ, ಮತ್ತೆ ಹಲವಡೆ ನೀರಸವಾಗಿತ್ತು. ಕೆಲವು ಕಡೆ ಮತಯಂತ್ರ ಕೈ ಕೊಟ್ಟು ಪರಿಣಾಮ ಬದಲಿ ಯಂತ್ರ ಬಳಸಿ ಮತದಾನಕ್ಕೆ ಅವಕಾಶ ಮಾಡಿಕೊಡಲಾಯಿತು.

ಹೊಳೆನರಸೀಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಬಿ.ಪಿ.ಮಂಜೇಗೌಡರ ಕಾರಿನ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಬೇಲೂರು ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಕೆ.ಎಸ್‌.ಲಿಂಗೇಶ್‌ ಅವರು ಬಿಜೆಪಿ ಅಭ್ಯರ್ಥಿ ಎಚ್‌.ಕೆ.ಸುರೇಶ್‌ ಅವರ ಪುತ್ರ ಪ್ರಶಾಂತ್‌ ಗೌಡನ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಅರಕಲಗೂಡಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಜೆಡಿಎಸ್‌–ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ.
ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಆಯಾ ಕ್ಷೇತ್ರದಲ್ಲಿ ಮತದಾನ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಸ್ವಗ್ರಾಮ ಹನ್ಯಾಳುನಲ್ಲಿ ಮನೆ ದೇವರು ಹಾಗೂ ಗೋ-ಪೂಜೆ ಬಳಿಕ ಕುಟುಂಬ ಸಮೇತ ಮತ ಚಲಾಯಿಸಿದರು. ಸಂಸದ ಎಚ್.ಡಿ. ದೇವೇಗೌಡ, ಪತ್ನಿ ಚನ್ನಮ್ಮ, ಪುತ್ರ ರೇವಣ್ಣ ಹಾಗೂ ಮೊಮ್ಮಕ್ಕಳಾದ ಸೂರಜ್ ಮತ್ತು ಪ್ರಜ್ವಲ್ ಸ್ವಗ್ರಾಮ ಹರದನಹಳ್ಳಿಯ ಶಿವ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಮಾವಿನಕೆರೆಯ ಬೆಟ್ಟದಲ್ಲಿ ರಂಗನಾಥನಿಗೆ ಅಭಿಷೇಕ ಮಾಡಿ ಪಡುವಲಹಿಪ್ಪೆಯ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು.

ಹಾಸನ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಎಚ್‌.ಎಸ್‌.ಪ್ರಕಾಶ್‌ ಅವರು ಸರದಿ ಸಾಲಿನಲ್ಲಿ ನಿಂತು ಹೇಮಾವತಿ ನಗರದ ರಾಯಲ್‌ ಅಪೋಲೋ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಜಿಲ್ಲೆಯಲ್ಲಿ ಸ್ಥಾಪಿಸಲಾದ 20 ಸಂಪೂರ್ಣ ಮಹಿಳಾ ಸಿಬ್ಬಂದಿಗಳನ್ನೊಳಗೊಂಡ ಸಖಿ (ಪಿಂಕ್) ಮತಗಟ್ಟೆಗಳು ಮತದಾರರ ಗಮನ ಸೆಳೆದವು. ಸಂಪೂರ್ಣ ಪಿಂಕ್ ಬಣ್ಣದಿಂದ ಕಂಗೊಳಿಸುತ್ತಿದ್ದುದನ್ನು ಕಂಡು ಮತದಾರರು ಹರ್ಷ ವ್ಯಕ್ತಪಡಿಸಿ, ಯುವತಿಯರು ಹಾಗೂ ಮಹಿಳೆಯರು ಸೆಲ್ಫಿ ತೆಗೆದುಕೊಂಡರು.

ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಮತದಾರರನ್ನು ಕರೆದೊಯ್ಯುತ್ತಿದ್ದ ಆಟೊಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ರಾಮೇನಹಳ್ಳಿ ಕೊಪ್ಪಲಿನ ಕಮಲಮ್ಮ (55) ಮತ್ತು ಶಾರದಮ್ಮ (45) ಮೃತಪಟ್ಟು, ಎಂಟು ಮಂದಿ ಗಾಯಗೊಂಡರು.
ಬೇಲೂರು ತಾಲ್ಲೂಕು ತಲಗೂಡು ಗ್ರಾಮದ ರೇವತಿ (50) ಅವರು ಮಗ್ಗೇಹಳ್ಳಿಯ 107 ಮತಗಟ್ಟೆಯಲ್ಲಿ ಮತ ಚಲಾಯಿಸಿ ವಾಪಸ್‌ ಹೋಗುವಾಗ ಹೃದಯಾಘಾತವಾಗಿ ಸಾವಿಗೀಡಾಗಿದ್ದಾರೆ.

ಬೆಳಗ್ಗೆ 9 ಗಂಟೆ ವೇಳೆಗೆ ಜಿಲ್ಲೆಯಲ್ಲಿ ಶೇ. 10ರಷ್ಟು, ಮಧ್ಯಾಹ್ನ 3 ಗಂಟೆಗೆ ಶೇ.45, 5 ಗಂಟೆಗೆ 75.84ರಷ್ಟು ಮತದಾನವಾಗಿತ್ತು.

ಕೈ-ಜೆಡಿಎಸ್ ಕಾರ್ಯಕರ್ತರ ಮಾರಾಮಾರಿ
ಅರಕಲಗೂಡು ತಾಲ್ಲೂಕಿನ ಎಲಾಗತವಳ್ಳಿ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಕಾಂಗ್ರೆಸ್‌–ಜೆಡಿಎಸ್‌ ಕಾರ್ಯಕರ್ತರು ಪರಸ್ಪರ ಹಲ್ಲೆ ನಡೆಸಿದ್ದಾರೆ. ಜೆಡಿಎಸ್‌ ಕಾರ್ಯಕರ್ತರಾದ ಚೇತನ್, ಅನಿಲ್ ಗಾಯಗೊಂಡು ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಉನ್ನತ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದರು.

ಕಲ್ಲಂಗಡಿ ಫಸಲು ನಾಶ
ಚುನಾವಣಾ ದ್ವೇಷಕ್ಕೆ ಹೊಳೆನರಸೀಪುರ ಕ್ಷೇತ್ರದ ಮೊಸಳೆ ಹೊಸಹಳ್ಳಿ ಮಾರನಹಳ್ಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ರುದ್ರೇಶ್ ಗೌಡರು ಬೆಳೆದಿದ್ದ ಕಲ್ಲಂಗಡಿ ಫಸಲು ನಾಶ ಮಾಡಲಾಗಿದೆ. ‘ಐದು ಎಕರೆಯಲ್ಲಿ ಬೆಳೆದಿದ್ದ ಕಲ್ಲಂಗಡಿಗೆ ಅಳವಡಿಸಿದ್ದ ಪೈಪ್‌ಗಳನ್ನು ಜೆಡಿಎಸ್ ಕಾರ್ಯಕರ್ತರು ತುಂಡರಿಸಿ, ಹಣ್ಣಗಳನ್ನು ಒಡೆದು ಹಾಕಿದ್ದಾರೆ’ ಎಂದು ಗೌಡರು ಆರೋಪಿಸಿದ್ದಾರೆ.

ಕೈ ಹಿಡಿಯಲಿರುವ ಜನಪರ ಕಾರ್ಯಕ್ರಮ
‘ಇದು ಜಾತ್ಯಾತೀತ ಮತ್ತು ಕೋಮುವಾದಿಗಳ ನಡುವೆ ನಡೆದ ಚುನಾವಣೆ. ಜಿಲ್ಲೆಯಲ್ಲಿ ಕಾಂಗ್ರೆಸ್‌ ಒಗ್ಗಟ್ಟಿನಿಂದ ಕೆಲಸ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನರ ಪರ ಕಾರ್ಯಕ್ರಮ ಕೈ ಹಿಡಿಯಲಿದೆ ’ಎಂದು ಸಚಿವ ಎ.ಮಂಜು ಹೇಳಿದರು. ‘ದೇವೇಗೌಡರು ರಾಜಕೀಯದಲ್ಲಿ ಯಾವುದೇ ಕಪ್ಪು ಚುಕ್ಕೆ ತೆಗೆದುಕೊಂಡವರಲ್ಲ. ಅವರ ಹೆಸರನ್ನ ಪುತ್ರ ಎಚ್.ಡಿ.ರೇವಣ್ಣ, ಮೊಮ್ಕಕ್ಕಳಾದ ಸೂರಜ್ ಮತ್ತು ಪ್ರಜ್ವಲ್ ಹಾಳು ಮಾಡುತ್ತಿದ್ದಾರೆ’ ಎಂದು ದೂರಿದರು.

ಸ್ವಂತ ಬಲದಿಂದ ಸರ್ಕಾರ
‘ತವರೂರಿನಲ್ಲಿ ಕುಟುಂಬ ಸದಸ್ಯರೊಂದಿಗೆ ಆನಂದವಾಗಿ ಮತ ಚಲಾವಣೆ ಮಾಡಿದ್ದೇನೆ. ರಾಜ್ಯದಲ್ಲಿ ಈ ಬಾರಿ ಜೆಡಿಎಸ್ ಗೆ ಉತ್ತಮ ವಾತಾವರಣ ವಿದ್ದು, ಸ್ವಂತ ಬಲದಿಂದ ಜೆಡಿಎಸ್ ಅಧಿಕಾರ ಹಿಡಿಯಲಿದೆ. ಕಾಂಗ್ರೆಸ್– ಬಿಜೆಪಿ ಹಣದ ಹೊಳೆ ಹರಿಸಿದೆ. ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವ ಪ್ರಶ್ನೆ ಇಲ್ಲ’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.

ನಕಲಿ ಮತದಾನಕ್ಕೆ ಥಳಿತ
ಹಾಸನದ ವಿದ್ಯಾನಗರದ ಮತಗಟ್ಟೆ 86ರಲ್ಲಿ ನಕಲಿ ಮತದಾನ ಮಾಡಿದ ಯುವಕನನ್ನು ಸಾರ್ವಜನಿಕರು ಹಿಡಿದು ಥಳಿಸಿದ್ದಾರೆ. ಬಳಿಕ ಯುವಕ ಕ್ಷಮೆಯಾಚಿಸಿದರೂ ಬಿಡದೆ, ಆತನನ್ನು ಎಳೆದಾಡಿ, ಶರ್ಟ್‌ ಹರಿದು ಹಾಕಿ ಪೊಲೀಸರಿಗೆ ಒಪ್ಪಿಸಿದರು. ಎಂ.ಜಿ.ರಸ್ತೆಯ ವಿಶ್ವೇಶ್ವರಯ್ಯ ಭವನ ಎದುರಿನ ಮತಗಟ್ಟೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಮತ ಹಾಕುವಂತೆ ಮಹಿಳೆಯೊಬ್ಬರು ಮತದಾರರ ಕಾಲಿಗೆ ಬೀಳುತ್ತಿರುವುದಕ್ಕೆ ಜೆಡಿಎಸ್‌ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು. ಆಗ ಭದ್ರತಾ ಸಿಬ್ಬಂದಿ ಅವರನ್ನು ಅಲ್ಲಿಂದ ಕಳುಹಿಸಿದರು.

ಕೈ ಕೊಟ್ಟ ಇವಿಎಂ
ಜಿಲ್ಲೆಯ ವಿವಿಧೆಡೆ ತಾಂತ್ರಿಕ ದೋಷದಿಂದ ವಿದ್ಯುನ್ಮಾನ ಮಂತ್ರ (ಇವಿಎಂ) ಹಾಗೂ ವಿವಿ ಪ್ಯಾಟ್‌ ಯಂತ್ರಗಳು ಕೈ ಕೊಟ್ಟಿದ್ದವು. ಬಿಇಎಲ್‌ ಎಂಜಿನಿಯರ್‌ಗಳು ಪರಿಶೀಲಿಸಿ ಬದಲಿ ಯಂತ್ರ ನೀಡಿ ಮತದಾನಕ್ಕೆ ವ್ಯವಸ್ಥೆ ಮಾಡಲಾಯಿತು. ಇದರಿಂದಾಗಿ ಕೆಲವು ಕಡೆ ಒಂದು, ಎರಡು ತಾಸು ಮತದಾನ ಸ್ಥಗಿತಗೊಂಡಿತು. ಜಾವಗಲ್‌ ಸಮೀಪದ ನೇರ್ಲಿಗಿ ಮತಗಟ್ಟೆಯಲ್ಲಿ ಎರಡು ತಾಸು ಮತದಾನಕ್ಕೆ ವಿಸ್ತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT