ಭಾನುವಾರ, ಆಗಸ್ಟ್ 18, 2019
26 °C

ಮಹಿಳೆ ಹೆಸರಿನಲ್ಲಿ ನಕಲಿ ಇ ಮೇಲ್‌ ಐಡಿ ಸೃಷ್ಟಿಸಿ ಸಿಕ್ಕಿಬಿದ್ದ ಭೂಪ

Published:
Updated:
Prajavani

ರಾಯಚೂರು: ಜಿಲ್ಲೆಯ ಸಿಂಧನೂರು ತಾಲ್ಲೂಕು ಜವಳಗೇರಾದಲ್ಲಿರುವ ಬೀಜಗಳ ಮಾರಾಟದ ಖಾಸಗಿ ಕಂಪೆನಿ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿ ಹೋಗಿದ್ದ ಮಹಿಳಾ ಸಿಬ್ಬಂದಿಯೊಬ್ಬರ ಹೆಸರಿನಲ್ಲಿ ನಕಲಿ ಇ ಮೇಲ್‌ ಐಡಿ ಸೃಷ್ಟಿಸಿ, ಅದರಿಂದ ಕಂಪೆನಿಯ ಶಾಖಾ ಮುಖ್ಯಸ್ಥರ ವಿರುದ್ಧ ಲೈಂಗಿಕ, ಮಾನಸಿಕ ಕಿರುಕುಳ ಆರೋಪದ ಸಂದೇಶವನ್ನು ಮೇಲಧಿಕಾರಿಗಳಿಗೆ ರವಾನಿಸಿದ್ದ ಅದೇ ಶಾಖೆಯಲ್ಲಿ ಹಣಕಾಸು ಮತ್ತು ಲೆಕ್ಕಪತ್ರ ವಿಭಾಗದ ಸಹಾಯಕ ಮ್ಯಾನೇಜರ್‌ ದೇವಿಂದ್ರಸಿಂಗ್‌, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ನಕಲಿ ಇ–ಮೇಲ್‌ ಐಡಿ ಜಾಡು ಹಿಡಿದು ಗೂಗಲ್‌ ಕಂಪೆನಿಯಿಂದ ಮಾಹಿತಿ ಪಡೆದು ತನಿಖೆ ಕೈಗೊಂಡಿದ್ದ ಸಿಇಎನ್‌ ವಿಶೇಷ ತನಿಖಾ ವಿಭಾಗದ ಪೊಲೀಸರು, ಕಂಪೆನಿಯ ಶಾಖೆಯಲ್ಲಿ ಬಳಸುತ್ತಿರುವ ಎಲ್ಲ ಲ್ಯಾಪ್‌ಟಾಪ್‌ ಮತ್ತು ಮೊಬೈಲ್‌ಗಳ ಐಪಿ ನಂಬರಗಳನ್ನು ಪರಿಶೀಲಿಸಿದಾಗ ಅಪರಾಧಿಯು ಸಿಕ್ಕಿಬಿದ್ದಿದ್ದಾನೆ.  

ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದು, ಕೃತ್ಯಕ್ಕೆ ಬಳಕೆಯಾಗಿದ್ದ ಲ್ಯಾಪ್‌ಟಾಪ್‌, ಮೊಬೈಲ್‌ ಹಾಗೂ ಮೊಡೆಮ್‌ಗಳನ್ನು ಪೊಲೀಸರು ದಸ್ತಗಿರಿ ಮಾಡಿಕೊಂಡು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ರಾಜೀನಾಮೆ ಸಲ್ಲಿಸಿ ಹೋಗಿದ್ದ ಮಹಿಳೆಗೆ ಕಂಪೆನಿ ಮೇಲಧಿಕಾರಿಗಳ ಮೂಲಕ ಇ–ಮೇಲ್‌ ಸಂದೇಶದ ವಿಷಯ ತಿಳಿಯುತ್ತಿದ್ದಂತೆ, ಈ ಬಗ್ಗೆ ಕಳೆದ ಮಾರ್ಚ್‌ನಲ್ಲಿ ಪೊಲೀಸರಿಗೆ ದೂರು ಸಲ್ಲಿಸಿದ್ದರು.  

Post Comments (+)