ಶುಕ್ರವಾರ, ಮೇ 27, 2022
21 °C
ಅಕ್ರಮ ಪತ್ತೆ ಹಚ್ಚಿದ ಕೈಗಾರಿಕಾ ಉದ್ಯೋಗ ಇಲಾಖೆ

63 ನೌಕರರ ಅಂಕಪಟ್ಟಿ ನಕಲಿ!

ಸಂತೋಷ ಜಿಗಳಿಕೊಪ್ಪ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ 63 ನೌಕರರು ನೇಮಕಾತಿ ವೇಳೆ ನಕಲಿ ಅಂಕಪಟ್ಟಿ ಕೊಟ್ಟು ಕೆಲಸ ಗಿಟ್ಟಿಸಿಕೊಂಡಿರುವುದು ಬಯಲಾಗಿದೆ.

ರಾಜ್ಯದ ಕೈಗಾರಿಕಾ ತರಬೇತಿ ಕೇಂದ್ರಗಳ (ಐಟಿಐ) ಹೆಸರಿನಲ್ಲಿ ನಕಲಿ ಅಂಕಪಟ್ಟಿ ಸೃಷ್ಟಿಸಿದ್ದ ಅಭ್ಯರ್ಥಿಗಳು, ಆ ಅಂಕಪಟ್ಟಿಗಳನ್ನೇ ನೇಮಕಾತಿ ಪ್ರಾಧಿಕಾರಕ್ಕೆ ಕೊಟ್ಟು ನೌಕರಿಗೆ ಸೇರಿದ್ದಾರೆ. ಈ ಅಕ್ರಮವನ್ನು ಪತ್ತೆ ಹಚ್ಚಿರುವ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯು 63 ನೌಕರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದೆ.

‘ಅಕ್ರಮ ಎಸಗಿರುವ ನೌಕರರ ವಿರುದ್ಧ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಜಂಟಿ ನಿರ್ದೇಶಕ ಬಿ.ಎಲ್.ಚಂದ್ರಶೇಖರ್ ದೂರು ನೀಡಿದ್ದಾರೆ. ಅದರನ್ವಯ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ. ದಾಖಲೆಗಳ ಪರಿಶೀಲನೆ ನಡೆಸಿ ಆರೋಪಿಗಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಬೇಕಿದೆ’ ಎಂದು ಸಿದ್ದಾಪುರ ಠಾಣೆ ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಲವು ವರ್ಷಗಳಿಂದ ನಕಲಿ ಅಂಕಪಟ್ಟಿಗಳನ್ನು ಸೃಷ್ಟಿಸುತ್ತಿರುವುದು ಗೊತ್ತಾಗಿದೆ. ಪ್ರತಿ ವರ್ಷವೂ ಇಂಥ ನಕಲಿ ಅಂಕಪಟ್ಟಿಗಳು ಹೊರಬರುತ್ತಿವೆ. ಇದರ ಹಿಂದೆ ದೊಡ್ಡ ಜಾಲವಿರುವ ಶಂಕೆ ಇದ್ದು, ಅದನ್ನು ಪತ್ತೆ ಹಚ್ಚುತ್ತಿ
ದ್ದೇವೆ’ ಎಂದರು.

‘ಸರ್ಕಾರಿ ನೌಕರರ ಅಂಕಪಟ್ಟಿಗಳ ಪರಿಶೀಲನೆಗಾಗಿ ಇಲಾಖಾ ಮಟ್ಟದಲ್ಲಿ ಸಮಿತಿಯನ್ನು ರಚಿಸಲಾಗಿತ್ತು. ಆ ಸಮಿತಿ ನಕಲಿ ಅಂಕಪಟ್ಟಿಗಳನ್ನು ಪತ್ತೆ ಹಚ್ಚಿ ವರದಿ ನೀಡಿದೆ. ಅದನ್ನು ಆಧರಿಸಿ ಪೊಲೀಸರಿಗೆ ದೂರು ನೀಡಲಾಗಿದೆ’ ಎಂದು ಚಂದ್ರಶೇಖರ್ ಹೇಳಿದರು.

‘ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಅಡಿಯಲ್ಲಿ ಪರೀಕ್ಷಾ ವಿಭಾಗ ಕಾರ್ಯನಿರ್ವಹಿಸುತ್ತಿದೆ. ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ತರಬೇತಿ ಪಡೆದು ಉತ್ತೀರ್ಣರಾಗಿ ಸರ್ಕಾರಿ ಕೆಲಸಕ್ಕೆ ಸೇರಿದ್ದ ಅಭ್ಯರ್ಥಿಗಳ ಅಂಕಪಟ್ಟಿಗಳ ನೈಜತೆ ಪರಿಶೀಲಿಸುವಂತೆ ನೇಮಕಾತಿ ಪ್ರಾಧಿಕಾರಗಳು ಪರೀಕ್ಷಾ ವಿಭಾಗಕ್ಕೆ ಪತ್ರ ಬರೆದಿದ್ದವು. ವಿಶೇಷ ಆದೇಶ ಹೊರಡಿಸಿ, ಅಂಕಪಟ್ಟಿ ನೈಜತೆ ಪರಿಶೀಲನೆಗೆ ಸಮಿತಿ ರಚಿಸಲಾಗಿತ್ತು’ ಎಂದರು.

ಈ ಅಂಕ ಪಟ್ಟಿ ಜಾಲದಲ್ಲಿ ಇಲಾಖೆಯ ಕೆಲ ಸಿಬ್ಬಂದಿಯೂ ಶಾಮೀಲಾಗಿರುವ ಅನುಮಾನವಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

‘ಅಸಲಿ ಅಂಕಪಟ್ಟಿಗಳನ್ನು ಹೋಲುವ ರೀತಿಯಲ್ಲೇ ನಕಲಿ ಅಂಕಪಟ್ಟಿಗಳನ್ನು ತಯಾರಿಸಲಾಗಿದೆ. ಅಂಥ ಅಂಕಪಟ್ಟಿಯಿಂದಲೇ ಕೆಲಸ ಗಿಟ್ಟಿಸಿಕೊಂಡಿರುವ ಅಭ್ಯರ್ಥಿಗಳು, ಯಾವುದೇ ಸಂಸ್ಥೆಯಲ್ಲೂ ತರಬೇತಿ ಪಡೆದಿಲ್ಲವೆಂಬ ಸಂಗತಿ ಆಯಾ ಸಂಸ್ಥೆಗಳ ಹಾಜರಾತಿ ಪರಿಶೀಲನೆಯಿಂದ ಗೊತ್ತಾಗಿದೆ’ ಎಂದು ಅವರು ಹೇಳಿದರು.

‘ನಕಲಿ ಅಂಕಪಟ್ಟಿಗಳ ಮೂಲಕ ಕೆಲ ಅಭ್ಯರ್ಥಿಗಳು, ವಿದ್ಯುತ್ ಸರಬರಾಜು ಕಂಪನಿಗಳು (ಎಸ್ಕಾಂ), ಕೈಗಾರಿಕಾ ತರ
ಬೇತಿ ಸಂಸ್ಥೆಗಳು, ಜಲಮಂಡಳಿ ಹಾಗೂ ಇತರ ಕಡೆಗಳಲ್ಲಿ ಕೆಲಸಕ್ಕೆ ನೇಮಕವಾಗಿದ್ದಾರೆ. ಅವರೆಲ್ಲರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ’ ಎಂದು ಪೊಲೀಸರು ವಿವರಿಸಿದರು.

ನೌಕರರ ವಜಾ

‘2015ರಿಂದ 2018ರ ವರೆಗಿನ ಶೈಕ್ಷಣಿಕ ವರ್ಷದ ನಕಲಿ ಅಂಕಪಟ್ಟಿಗಳು ಪತ್ತೆಯಾಗಿವೆ. ಇನ್ನು ಹಲವರ ಅಂಕಪಟ್ಟಿಗಳು ನಕಲಿ ಎಂಬ ಮಾಹಿತಿ ಇದ್ದು, ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಬಿ.ಎಲ್.ಚಂದ್ರಶೇಖರ್ ಹೇಳಿದರು.

‘ಸಮಿತಿ ವರದಿಯನ್ನು ಆಯಾ ಇಲಾಖೆ ನೇಮಕಾತಿ ಪ್ರಾಧಿಕಾರಗಳಿಗೆ ಕಳುಹಿಸಲಾಗಿದೆ. ಪ್ರಾಧಿಕಾರದ ಅಧಿಕಾರಿಗಳು, ನೌಕರರನ್ನು ಕೆಲಸದಿಂದ ವಜಾ ಮಾಡುತ್ತಿದ್ದಾರೆ’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು